ಪೋಲೀಸ್ ಠಾಣೆಯೊಂದರ ಎದುರು ತಾನು ತನ್ನ ಪತ್ನಿಯನ್ನು ಥಳಿಸುತ್ತಿದ್ದೇನೆ ಎಂಬ ಪರಿವೆಯೇ ಆತನಿಗಿರಲಿಲ್ಲ. ಕುಡಿದ ಮತ್ತಿನಲ್ಲಿ ತೇಲುತ್ತಿದ್ದ ಹೌಸಾಬಾಯಿಯ ಪತಿ ಆಕೆಯನ್ನು ನಿರ್ದಯವಾಗಿ ಥಳಿಸುತ್ತಿದ್ದ. ''ನನ್ನ ಬೆನ್ನು ಭೀಕರವಾಗಿ ನೋಯುತ್ತಿತ್ತು. ಭವಾನಿ ನಗರದಲ್ಲಿರುವ (ಸಾಂಗ್ಲಿ) ಚಿಕ್ಕ ಪೋಲೀಸ್ ಠಾಣೆಯೊಂದರ ಸಮ್ಮುಖದಲ್ಲಿ ಇದೆಲ್ಲಾ ನಡೆಯುತ್ತಿತ್ತು'', ಎಂದು ಆ ದಿನಗಳನ್ನು ಇಂದು ನೆನಪಿಸುತ್ತಿದ್ದಾರೆ ಹೌಸಾಬಾಯಿ. ಆದರೆ ಠಾಣೆಯ ನಾಲ್ವರು ಸಿಬ್ಬಂದಿಗಳಲ್ಲಿ ಅಂದು ಇಬ್ಬರು ಮಾತ್ರ ಅಲ್ಲಿದ್ದರು. ಮತ್ತಿಬ್ಬರು ಮಧ್ಯಾಹ್ನದ ಊಟಕ್ಕೆಂದು ಹೊರಗೆಲ್ಲೋ ಹೋಗಿದ್ದರಂತೆ. ಇತ್ತ ಈ ಗಡಿಬಿಡಿಯಲ್ಲೇ ಹೌಸಾಬಾಯಿಯ ಪತಿ ದೊಡ್ಡದಾದ ಕಲ್ಲೊಂದನ್ನು ಎತ್ತಿ ''ಈ ಕಲ್ಲಿನಿಂದ ಇಲ್ಲೇ ನಿನ್ನನ್ನು ಚಚ್ಚಿ ಕೊಂದುಹಾಕುತ್ತೇನೆ'' ಎಂದು ಗರ್ಜಿಸುತ್ತಿದ್ದ.
ಈ ಸದ್ದು ಠಾಣೆಯೊಳಗಿದ್ದ ಇಬ್ಬರು ಸಿಬ್ಬಂದಿಗಳನ್ನು ಠಾಣೆಯ ಹೊರಭಾಗಕ್ಕೆ ಕರೆತಂದಿತ್ತು. ''ನಮ್ಮ ಜಗಳವನ್ನು ನಿಲ್ಲಿಸಲು ಅವರು ತಮ್ಮಿಂದಾದ ಪ್ರಯತ್ನವನ್ನೇನೋ ಮಾಡಿದರು'', ಎನ್ನುವ ಹೌಸಾಬಾಯಿ ತನಗೆ ಗಂಡನ ಮನೆಗೆ ಮರಳುವ ಮನಸ್ಸಿರಲಿಲ್ಲ ಎಂದು ಅಂದು ತನ್ನೊಂದಿಗಿದ್ದ ತನ್ನ ಸಹೋದರನೊಂದಿಗೆ ಹೇಳಲು ಪ್ರಯತ್ನಿಸುತ್ತಿದ್ದಾರೆ. ''ನಾನಂತೂ ಹೋಗೋದಿಲ್ಲ ಎಂದು ಹೇಳಿಯೇ ಬಿಟ್ಟೆ. ನಿನ್ನ ಮನೆಯ ಪಕ್ಕವೇ ಒಂದು ಚಿಕ್ಕ ಸ್ಥಳವನ್ನು ನನಗಾಗಿ ಮಾಡಿಕೊಡು. ನಾನು ಅಲ್ಲೇ ಇರುತ್ತೇನೆ. ಗಂಡನ ಮನೆಗೆ ಮರಳಿ ಸಾಯುವುದಕ್ಕಿಂತ ಇಲ್ಲೇ ಇದ್ದು, ಬಂದಿದ್ದು ಬರಲಿ ಎಂದು ಹೇಗಾದರೂ ಮಾಡಿ ಜೀವನ ಸಾಗಿಸುತ್ತೇನೆ... ಇನ್ನು ಅವನ ಹೊಡೆತಗಳನ್ನು ತಾಳಿಕೊಳ್ಳುವುದು ನನ್ನಿಂದಾಗದ ಮಾತು'', ಹೌಸಾಬಾಯಿ ಹೇಳುತ್ತಿದ್ದಾಳೆ. ಆದರೆ ಆಕೆಯ ಯಾವ ಗೋಗರೆಯುವಿಕೆಯೂ ಕೂಡ ಅವಳ ಸಹೋದರನ ಮನಸ್ಸನ್ನು ಬದಲಿಸಲು ಯಶಸ್ವಿಯಾಗಿರಲಿಲ್ಲ.
ಅಂತೂ ಪೋಲೀಸರು ದಂಪತಿಗಳಿಬ್ಬರನ್ನೂ ಸಾಕಷ್ಟು ಹೊತ್ತು ಮಾತಾಡಿಸಿಯಾಗಿತ್ತು. ಕೊನೆಗೂ ತಕ್ಕಮಟ್ಟಿಗೆ ಒಂದಾದಂತೆ ಕಂಡ ದಂಪತಿಗಳಿಬ್ಬರನ್ನು ಅವರ ಹಳ್ಳಿಯತ್ತ ಸಾಗುವ ರೈಲಿನಲ್ಲಿ ಕೂರಿಸಿ ಸಿಬ್ಬಂದಿಗಳು ಕೈತೊಳೆದುಕೊಂಡಿದ್ದರು. ''ಅವರು ನಮ್ಮ ಟಿಕೆಟ್ಟುಗಳನ್ನೂ ತಂದು ನನ್ನ ಕೈಯಲ್ಲಿಟ್ಟರು. ಜೊತೆಗೇ ನನ್ನ ಪತಿಗೆ ಕೆಲ ಮಾತುಗಳನ್ನು ಹೇಳಲೂ ಮರೆಯಲಿಲ್ಲ - ಹೆಂಡತಿ ಜೊತೆಗಿರಬೇಕು ಎಂದರೆ ಅವಳನ್ನು ಚೆನ್ನಾಗಿ ನೋಡಿಕೋ. ಸುಮ್ಮನೆ ಕಿತ್ತಾಡಬೇಡ'', ಹೌಸಾಬಾಯಿಯವರ ನೆನಪುಗಳು ಇಂದು ನಿಧಾನವಾಗಿ ಸುರುಳಿ ಬಿಚ್ಚಿಕೊಳ್ಳುತ್ತಿವೆ.
ಈ ಮಧ್ಯೆ ಮತ್ತೊಂದು ಘಟನೆಯೂ ನಡೆದಿತ್ತು. ಹೌಸಾಬಾಯಿಯ ಕಾಮ್ರೇಡ್ ಗಳು ಪೋಲೀಸ್ ಠಾಣೆಯನ್ನು ಲೂಟಿ ಮಾಡಿದ್ದಲ್ಲದೆ ಇದ್ದ ನಾಲ್ಕು ರೈಫಲ್ಲುಗಳನ್ನೂ ಹೊತ್ತೊಯ್ದಿದ್ದರು. ಅಸಲಿಗೆ ನಕಲಿ 'ಪತಿ' ಮತ್ತು ನಕಲಿ 'ಸಹೋದರ'ನನ್ನು ಕರೆತಂದು ಠಾಣೆಯೆದುರು ನಡೆಸಿದ ಈ ಭರ್ಜರಿ ನಾಟಕವು ಪೋಲೀಸ್ ಸಿಬ್ಬಂದಿಗಳ ಗಮನವನ್ನು ಠಾಣೆಯಿಂದ ತಮ್ಮತ್ತ ಸೆಳೆಯುವುದಕ್ಕಷ್ಟೇ ಆಡಿದ ಆಟವಾಗಿತ್ತು. ಇದು 1943 ರ ಕಥೆ. ಹೌಸಾಬಾಯಿಗಾಗ ಹದಿನೇಳರ ಹರೆಯ. ಮೂರು ವರ್ಷದ ವಿವಾಹಿತೆ ಮತ್ತು ಸುಭಾಷ್ ಎಂಬ ಪುಟ್ಟ ಮಗುವೊಂದರ ತಾಯಿ. ಬ್ರಿಟಿಷ್ ರಾಜ್ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದ ಆ ದಿನಗಳಲ್ಲಿ ತನ್ನ ಮಗುವನ್ನು ಸಂಬಂಧಿಯೊಬ್ಬಾಕೆಯ ಮನೆಯಲ್ಲಿ ಬಿಟ್ಟು ಚಳುವಳಿಗೆ ಧುಮುಕಿದ್ದಳು ಈ ಮಹಾತಾಯಿ. ಸದ್ಯ 74 ವರ್ಷಗಳ ನಂತರವೂ ತನ್ನ ಈ ನಕಲಿ ಪತಿಯ ಬಗ್ಗೆ ಆಕೆಗೆ ಅಸಮಾಧಾನವಿದೆ. ದಂಪತಿಗಳು ಕಿತ್ತಾಡುವ ಈ ನಾಟಕವು ಯಾವ ಕಾರಣಕ್ಕೂ ನಕಲಿಯೆಂಬಂತೆ ಕಾಣಬಾರದು ಎಂದುಕೊಂಡ ಆತ ಹೌಸಾಬಾಯಿಗೆ ಕೊಂಚ ಜೋರಾಗಿಯೇ ಬಾರಿಸಿದ್ದನಂತೆ. ''ಈ ವಯಸ್ಸಿನಲ್ಲಿ ಕಣ್ಣೂ, ಕಿವಿಯೂ ನನಗೆ ಸಾಥ್ ನೀಡುತ್ತಿಲ್ಲ, ಆದರೂ ನಿಮಗೆಲ್ಲವನ್ನೂ ನಾನೇ ಹೇಳುತ್ತೇನೆ'', ಎಂದು ಉತ್ಸಾಹದಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ವಿಟಾದಲ್ಲಿ ಮೈನವಿರೇಳಿಸುವ ತಮ್ಮ ಕಥೆಯನ್ನು ನಮಗೆ ಹೇಳುತ್ತಿದ್ದಾರೆ 91 ರ ಪ್ರಾಯದ ಹೌಸಾಬಾಯಿ.







