ಅದು ಕೊಲ್ಹಾಪುರ ಜಿಲ್ಲೆಯ ರಾಜಾರಾಮ್ ಸಕ್ಕರೆ ಕಾರ್ಖಾನೆ ಪ್ರದೇಶ. ಆ ದಿನ ಫೆಬ್ರವರಿ ತಿಂಗಳ ಸೆಕೆಯಿಂದ ಕೂಡಿದ್ದ ಮಧ್ಯಾಹ್ನವಾಗಿತ್ತು. ಕಾರ್ಖಾನೆಯ ಆವರಣದಲ್ಲಿರುವ ನೂರಾರು ಖೋಪ್ಯಾಗಳು (ಕಬ್ಬಿನ ಕಾರ್ಮಿಕರ ಗುಡಿಸಲುಗಳು) ಬಹುತೇಕ ಖಾಲಿಯಿದ್ದವು. ಇಲ್ಲಿಂದ ಒಂದು ಗಂಟೆಯ ಕಾಲ್ನಡಿಗೆಯ ವಡನಗೆ ಗ್ರಾಮದ ಬಳಿ ವಲಸೆ ಕಾರ್ಮಿಕರು ಕಬ್ಬು ಕತ್ತರಿಸುತ್ತಿದ್ದರು.
ಗುಡಿಸಲುಗಳ ಒಳಗಿನಿಂದ ಬರುತ್ತಿದ್ದ ಸದ್ದು ಮನೆಯೊಳಗೆ ಯಾರೋ ಇದ್ದಾರೆನ್ನುವುದನ್ನು ಸೂಚಿಸುತ್ತಿತ್ತು. ಆ ಸದ್ದನ್ನು ಅನುಸರಿಸಿ ಹೋದಾಗ ಅಲ್ಲಿ ಎದುರಾಗಿದ್ದು 12 ವರ್ಷದ ಸ್ವಾತಿ ಮಹಾರ್ನೋರ್ ಎನ್ನುವ ಬಾಲಕಿ. ಅವಳು ತನ್ನ ಕುಟುಂಬಕ್ಕಾಗಿ ಅಡುಗೆ ತಯಾರಿಸುವುದರಲ್ಲಿ ತೊಡಗಿಸಿಕೊಂಡಿದ್ದಳು. ದಣಿದಂತೆ ಕಾಣುತ್ತಿದ್ದ ಅವಳು ತನ್ನ ಕುಟುಂಬದ ಗುಡಿಸಲಿನಲ್ಲಿ ಕುಳಿತಿದ್ದಳು. ಅವಳ ಸುತ್ತ ಪಾತ್ರೆ ಪಡಗಗಳಿದ್ದವು.
“ನಾನು ಬೆಳಗ್ಗೆ 3 ಗಂಟೆಗೆ ಎದ್ದಿದ್ದೇನೆ” ಎನ್ನುತ್ತಾ ಆಕಳಿಸಿದಳು.
ಈ ಪುಟ್ಟ ಹುಡುಗಿ ಬೆಳಗಿನ ಜಾವ ಎದ್ದು ಎತ್ತಿನ ಗಾಡಿಯಲ್ಲಿ ತನ್ನ ಅಜ್ಜ ಮತ್ತು ಅಣ್ಣನೊಡನೆ ಕಬ್ಬಿನ ಹೊಲಕ್ಕೆ ಹೋಗಿದ್ದಳು. ಮಹಾರಾಷ್ಟ್ರದ ಬಾವ್ಡಾ ತಾಲ್ಲೂಕಿನಲ್ಲಿ ಕಬ್ಬು ಕತ್ತರಿಸುವ ಕೆಲಸದಲ್ಲಿರುವ ತನ್ನ ಕುಟುಂಬಕ್ಕೆ ಸಹಾಯ ಮಾಡುವ ಸಲುವಾಗಿ ಅವಳು ಹೋಗಿದ್ದಳು. ಅವರ ಐದು ಸದಸ್ಯರ ಕುಟುಂಬಕ್ಕೆ ದಿನಕ್ಕೆ ಇಪ್ಪತೈದು ಮೊಲಿ (ಕಟ್ಟು) ಕಬ್ಬು ಕತ್ತರಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು ಈ ಗುರಿಯನ್ನು ತಲುಪಲು ಈ ಪುಟ್ಟ ಹುಡುಗಿ ಕೂಡಾ ಕುಟುಂಬದೊಡನೆ ಕೈಜೋಡಿಸಬೇಕಿದೆ. ಅವರು ಊಟಕ್ಕಾಗಿ ಹಿಂದಿನ ದಿನದ ರೊಟ್ಟಿ ಮತ್ತು ಬದನೆಕಾಯಿ ಪಲ್ಯವನ್ನು ಕಟ್ಟಿಕೊಂಡು ಹೋಗಿದ್ದರು.
ಅವರಲ್ಲಿ ಸ್ವಾತಿಯೊಬ್ಬಳು ಮಾತ್ರವೇ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಕಾರ್ಖಾನೆಯ ಆವರಣದಲ್ಲಿರುವ ತಮ್ಮ ಮನೆಗೆ ಆರು ಕಿಲೋಮೀಟರ್ ದೂರವನ್ನು ನಡೆದು ತಲುಪಿದ್ದಳು. “ಬಾಬಾ [ಅಜ್ಜ] ನನ್ನನ್ನು ಮನೆಗೆ ಬಿಟ್ಟು ಹೋದರು.” 15 ಗಂಟೆಗಳ ಕಾಲ ಕಬ್ಬು ಕಟಾವು ಮಾಡಿ ದಣಿದು ಹಸಿದಿರುವ ಕುಟುಂಬದ ಉಳಿದವರಿಗೆ ಊಟವನ್ನು ತಯಾರಿಸಲು ಅವಳು ಇತರರಿಗಿಂತ ಮುಂಚಿತವಾಗಿ ಮನೆಗೆ ಬಂದಿದ್ದಾಳೆ. "ನಾವು [ಕುಟುಂಬ] ಬೆಳಿಗ್ಗೆಯಿಂದ ಬರೀ ಒಂದು ಲೋಟ ಟೀ ಕುಡಿದಿದ್ದೇವೆ ಅಷ್ಟೇ" ಎನ್ನುತ್ತಾಳೆ ಸ್ವಾತಿ.
2022ರ ನವೆಂಬರ್ ತಿಂಗಳಿನಲ್ಲಿ ಬೀಡ್ ಜಿಲ್ಲೆಯ ಸಕುಂದವಾಡಿ ಗ್ರಾಮದಿಂದ ಕೊಲ್ಹಾಪುರಕ್ಕೆ ಬಂದ ಸ್ವಾತಿ ಅಂದಿನಿಂದಲೂ ಈ ಅಡುಗೆ ಕೆಲಸ ಮತ್ತು ಕಬ್ಬಿನ ಹೊಲದ ಕೆಲಸ ಮಾಡುತ್ತಿದ್ದಾಳೆ. ಅವರ ಕುಟುಂಬವು ಇಲ್ಲಿನ ಕಾರ್ಖಾನೆ ಆವರಣದಲ್ಲಿ ತಂಗಿದೆ. ಆಕ್ಸ್ ಫಾಮ್ ಹೊರತಂದ ಹ್ಯುಮನ್ ಕಾಸ್ಟ್ ಆಫ್ ಶುಗರ್ ಎನ್ನುವ 2020ರ ವರದಿಯ ಪ್ರಕಾರ ಮಹಾರಾಷ್ಟ್ರದ ಬಹುತೇಕ ವಲಸೆ ಕಾರ್ಮಿಕರು ಟಾರ್ಪಲಿನ್ ಹೊದಿಕೆಯ ಗುಡಿಸಲುಗಳಿರುವ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಇಂತಹ ಕಾಲೋನಿಗಳಲ್ಲಿ ಸಾಮಾನ್ಯವಾಗಿ ನೀರು, ವಿದ್ಯುತ್ ಮತ್ತು ಶೌಚಾಲಯದ ವ್ಯವಸ್ಥೆಯನ್ನು ಹೊಂದಿರುವುದಿಲ್ಲ.










