2020ರ ಜನವರಿಯ ಒಂದು ಚಳಿಗಾಲದ ನವಿರು ಮಧ್ಯಾಹ್ನ ಘರಾಪುರಿಯ ತನ್ನ ಮನೆಯಿಂದ ಹತ್ತಿರದ ಕಾಡಿಗೆ ಸೌದೆ ತರಲೆಂದು ಹೋದ ಜಯಶ್ರೀ ಮ್ಹಾತ್ರೆಯವರ ಕಾಲಿಗೆ ಏನೋ ಕುಟುಕಿದ ಅನುಭವವಾಯಿತು. ಆ 43 ವರ್ಷದ ತಾಯಿ ತನ್ನ ಕಾಲಿಗೆ ಯಾವು ಕೊಂಬೆ ಗೀರಿರಬಹುದೆಂದುಕೊಂಡು ಅದನ್ನು ನಿರ್ಲಕ್ಷಿಸಿ, ತಾನು ಸಂಗ್ರಹಿಸಿದ್ದ ಸೌದೆಯನ್ನು ಹೊರೆ ಮಾಡಿ ಹೊತ್ತು ಮನೆಯ ಕಡೆ ಹೊರಟರು.
ಇದಾದ ಸ್ವಲ್ಪ ಹೊತ್ತಿನ ನಂತರ, ಬಾಗಿಲ ಬಳಿ ಸಂಬಂಧಿಕರೊಬ್ಬರೊಡನೆ ಮಾತನಾಡುತ್ತಿದ್ದ ಅವರು ಕುಸಿದು ಬಿದ್ದರು. ಅವರ ಅಕ್ಕ ಪಕ್ಕದಲ್ಲಿದ್ದವರು ಅಂದು ಆಕೆ ಉಪವಾಸವಿದ್ದ ಕಾರಣ ಸುಸ್ತಿನಿಂದ ತಲೆ ತಿರುಗಿ ಬಿದ್ದಿರಬಹುದು ಎಂದುಕೊಂಡರು.
“ಅಂದು ಅಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆಂದು ನನಗೆ ಹೇಳಲಾಗಿತ್ತು,” ಎಂದು ಜಯಶ್ರೀಯವರ ಹಿರಿಯ ಮಗಳು, 20 ವರ್ಷದ ಭವಿಕಾ. ಆಕೆಯಾಗಿ ಆಕೆಯ ಇನ್ನೊಬ್ಬ ತಂಗಿ 14 ವರ್ಷದ ಗೌರಿಯಾಗಿ ಈ ಘಟನೆ ನಡೆದಾಗ ಅಲ್ಲಿ ಇದ್ದಿರಲಿಲ್ಲ. ಅವರು ಆಗ ತಮ್ಮ ಸಂಬಂಧಿಕರ ಮನೆಯಲ್ಲಿದ್ದರು. ತಾಯಿಯು ಕುಸಿದುಬಿದ್ದ ಮತ್ತು ಸ್ವಲ್ಪ ಹೊತ್ತಿನ ನಂತರ ಮರಳಿ ಪ್ರಜ್ಞೆ ಪಡೆದ ಕುರಿತು ಅಂದು ಆ ಘಟನೆ ನಡೆಯುವಾಗ ಅಲ್ಲೇ ಇದ್ದ ನೆರೆಹೊರೆಯವರು ಅಲ್ಲಿ ನಡೆದ ಘಟನೆಯನ್ನು ಅವರಿಗೆ ವಿವರಿಸಿದ್ದರು. ಅಂದು ಅವರ ಕೈ ಬಹಳವಾಗಿ ನಡುಗುತ್ತಿತ್ತೆಂದೂ ಹೇಳಿದ್ದರು. “ಆದರೆ, ಯಾರಿಗೂ ಅಂದು ಏನಾಯಿತು ಎಂದು ತಿಳಿದಿರಲಿಲ್ಲ,” ಎನ್ನುತ್ತಾರೆ ಭವಿಕಾ.
ನಡೆದ ಘಟನೆಯ ಕುರಿತು ಜಯಶ್ರೀಯವರ ಪತಿ, 53 ವರ್ಷದ ಮಧುಕರ ಮ್ಹಾತ್ರೆಯವರಿಗೆ ಸುದ್ದಿ ಮುಟ್ಟಿಸಲೆಂದು ಅಲ್ಲೇ ಇದ್ದ ಒಬ್ಬರು ಓಡಿದರು. ಮಧುಕರ್ ಅವರು ಘರಾಪುರದ ದ್ವೀಪದ ಆಹಾರ ಪದಾರ್ಥ ಮಾರುವ ಅಂಗಡಿಯೊಂದನ್ನು ನಡೆಸುತ್ತಾರೆ. ಅರಬ್ಬಿ ಸಮುದ್ರದ ನಡುವೆಯಿರುವ ಈ ದ್ವೀಪವು ಖ್ಯಾತ ಎಲಿಫೆಂಟಾ ಗುಹೆಗಳಿಗೆ ಹೆಸರುವಾಸಿ. ಯುನೆಸ್ಕೊ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿಕೊಂಡಿರುವ ಈ ಸ್ಥಳವು ಮುಂಬಯಿ ನಗರದ ಆಕರ್ಷಣೀಯ ಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿನ ಶಿಲಾ ವಾಸ್ತುಶಿಲ್ಪಗಳು ಕ್ರಿ.ಶ. 6 – 8 ನೇ ಶತಮಾನಗಳಿಂಗಿಂತಲೂ ಹಿಂದಿನವು. ಮತ್ತು ಪ್ರತಿ ವರ್ಷ ಇದು ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಈ ಸ್ಥಳವನ್ನು ಸ್ಥಳೀಯ ನಿವಾಸಿಗಳು ಹೊಟ್ಟೆಪಾಡಿಗಾಗಿ ಅವಲಂಬಿಸಿದ್ದಾರೆ. ಇಲ್ಲಿ ಅವರು ಸನ್ ಗ್ಲಾಸ್ಗಳು, ಟೋಪಿಗಳು, ಸ್ಮರಣಿಕೆಗಳು, ಮತ್ತು ತಿನ್ನಬಹುದಾದ ವಸ್ತುಗಳನ್ನು ಮಾರುತ್ತಾರೆ. ಇನ್ನೂ ಕೆಲವು ನಿವಾಸಿಗಳು ಮಾರ್ಗದರ್ಶಕರಾಗಿಯೂ ಕೆಲಸ ಮಾಡುತ್ತಾರೆ.
ಪ್ರವಾಸಿ ನಕ್ಷೆಗಳಲ್ಲಿ ಈ ಸ್ಥಳವು ಪ್ರಮುಖ ಆಕರ್ಷಣೆಯಾಗಿ ಗುರುತಿಸಿಕೊಂಡಿದ್ದರೂ, ಇದೇ ದ್ವೀಪದಲ್ಲಿನ ಘರಾಪುರಿ ಗ್ರಾಮ ಇಂದಿಗೂ ಮೂಲಭೂತ ಆರೋಗ್ಯ ಸೌಲಭ್ಯಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಂತಹ ವ್ಯವಸ್ಥೆಯ ಕೊರತೆ ಎದುರಿಸುತ್ತಿದೆ. ಎರಡು ವರ್ಷಗಳ ಕೆಳಗೆ ಒಂದು ಆರೋಗ್ಯ ಕೇಂದ್ರ ತೆರೆಯಲಾಗಿತ್ತಾದರೂ ಅಲ್ಲಿಗೆ ಯಾರೂ ಬರುತ್ತಿಲ್ಲ. ಗ್ರಾಮದ 1,100 ಜನರು ರಾಜ್ ಬಂದರ್, ಶೇಟ್ ಬಂದರ್ ಮತ್ತು ಮೊರಾಬಂದರ್ ಎಂಬ ಮೂರು ಕುಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಆರೋಗ್ಯ ಸೌಲಭ್ಯದ ಕೊರೆತೆಯಿಂದಾಗಿ ಜನರು ದೋಣಿಯೇರಿಕೊಂಡು ದ್ವೀಪದಿಂದ ಹೊರಗೆ ಪ್ರಯಾಣಿಸಬೇಕಾದ ಅನಿವಾರ್ಯತೆಗೆ ಈಡಾಗಿದ್ದಾರೆ. ಈ ರೀತಿಯಾಗಿ ದೂರ ಹೋಗುವುದು ದುಬಾರಿ ಮಾತ್ರವಲ್ಲದೆ ಕೆಲವೊಮ್ಮೆ ಹೋಗುವುದು ತಡವಾದ ಕಾರಣ ಪ್ರಾಣ ಹೋಗುವುದೂ ಇರುತ್ತದೆ.














