ವರು ಮಾತನಾಡುವಾಗ ಹಣೆ ಸುಕ್ಕುಗಟ್ಟುತ್ತದೆ, ಕಾಯಿಲೆ ಬಿದ್ದಂತೆ ಕಾಣುವ ಮುಖದಲ್ಲಿ ಗೆರೆಗಳು ಮೂಡುತ್ತವೆ. ಮೆಲ್ಲನೆ ಹೆಜ್ಜೆ ಕುಂಟುತ್ತಾ ಕೆಲವು ನೂರು ಮೀಟರುಗಳ ದೂರ ನಡೆದ ಆಕೆ ಒಂದಷ್ಟು ಸುಧಾರಿಸಿಕೊಳ್ಳಲು ನಿಲ್ಲುತ್ತಾರೆ. ಬೀಸಿ ಬಂದ ತಂಗಾಳಿ ಅವರ ಮುಖದ ಮೇಲೆ ಬಿಳಿಯ ಕೂದಲನ್ನುಮುಖದ ಮೇಲೆ ತರುತ್ತದೆ.
ಇಂದ್ರಾವತಿ ಜಾಧವ್ ಅವರನ್ನು ನೋಡಿದರೆ ಅವರಿಗೆ ಕೇವಲ 31 ವರ್ಷ ಎನ್ನುವುದನ್ನು ನಂಬಲು ಕಷ್ಟ.
ಮಹಾರಾಷ್ಟ್ರದ ನಾಗ್ಪುರ ನಗರದ ಹೊರವಲಯದಲ್ಲಿನ ಕೊಳೆಗೇರಿಯ ನಿವಾಸಿಯಾಗಿರುವ ಜಾಧವ್, ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ) ಯಿಂದ ಬಳಲುತ್ತಿದ್ದಾರೆ, ಇದೊಂದು ಶ್ವಾಸಕೋಶಕ್ಕೆ ಗಾಳಿಯ ಹರಿವನ್ನು ಸೀಮಿತಗೊಳಿಸುವ ಮಾರಣಾಂತಿಕ ಸ್ಥಿತಿಯಾಗಿದ್ದು, ಇದರಿಂದ ಉಸಿರಾಡಲು ಕಷ್ಟವಾಗುತ್ತದೆ ಮತ್ತು ಒಮ್ಮೊಮ್ಮೆ ದೀರ್ಘಕಾಲದ ಕೆಮ್ಮು ಅಂತಿಮವಾಗಿ ಶ್ವಾಸಕೋಶಗಳ ಹಾನಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ʼಧೂಮಪಾನಿಗಳ ಕಾಯಿಲೆʼ ಎಂದು ಕರೆಯಲ್ಪಡುವ ಈ ಕಾಯಿಲೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಸುಮಾರು 30 ಪ್ರತಿಶತದಿಂದ 40 ಪ್ರತಿಶತದಷ್ಟು ಸಿಒಪಿಡಿ ಪ್ರಕರಣಗಳು ತಂಬಾಕು-ಧೂಮಪಾನದ ಇತಿಹಾಸವನ್ನು ಹೊಂದಿರುವ ರೋಗಿಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳುತ್ತದೆ.
ಇಂದ್ರಾವತಿಯವರು ತಮ್ಮ ಜೀವಮಾನದಲ್ಲಿ ಎಂದೂ ಸಿಗರೇಟ್ ಮುಟ್ಟಿದವರಲ್ಲ. ಆದರೆ ಅವರ ಎಡಬದಿಯ ಶ್ವಾಸಕೋಶ ತೀವ್ರ ಹಾನಿಗೀಡಾಗಿದೆ. ಕಲ್ಲಿದ್ದಲು ಅಥವಾ ಸೌದೆ ಬಳಸಿ ಉರಿಸುವ ಒಲೆಯಿಂದ ಮನೆಯಲ್ಲಿ ನೇರ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ಡಬ್ಲ್ಯುಎಚ್ಒ ಹೇಳುತ್ತದೆ.
ಇಂದ್ರಾವತಿಯವರಿಗೆ ಎಂದೂ ಶುದ್ಧ ಇಂಧನ ಬಳಸುವ ಅವಕಾಶ ದೊರೆತಿಲ್ಲ. “ನಾವು ಯಾವಾಗಲೂ ತೆರೆದ ಒಲೆಯಲ್ಲಿ ಉರುವಲು ಸೌದೆ ಅಥವಾ ಕಲ್ಲಿದ್ದಲು ಬಳಸಿ ಅಡುಗೆ ಮಾಡುವುದು, ನೀರು ಬಿಸಿ ಮಾಡುವುದು ಇತ್ಯಾದಿ ಮಾಡುತ್ತೇವೆ. ಚೂಲಿವರ್ ಜೇವಾಣ್ ಬನ್ವುನ್ ಮಾಝಿ ಫುಪ್ಪುಸಾ ನಿಕಾಮಿ ಝಾಲಿ ಆಹೆತ್ [ತೆರೆದ ಒಲೆ ಬಳಸಿ ಅಡುಗೆ ಮಾಡುವುದರಿಂದಾಗಿ ನನ್ನ ಶ್ವಾಸಕೋಶಗಳು ನಿಷ್ಪ್ರಯೋಜಕವಾಗಿವೆ]" ಎಂದು ಅವರು ವೈದ್ಯರು ತಮಗೆ ಹೇಳಿದ್ದನ್ನು ನಮ್ಮೆದುರು ಪುನರಾವರ್ತಿಸುತ್ತಾರೆ. ಅವರು ಬಳಸುವ ಜೈವಿಕರಾಶಿ ಉರುವಲು ಒಲೆಯಿಂದ ಉಂಟಾಗುವ ಮಾಲಿನ್ಯವು ಅವರ ಶ್ವಾಸಕೋಶವನ್ನು ಹಾನಿಗೊಳಿಸಿದೆ.
ವಾಯು ಮಾಲಿನ್ಯದಿಂದಾಗಿ ಪ್ರತಿ ವರ್ಷ ಸುಮಾರು ಆರು ಲಕ್ಷ ಭಾರತೀಯರು ಅಕಾಲಿಕವಾಗಿ ಸಾಯುತ್ತಾರೆಂದು 2019ರ ಲ್ಯಾನ್ಸೆಟ್ ಅಧ್ಯಯನವು ಅಂದಾಜಿಸಿದೆ ಮತ್ತು ಮನೆಗಳಿಂದ ಉಂಟಾಗುವ ವಾಯು ಮಾಲಿನ್ಯವು ಸುತ್ತಲಿನ ಗಾಳಿಯ ಗುಣಮಟ್ಟದ ಕುಸಿತಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತದೆ.










