चाण्डालश्च वराहश्च कुक्कुटः श्वा तथैव च ।
रजस्वला च षण्ढश्च नैक्षेरन्नश्नतो द्विजान् ॥
ಒಬ್ಬ ಚಂಡಾಲ, ಊರಿನ ಹಂದಿ, ಹುಂಜ, ನಾಯಿ,
ಮುಟ್ಟಾದ ಹೆಂಗಸು ಮತ್ತು ನಪುಂಸಕ ದ್ವಿಜರು ತಿನ್ನುವುದನ್ನು ನೋಡಬಾರದು.
— ಮನುಸ್ಮೃತಿ 3.239
ಈ ಒಂಬತ್ತು ವರ್ಷದ ಹುಡುಗ ಕೇವಲ ನೋಡಿದ್ದಲ್ಲ, ಅವನು ಮಾಡಿದ ಪಾಪವು ಇನ್ನಷ್ಟು ಧೈರ್ಯವನ್ನು ಬೇಡುವಂತಹದ್ದು. 3ನೇ ತರಗತಿಯ ವಿದ್ಯಾರ್ಥಿ ಇಂದ್ರ ಕುಮಾರ್ ಮೇಘವಾಲ್ ತನ್ನ ಬಾಯಾರಿಕೆ ತಡೆಯಲಾಗದೆ ಮೇಲ್ಜಾತಿಯ ಶಿಕ್ಷಕರಿಗೆಂದು ಮೀಸಲಿಟ್ಟ ಮಡಕೆಯಿಂದ ನೀರು ಕುಡಿದುಬಿಟ್ಟಿದ್ದ.
ಇದಕ್ಕೆ ಅವನು ಶಿಕ್ಷೆ ಎದುರಿಸಲೇಬೇಕಿತ್ತು. ರಾಜಸ್ಥಾನದ ಸುರಾನಾ ಗ್ರಾಮದ ಸರಸ್ವತಿ ವಿದ್ಯಾ ಮಂದಿರದ 40 ವರ್ಷದ ಮೇಲ್ಜಾತಿಯ ಶಿಕ್ಷಕ ಚೈಲ್ ಸಿಂಗ್ ಅವನನ್ನು ನಿರ್ದಯವಾಗಿ ಥಳಿಸಿದ.
ಸಹಾಯಕ್ಕಾಗಿ 25 ದಿನಗಳ ಕಾಲ 7 ಆಸ್ಪತ್ರೆಗೆ ಭೇಟಿ ನೀಡಿದ ನಂತರ, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ಜಲೋರ್ ಜಿಲ್ಲೆಯ ಈ ಪುಟ್ಟ ಬಾಲಕ ಅಹಮದಾಬಾದ್ ನಗರದಲ್ಲಿ ಕೊನೆಯುಸಿರೆಳೆದನು.


