“ಇಲ್ಲಿ ಯಾವುದೇ ರಜೆಯ ಆಯ್ಕೆ, ವಿರಾಮ. ಅಥವಾ ಯಾವುದೇ ನಿಗದಿತ ಕೆಲಸದ ಸಮಯ ಇರುವುದಿಲ್ಲ.”
ಶೇಕ್ ಸಲಾವುದ್ದೀನ್, ಹೈದರಾಬಾದ್ ಮೂಲದ 37 ವರ್ಷದ ಪದವೀಧರ. ಅವರು ಅಲ್ಲಿನ ಕ್ಯಾಂಬ್ ಕಂಪನಿಯೊಂದಕ್ಕೆ ಡ್ರೈವರ್ ಆಗಿ ಕೆಲಸ ಮಾಡುತ್ತಾರೆ. ಅವರು ಕಂಪನಿ ಹೆಸರು ಹೇಳಲು ಇಚ್ಚಿಸಲಿಲ್ಲ. ಅವರು ತಾನು ಕೆಲಸ ಮಾಡುವ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗ ಕಂಪನಿ ನೀಡಿದ ಒಪ್ಪಂದ ಪತ್ರವನ್ನು ಓದಿಲ್ಲ. "ಅದು ಹಲವಾರು ನಿಯಮಗಳಿಂದ ತುಂಬಿ ಹೋಗಿದೆ" ಎನ್ನುತ್ತಾರೆ. ಒಪ್ಪಂದದ ದಾಖಲೆಯು ಅವರು ಡೌನ್ಲೋಡ್ ಮಾಡಿದ ಅಪ್ಲಿಕೇಷನ್ನಿನಲ್ಲಷ್ಟೇ ಇರುತ್ತದೆ. ಅವರಿಗೆ ಯಾವುದೇ ಭೌತಿಕ ಪ್ರತಿಯನ್ನು ನೀಡಲಾಗಿಲ್ಲ.
"ನಾನು ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ" ಎನ್ನುತ್ತಾರೆ ಡೆಲಿವರಿ ಏಜೆಂಟ್ ರಮೇಶ್ ದಾಸ್ (ಹೆಸರು ಬದಲಾಯಿಸಲಾಗಿದೆ). ಕೋಲ್ಕತ್ತಾಕ್ಕೆ ವಲಸೆ ಬಂದ ಅವರಿಗೆ ಕಾನೂನು ಗ್ಯಾರಂಟಿಗಳನ್ನು ಹುಡುಕುವುದಕ್ಕಿಂತ ಹೆಚ್ಚಾಗಿ ಅವಸರದಲ್ಲಿ ಒಂದು ಕೆಲಸ ಬೇಕಿತ್ತು. ಪಶ್ಚಿಮ ಬಂಗಾಳದ ಪಶ್ಚಿಮ್ ಮೇದಿನಿಪುರ್ ಜಿಲ್ಲೆಯ ಬಹಾ ರುನಾ ಎನ್ನುವ ಊರಿನಿಂದ ಬಂದಿದ್ದ ಅವರು ತುರ್ತಾಗಿ ಸಿಗುವ ಕೆಲಸ ಹುಡುಕುತ್ತಿದ್ದರು. "ಯಾವುದೇ ರೀತಿಯ ನೇಮಕಾತಿ ಇತ್ಯಾದಿ ಇರಲಿಲ್ಲ. ನಮ್ಮ ಐಡಿ [ಗುರುತನ್ನು] ಅಪ್ಲಿಕೇಶನ್ನಲ್ಲಿ ಹಾಕಲಾಯಿತು. ಅದೊಂದೇ ಗುರುತಿನ ಪುರಾವೆ. ನಾವು ವೆಂಡರ್ ಮೂಲಕ [ಮೂರನೇ ವ್ಯಕ್ತಿಗಳ ಮೂಲಕ ಹೊರಗುತ್ತಿಗೆ] ಕೆಲಸ ಮಾಡುತ್ತಿದ್ದೇವೆ, ”ಎಂದು ಅವರು ಹೇಳುತ್ತಾರೆ.
ರಮೇಶ್ ಅವರಿಗೆ ಒಂದು ಪಾರ್ಸೆಲ್ ತಲುಪಿಸಿದರೆ ಅದಕ್ಕೆ ಪ್ರತಿಯಾಗಿ 12-14 ರೂಪಾಯಿ ಸಿಗುತ್ತದೆ. ದಿನಕ್ಕೆ 40ರಿಂದ 45 ಪಾರ್ಸೆಲ್ ತಲುಪಿಸಿದರೆ 600 ರೂಪಾಯಿ ಸಂಪಾದಿಸಬಹುದು. “ಪೆಟ್ರೋಲ್ ಖರ್ಚು, ವಿಮೆ, ವೈದ್ಯಕೀಯ ಪ್ರಯೋಜನಗಳು ಅಥವಾ ಇತರ ಭತ್ಯೆಗಳು ಸಿಗುವುದಿಲ್ಲ” ಎಂದು ಅವರು ಹೇಳುತ್ತಾರೆ.















