ಕೋವಿಡ್ -19 ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳಲೆಂದು ಮಹೇಂದ್ರ ಫುಟಾಣೇ ಮೇ 5ರ ಬೆಳಿಗ್ಗೆ ತನ್ನ ಮನೆಯಿಂದ ಹೊರಟು, 12 ದಿನಗಳ ನಂತರ ಮನೆಗೆ ಮರಳಿದರು. "ಇದೊಂದು ರೋಮಾಂಚಕಾರಿ ದಿನವಾಗಿರಬೇಕಿತ್ತು, ಆದರೆ ದುಃಸ್ವಪ್ನವಾಗಿ ಬದಲಾಯಿತು" ಎಂದು ಮಹೇಂದ್ರ ಹೇಳುತ್ತಾರೆ.
ಅಂದು ಮಹೇಂದ್ರ ಲಸಿಕೆ ಪಡೆಯುವ ಮೊದಲೇ ಅವರನ್ನು ಪೋಲಿಸರು ಬಂಧಿಸಿದರು.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನೆಕ್ನೂರ್ ಗ್ರಾಮದ ನಿವಾಸಿ ಮಹೇಂದ್ರ (43) ಅನೇಕ ಪ್ರಯತ್ನಗಳ ನಂತರ ಕೋವಿನ್ ವೇದಿಕೆಯಲ್ಲಿ ತಮ್ಮ ಲಸಿಕೆ ಪಡೆಯುವ ಸಮಯವನ್ನು ಕಾಯ್ದಿರಿಸಿದ್ದರು. ಅವರು ಹೇಳುತ್ತಾರೆ, "ಮೇ 5]ರಂದು ಬೆಳಿಗ್ಗೆ 9ರಿಂದ 11ರವರೆಗೆ ಲಸಿಕೆ ಪಡೆಯಲು ಸಮಯ ನಿಗದಿ ಮಾಡಲಾಗಿದೆ ಎಂದು ತಿಳಿಸುವ ಸಂದೇಶ ನನಗೆ ಬಂದಿತ್ತು." ಅವರು ತನಗಾಗಿ ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವರ ಕೆಲವು ಕುಟುಂಬ ಸದಸ್ಯರಿಗೆಂದು ವ್ಯಾಕ್ಸಿನೇಷನ್ ಪಡೆಯಲು ಸ್ಲಾಟ್ ಪಡೆದೊದ್ದರು. ನಾವು ನಮ್ಮ ಮೊದಲ ಡೋಸ್ ಲಸಿಕೆ ಪಡೆಯುವುದನ್ನು ಎದುರು ನೋಡುತ್ತಿದ್ದೆವು. ಕೋವಿಡ್ -19 ರ ಎರಡನೇ ಅಲೆ ಭಯಾನಕವಾಗಿದೆ, ”ಎಂದು ಮಹೇಂದ್ರ ಹೇಳುತ್ತಾರೆ.
ಅವರ ಕುಟುಂಬವು ನೆಕ್ನೂರ್ನಿಂದ 25 ಕಿ.ಮೀ ದೂರದಲ್ಲಿರುವ ಬೀಡ್ ನಗರದ ಲಸಿಕಾ ಕೇಂದ್ರವನ್ನು ತಲುಪಿದಾಗ ಅವರ ಭರವಸೆಗಳು ಮಣ್ಣುಪಾಲಾದವು. ಲಸಿಕಾ ಕೇಂದ್ರದಲ್ಲಿ ಲಸಿಕೆಯ ಕೊರತೆಯಿಂದಾಗಿ, 18-44 ವಯಸ್ಸಿನವರಿಗೆ ಲಸಿಕೆ ನೀಡುವುದನ್ನು ನಿಲ್ಲಿಸಿದ್ದರು. ಮಹೇಂದ್ರ "ಅಲ್ಲಿ ಪೋಲಿಸರನ್ನು ಕಾವಲಿಗಿರಿಸಲಾಗಿತ್ತು" ಎಂದು ಹೇಳಿದರು. ನಾವು ನಮಗೆ ಲಸಿಕೆಗೆ ಸಮಯ ನೀಡಿರುವ ಸಂದೇಶವನ್ನು ತೋರಿಸಲು ಹೋದಾಗ ಅವರು ನಮ್ಮೊಂದಿಗೆ ನಿಂದನೆಯ ಭಾಷೆಯಲ್ಲಿ ಮಾತನಾಡಿದರು"
ಸರದಿಯಲ್ಲಿ ನಿಂತಿರುವ ಜನರು ಮತ್ತು ಪೊಲೀಸರ ನಡುವೆ ವಾಗ್ವಾದ ಆರಂಭವಾಗಿ ಲಾಠಿ ಪ್ರಹಾರದೊಂದಿಗೆ ವಾಗ್ವಾದ ಕೊನೆಗೊಂಡಿತು ಮತ್ತು ಮಹೇಂದ್ರ, ಅವರ ಮಗ ಪಾರ್ಥ್, ಸಹೋದರ ನಿತಿನ್ ಮತ್ತು ಸೋದರಸಂಬಂಧಿ ವಿವೇಕ್ ಸೇರಿದಂತೆ ಆರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್ಟೆಬಲ್ ಅನುರಾಧಾ ಗವಾನೆ ಘಟನೆಯ ಎಫ್ಐಆರ್ ದಾಖಲಿಸಿದ್ದು, ಇದರಲ್ಲಿ ಆರು ಮಂದಿ ವ್ಯಾಕ್ಸಿನೇಷನ್ ಕ್ಯೂ ಮುರಿದು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಕಾನ್ಸ್ಟೆಬಲ್ಗಳನ್ನು ನಿಂದಿಸಿದ್ದಾರೆ, ಅವಮಾನಿಸಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಎಫ್ಐಆರ್ ಹೇಳುತ್ತದೆ. ಕಾನೂನುಬಾಹಿರ ಗುಂಪುಗೂಡುವಿಕೆ, ಗಲಭೆ, ಸಾರ್ವಜನಿಕ ಸೇವಕರಿಗೆ ಹಲ್ಲೆ, ಮತ್ತು ಶಾಂತಿ ಉಲ್ಲಂಘನೆ ಸೇರಿದಂತೆ ಹನ್ನೊಂದು ಆರೋಪಗಳನ್ನು ಪಟ್ಟಿ ಮಾಡಲಾಗಿದೆ.





