“ಬಂಗಾಳದ ಸಾಕಷ್ಟು ರೈತರಿಗೆ ಈ ಕಾನೂನುಗಳ ಕುರಿತು ತಿಳಿದಿಲ್ಲ. ಇಲ್ಲಿನ ಸಭೆಯಲ್ಲಿ ನಾಯಕರ ಮಾತುಗಳನ್ನು ಕೇಳಿ, ಅರ್ಥಮಾಡಿಕೊಂಡು, ಊರಿಗೆ ಹಿಂದಿರುಗಿದ ನಂತರ ತಮ್ಮ ನೆರೆಹೊರೆಯವರಿಗೆ ಮತ್ತು ಸ್ನೇಹಿತರಿಗೆ ತಿಳಿಸಲು ಸಾಧ್ಯವಾಗುತ್ತದೆಯೆನ್ನುವ ಕಾರಣಕ್ಕಾಗಿ ನಾನು ನನ್ನ ಹಳ್ಳಿಯಿಂದ ಕೆಲವು ಜನರನ್ನು ಇಲ್ಲಿಗೆ ಕರೆತಂದಿದ್ದೇನೆ” ಎಂದು ಸುಬ್ರತಾ ಅದಾಕ್ ಹೇಳಿದರು.
ರೈತರಾಗಿರುವ 31 ವರ್ಷದ ಸುಬ್ರತಾ ಮಾರ್ಚ್ 14ರಂದು ಸಿಂಗೂರಿನಲ್ಲಿ ನಡೆದ ಪ್ರತಿಭಟನಾ ಸಭೆಗೆ 10 ಕಿ.ಮೀ ದೂರದಲ್ಲಿರುವ ತಮ್ಮ ಊರು ಬಡಾ ಕಮಲಾಪುರದಿಂದ ಬಂದಿದ್ದರು. ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಮತ್ತು ಸಂಘಗಳ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಮಾರ್ಚ್ ತಿಂಗಳ ನಡುವಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಸಭೆಗಳನ್ನು ನಡೆಸಿ ಕಾನೂನಿನ ಅಪಾಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರು. ಇದರ ಭಾಗವಾಗಿ ಸಿಂಗೂರ್ನ ಹೊರತಾಗಿ ಅಸನ್ಸೋಲ್, ಕೋಲ್ಕತಾ ಮತ್ತು ನಂದಿಗ್ರಾಮದಲ್ಲೂ ಸಭೆ ನಡೆಸಿದರು.
ಸಿಂಗೂರಿನ ನಬಪಲ್ಲಿ ಪ್ರದೇಶದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಡೆದ ಸಣ್ಣ ಸಭೆಯಲ್ಲಿ ಪಾಲ್ಗೊಂಡ ರೈತರು ಮತ್ತು ಬೆಂಬಲಿಗರ ಸಂಖ್ಯೆ ಅಂದಾಜು 500ರಿಂದ 2,000ದವರೆಗೆ ಇತ್ತು. ಕೋಲ್ಕತ್ತಾದ ವಾಯುವ್ಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಈ ನಗರವು 2006-07ರಲ್ಲಿ ಟಾಟಾ ಮೋಟಾರ್ಸ್ನ ನ್ಯಾನೋ ಕಾರ್ ಕಾರ್ಖಾನೆಗಾಗಿ ಸುಮಾರು 997 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರದ ವಿರುದ್ಧ ಐತಿಹಾಸಿಕ ಆಂದೋಲನಕ್ಕೆ ಸಾಕ್ಷಿಯಾಗಿತ್ತು. 2016ರಲ್ಲಿ ಸುಪ್ರೀಂ ಕೋರ್ಟ್ ತನ್ನ ಒಂದು ಆದೇಶದ ಮೂಲಕ ಭೂಮಿಯನ್ನು ರೈತರಿಗೆ ಹಿಂದಿರುಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು, ಆದರೆ ಇಂದಿಗೂ ಅಲ್ಲಿನ ಹೆಚ್ಚಿನ ಭೂಮಿ ಹಡಿಲು ಬಿದ್ದಿದೆ.
"ನಾನೊಬ್ಬ ಕೃಷಿಕನಾಗಿರುವುದರಿಂದ, ಭಾರತದ ಕೃಷಿಯ ಪರಿಸ್ಥಿತಿ ಹೇಗಿದೆಯೆನ್ನುವುದು ನನಗೆ ತಿಳಿದಿದೆ" ಎಂದು ತನ್ನ ಎಂಟು ಭಿಘಾ ಭೂಮಿಯಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಬೆಳೆಯುವ ಸುಬ್ರತಾ (1 ಬಿಘಾ ಪಶ್ಚಿಮ ಬಂಗಾಳದಲ್ಲಿ 0.33 ಎಕರೆಗೆ ಸಮನಾಗಿರುತ್ತದೆ) ಹೇಳಿದರು. “ಸ್ವತಂತ್ರ ಪೂರ್ವ ಭಾರತದಲ್ಲಿಯೂ ಸಹ, ಬ್ರಿಟಿಷರು ಇಲ್ಲಿನ ರೈತರನ್ನು ಇನ್ನಿಲ್ಲದಂತೆ ಶೋಷಿಸಿದರು. ಪ್ರಸ್ತುತ ಸರ್ಕಾರ ಪುನಃ ಅದೇ ಪರಿಸ್ಥಿತಿಯನ್ನು ತರುತ್ತಿದೆ. ಆಲೂಗಡ್ಡೆಯ ಕೃಷಿ ವೆಚ್ಚಗಳು ಹೆಚ್ಚಾಗಿದೆ, ಬೀಜಗಳ ಬೆಲೆ ಏರಿದೆ. ಈ ಎಲ್ಲ ಶ್ರಮದ ಹಣ ನ್ಯಾಯಯುತ ರೀತಿಯಲ್ಲಿ ನಮಗೆ ಸಿಗುವ ಬದಲು ಕಾರ್ಪೋರೇಟ್ಗಳಿಗೆ ದೊರಕಿದರೆ ನಾವು ಹೇಗೆ ಬದುಕು ನಡೆಸುವುದು?”








