"ನಮ್ಮಂತಹ ಮಹಿಳೆಯರು ತಮ್ಮ ಮನೆಗಳನ್ನು ಮತ್ತು ಹೊಲಗಳನ್ನು ತೊರೆದು ಪ್ರತಿಭಟಿಸಲು ನಗರಕ್ಕೆ ಬಂದಾಗ, ಅವರು ತಮ್ಮ ಕಾಲುಗಳ ಕೆಳಗಿನ ಮಣ್ಣನ್ನು [ಭೂಮಿಯನ್ನು] ಕಳೆದುಕೊಳ್ಳುತ್ತಿದ್ದಾರೆ ಎಂದರ್ಥ" ಎಂದು ಅರುಣಾ ಮನ್ನಾ ಹೇಳಿದರು. “ಕಳೆದ ಕೆಲವು ತಿಂಗಳುಗಳಲ್ಲಿ, ತಿನ್ನಲು ಏನೂ ಇಲ್ಲದ ದಿನಗಳನ್ನು ನೋಡಿದ್ದೇವೆ. ಉಳಿದ ದಿನಗಳಲ್ಲಿ, ನಾವು ಒಂದು ಊಟಕ್ಕೂ ಪರದಾಡುವಂತಾಗಿತ್ತು. ಪರಿಸ್ಥಿತಿ ಹೀಗಿರುವಾಗ ಈ ಕಾನೂನುಗಳನ್ನು ಜಾರಿ ಮಾಡಬೇಕಿತ್ತೆ? ಈ ಮಹಾಮಮಾರಿ [ಕೋವಿಡ್ -19] ನಮ್ಮ ಜೀವವನ್ನು ತೆಗೆದುಕೊಳ್ಳಲು ಸಾಲದು ಎಂದು ನೀವು ಭಾವಿಸುತ್ತೀರಾ?”
ಅರುಣಾ (42) ಕೇಂದ್ರ ಕೋಲ್ಕತ್ತಾದ ಎಸ್ಪ್ಲನೇಡ್ ವೈ-ಚಾನೆಲ್ನಲ್ಲಿ ಮಾತನಾಡುತ್ತಿದ್ದರು. ಜನವರಿ 9ರಿಂದ 22ರವರೆಗೆ ರೈತರು ಮತ್ತು ಕೃಷಿ ಕಾರ್ಮಿಕರು ಒಟ್ಟಾಗಿ ಅಖಿಲ ಭಾರತ ರೈತರ ಹೋರಾಟ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಎನ್ನುವ ವೇದಿಕೆಡಿಯಲ್ಲಿ ಸೇರಿದ್ದರು. 2020ರ ಸೆಪ್ಟೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿದ ಕೃಷಿ ಕಾಯ್ದೆಯ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಬೆಂಬಲವಾಗಿ ವಿದ್ಯಾರ್ಥಿಗಳು, ನಾಗರಿಕರು, ಕಾರ್ಮಿಕರು, ಸಾಂಸ್ಕೃತಿಕ ಸಂಸ್ಥೆಗಳು ಎಲ್ಲರೂ ಒಗ್ಗೂಡಿದ್ದರು.
ಅರುಣಾ ರಾಜುವಾಖಾಕಿ ಎನ್ನುವ ಊರಿನಿಂದ ಇಲ್ಲಿಗೆ ಬಂದಿದ್ದರು. ದಕ್ಷಿಣ 24 ಪರಗಣ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಸುಮಾರು 1500 ಮಹಿಳೆಯರು ಇಲ್ಲಿ ಸೇರಿದ್ದರು. ರೈತ ಮಹಿಳಾ ದಿನಾಚರಣೆಗಾಗಿ ಜನವರಿ 18ರಂದು ಅವರು ಕೋಲ್ಕತ್ತಾಗೆ ಬಂದಿದ್ದರು, ಈ ದಿನವನ್ನು ರೈತ ಮಹಿಳೆಯರಿಗೆ ಸಮರ್ಪಿಸಲಾಗಿದೆ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಆಚರಿಸಲಾಗುತ್ತದೆ. ಕೆಲವರು ರೈಲಿನಲ್ಲಿ, ಕೆಲವರು ಬಸ್ನಲ್ಲಿ ಮತ್ತೆ ಕೆಲವರು ಟೆಂಪೋ ಮೂಲಕ ಪ್ರಯಾಣ ಮಾಡಿ ಬಂದಿದ್ದರು. ರೈತ ಮಹಿಳೆಯರು ಮತ್ತು ಕೃಷಿ ಕಾರ್ಮಿಕರ 40ಕ್ಕೂ ಹೆಚ್ಚು ಒಕ್ಕೂಟಗಳು, ಮಹಿಳಾ ಸಂಸ್ಥೆಗಳು ಮತ್ತು ಎಐಕೆಎಸ್ಸಿಸಿ ಈ ಕಾರ್ಯಕ್ರಮದ ಪಶ್ಚಿಮ ಬಂಗಾಳ ಆವೃತ್ತಿಯನ್ನು ಆಯೋಜಿಸಿದ್ದವು.
ತಮ್ಮ ದನಿಯನ್ನು ತಲುಪಿಸುವ ಸಲುವಾಗಿ ದೂರ ಪ್ರಯಾಣ ಮಾಡಿ ದಣಿದಿದ್ದರೂ ಮಹಿಳೆಯರ ಆಕ್ರೋಶವೇನೂ ಕಡಿಮೆಯಾಗಿರಲಿಲ್ಲ. “ಹಾಗಿದ್ರೆ ನಮಗೋಸ್ಕರ ಯಾರು ಹೋರಾಡ್ತಾರೆ? ಕೋರ್ಟ್ ಬಾಬುಗಳ? [ಜಡ್ಜ್ಗಳು] ನಮಗೆ ನಮ್ಮ ಪಾಲು ದೊರೆಯುವರೆಗೂ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ” ಎಂದು ಶ್ರಮಜೀವಿ ಮಹಿಳಾ ಸಮಿತಿಯ ಸದಸ್ಯರಾದ 38 ವರ್ಷದ ಸುಪರ್ಣಾ ಹಲ್ದಾರ್ ಭಾರತದ ಮುಖ್ಯ ನ್ಯಾಯದೀಶರು ಇತ್ತೀಚೆಗೆ ಹೆಂಗಸರು ಮತ್ತು ಹಿರಿಯರನ್ನು ಕೃಷಿ ಕಾನೂನುಗಳ ವಿರುದ್ಧದ ಹೋರಾಟ ಕಣದಿಂದ ತೆರವುಗೊಳಿಸಬೇಕೆಂದು ನೀಡಿದ ಅಭಿಪ್ರಾಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ಹೇಳಿದರು.
ರೈತ ಮಹಿಳೆಯರ ದಿನವನ್ನು ಆಚರಿಸಲು ಜನವರಿ 18ರಂದು ಬೆಳಿಗ್ಗೆ 11.30ರಿಂದ ಸಂಜೆ 4ರವರೆಗೆ ಕೋಲ್ಕತ್ತಾದಲ್ಲಿ ಮಹಿಳಾ ಕಿಸಾನ್ ವಿಧಾನಸಭಾ ಅಧಿವೇಶನ ಆಯೋಜಿಸಲಾಗಿತ್ತು. ಈ ಅಧಿವೇಶನದಲ್ಲಿ ಕೃಷಿಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು, ಅವರ ಶ್ರಮ, ಭೂಮಿ ಮಾಲಿಕತ್ವ ಹಾಗೂ ಇತರ ಹಕ್ಕುಗಳಿಗಾಗಿ ಅವರು ನಡೆಸಿದ ದೊಡ್ಡ ಹೋರಾಟ ಮತ್ತು ಈ ಹೊಸ ಕಾನೂನುಗಳು ಅವರ ಜೀವನದ ಮೇಲೆ ಬೀರುವ ಪರಿಣಾಮಗಳ ಮೇಲೆ ಚರ್ಚೆಯು ಕೇಂದ್ರಿತವಾಗಿತ್ತು.











