“ಆ ದಿನ ಮಧ್ಯಾಹ್ನ ನಾನು ಬದುಕುಳಿಯುತ್ತೇನೆಂದು ಅಂದುಕೊಂಡಿರಲಿಲ್ಲ. ಆ ದಿನ ನನ್ನ ನೀರು ಒಡೆದಿತ್ತು. ಹತ್ತಿರದಲ್ಲಿ ಯಾವುದೇ ಆಸ್ಪತ್ರೆಯಾಗಲಿ, ಆರೋಗ್ಯ ಕಾರ್ಯಕರ್ತರಾಗಲಿ ಇದ್ದಿರಲಿಲ್ಲ. ಶಿಮ್ಲಾದ ಆಸ್ಪತ್ರೆಗೆ ಹೊರಟಾಗ ನಾನು ಜೀಪಿನಲ್ಲೇ ಹೆರಿಗೆಯಾಗುವ ಸ್ಥಿತಿಯಲ್ಲಿದ್ದೆ. ನಾನು ಸ್ವಲ್ಪ ಹೊತ್ತು ತಡೆದುಕೊಳ್ಳುವ ಕೂಡಾ ಪರಿಸ್ಥಿತಿಯಲ್ಲಿ ಇದ್ದಿರಲಿಲ್ಲ. ಕೊನೆಗೆ ಬೊಲೆರೊದಲ್ಲೇ ಮಗುವಿಗೆ ಜನ್ಮ ನೀಡಿದೆ.” ಈ ವರದಿಗಾರರು ಅನುರಾಧ ಮಹತೋ (ಹೆಸರು ಬದಲಾಯಿಸಲಾಗಿದೆ) ಅವರನ್ನು ಭೇಟಿಯಾಗುವಾಗ ಮೇಲೆ ಹೇಳಿದ ಘಟನೆ ನಡೆದು ಆರು ತಿಂಗಳಾಗಿತ್ತು. ಆದರೆ ಅವರು ಘಟನೆ ನಿನ್ನೆಯಷ್ಟೇ ನಡೆಯಿತೇನೊ ಎಂಬಂತೆ ನೆನಪಿನಿಂದ ವಿವರಿಸುತ್ತಿದ್ದರು.
"ಆಗ ಮಧ್ಯಾಹ್ನ ಸುಮಾರು ಮೂರು ಗಂಟೆಯಾಗಿತ್ತು. ನೀರು ಒಡೆದ ತಕ್ಷಣ ನನ್ನ ಪತಿ ಆಶಾ ದೀದಿಗೆ ಮಾಹಿತಿ ನೀಡಿದರು. ಅವರು ಮುಂದಿನ 15 ಅಥವಾ 20 ನಿಮಿಷಗಳಲ್ಲಿ ಬಂದರು. ಅವರು ಬಂದ ಸ್ವಲ್ಪ ಸಮಯದ ನಂತರ ಆಂಬ್ಯುಲೆನ್ಸ್ ಕರೆಸಲು ಕರೆ ಮಾಡಿದ್ದು ನೆನಪಿದೆ. ಆ ದಿನ ಮಳೆ ಸುರಿಯುತ್ತಿತ್ತು. ಆಂಬ್ಯುಲೆನ್ಸ್ ಜನರು 10 ನಿಮಿಷಗಳಲ್ಲಿ ಹೊರಡುವುದಾಗಿ ಹೇಳಿದರು , ಆದರೆ ಅವರು ನಮ್ಮ ಸ್ಥಳವನ್ನು ತಲುಪಲು ಸಾಮಾನ್ಯಕ್ಕಿಂತ ಕನಿಷ್ಠ ಒಂದು ಗಂಟೆ ಹೆಚ್ಚು ತೆಗೆದುಕೊಳ್ಳುತ್ತಿದ್ದರು," ಎಂದು ತನ್ನ ಬದುಕಿನ 20ರ ದಶಕದ ಕೊನೆಯಲ್ಲಿ ಅನುರಾಧಾ ಹೇಳುತ್ತಾರೆ. ಇಲ್ಲಿ ಮಳೆ ಬಂದಾಗ ರಸ್ತೆಗಳು ಹೇಗೆ ಅಪಾಯಕಾರಿಯಾಗುತ್ತವೆ ಎಂದು ಅವರು ವಿವರಿಸುತ್ತಿದ್ದರು.
ಆಕೆ ಹಿಮಾಚಲ ಪ್ರದೇಶದ ಕೋಟಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿರುವ ತಾತ್ಕಾಲಿಕ ತಗಡಿನ ಗುಡಿಸಲಿನಲ್ಲಿ ತನ್ನ ಮೂವರು ಮಕ್ಕಳು ಮತ್ತು ವಲಸೆ ಕಾರ್ಮಿಕ ಪತಿಯೊಂದಿಗೆ ವಾಸಿಸುತ್ತಿದ್ದಾರೆ. ಈ ಕುಟುಂಬವು ಮೂಲತಃ ಬಿಹಾರದ ಭಾಗಲ್ಪುರ ಜಿಲ್ಲೆಯ ಗೋಪಾಲಪುರ ಗ್ರಾಮದವರು.
2020ರಲ್ಲಿ ಶಿಮ್ಲಾ ಜಿಲ್ಲೆಯ ಮಶೋರ್ಬಾ ಬ್ಲಾಕ್ನ ಕೋಟಿಯಲ್ಲಿ ತನ್ನ ಪತಿಯನ್ನು ಬಂದು ಸೇರಿಕೊಂಡ ಅನುರಾಧಾ, "ಆರ್ಥಿಕ ಸಮಸ್ಯೆಗಳಿಂದಾಗಿ ನಾವು ನಮ್ಮ ಗ್ರಾಮದಿಂದ [ಬಿಹಾರದ] ಇಲ್ಲಿಗೆ ಸ್ಥಳಾಂತರಗೊಳ್ಳಬೇಕಾಯಿತು. ಎರಡು ಸ್ಥಳಗಳಲ್ಲಿ ಬಾಡಿಗೆಯನ್ನು ಪಾವತಿಸುವುದು ಕಷ್ಟಕರವಾಗಿತ್ತು." ಆಕೆಯ 38 ವರ್ಷದ ಪತಿ ರಾಮ್ ಮಹತೋ (ಹೆಸರು ಬದಲಾಯಿಸಲಾಗಿದೆ), ನಿರ್ಮಾಣ ಸ್ಥಳದಲ್ಲಿ ಗಾರೆ ಕೆಲಸ ಮಾಡುತ್ತಾರೆ ಮತ್ತು ಅವರ ಕೆಲಸವು ಅವರನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗಬೇಕಾಗುತ್ತದೆ. ಪ್ರಸ್ತುತ, ಅವರು ತಮ್ಮ ತಗಡಿನ ಗುಡಿಸಲಿನ ಮುಂಭಾಗದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸಾಮಾನ್ಯ ದಿನಗಳಲ್ಲಿಯೂ ಆಂಬ್ಯುಲೆನ್ಸ್ ಅವರ ಮನೆಯ ಬಳಿ ಸುಲಭವಾಗಿ ಬರಲು ಸಾಧ್ಯವಿಲ್ಲ. ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಶಿಮ್ಲಾದ ಜಿಲ್ಲಾ ಕೇಂದ್ರದಲ್ಲಿರುವ ಕಮಲಾ ನೆಹರು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಬಂದರೆ, ಕೋಟಿಯನ್ನು ತಲುಪಲು 1.5 ರಿಂದ 2 ಗಂಟೆಗಳು ಬೇಕಾಗುತ್ತದೆ. ಆದರೆ ಮಳೆ ಮತ್ತು ಹಿಮಪಾತದ ಸಮಯದಲ್ಲಿ ಅದು ದುಪ್ಪಟ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.










