ರೇಖಾಳಿಗೆ ಮದುವೆಯಾಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲವೆಂದು ತಿಳಿದು 10 ದಿನಗಳಾಯಿತು. ಅವಳು 15 ವರ್ಷ ವಯಸ್ಸಿನ ಹುಡುಗಿಯೊಬ್ಬಳು ವಿರೋಧಿಸಲು ಸಾಧ್ಯವಾವಿರುವಷ್ಟು ವಿರೋಧಿಸಿದಳು ಆದರೆ ಆಕೆಯ ಪೋಷಕರು ಯಾವುದನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. "ಅವಳು ನಾನು ಇನ್ನೂ ಓದಬೇಕೆಂದು ಅಳುತ್ತಾಳೆ" ಎಂದು ಆಕೆಯ ತಾಯಿ ಭಾಗ್ಯಶ್ರೀ ಹೇಳುತ್ತಾರೆ.
ತಮ್ಮ 30ರ ಹರೆಯದ ಕೊನೆಯಲ್ಲಿರುವ ಭಾಗ್ಯಶ್ರೀ ಮತ್ತು ಆಕೆಯ ಪತಿ, ಅಮರ್, ತಮ್ಮ ಮಕ್ಕಳೊಂದಿಗೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬಡ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ವರ್ಷ ನವೆಂಬರ್ನಲ್ಲಿ ಅವರು ಕಬ್ಬು ಕತ್ತರಿಸುವ ಕೆಲಸಕ್ಕಾಗಿ ಪಶ್ಚಿಮ ಮಹಾರಾಷ್ಟ್ರ ಅಥವಾ ಕರ್ನಾಟಕಕ್ಕೆ ವಲಸೆ ಹೋಗುತ್ತಾರೆ. ಅಲ್ಲಿನ ಹೊಲಗಳಲ್ಲಿ ಆರು ತಿಂಗಳ ಕಠಿಣ ಶ್ರಮದ ನಂತರ, ಅವರು ಇಬ್ಬರ ನಡುವೆ 80,000 ಸಂಪಾದಿಸುತ್ತಾರೆ. ಅವರ ಹೆಸರಿನಲ್ಲಿ ಭೂಮಿ ಇಲ್ಲದ ಕಾರಣ, ದಲಿತ ಸಮುದಾಯದ ಮಾತಂಗ್ ಜಾತಿಗೆ ಸೇರಿದ ಈ ಕುಟುಂಬಕ್ಕೆ ಕಬ್ಬು ಕಟಾವು ಮಾಡುವುದೇ ಆದಾಯದ ಮೂಲವಾಗಿದೆ.
ಪ್ರತಿ ಬಾರಿ ಆಕೆಯ ಪೋಷಕರು ವಲಸೆ ಹೋದಾಗ, ರೇಖಾ ಮತ್ತು 12 ಹಾಗೂ 8 ವರ್ಷ ವಯಸ್ಸಿನ ಆಕೆಯ ಒಡಹುಟ್ಟಿದವರು, ತಮ್ಮ ಅಜ್ಜಿಯ ಆರೈಕೆಯಲ್ಲಿ ಉಳಿಯುತ್ತಿದ್ದರು (ಆಕೆ ಕಳೆದ ವರ್ಷ ಮೇ ತಿಂಗಳಲ್ಲಿ ನಿಧನರಾದರು). ಅವರು ತಮ್ಮ ಹಳ್ಳಿಯಿಂದ ಸ್ವಲ್ಪವೇ ದೂರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಆದರೆ ಸಾಂಕ್ರಾಮಿಕ ಪಿಡುಗು ಮಾರ್ಚ್ 2020ರಲ್ಲಿ ಶಾಲೆಗಳನ್ನು ಮುಚ್ಚಬೇಕಾದ ಪರಿಸ್ಥಿತಿ ತಂದಾಗ, 9ನೇ ತರಗತಿಯಲ್ಲಿದ್ದ ರೇಖಾ ಮನೆಯಲ್ಲೇ ಇರಬೇಕಾಯಿತು. 500ಕ್ಕೂ ಹೆಚ್ಚು ದಿನಗಳಿಂದ ಬೀಡ್ನಲ್ಲಿರುವ ಶಾಲೆಗಳು ಮುಚ್ಚಿವೆ.
"ಶಾಲೆಗಳು ಕೂಡಲೇ ಕಾರ್ಯಾರಂಭ ಮಾಡುವುದಿಲ್ಲವೆಂದು ನಮಗೆ ಅರಿವಾಯಿತು" ಎಂದು ಭಾಗ್ಯಶ್ರೀ ಹೇಳುತ್ತಾರೆ. "ಶಾಲೆ ತೆರೆದಿರುತ್ತಿದ್ದ ಸಮಯದಲ್ಲಿ, ಸುತ್ತಲೂ ಶಿಕ್ಷಕರು ಮತ್ತು ಮಕ್ಕಳು ಇರುತ್ತಿದ್ದರು. ಊರು ವ್ಯಸ್ಥವಾಗಿರುತ್ತಿತ್ತು. ಶಾಲೆ ಮುಚ್ಚಿದ ನಂತರ ಸುರಕ್ಷತೆಯ ಕಾರಣದಿಂದಾಗಿ ನಾವು ಅವಳನ್ನು ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿರಲಿಲ್ಲ.“
ಹಾಗಾಗಿ ಭಾಗ್ಯಶ್ರೀ ಮತ್ತು ಅಮರ್ ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ರೇಖಾಳನ್ನು 22 ವರ್ಷದ ಆದಿತ್ಯನೊಂದಿಗೆ ಮದುವೆ ಮಾಡಿಸಿದರು. ಆದಿತ್ಯನ ಕುಟುಂಬವು 30 ಕಿಲೋಮೀಟರ್ ದೂರದ ಹಳ್ಳಿಯಿಂದ ಬಂದಿತ್ತು, ಮತ್ತು ಅವರು ಕೆಲಸದ ಹಂಗಾಮು ಅವಲಂಬಿತ ವಲಸೆ ಕಾರ್ಮಿಕರಾಗಿದ್ದರು. ನವೆಂಬರ್ 2020ರಲ್ಲಿ, ಕಬ್ಬಿನ ಕಟಾವು ಆರಂಭವಾಗುತ್ತಿದ್ದಂತೆ, ರೇಖಾ ಮತ್ತು ಆದಿತ್ಯ ಪಶ್ಚಿಮ ಮಹಾರಾಷ್ಟ್ರಕ್ಕೆ ವಲಸೆ ಹೋದರು- ಅವಳ ಹೆಸರು ಶಾಲೆಯ ರಿಜಿಸ್ಟರಿನಲ್ಲಿ ಮಾತ್ರ ಉಳಿಯಿತು.
ಈ ಕೊರೋನಾ ಮಹಾಮಾರಿಯಿಂದಾಗಿ ರೇಖಾಳಂತಹ ಹದಿಹರೆಯದ ಹುಡುಗಿಯರು ಮದುವೆಯಾಗಲೇಬೇಕಾದ ಅನಿವಾರ್ಯತೆಗೆ ತಳ್ಳಲ್ಪಡುತ್ತಿದ್ದಾರೆ. ಮಾರ್ಚ್ 2021ರಲ್ಲಿ ಬಿಡುಗಡೆಗೊಂಡ COVID-19: A threat to progress against child marriage ಶೀರ್ಷಿಕೆಯ ಯುನಿಸೆಫ್ ವರದಿ ಪ್ರಕಾರ: ಈ ದಶಕದ ಅಂತ್ಯದ ವೇಳೆಗೆ ಜಾಗತಿಕವಾಗಿ ಹೆಚ್ಚುವರಿಯಾಗಿ 10 ಮಿಲಿಯನ್ ಹುಡುಗಿಯರು ಬಾಲ ವಧುವಾಗುವ ಅಪಾಯವಿದೆ. ಬಾಲ್ಯವಿವಾಹದ ವಿರುದ್ಧದ ಹೋರಾಟದ ಪ್ರಗತಿಗೆ ಇದು ಅಪಾಯಕಾರಿಯಾಗಿದೆ. ಕೋವಿಡ್ -19ರ ಪರಿಣಾಮವಾಗಿ ಶಾಲೆಗಳ ಮುಚ್ಚುವಿಕೆ, ಹೆಚ್ಚುತ್ತಿರುವ ಬಡತನ, ಪೋಷಕರ ಸಾವುಗಳು ಮತ್ತು ಇತರ ಅಂಶಗಳು "ಲಕ್ಷಾಂತರ ಹುಡುಗಿಯರನ್ನು ಈಗಾಗಲೇ ಸಂಕಷ್ಟಕ್ಕೆ ದೂಡಿದೆ" ಎಂದು ವರದಿ ಹೇಳುತ್ತದೆ.
ಕಳೆದ 10 ವರ್ಷಗಳಲ್ಲಿ, ಬಾಲ್ಯ ವಿವಾಹವಾದ ಯುವತಿಯರ ಪ್ರಮಾಣವು ಶೇಕಡಾ 15ರಷ್ಟು ಕಡಿಮೆಯಾಗಿದೆ ಮತ್ತು ಪ್ರಪಂಚದಾದ್ಯಂತ ಸುಮಾರು 25 ಮಿಲಿಯನ್ ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಯುನಿಸೆಫ್ ವರದಿಯು ಸೇರಿಸುತ್ತದೆ. ಈ ಸಾಂಕ್ರಾಮಿಕ ಪಿಡುಗು ಇತ್ತೀಚಿನ ವರ್ಷಗಳಲ್ಲಿ ಸಾಧಿಸಿದ ಪ್ರಗತಿಗೆ ಬೆದರಿಕೆಯಾಗಿದೆ, ಮಹಾರಾಷ್ಟ್ರದಲ್ಲಿ ಕೂಡ.








