ವಿಜಯ್ ಮರೋತ್ತರ್ ತನ್ನ ತಂದೆಯೊಡನೆ ನಡೆಸಿದ ಕಡೆಯ ಸಂಭಾಷಣೆಯ ಬಗ್ಗೆ ಬಹಳ ವಿಷಾದವನ್ನು ಹೊಂದಿದ್ದಾರೆ.
ಅದು ಬೇಸಿಗೆಯ ಸಂಜೆ, ಮತ್ತು ಯವತ್ಮಾಲ್ ಜಿಲ್ಲೆಯ ಅವರ ಊರು ನಿಧಾನವಾಗಿ ಕತ್ತಲೆಯಲ್ಲಿ ಮರೆಯಾಗುತ್ತಿತ್ತು. ಮಂದಬೆಳಕಿನ ಕೋಣೆಯಲ್ಲಿ, ವಿಜಯ್ ತನಗೆ ಮತ್ತು ಅವರ ತಂದೆಗೆ ಎರಡು ತಟ್ಟೆಗಳಲ್ಲಿ ಊಟವನ್ನು ತಂದರು - ಎರಡು ರೊಟ್ಟಿಗಳು, ಬೇಳೆಕಾಳುಗಳು ಮತ್ತು ಒಂದು ಬಟ್ಟಲು ಅನ್ನ.
ಆದರೆ ಅವರ ತಂದೆ ಘನಶ್ಯಾಮ್ ತಟ್ಟೆಯನ್ನು ಒಮ್ಮೆ ನೋಡಿ ಆಘಾತಕ್ಕೊಳಗಾದರು. ಕತ್ತರಿಸಿದ ಈರುಳ್ಳಿ ಎಲ್ಲಿದೆ ಎಂದು ಕೋಪದಿಂದ ಕೇಳಿದರು. ವಿಜಯ್ (25 ವರ್ಷ) ಪ್ರಕಾರ, ಅವರ ನಡವಳಿಕೆ ಹಾಗೆ ಇತ್ತು, ಆದರೆ ಆ ದಿನಗಳಲ್ಲಿ ಅವರು ಅದೇ ಮನಸ್ಥಿತಿಯಲ್ಲಿ ಬದುಕುತ್ತಿದ್ದರು. ಮಹಾರಾಷ್ಟ್ರದ ಅಕ್ಪುರಿ ಗ್ರಾಮದ ತನ್ನ ಒಂದು ಕೋಣೆಯ ಗುಡಿಸಲಿನ ಹೊರಗೆ ತೆರೆದ ಜಾಗದಲ್ಲಿ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ವಿಜಯ್ ಹೇಳುತ್ತಾರೆ, "ಕೆಲವು ಸಮಯದಿಂದ, ಅವರು ಸಣ್ಣ ವಿಷಯಗಳಿಗೆ ತಮ್ಮ ಮೇಲೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದರು."
ವಿಜಯ್ ಮತ್ತೆ ಅಡುಗೆ ಮನೆಗೆ ಹೋಗಿ ತಂದೆಗೆ ಕತ್ತರಿಸಿದ ಈರುಳ್ಳಿ ತಂದರು. ಆದರೆ ಊಟದ ನಂತರ ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಅಂದು ರಾತ್ರಿ ವಿಜಯ್ ನೋವಿನೊಂದಿಗೆ ಮಲಗಿದರು. ಬೆಳಗ್ಗೆ ಅಪ್ಪನನ್ನು ಜೊತೆ ಸಮಾಧಾನದಿಂದ ಮಾತನಾಡುತ್ತೇನೆ ಎಂದುಕೊಂಡರು.
ಆದರೆ ಘನಶ್ಯಾಮ್ ಪಾಲಿಗೆ ಬೆಳಗು ಬರಲಿಲ್ಲ.
59 ವರ್ಷದ ರೈತ ಆ ರಾತ್ರಿ ಕೀಟನಾಶಕ ಸೇವಿಸಿದರು. ವಿಜಯ್ ಎಚ್ಚರಗೊಳ್ಳುವ ಮೊದಲೇ ಅವರು ನಿಧನರಾಗಿದ್ದರು. ಅದು ಏಪ್ರಿಲ್ 2022.









