“ಲಾಕ್ಡೌನ್ ನಮ್ಮನ್ನು ವಿನಾಶಕ್ಕೀಡುಮಾಡಿತು. ಮಾರ್ಚ್ ತಿಂಗಳಲ್ಲಿ ನನ್ನ ಅಂಗಡಿಗೆ ಬಂದಿದ್ದ ಗಿರಾಕಿಯೇ ಕೊನೆಯವರು. ಅಲ್ಲಿಂದಾಚೆಗೆ ಯಾವ ಗಿರಾಕಿಯೂ ಇಲ್ಲ.” ಎಂದರು ಅಬ್ದುಲ್ ಮಜೀದ್ ಭಟ್.
ಜೂನ್ ತಿಂಗಳಿನಲ್ಲಿ ಲಾಕ್ಡೌನ್ ತೆರವುಗೊಳ್ಳಲು ಪ್ರಾರಂಭಿಸಿದ್ದಾಗ್ಯೂ, ಶ್ರೀನಗರದ ದಾಲ್ ಸರೋವರದಲ್ಲಿ ಚರ್ಮದ ಉತ್ಪನ್ನಗಳು, ಸ್ಥಳೀಯ ಕರಕುಶಲ ವಸ್ತುಗಳನ್ನು ಮಾರುವ ಭಟ್ ಅವರ ಮೂರು ಅಂಗಡಿಗಳಿಗೆ ಯಾವುದೇ ಗಿರಾಕಿಯೂ ಭೇಟಿ ನೀಡಿರುವುದಿಲ್ಲ. 2019ರ ಆಗಸ್ಟ್ 5ರಂದು 370ನೇ ವಿಧಿಯನ್ನು ಕಾಶ್ಮೀರದಲ್ಲಿ ರದ್ದುಪಡಿಸಿದಾಗ ಪ್ರಾರಂಭಗೊಂಡ ಈ ಕಠಿಣತಮ ದುರ್ಭಿಕ್ಷವು, ಒಂದು ವರ್ಷದಿಂದಲೂ ಚಾಲ್ತಿಯಲ್ಲಿದೆ.
ಭಟ್ರಂತಹ ಅನೇಕರು ತಮ್ಮ ಸಂಪಾದನೆಗೆ ನೆಚ್ಚಿಕೊಂಡಿರುವ ಪ್ರವಾಸೋದ್ಯಮವು ಈ ಎರಡು ವಿದ್ಯಮಾನಗಳ ಪರಿಣಾಮದಿಂದಾಗಿ ನೆಲಕಚ್ಚಿದೆ.
ದಾಲ್ ಸರೋವರದ ಬಟಪೊರ ಕಲನ್ ಪ್ರದೇಶದ ನಿವಾಸಿಯಾದ 62 ವರ್ಷದ ಗೌರವಾನ್ವಿತ ವಯೋವೃದ್ಧರಾದ ಭಟ್, “6-7 ತಿಂಗಳ ಬಂದ್ನ ತರುವಾಯ ಪ್ರವಾಸದ ಋತುವು ಇನ್ನೇನು ಆರಂಭಗೊಂಡಿತೆನ್ನುವಾಗ, ಈ ಕೊರೊನಾ ಲಾಕ್ಡೌನ್ ಪ್ರಾರಂಭವಾಯಿತು” ಎನ್ನುತ್ತಾರೆ. ಇವರು, ಲೇಕ್ಸೈಡ್ ಟೂರಿಸ್ಟ್ ಅಸೋಸಿಯೇಷನ್ ಅಧ್ಯಕ್ಷರೂ ಹೌದು. ಇವರ ಅಂದಾಜಿನಂತೆ ಇದರಲ್ಲಿ ಸುಮಾರು 70 ಸದಸ್ಯರಿದ್ದಾರೆ.
ಹಳದಿ ಟ್ಯಾಕ್ಸಿ ದೋಣಿಗಳನ್ನು ಚಲಾಯಿಸುವ ಶಿಕಾರವಾಲಾಗಳು, ಬೀದಿ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರಾದಿಯಾಗಿ, ಸರೋವರದ ಪ್ರವಾಸಿ ಅರ್ಥವ್ಯವಸ್ಥೆಯನ್ನು ಅವಲಂಬಿಸಿದ ಅನೇಕರು ಇವೇ ಮಾತುಗಳನ್ನಾಡುತ್ತಾರೆ. ಇವರುಗಳ ಬಳಿ, ಕಳೆದ 12 ತಿಂಗಳಿನಿಂದಲೂ, ಪ್ರವಾಸಿ ಕಿರುಹೊತ್ತಿಗೆಯಲ್ಲಿನ ಸರೋವರದ ಮನೋಹರ ಛಾಯಾಚಿತ್ರಗಳ ಹೊರತಾಗಿ ಮತ್ತೇನೂ ಇಲ್ಲ. (ಶ್ರೀನಗರದ ಶಿಕಾರರು:ನಿಂತ ನೀರಿನಾಳದಡಿ ನಷ್ಟದ ಹರಿವು)
ಕೊರೊನಾ ಲಾಕ್ಡೌನ್ ಪ್ರಾರಂಭವಾಗುವುದಕ್ಕೂ ಮೊದಲು ಮನೆಯಿಂದ ಚಿಕ್ಕ ಉದ್ಯಮವನ್ನು ಪ್ರಾರಂಭಿಸಿದ 27 ವರ್ಷದ ಹಫ್ಸ ಭಟ್ ಕೂಡ ಇವರಲ್ಲೊಬ್ಬರು. ಜಮ್ಮು ಮತ್ತು ಕಾಶ್ಮೀರದ ಉದ್ಯಮಶೀಲತಾ ವಿಕಾಸ ಕೇಂದ್ರದಲ್ಲಿನ 24 ದಿನಗಳ ತರಬೇತಿಯ ನಂತರ ಶ್ರೀನಗರದ ಶಾಲಾ ಶಿಕ್ಷಕಿಯೂ ಆದ ಹಫ್ಸ, ಸಂಸ್ಥೆಯಿಂದ ಕಡಿಮೆ ಬಡ್ಡಿ ದರದಲ್ಲಿ 4 ಲಕ್ಷ ರೂ.ಗಳ ಸಾಲವನ್ನು ಪಡೆದರು. “ನಾನು ಉಡುಪು ಹಾಗೂ ಬಟ್ಟೆಗಳ ಸರಕನ್ನು ಕೊಂಡು ತಂದೆ. ಲಾಕ್ಡೌನ್ ಘೋಷಣೆಯಾದಾಗ, ಸುಮಾರು ಶೇ. 10-20ರಷ್ಟು ಸರಕನ್ನು ಮಾತ್ರವೇ ಮಾರಾಟ ಮಾಡಿದ್ದೆ. ಈಗ ನಾನು ಕಂತುಗಳನ್ನು ಕಟ್ಟಲು ಹೆಣಗಾಡುತ್ತಿದ್ದೇನೆ” ಎಂದರಾಕೆ.











