ಹರಿಯಾಣದ ಸೋನಿಪತ್ ಜಿಲ್ಲೆಯ ಹರ್ಸಾನ ಕಲಾನ್ ಗ್ರಾಮದಲ್ಲಿ ಚಳಿಗಾಲದ ಮಧ್ಯಾಹ್ನಗಳಲ್ಲಿ, ‌ತಮ್ಮ ಹೊಲದಲ್ಲಿನ ಕೆಲಸ ಮುಗಿದ ನಂತರ ಮತ್ತು ಮನೆಯ ಕಿರಿಯ ಸದಸ್ಯರು ತಮ್ಮ ಕೆಲಸಕ್ಕೆ ರಜೆಯಿರುವಾಗ, ಅಲ್ಲಿನ ಪುರುಷರು ಆಗಾಗ್ಗೆ ಚೌಪಾಲ್ (ಹಳ್ಳಿಯ ಚೌಕ) ಬಳಿ ಸೇರುತ್ತಾರೆ, ಅಲ್ಲಿ ಅವರು ನೆರಳಿನಲ್ಲಿ ಕುಳಿತು ಇಸ್ಪೀಟ್ ಆಡುತ್ತಾರೆ ಅಥವಾ ವಿಶ್ರಾಂತಿ ಪಡೆಯುತ್ತಾರೆ.

ಆದರೆ ಅಲ್ಲಿ ಮಹಿಳೆಯರನ್ನು ಕಾಣಲು ಸಾಧ್ಯವಿಲ್ಲ.

ಸ್ಥಳೀಯ ನಿವಾಸಿ ವಿಜಯ್ ಮಂಡಲ್ "ಮಹಿಳೆಯರು ಇಲ್ಲಿಗೆ ಏಕೆ ಬರಬೇಕು?" ಎಂದು ಕೇಳುತ್ತಾರೆ. "ಅವರಿಗೆ ಅವರ ಕೆಲಸದ ನಡುವೆ ಇದಕ್ಕೆಲ್ಲ ಸಮಯವಿರೋಲ್ಲ. ವೋ ಕ್ಯಾ ಕ್ಯಾರೆಂಗೆ ಇನ್ ಬಡೇ ಅದ್ಮಿಯೋನ್ ಕೆ ಸಾಥ್ ಬೈಟ್ ಕರ್? [ಈ ದೊಡ್ಡ ಮನುಷ್ಯರ ನಡುವೆ ಅವರು ಬಂದು ಕುಳಿತು ಏನು ಮಾಡಬೇಕಿದೆ?]"

ದೇಶದ ರಾಜಧಾನಿ ದೆಹಲಿಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವು ಸುಮಾರು 5,000 ಜನಸಂಖ್ಯೆಯನ್ನು ಹೊಂದಿದೆ. ಕೆಲವು ವರ್ಷಗಳ ಹಿಂದೆ, ಈ ಹಳ್ಳಿಯ ಮಹಿಳೆಯರು ಕಟ್ಟುನಿಟ್ಟಾಗಿ ಪರ್ದಾ ಪದ್ಧತಿಯನ್ನು ಅನುಸರಿಸುತ್ತಿದ್ದರು, ಎಂದರೆ ಅವರು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕಾಗಿತ್ತು.

"ಪುರುಷರು ಸೇರುವ ಸ್ಥಳಗಳನ್ನು ಮಹಿಳೆಯರು ನೋಡಬಾರದು" ಎಂದು ಮಂಡಲ್ ಹೇಳುತ್ತಾರೆ. ಹಳ್ಳಿಯ ನಡುವಿನಲ್ಲಿರುವ ಈ ಜಾಗವು ಪುರುಷರು ಸೇರುವ ಸ್ಥಳವಾಗಿದೆ. ಸಮಸ್ಯೆಗಳನ್ನು ಪರಿಹರಿಸಲು ಪಂಚಾಯತ್ ಸಭೆಗಳನ್ನು ನಡೆಸಲಾಗುತ್ತದೆ. "ಆ ಕಾಲದಲ್ಲಿ ಮಹಿಳೆಯರು ಸಂಪ್ರದಾಯವನ್ನು ಗೌರವಿಸುತ್ತಿದ್ದರು" ಎಂದು ಹರ್ಸಾನ ಕಲಾನ್ ಮಾಜಿ ಪಂಚಾಯತ್ ಮುಖಂಡ ಸತೀಶ್ ಕುಮಾರ್ ಹೇಳುತ್ತಾರೆ.

"ಆ ಕಾಲದ ಹೆಂಗಸರಲ್ಲಿ ಒಂದು ಘನತೆ ಗೌರವದ ಭಾವವಿತ್ತು" ಎಂದು ಮಂಡಲ್ ಹೇಳುತ್ತಾರೆ, "ಅವರು ಒಂದು ವೇಳೆ ಚೌಪಲ್‌ ದಾರಿಯಲ್ಲಿ ನಡೆದು ಹೋಗಬೇಕಾಗಿ ಬಂದರೂ ಮುಖವನ್ನು ಸೆರಗಿನಿಂದ ಮರೆಮಾಚಿಕೊಳ್ಳುತ್ತಿದ್ದರು" ಎಂದು ನಗುತ್ತಾ ಹೇಳುತ್ತಾರೆ.

36 ವರ್ಷ ವಯಸ್ಸಿನ ಸೈರಾರಿಗೆ ಇದೇನೂ ಹೊಸತಲ್ಲ. ಕಳೆದ 16 ವರ್ಷಗಳಿಂದ ಎಂದರೆ ದೆಹಲಿಯ ಸಮೀಪವಿರುವ ತನ್ನ ಹಳ್ಳಿ ಮಜ್ರಾ ದಬಾಸ್‌ನಿಂದ ಇಪ್ಪತ್ತನೇ ವಯಸ್ಸಿನಲ್ಲಿ ಮದುವೆಯಾಗಿ ಈ ಊರಿನ ಸೊಸೆಯಾಗಿ ಇಲ್ಲಿಗೆ ಬಂದಾಗಿನಿಂದಲೂ ಈ ಹೆಚ್ಚಿನ ಆದೇಶಗಳನ್ನು ಅವರು ಅನುಸರಿಸುತ್ತಿದ್ದಾರೆ. ಪುರುಷರಿಗಿಂತ ಭಿನ್ನವಾಗಿ, ಅವರನ್ನು ಅವರ ಮೊದಲ ಹೆಸರಿನಿಂದ ಕರೆಯಲಾಗುತ್ತದೆ.

“ಒಂದು ವೇಳೆ ಮದುವೆಗೆ ಮೊದಲು ನಾನು ನನ್ನ ಗಂಡನನ್ನು ಭೇಟಿಯಾಗಿದ್ದಿದ್ದರೆ, ಈ ಮದುವೆಗೆ ನಾನು ಖಂಡಿತ ಒಪ್ಪಿಗೆ ನೀಡುತ್ತಿರಲಿಲ್ಲ. ಇಸ್‌ ಗಾಂವ್‌ ಮೆ ತೋ ಕತ್ತೆ ನಾ ಆತೀ [ಈ ಹಳ್ಳಿಗಂತೂ ಯಾವ ಕಾರಣಕ್ಕೂ ಬರಲು ಒಪ್ಪುತ್ತಿರಲಿಲ್ಲ]” ಎಂದು ಸೈರಾ ಹೇಳುತ್ತಾರೆ, ಹೊಲಿಗೆ ಯಂತ್ರದ ಸೂಜಿ ಮತ್ತು ಅವರು ಹೊಲಿಯುತ್ತಿರುವ ನೇರಳೆ ಬಣ್ಣದ ಬಟ್ಟೆಯ ನಡುವೆ ಅವರ ಕೈಗಳು ಸಮರ್ಥವಾಗಿ ಚಲಿಸುತ್ತಿದ್ದವು. (ಈ ವರದಿಯಲ್ಲಿ ಅವರ ಹೆಸರು, ಮತ್ತು ಅವರ ಕುಟುಂಬದ ಎಲ್ಲ ಸದಸ್ಯರ ಹೆಸರುಗಳನ್ನು ಬದಲಾಯಿಸಲಾಗಿದೆ.)
Saira stitches clothes from home for neighborhood customers. 'If a woman tries to speak out, the men will not let her', she says

ಸೈರಾ ತನ್ನ ನೆರೆಹೊರೆಯ ಗ್ರಾಹಕರಿಗಾಗಿ ಮನೆಯಲ್ಲೇ ಬಟ್ಟೆಗಳನ್ನು ಹೊಲಿಯುತ್ತಾರೆ. ಈ ಹಳ್ಳಿಯಲ್ಲಿ ಮಹಿಳೆ ಮಾತನಾಡಲು ಪ್ರಯತ್ನಿಸಿದರೆ, ಪುರುಷರು ಅನುಮತಿಸುವುದಿಲ್ಲ.' ಎಂದು ಅವರು ಹೇಳುತ್ತಾರೆ

"ಈ ಹಳ್ಳಿಯಲ್ಲಿ ಮಹಿಳೆ ಮಾತನಾಡಲು ಪ್ರಯತ್ನಿಸಿದರೆ, ಪುರುಷರು ಅನುಮತಿಸುವುದಿಲ್ಲ. ಅವರು ಹೇಳುತ್ತಾರೆ, ʼನಿಮ್ಮ ಗಂಡನಿಗೆ ಮಾತನಾಡಲು ಸಾಧ್ಯವಿರುವಾಗ ನೀವು ಮಾತನಾಡಬೇಕಾದ ಅಗತ್ಯವೇನಿದೆ?ʼ ಎಂದು. ನನ್ನ ಗಂಡ ಕೂಡ ಮಹಿಳೆ ಮನೆಯೊಳಗೆ ಇರಬೇಕೆಂದು ನಂಬುತ್ತಾರೆ. ಬಟ್ಟೆಗಳನ್ನು ಹೊಲಿಯಲು ಬೇಕಾದ ಕೆಲವು ವಸ್ತುಗಳನ್ನು ಖರೀದಿಸಲು ಹೋಗುವುದರ ಬಗ್ಗೆ ನಾನು ಯೋಚಿಸಿದರೂ ಸಹ, ಒಳಗೇ ಇರುವುದು ಒಳ್ಳೆಯದು  ಎಂದು ಅವರು ಹೇಳುತ್ತಾರೆ,” ಸೈರಾ ಹೇಳುತ್ತಾರೆ.

ಅವರ 44 ವರ್ಷದ ಪತಿ ಸಮೀರ್ ಖಾನ್ ದೆಹಲಿಯ ಸಮೀಪ ನರೇಲಾದಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಅವರು ಪ್ಲಾಸ್ಟಿಕ್ ಅಚ್ಚುಗಳನ್ನು ತಯಾರಿಸುತ್ತಾರೆ. ಸಮೀರ್ ಖಾನ್ ಪುರುಷರು ಮಹಿಳೆಯರನ್ನು ಹೇಗೆ ನೋಡುತ್ತಾರೆಂದು ಸೈರಾಗೆ ಅರ್ಥವಾಗುವುದಿಲ್ಲವೆಂದು ಆಗಾಗ್ಗೆ ಅವರಿಗೆ ಹೇಳುತ್ತಿರುತ್ತಾರೆ. "ಮನೆಯಲ್ಲಿದ್ದರೆ, ನೀವು ಸುರಕ್ಷಿತವಾಗಿರುತ್ತೀರಿ; ಬಾಹರ್‌ ತೋ ಭೇಡಿಯೇ ಬೈಟೇ ಹೈ(ತೋಳಗಳು ಹೊರಗೆ ಕಾಯುತ್ತಾ ಕುಳಿತಿರುತ್ತವೆ),” ಎಂದು ಪತಿ ಎಚ್ಚರಿಕೆ ಕೊಡುತ್ತಿರುತ್ತಾರೆ.

ಹೀಗಾಗಿ, ಸೈರಾ ಮನೆಯಲ್ಲೇ ಉಳಿದು ತೋಳಗಳು ಎಂದು ಕರೆಯಲ್ಪಡುವವರಿಂದ ದೂರವಿರುತ್ತಾರೆ. ಹರಿಯಾಣದ 64.5ರಷ್ಟು ಗ್ರಾಮೀಣ ಮಹಿಳೆಯರಿಗೆ ಆಸ್ಪತ್ರೆಗಳು, ಮಾರುಕಟ್ಟೆಗಳು, ಅಥವಾ ಹಳ್ಳಿಯ ಹೊರಗೆ ಹೋಗಲು ಕೂಡ ಅನುಮತಿಯಿಲ್ಲವೆಂದು ಸಮೀಕ್ಷೆಯೊಂದು ಹೇಳುತ್ತದೆ ( ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4, 2015-16 ). ಅವರು ಪ್ರತಿದಿನ ಮಧ್ಯಾಹ್ನ ಕಿಟಕಿಯ ಬಳಿ ಇರಿಸಿರುವ ಹೊಲಿಗೆ ಯಂತ್ರದಲ್ಲಿ ಬಟ್ಟೆಗಳನ್ನು ಹೊಲಿಯುತ್ತಾರೆ. ಇಲ್ಲಿ ಸಾಕಷ್ಟು ಬೆಳಕು ಬೀಳುತ್ತದೆ, ಇಲ್ಲಿ ದಿನದ ಈ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳುತ್ತದೆಯಾದ್ದರಿಂದ ಇದು ಅಗತ್ಯವಾಗಿರುತ್ತದೆ. ಮಧ್ಯಾಹ್ನದ ಈ ಕೆಲಸವು ತಿಂಗಳಿಗೆ 2,000 ರೂ. ಗಳಿಸಲು ಸಹಾಯ ಮಾಡುತ್ತದೆ, ಜೊತೆಗೆ ಇದು ಒಂದಿಷ್ಟು ನೆಮ್ಮದಿಯ ಏಕಾಂತದ ಮೂಲವಾಗಿದೆ ಮತ್ತು ಅವರ ಇಬ್ಬರು ಗಂಡು ಮಕ್ಕಳಾದ 16 ವರ್ಷದ ಸುಹೇಲ್ ಖಾನ್ ಮತ್ತು 14 ವರ್ಷದ ಸನ್ನಿ ಅಲಿ ಇಬ್ಬರಿಗೂ ಬೇಕಾಗುವ ಕೆಲವು ವಸ್ತುಗಳನ್ನು ಖರೀದಿಸಲು ಸಹಕಾರಿಯಾಗಿದೆ. ಆದರೆ ಅವರು ತನಗಾಗಿ ಅಪರೂಪಕ್ಕೊಮ್ಮೆ ಏನನ್ನಾದರೂ ಖರೀದಿಸುತ್ತಾರೆ.

ಸನ್ನಿ ಹುಟ್ಟಿದ ಕೆಲವು ತಿಂಗಳ ನಂತರ, ಸೈರಾ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಆ ಸಮಯದಲ್ಲಿ ಅವರ ಪತಿ ಸಮೀರ್‌ಗೆ ಅವರ ಉದ್ದೇಶಗಳ ಬಗ್ಗೆ ತಿಳಿದಿರಲಿಲ್ಲ.

ಸೋನಿಪತ್ ಜಿಲ್ಲೆಯಲ್ಲಿ, 15ರಿಂದ 49 ವರ್ಷ ವಯಸ್ಸಿನ ಪ್ರಸ್ತುತ ವಿವಾಹಿತ ಮಹಿಳೆಯರಲ್ಲಿ ಗರ್ಭನಿರೋಧಕ ಬಳಕೆಯ ಪ್ರಮಾಣ (ಸಿಪಿಆರ್) 78 ಪ್ರತಿಶತವಿದೆ (ಎನ್‌ಎಫ್‌ಹೆಚ್ಎಸ್ -4) - ಇದು ಹರಿಯಾಣದ ಒಟ್ಟಾರೆ 64 ಪ್ರತಿಶತಕ್ಕಿಂತ ಹೆಚ್ಚಾಗಿದೆ.

ಮಗ ಹುಟ್ಟಿದ ಮೊದಲ ಕೆಲವು ತಿಂಗಳುಗಳಲ್ಲಿ, ಸೈರಾ ಎರಡು ಬಾರಿ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಲು ಪ್ರಯತ್ನಿಸಿದ್ದರು. ಮೊದಲ ಬಾರಿಗೆ, ಅವರ ತವರು ಮನೆಯ ಸಮೀಪವಿರುವ ಸರ್ಕಾರಿ ಆಸ್ಪತ್ರೆಯಲ್ಲಿ, ಅಲ್ಲಿ ಅವರು ಮದುವೆಯಾದವರಂತೆ ಕಾಣುತ್ತಿಲ್ಲ ಎಂದು ವೈದ್ಯರು ಹೇಳಿದರು. ಎರಡನೇ ಬಾರಿಗೆ, ಅದೇ ಆಸ್ಪತ್ರೆಯಲ್ಲಿ, ಅವರು ತನ್ನ ಮಗನನ್ನು ಮದುವೆಯಾಗಿರುವುದನ್ನು ಸಾಬೀತುಪಡಿಸಲು ಕರೆದುಕೊಂಡು ಹೋದರು. "ನಾನು ಇಂತಹ ನಿರ್ಧಾರವನ್ನು ಸ್ವಯಂ ತೆಗೆದುಕೊಳ್ಳಲು ತುಂಬಾ ಚಿಕ್ಕವಳು ಎಂದು ವೈದ್ಯರು ಹೇಳಿದ್ದರು" ಎಂದು ಸೈರಾ ಹೇಳುತ್ತಾರೆ.

ತನ್ನ ತವರಿನಲ್ಲಿ ಉಳಿದುಕೊಂಡಿದ್ದಾಗ ದೆಹಲಿಯ ರೋಹಿಣಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವ ಮೂಲಕ ತನ್ನ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾದರು.
Only men occupy the chaupal at the village centre in Harsana Kalan, often playing cards. 'Why should women come here?' one of them asks
Only men occupy the chaupal at the village centre in Harsana Kalan, often playing cards. 'Why should women come here?' one of them asks

ಹರ್ಸಾನ ಕಲಾನ್ ಹಳ್ಳಿಯ ಮಧ್ಯದಲ್ಲಿ ನೆಲೆಗೊಂಡಿರುವ ಚೌಪಾಲ್ ಅನ್ನು ಪುರುಷರು ಮಾತ್ರ ಆಕ್ರಮಿಸಿಕೊಂಡಿರುತ್ತಾರೆ, ಅಲ್ಲಿ ಅವರು ಹೆಚ್ಚಾಗಿ ಇಸ್ಪೀಟ್ ಕಾರ್ಡ್‌ಗಳನ್ನು ಆಡುತ್ತಾರೆ. 'ಮಹಿಳೆಯರು ಯಾಕೆ ಇಲ್ಲಿಗೇಕೆ ಬರಬೇಕು?' ಅವರಲ್ಲಿ ಒಬ್ಬರು ಕೇಳುತ್ತಾರೆ

“ಈ ಸಲ ನಾನು ನನ್ನ ಗಂಡನ ವಿಷಯದಲ್ಲಿ ಸುಳ್ಳು ಹೇಳಿದೆ. ನಾನು ನನ್ನ ಮಗನನ್ನು ಕರೆದುಕೊಂಡು ಹೋಗಿ ನನ್ನ ಪತಿ ಕುಡುಕ ಎಂದು ವೈದ್ಯರಿಗೆ ಹೇಳಿದೆ” ಎಂದು ಸೈರಾ ಹೇಳುತ್ತಾರೆ. ಈ ಘಟನೆಯನ್ನು ವಿವರಿಸುವಾಗ ಅವರು ನಗುತ್ತಾರೆ, ಆದರೆ ಅವರಿಗೆ ತಾನು ಸಂತಾನ ಶಕ್ತಿ ಹರಣಕ್ಕಾಗಿ ಏಕೆ ಚಡಪಡಿಸುತ್ತಿದ್ದರು ಎನ್ನುವುದು ಚೆನ್ನಾಗಿ ನೆನಪಿದೆ. “ಮನೆಯ ವಾತಾವರಣ ಕೆಟ್ಟದಾಗಿತ್ತು, ದಬ್ಬಾಳಿಕೆ ಮತ್ತು ನಿರಂತರ ಹೋರಾಟದೊಂದಿಗೆ ಬದುಕು ನಡೆಸಬೇಕಿತ್ತು. ನನಗೆ ಒಂದು ವಿಷಯ ಖಚಿತವಾಗಿತ್ತು - ನನಗೆ ಹೆಚ್ಚು ಮಕ್ಕಳ ಬಯಕೆಯಿರಲಿಲ್ಲ.”

ಸೈರಾ ತನ್ನ ಸಂತಾನಹರಣ ಶಸ್ತ್ರಚಿಕಿತ್ಸೆಯ ದಿನವನ್ನು ನೆನಪಿಸಿಕೊಳ್ಳುತ್ತಾರೆ: “ಆ ದಿನ ಮಳೆ ಬರುತ್ತಿತ್ತು. ವಾರ್ಡ್‌ನ ಗಾಜಿನ ಗೋಡೆಯ ಹೊರಗೆ ನಿಂತಿರುವ ನನ್ನ ಚಿಕ್ಕ ಮಗ ನನ್ನ ತಾಯಿಯ ಮಡಿಲಿನಲ್ಲಿ ಅಳುತ್ತಿರುವುದನ್ನು ನೋಡಿದೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಇತರ ಮಹಿಳೆಯರು ಇನ್ನೂ ಗಾಢ ನಿದ್ದೆಯಲ್ಲಿದ್ದರು[ಅರಿವಳಿಕೆಯ ಕಾರಣ]. ನನ್ನ ಮೇಲೆ ಅದರ ಪರಿಣಾಮ ಬೇಗನೆ ಇಳಿದಿತ್ತು. ನನ್ನ ಮಗುವಿಗೆ ಹಾಲುಣಿಸುವ ಕುರಿತು ನಾನು ಚಿಂತೆ ಮಾಡುತ್ತಿದ್ದೆ. ಆಗ ತುಂಬಾ ಚಡಪಡಿಕೆಯಲ್ಲಿದ್ದೆ.”

ಸಮೀರ್‌ಗೆ ವಿಷಯ ತಿಳಿದಾಗ, ಅವರು ಸೈರಾರೊಂದಿಗೆ ತಿಂಗಳುಗಟ್ಟಲೆ ಮಾತನಾಡಿರಲಿಲ್ಲ. ಅವರನ್ನು ಕೇಳದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೋಪಗೊಂಡಿದ್ದರು. ಮುಂದೆ ತೆಗೆದುಹಾಕಬಹುದಾದ ʼಕಾಪರ್-ಟಿʼಯಂತಹ ಗರ್ಭನಿರೋಧಕ ಸಾಧನವನ್ನು (ಐಯುಡಿ) ಸೈರಾ ಆಳವಡಿಸಿಕೊಳ್ಳಬೇಕೆಂದು ಅವರು ಬಯಸಿದ್ದರು, ಆದರೆ ಸೈರಾ ಹೆಚ್ಚು ಮಕ್ಕಳನ್ನು ಹೊಂದುವುದರ ಪರವಾಗಿರಲಿಲ್ಲ.

“ನಮ್ಮಲ್ಲಿ ಹೊಲ ಹಾಗೂ ಎಮ್ಮೆಗಳಿವೆ. ಮನೆಕೆಲಸದೊಂದಿಗೆ ಅವೆಲ್ಲವನ್ನೂ ಸಹ ನೋಡಿಕೊಳ್ಳಬೇಕಿತ್ತು. ಒಂದು ವೇಳೆ ಐಯುಡಿ ಬಳಸುವುದರಿಂದ ನನಗೇನಾದರೂ ಆದರೆ ಯಾರು ಇದನ್ನೆಲ್ಲ ಮಾಡುತ್ತಾರೆ?” ಅವರು ಕೇವಲ 10ನೇ ತರಗತಿಯಲ್ಲಿ ಉತ್ತೀರ್ಣರಾದವರಾಗಿ ಕೇವಲ 24 ವರ್ಷದವರಿದ್ದಾಗ, ಮತ್ತು ಜೀವನ ಮತ್ತು ಗರ್ಭನಿರೋಧಕಗಳ ಬಗ್ಗೆ ಬಹಳ ಗೊಂದಲ ಹೊಂದಿದ್ದ ತನ್ನ ಹಿಂದಿನ ಜೀವನವನ್ನು ನೆನಪಿಸಿಕೊಳ್ಳುತ್ತಾರೆ.

ಸೈರಾ ಅವರ ತಾಯಿ ಅನಕ್ಷರಸ್ಥರಾಗಿದ್ದರು. ತಂದೆ ಇಲ್ಲ. ಆದರೆ ಅವರು ಕೂಡ ತನ್ನ ಓದನ್ನು ಮುಂದುವರಿಸಲು ಒತ್ತಾಯಿಸಲಿಲ್ಲ. “ಮಹಿಳೆ ದನಗಳಿಗಿಂತ ಹೆಚ್ಚೇನೂ ಅಲ್ಲ. ನಮ್ಮ ಎಮ್ಮೆಗಳಂತೆ, ನಮ್ಮ ಮೆದುಳು ಕೂಡ ಕೆಲಸ ಮಾಡುವುದಿಲ್ಲ,” ಎಂದು ಅವರು ಹೇಳುತ್ತಾರೆ, ಸೂಜಿಯಿಂದ ತಲೆಯೆತ್ತಿ ನೋಡುತ್ತಾ.

“ಹರಿಯಾಣದ ಗಂಡಸಿನ ಮುಂದೆ ಯಾರ ಮಾತೂ ನಡೆಯುವುದಿಲ್ಲ” ಮುಂದುವರೆದು ಹೇಳುತ್ತಾರೆ. "ಅವರು ಹೇಳಿದ್ದನ್ನು ಮಾಡಲೇಬೇಕು. ಇಂತಹ ಅಡುಗೆಯಾಗಬೇಕೆಂದು ಅವರು ಹೇಳಿದರೆ, ಅದನ್ನು ಮಾಡಬೇಕು - ಆಹಾರ, ಬಟ್ಟೆ, ಹೊರಗೆ ಹೋಗುವುದು ಹೀಗೆ ಎಲ್ಲವನ್ನೂ ಅವರು ಹೇಳುವ ಪ್ರಕಾರವೇ ಮಾಡಬೇಕು." ಇದರ ನಡುವೆ ಯಾವ ಹಂತದಲ್ಲಿ ಸೈರಾ ತನ್ನ ಗಂಡನ ಕುರಿತು ಹೇಳುವುದನ್ನು ಬಿಟ್ಟು ತನ್ನ ತಂದೆಯ ಬಗ್ಗೆ ಹೇಳಲು ಪ್ರಾರಂಭಿಸಿದರು ಎನ್ನವುದು ಸ್ಪಷ್ಟವಾಗಲಿಲ್ಲ.

Wheat fields surround the railway station of Harsana Kalan, a village of around 5,000 people in Haryana
Wheat fields surround the railway station of Harsana Kalan, a village of around 5,000 people in Haryana

ಸುಮಾರು 5,000 ಜನ ವಾಸವಾಗಿರುವ ಹರಿಯಾಣದ ಹಳ್ಳಿಯಾದ ಹರ್ಸಾನ ಕಲನ್ ರೈಲ್ವೆ ನಿಲ್ದಾಣದ ಸುತ್ತಲೂ ಗೋಧಿ ಹೊಲಗಳಿವೆ

ಸೈರಾರ ಪಕ್ಕದ ಮನೆಯಲ್ಲಿ ವಾಸಿಸುವ ಅವರ ಸಂಬಂಧಿ, ಸ್ನಾತಕೋತ್ತರ ಪದವೀಧರರಾದ 33 ವರ್ಷದ ಸನಾ ಖಾನ್ (ಅವರ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರ ಹೆಸರುಗಳನ್ನು ಈ ವರದಿಯಲ್ಲಿ ಬದಲಾಯಿಸಲಾಗಿದೆ) ಅವರ ಕಥೆಯಾದರೂ ಬೇರೆಯಿರಬಹುದೆಂದು ನೀವು ನಿರೀಕ್ಷಿಸಬಹುದು. ಆದರೆ ವಾಸ್ತವ ಬೇರೆಯಿದೆ, ಸನಾ ಖಾನ್ ಶಿಕ್ಷಕಿಯಾಗಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕೆಂದು ಬಯಸಿದ್ದರು. ಅದಕ್ಕೆ ಅವರ ಪತಿ ಒಪ್ಪಿಲ್ಲ. ಮನೆಯಲ್ಲಿ ಹೊರಗೆ ಕೆಲಸ ಮಾಡುವ ವಿಷಯ ಬಂದಾಗಲೆಲ್ಲಾ, ಅಕೌಂಟಿಂಗ್ ಸಂಸ್ಥೆಯೊಂದರಲ್ಲಿ ಆಫೀಸ್ ಅಟೆಂಡೆಂಟ್ ಆಗಿ ಕೆಲಸ ಮಾಡುವ ಅವರ ಪತಿ 36 ವರ್ಷದ ರುಸ್ತೋಮ್ ಅಲಿ "ನೀನು ಹೊರಗೆ ಹೋಗಿ ದುಡಿದು ಬಾ, ನಾನು ಮನೆಯಲ್ಲಿ ಕೂರ್ತೀನಿ. ನೀನು ಸಂಪಾದಿಸಿ ಮನೆಯನ್ನ ಒಬ್ಬಳೇ ನೋಡ್ಕೋ" ಎಂದು ಹಂಗಿಸುತ್ತಾರೆ.

ಅಂದಿನಿಂದ ಸನಾ ಈ ವಿಷಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. “ಮಾತಾಡಿ ಏನು ಉಪಯೋಗ? ಮತ್ತೆ ಅದೇ ಚರ್ಚೆ ಶುರುವಾಗುತ್ತದೆ. ಎಲ್ಲದಕ್ಕೂ ಪುರುಷರನ್ನೇ ಮೊದಲು ಪರಿಗಣಿಸುವ ದೇಶ ಇದು. ಹೀಗಾಗಿ ಮಹಿಳೆಯರಿಗೆ ರಾಜಿ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಅವರು ಅದನ್ನು ಮಾಡದೇಹೋದರೆ ಜಗಳ ಪ್ರಾರಂಭವಾಗುತ್ತದೆ" ಎಂದು ಅವರು ಹೇಳುತ್ತಾರೆ, ತನ್ನ ಅಡುಗೆ ಮನೆಯ ಹೊರಗೆ ನಿಂತು.

ಸೈರಾ ಮಧ್ಯಾಹ್ನ ಬಟ್ಟೆಗಳನ್ನು ಹೊಲಿಯುವಂತೆಯೇ, ಸನಾ ದಿನದ ಈ ಸಮಯವನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ತನ್ನ ಮನೆಯಲ್ಲಿ ಟ್ಯೂಷನ್‌ ಮಾಡಲು ಬಳಸಿಕೊಳ್ಳುತ್ತಾರೆ, ಇದರಿಂದ ಅವರು ತಿಂಗಳಿಗೆ 5,000 ರೂ ಗಳಿಸುತ್ತಾರೆ, ಅದು ಅವರ ಗಂಡನ ಸಂಬಳದ ಅರ್ಧದಷ್ಟು. ಅವರು ಅದರಲ್ಲಿ ಹೆಚ್ಚಿನದನ್ನು ತನ್ನ ಮಕ್ಕಳ ಮೇಲೆ ಕಳೆಯುತ್ತಾರೆ. ಆದರೆ ಹರಿಯಾಣದಲ್ಲಿನ ಶೇಕಡಾ 54ರಷ್ಟು ಮಹಿಳೆಯರಂತೆ ಅವರೂ ಸಹ ತಮ್ಮದೇ ಆದ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ.

ಸನಾ ಇಬ್ಬರು ಮಕ್ಕಳನ್ನಷ್ಟೇ ಹೊಂದಬೇಕೆಂದು ಬಯಸಿದ್ದರು ಮತ್ತು ಐಯುಡಿಯಂತಹ ಗರ್ಭನಿರೋಧಕ ವಿಧಾನವನ್ನು ಬಳಸಿಕೊಂಡು ಎರಡು ಗರ್ಭಧಾರಣೆಯ ನಡುವೆ ಅಂತರ ಕಾಪಾಡಿಕೊಳ್ಳಬಹುದೆಂದು ಅವರಿಗೆ ತಿಳಿದಿತ್ತು. ಅವರು ಮತ್ತು ರುಸ್ತೋಮ್ ಅಲಿ ಅವರಿಗೆ ಮೂವರು ಮಕ್ಕಳಿದ್ದಾರೆ - ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ.

ಅವರ ಮೊದಲ ಮಗಳು ಆಷಿಯಾ 2010ರಲ್ಲಿ ಜನಿಸಿದಾಗ, ಸನಾ ಸೋನಿಪತ್‌ನ ಖಾಸಗಿ ಆಸ್ಪತ್ರೆಯಲ್ಲಿ ಐಯುಡಿ ಆಳವಡಿಸಿಕೊಂಡರು. ಹಳ್ಳಿಯ ಇತರ ಅನೇಕ ಮಹಿಳೆಯರಂತೆಯೇ, ಸಾಕಷ್ಟು ವರ್ಷಗಳವರೆಗೆ ಇದು ತಾನು ಬಯಸಿದ್ದ ಮಲ್ಟಿಲೋಡೆಡ್‌ ಐಯುಡಿ ಆಗಿರಬಹುದು ತಾನು ಕೆಲವು ಅನುಮಾನಗಳನ್ನು ಹೊಂದಿದ್ದ ಕಾಪರ್-ಟಿ ಅಲ್ಲ ಎಂದು ಅವರು ತಿಳಿದಿದ್ದರು.

"ಕಾಪರ್-ಟಿ ಹೆಚ್ಚು ಸಮಯ ಕೆಲಸ ಮಾಡುತ್ತದೆ ಮತ್ತು ಸುಮಾರು 10 ವರ್ಷಗಳ ಕಾಲ ಗರ್ಭಧಾರಣೆಯನ್ನು ತಡೆಯುತ್ತದೆ. ಮಲ್ಟಿ-ಲೋಡ್ ಐಯುಡಿಗಳು ಮೂರರಿಂದ ಐದು ವರ್ಷಗಳವರೆಗೆ ಕೆಲಸ ಮಾಡುತ್ತವೆ” ಎಂದು ಹರ್ಸಾನ ಕಲಾನ್ ಗ್ರಾಮದ ಉಪ ವೈದ್ಯಕೀಯ ಕೇಂದ್ರದಲ್ಲಿ ಸಹಾಯಕ ದಾದಿಯಾಗಿ (ಎಎನ್‌ಎಂ) ಕೆಲಸ ಮಾಡುವ ನಿಶಾ ಫೋಗಟ್ ವಿವರಿಸುತ್ತಾರೆ. “ಹಳ್ಳಿಯ ಅನೇಕ ಮಹಿಳೆಯರು ಮಲ್ಟಿ-ಲೋಡ್ ಐಯುಡಿಗಳನ್ನು ಬಳಸುತ್ತಾರೆ. ಆದ್ದರಿಂದ ಇದು ಅವರ ಮೊದಲ ಆಯ್ಕೆಯಾಗಿ ಉಳಿದಿದೆ.” ಕಾಪರ್-ಟಿ ಬಗ್ಗೆ ಮಹಿಳೆಯರ ಸಂದೇಹವು ಪರಸ್ಪರ ಕೇಳಿದ ಸಂಗತಿಗಳಿಂದ ಹುಟ್ಟಿದಂತೆ ತೋರುತ್ತದೆ. "ಒಬ್ಬ ಮಹಿಳೆಗೆ ಗರ್ಭನಿರೋಧಕದಿಂದ ಸಮಸ್ಯೆಯಾದರೆ, ಇತರ ಮಹಿಳೆಯರು ಅದನ್ನು ಬಳಸಲು ಹಿಂಜರಿಯುತ್ತಾರೆ" ಎಂದು ನಿಶಾ ಹೇಳುತ್ತಾರೆ.

2006ರಿಂದ ಹರ್ಸಾನ ಕಲಾನ್‌ನಲ್ಲಿ ಸಾಮಾಜಿಕ ವೈದ್ಯಕೀಯ ಕಾರ್ಯಕರ್ತೆಯಾಗಿ (ಆಶಾ) ಕೆಲಸ ಮಾಡುತ್ತಿರುವ ಸುನೀತಾ ದೇವಿ, “ಕಾಪರ್-ಟಿ ಆಳವಡಿಸಿದ ನಂತರ ಭಾರವಾದ ತೂಕವನ್ನು ಎತ್ತುವಂತಹ ಕೆಲಸಗಳನ್ನು ಮಾಡಬಾರದು ಮತ್ತು ಒಂದು ವಾರ ವಿಶ್ರಾಂತಿ ಪಡೆಯಬೇಕು ಎನ್ನುವುದನ್ನು ಮಹಿಳೆಯರು ಅರ್ಥಮಾಡಿಕೊಳ್ಳಬೇಕು, ಏಕೆಂದರೆ ಸಾಧನವು ಸರಿಯಾಗಿ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಅವರು ಹಾಗೆ ಮಾಡುವುದಿಲ್ಲ, ಅಥವಾ ಹಾಗೆ ಮಾಡಲು ಅವರಿಗೆ ಸಾಧ್ಯವಿಲ್ಲ. ಇದರಿಂದಾಗಿ, ಇದು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಆಗ ʼಮೇರೆ ಕಲೇಜೆ ತಕ್ ಚಡ್ ಗಯಾ ಹೈ [ಸಾಧನವು ನನ್ನ ಎದೆಯವರೆಗೂ ಹೋಗಿದೆ]’ ಎಂದು ದೂರುತ್ತಾರೆ.
Sana Khan washing dishes in her home; she wanted to be a teacher after her degree in Education. 'Women have no option but to make adjustments', she says
Sana Khan washing dishes in her home; she wanted to be a teacher after her degree in Education. 'Women have no option but to make adjustments', she says

ಸನಾ ಖಾನ್ ತನ್ನ ಮನೆಯಲ್ಲಿ ಪಾತ್ರೆಗಳನ್ನು ತೊಳೆಯುತ್ತಿರುವುದು; ಶಿಕ್ಷಣದಲ್ಲಿ ಪದವಿ ಪಡೆದ ನಂತರ, ಅವರು ಶಿಕ್ಷಕಿಯಾಗಲು ಬಯಸಿದ್ದರು. 'ಮಹಿಳೆಯರಿಗೆ ರಾಜಿ ಮಾಡಿಕೊಳ್ಳುವುದರ ಹೊರತು ಬೇರೆ ದಾರಿಯಿಲ್ಲ' ಎಂದು ಅವರು ಹೇಳುತ್ತಾರೆ

ಸನಾ ಅವರಿಗೆ ಆಳವಡಿಸಿರುವುದು ಕಾಪರ್-ಟಿ ಎಂದು ಅವರಿಗೆ ತಿಳಿದಿದ್ದು ಐಯುಡಿ ತೆಗೆಸಲು ಹೋದಾಗ. "ನನ್ನ ಪತಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ನನಗೆ ಸುಳ್ಳು ಹೇಳಿದ್ದರು. ಮಲ್ಟಿ-ಲೋಡ್ ಐಯುಡಿ ಬದಲಿಗೆ ನನಗೆ ಕಾಪರ್-ಟಿ ಆಳವಡಿಸಲಾಗಿದೆ ಎಂದು ಅವರಿಗೆ [ರುಸ್ತೋಮ್ ಅಲಿ] ತಿಳಿದಿತ್ತು, ಆದರೆ ಅವರು ನನಗೆ ಸತ್ಯವನ್ನು ಹೇಳುವ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ನನಗೆ ಇದು ತಿಳಿದಾಗ, ನಾನು ಅವರೊಂದಿಗೆ ಜಗಳಾಡಿದೆ,” ಎಂದು ಅವರು ಹೇಳುತ್ತಾರೆ.

ಹಾಗೆ ಮಾಡಿದ್ದರಿಂದ ಅವರಿಗೇನೂ ತೊಂದರೆಯಾಗದಿರುವಾಗ ಅದೊಂದು ದೊಡ್ಡ ವಿಷಯವೆನ್ನಿಸುತ್ತದೆಯೇ ಎಂದು ಕೇಳಿದೆವು. "ಅವರು ನನಗೆ ಸುಳ್ಳು ಹೇಳಿದ್ದಾರೆ. ಇದೇ ರೀತಿಯಲ್ಲಿ ನನ್ನ ದೇಹದೊಳಗೆ ಇನ್ನೇನನ್ನೋ ಸೇರಿಸಿ ಆ ಬಗ್ಗೆಯೂ ಸುಳ್ಳು ಹೇಳಬಹುದು." ಎನ್ನುತ್ತಾರೆ. "ಕಾಪರ್-ಟಿ ಗಾತ್ರಕ್ಕೆ ಮಹಿಳೆಯರು ಹೆದರುತ್ತಿರುವುದರಿಂದ ನನ್ನನ್ನು ದಾರಿ ತಪ್ಪಿಸಲು ವೈದ್ಯರು ಸಲಹೆ ನೀಡಿದರು ಎಂದು ಅವರು [ರುಸ್ತೋಮ್ ಅಲಿ] ಹೇಳಿದರು."

ಐಯುಡಿ ತೆಗೆದ ನಂತರ, ಸನಾ ತನ್ನ ಎರಡನೇ ಮಗಳು ಅಕ್ಷಿಗೆ 2014ರಲ್ಲಿ ಜನ್ಮ ನೀಡಿದರು, ಅದು ತನ್ನ ಕುಟುಂಬವನ್ನು ಪೂರ್ಣಗೊಳಿಸುತ್ತದೆ ಎಂಬ ಭರವಸೆಯಲ್ಲಿದ್ದರು. ಆದರೆ 2017ರಲ್ಲಿ ಅವರಿಗೆ ಗಂಡು ಮಗುವಾಗುವವರೆಗೂ ಕುಟುಂಬದ ಒತ್ತಡ ಮುಂದುವರೆಯಿತು. "ಅವರು ಮಗನನ್ನು ಆಸ್ತಿಯೆಂದು ಪರಿಗಣಿಸುತ್ತಾರೆ; ಹೆಣ್ಣುಮಕ್ಕಳ ಬಗ್ಗೆ ಈ ರೀತಿ ಯೋಚಿಸಲಾಗುವುದಿಲ್ಲ" ಎಂದು ಸನಾ ಹೇಳುತ್ತಾರೆ.

ಹುಡುಗರಿಗೆ ಹೋಲಿಸಿದರೆ ದೇಶದಲ್ಲಿ ಅತಿ ಕಡಿಮೆ ಬಾಲಕಿಯರನ್ನು ಹೊಂದಿರುವ ರಾಜ್ಯಗಳಲ್ಲಿ ಹರಿಯಾಣ ಕೂಡ ಒಂದು. (2011 ರ ಜನಗಣತಿಯ ಪ್ರಕಾರ) 1000 ಹುಡುಗರಿಗೆ 834 ಹುಡುಗಿಯರು ಮಾತ್ರ ಇದ್ದಾರೆ (0-6 ವಯೋಮಾನದವರಲ್ಲಿ). ಸೋನಿಪತ್ ಜಿಲ್ಲೆಯಲ್ಲಿ ಈ ಸಂಖ್ಯೆ 1000 ಹುಡುಗರಿಗೆ 798 ಬಾಲಕಿಯರಷ್ಟಿದೆ . ಅವರು ಪುರುಷ ಆನುವಂಶಿಕತೆಯನ್ನು ಬಯಸುತ್ತಾರೆ ಮತ್ತು ಹೆಣ್ಣು ಮಕ್ಕಳನ್ನು ತಿರಸ್ಕರಿಸುತ್ತಾರೆ. ಕುಟುಂಬ ಯೋಜನೆ ಬಗ್ಗೆ ನಿರ್ಧಾರಗಳನ್ನು ಪುರುಷರು ಮತ್ತು ಕುಟುಂಬ ಸದಸ್ಯರು ತೆಗೆದುಕೊಳ್ಳುತ್ತಾರೆ ಎಂಬ ವ್ಯಾಪಕ ಗ್ರಹಿಕೆ ಇದೆ. ಎನ್‌ಎಫ್‌ಹೆಚ್‌ಎಸ್ -4 ಅಂಕಿಅಂಶಗಳ ಪ್ರಕಾರ, ಹರಿಯಾಣದಲ್ಲಿ ಕೇವಲ 70 ಪ್ರತಿಶತದಷ್ಟು ಮಹಿಳೆಯರು ಮಾತ್ರ ತಮ್ಮ ಆರೋಗ್ಯ ಸಂಬಂಧಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗವಹಿಸಬಹುದು. ಮತ್ತೊಂದೆಡೆ ಇಲ್ಲಿ 93 ಪ್ರತಿಶತ ಪುರುಷರು ಸ್ವತಃ ಆರೋಗ್ಯ ಸಂಬಂಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ಸೈರಾ ಮತ್ತು ಸನಾ ವಾಸಿಸುತ್ತಿರುವ ಪ್ರದೇಶದಲ್ಲಿಯೇ ವಾಸಿಸುವ ಕಾಂತ ಶರ್ಮಾ (ಅವರ ಹೆಸರು ಮತ್ತು ಅವರ ಕುಟುಂಬದ ಎಲ್ಲ ಸದಸ್ಯರ ಹೆಸರುಗಳನ್ನು ಈ ವರದಿಯಲ್ಲಿ ಬದಲಾಯಿಸಲಾಗಿದೆ), ಅವರ ಕುಟುಂಬದಲ್ಲಿ ಐದು ಸದಸ್ಯರಿದ್ದಾರೆ - ಅವರ 44 ವರ್ಷದ ಪತಿ ಸುರೇಶ್ ಶರ್ಮಾ ಮತ್ತು ನಾಲ್ಕು ಮಕ್ಕಳು. ಮದುವೆಯಾದ ಮೊದಲ ಎರಡು ವರ್ಷಗಳಲ್ಲಿ ಅಶು ಮತ್ತು ಗುಂಜನ್ ಎಂಬ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ತಮ್ಮ ಎರಡನೇ ಮಗಳ ಜನನದ ನಂತರ ಕಾಂತಾ ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಒಳಗಾಗುವುದೆಂದು ದಂಪತಿಗಳು ನಿರ್ಧರಿಸಿದ್ದರು, ಆದರೆ ಅವರ ಮಾವನ ಮನೆಯವರು ಒಪ್ಪಲಿಲ್ಲ.

“ನನ್ನ ಅತ್ತೆ ಮೊಮ್ಮಗನಿಗಾಗಿ ಹಾತೊರೆಯುತ್ತಿದ್ದರು. ಆ ಮೊಮ್ಮಗನಿಗಾಗಿ, ನಾವು ನಾಲ್ಕು ಮಕ್ಕಳನ್ನು ಹೊಂದಬೇಕಾಯಿತು. ಹಿರಿಯರು ಕೇಳಿದಾಗ ಇಲ್ಲವೆನ್ನದೆ ಅದನ್ನೇ ಮಾಡುತ್ತಾರೆ. ನನ್ನ ಪತಿ ಕುಟುಂಬದಲ್ಲಿ ಹಿರಿಯ ಮಗ. ಕುಟುಂಬದ ನಿರ್ಧಾರಗಳನ್ನು ನಾವು ತಿರಸ್ಕರಿಸಲು ಸಾಧ್ಯವಿರಲಿಲ್ಲ” ಎಂದು ಹಲವು ವರ್ಷಗಳಿಂದ ಓದಿನಲ್ಲಿ ಉತ್ತಮ ಸಾಧನೆಗಾಗಿ ಅವರ ಹೆಣ್ಣುಮಕ್ಕಳು ಗೆದ್ದ ಟ್ರೋಫಿಗಳನ್ನು ನೋಡುತ್ತಾ 39 ವರ್ಷದ ಕಾಂತಾ ಹೇಳುತ್ತಾರೆ.
Kanta's work-worn hand from toiling in the fields and tending to the family's buffaloes. When her third child was also a girl, she started taking contraceptive pills
Kanta's work-worn hand from toiling in the fields and tending to the family's buffaloes. When her third child was also a girl, she started taking contraceptive pills

ಹೊಲಗಳಲ್ಲಿನ ಕಠಿಣ ಪರಿಶ್ರಮ ಮತ್ತು ಕುಟುಂಬದ ಎಮ್ಮೆಯನ್ನು ನೋಡಿಕೊಳ್ಳುವುದರಿಂದ ದುರ್ಬಲಗೊಂಡಿರುವ ಕಾಂತಾರ ಕೈ. ಅವರ ಮೂರನೆಯ ಮಗು ಕೂಡ ಹೆಣ್ಣಾದಾಗ, ಅವರು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲಾರಂಭಿಸಿದರು

ನವವಿವಾಹಿತ ವಧುಗಳು ಹಳ್ಳಿಗೆ ಬಂದಾಗ, ಸುನೀತಾ ದೇವಿಯಂತಹ ಆಶಾ ಕಾರ್ಮಿಕರು ಒಂದು ದಾಖಲೆಯನ್ನು ಇಟ್ಟುಕೊಳ್ಳುತ್ತಾರೆ, ಆದರೆ ಕೆಲವೊಮ್ಮೆ ಅವರೊಂದಿಗೆ ಮೊದಲ ವರ್ಷದ ಕೊನೆಯಲ್ಲಿ ಮಾತ್ರ ಮಾತನಾಡುತ್ತಾರೆ. “ಹೆಚ್ಚಿನ ಯುವ ವಧುಗಳು ಮದುವೆಯಾದ ಮೊದಲ ವರ್ಷದೊಳಗೆ ಗರ್ಭಿಣಿಯಾಗುತ್ತಾರೆ. ಮಗುವನ್ನು ಹಡೆದ ನಂತರ ನಾವು ಅವರ ಮನೆಗೆ ಹೋಗಿ ಅವರ ಅತ್ತೆಯ ಉಪಸ್ಥಿತಿಯಲ್ಲಿ ಕುಟುಂಬ ಯೋಜನೆ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತೇವೆ. ನಂತರ ಅವರು ನಿರ್ಧರಿಸಿ ನಮಗೆ ಫಲಿತಾಂಶಗಳನ್ನು ತಿಳಿಸುತ್ತಾರೆ” ಎಂದು ಸುನೀತಾ ಹೇಳುತ್ತಾರೆ.

"ಇಲ್ಲದಿದ್ದರೆ ಅತ್ತೆಯಂದಿರು ನಮ್ಮ ಮೇಲೆ ಕೋಪಗೊಳ್ಳುತ್ತಾರೆ, ಮತ್ತು 'ಹಮಾರಿ ಬಹು ಕೊ ಕ್ಯಾ ಪಟ್ಟಿ ಪಢಾಕೆ ಚಲಿ ಗಯಿ ಹೋ [ನೀವು ನನ್ನ ಸೊಸೆಗೆ ಏನು ಕಲಿಸಿ ಹೋಗಿದ್ದೀರಿ]!ʼ ಎಂದು ಕೇಳುತ್ತಾರೆ" ಸುನೀತಾ ಹೇಳುತ್ತಾರೆ.

ಮೂರನೆಯ ಮಗು ಕೂಡ ಹೆಣ್ಣಾದಾಗ, ಕಾಂತಾ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು, ಅದನ್ನು ಅತ್ತೆಗೆ ತಿಳಿಯದಂತೆ ಪತಿ ತಂದುಕೊಡುತ್ತಿದ್ದರು. ಮಾತ್ರೆಗಳನ್ನು ಕೈಬಿಟ್ಟ ತಿಂಗಳುಗಳ ನಂತರ, ಕಾಂತಾ ಮತ್ತೆ ಗರ್ಭಿಣಿಯಾದರು. ಈ ಬಾರಿ ಗಂಡು ಮಗುವಾಯಿತು. ದುರಂತವೆಂದರೆ ಆ ʼಮೊಮ್ಮಗನನ್ನʼ ನೋಡುವುದಕ್ಕೆ ಅಜ್ಜಿಯೇ ಬದುಕಿರಲಿಲ್ಲ. 2006ರಲ್ಲಿ ಕಾಂತಾ ಅವರ ಅತ್ತೆ ನಿಧನರಾದರು. ಅದಾದ ಒಂದು ವರ್ಷದ ನಂತರ ಕಾಂತ ತನ್ನ ಮಗ ರಾಹುಲ್‌ಗೆ ಜನ್ಮ ನೀಡಿದರು.

ಅಂದಿನಿಂದ ಕಾಂತಾ ಕುಟುಂಬದಲ್ಲಿ ಹಿರಿಯ ಮಹಿಳೆಯಾಗಿದ್ದಾರೆ. ಅವರು ಐಯುಡಿ ಬಳಸಲು ಇಷ್ಟಪಡುತ್ತಾರೆ. ಅವರ ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಮೊದಲ ಮಗಳು ನರ್ಸಿಂಗ್‌ನಲ್ಲಿ ಬಿಎಸ್ಸಿ ಓದುತ್ತಿದ್ದಾಳೆ. ಕಾಂತಾ ತನ್ನ ಮಗಳ ಮದುವೆಯ ಕುರಿತು ಇನ್ನೂ ಯೋಚಿಸಿಲ್ಲ.

“ಅವರು ಚೆನ್ನಾಗಿ ಓದಿ ಯಶಸ್ವಿಯಾಗಲಿ. ನಮ್ಮ ಹೆಣ್ಣುಮಕ್ಕಳಿಗೆ ಅವರು ಬಯಸಿದ್ದನ್ನು ಸಾಧಿಸಲು ನಾವು ಸಹಾಯ ಮಾಡದಿದ್ದರೆ, ಅವರ ಗಂಡ ಮತ್ತು ಅವರ ಕುಟುಂಬಗಳು ಓದಲು ಸಹಾಯ ಮಾಡುತ್ತಾರೆಂದು ನಾವು ಹೇಗೆ ನಿರೀಕ್ಷಿಸಬಹುದು? ನಮ್ಮ ಕಾಲ ಬೇರೆ ಅದೀಗ ಮುಗಿದಿದೆ” ಎಂದು ಕಾಂತ ಹೇಳುತ್ತಾರೆ.

ತನ್ನ ಭಾವಿ ಸೊಸೆಯ ವಿಷಯದಲ್ಲಿ ಕಾಂತಾ ಹೇಗೆ ಯೋಚಿಸುತ್ತಾರೆ? "ಅದೇ" ಎಂದು ಅವರು ಹೇಳುತ್ತಾರೆ. "ಅವಳು ಬಯಸಿದರೆ ಗರ್ಭನಿರೋಧಕ ಬಳಸಬಹುದು ಅಥವಾ ಬಳಸದೆಯೂ ಇರಬಹುದು. ಅದು ಅವಳ ಆಯ್ಕೆಯಾಗಿರುತ್ತದೆ. ನಮ್ಮ ಕಾಲ ಬೇರೆಯಿತ್ತು ಈಗ ಆ ಕಾಲವಿಲ್ಲ ಅದು ಹೋಗಿಯಾಗಿದೆ."

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು
Anubha Bhonsle

২০১৫ সালের পারি ফেলো এবং আইসিএফজে নাইট ফেলো অনুভা ভোসলে একজন স্বতন্ত্র সাংবাদিক। তাঁর লেখা “মাদার, হোয়্যারস মাই কান্ট্রি?” বইটি একাধারে মণিপুরের সামাজিক অস্থিরতা তথা আর্মড ফোর্সেস স্পেশাল পাওয়ারস অ্যাক্ট এর প্রভাব বিষয়ক এক গুরুত্বপূর্ণ দলিল।

Other stories by Anubha Bhonsle
Sanskriti Talwar

সংস্কৃতি তলওয়ার নয়া দিল্লি-ভিত্তিক স্বতন্ত্র সাংবাদিক এবং ২০২৩ সালের পারি-এমএমএফ ফেলোশিপ প্রাপক রিপোর্টার।

Other stories by Sanskriti Talwar
Illustration : Priyanka Borar

নিউ-মিডিয়া শিল্পী প্রিয়াঙ্কা বোরার নতুন প্রযুক্তির সাহায্যে ভাব এবং অভিব্যক্তিকে নতুন রূপে আবিষ্কার করার কাজে নিয়োজিত আছেন । তিনি শেখা তথা খেলার জন্য নতুন নতুন অভিজ্ঞতা তৈরি করছেন; ইন্টারেক্টিভ মিডিয়ায় তাঁর সমান বিচরণ এবং সেই সঙ্গে কলম আর কাগজের চিরাচরিত মাধ্যমেও তিনি একই রকম দক্ষ ।

Other stories by Priyanka Borar
Editor : Hutokshi Doctor
Series Editor : Sharmila Joshi

শর্মিলা জোশী পিপলস আর্কাইভ অফ রুরাল ইন্ডিয়ার (পারি) পূর্বতন প্রধান সম্পাদক। তিনি লেখালিখি, গবেষণা এবং শিক্ষকতার সঙ্গে যুক্ত।

Other stories by শর্মিলা জোশী
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru