“ಗಾಂಧೀಜಿಯವರ ಡೈರಿಯಲ್ಲಿ ನಮಗೆ ನಿಮ್ಮ ನಂಬರ್ ಸಿಕ್ತು. ಹೈವೇ ಪಕ್ಕದಲ್ಲಿ ಅವರಿಗೆ ಕಾರು ಡಿಕ್ಕಿ ಹೊಡೆದದ್ದರಿಂದಾಗಿ ಅವರು ಮೃತಪಟ್ಟರು,” ಎಂದು ರೇಷನ್ ಅಂಗಡಿ ಮಾಲೀಕ ಮತ್ತು ರಾಜಕೀಯ ಕಾರ್ಯಕರ್ತ ಬಿ.ಕೃಷ್ಣಯ್ಯ ಅವರು ಡಿಸೆಂಬರ್ 9 ಭಾನುವಾರದಂದು ನನಗೆ ದೂರವಾಣಿ ಕರೆ ಮೂಲಕ ತಿಳಿಸಿದರು.
ನಾನು ಕೊನೆಯ ಬಾರಿಗೆ ಗಂಗಪ್ಪ ಅಥವಾ ಗಾಂಧಿ ಎಂದು ಕರೆಯಲ್ಪಡುವ ಈ ವ್ಯಕ್ತಿಯನ್ನು ನವೆಂಬರ್ 24ರಂದು ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಭೇಟಿಯಾಗಿದ್ದೆ. ಆಗ ಸಮಯ ಸರಿ ಸುಮಾರು 10:30 ಗಂಟೆ, ಅವರು ತಮ್ಮ ಗಾಂಧಿ ವೇಷಭೂಷಣದಲ್ಲಿ ತಮ್ಮ ದಿನಚರಿಯನ್ನು ಪ್ರಾರಂಭಿಸಲು ಅನಂತಪುರಕ್ಕೆ ತೆರಳುತ್ತಿದ್ದರು. ಅವರು ಅನಂತಪುರದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ರಪ್ತಾಡು ಗ್ರಾಮದ ರಸ್ತೆ ಬದಿಯ ಖಾನಾವಳಿಯೊಂದರಲ್ಲಿ ತಂಗಿದ್ದರು. “ಸುಮಾರು ಎರಡು ತಿಂಗಳ ಹಿಂದೆ, ಒಬ್ಬ ಮುದುಕನಿಗೆ ಸ್ಥಳ ಬೇಕು ಎಂದು ಯಾರೋ ಹೇಳಿದರು, ಆದ್ದರಿಂದ ನಾನು ಅವರಿಗೆ ಇಲ್ಲಿಯೇ ಇರಲು ಅವಕಾಶ ಮಾಡಿಕೊಟ್ಟೆ. ಕೆಲವೊಮ್ಮೆ ಊಟವನ್ನೂ ಸಹ ಕೊಟ್ಟಿದ್ದೇನೆ” ಎನ್ನುತ್ತಾರೆ ಖಾನಾವಳಿಯ ಮಾಲೀಕ ವೆಂಕಟರಾಮಿ ರೆಡ್ಡಿ. ನನಗೆ ಕರೆ ಮಾಡಿದ್ದ ಕೃಷ್ಣಯ್ಯನವರು ಆಗಾಗ ಇಲ್ಲಿಗೆ ಬಂದು ಟೀ ಕುಡಿಯುತ್ತಿದ್ದರು ಮತ್ತು ಗಂಗಪ್ಪನ ಜೊತೆ ಹರಟೆ ಹೊಡೆಯುತ್ತಿದ್ದರು.
ಮೇ 2017ರಲ್ಲಿ ನಾನು 'ಪರಿ' ಗಾಗಿ ಗಂಗಪ್ಪನ ಕುರಿತಾಗಿ ಒಂದು ವರದಿಯನ್ನು ಮಾಡಿದ್ದೆ. ಆಗ ಅವರಿಗೆ ಸುಮಾರು 83 ವರ್ಷ ವಯಸ್ಸಾಗಿತ್ತು. 70 ವರ್ಷಗಳ ಕಾಲ ಕೃಷಿ ಕೂಲಿ ಕಾರ್ಮಿಕರಾಗಿ ದುಡಿದ ನಂತರ- ಪಶ್ಚಿಮ ಆಂಧ್ರಪ್ರದೇಶದ ಅನಂತಪುರ ಪಟ್ಟಣದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅವರು ಗಾಂಧಿಯಂತೆ ವೇಷಭೂಷಣ ಧರಿಸಿ ತಮ್ಮನ್ನು 'ಮಹಾತ್ಮ'ನ ಅವತಾರದಲ್ಲಿ ತಮ್ಮ ಬದುಕಿಗೆ ಹೊಸ ರೂಪ ನೀಡಿದ್ದರು. ಅವರು ಪಡೆದ ಭಿಕ್ಷೆಯು ಅವರ ಕೃಷಿ ಕೂಲಿಯಿಂದ ಬರುವ ಸಂಪಾದನೆಗಿಂತಲೂ ಅಧಿಕವಾಗಿತ್ತು.
ಗಂಗಪ್ಪನವರು 2016ರಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ಕೃಷಿ ಕೂಲಿ ಕೆಲಸಕ್ಕೆ ನಿವೃತ್ತಿ ಹೇಳಿದರು. ನಂತರ ಅವರು ತಮ್ಮ ದುಡಿಮೆಗಾಗಿ ಹಗ್ಗಗಳನ್ನು ಹೆಣೆಯಲು ಪ್ರಾರಂಭಿಸಿದರು, ಆದರೆ ಅವರ ವಯೋವೃದ್ಧತನದ ಕೌಶಲಕ್ಕೆ ಹೆಚ್ಚಿನ ಪಗಾರ ಸಿಗುತ್ತಿರಲಿಲ್ಲ. ಹಾಗಾಗಿ ಅವರು ಗಾಂಧಿ ವೇಷ ಧರಿಸಲು ನಿರ್ಧರಿಸಿದ್ದರು.
ದಿನನಿತ್ಯದ ವಸ್ತುಗಳನ್ನೇ ಬಳಸಿಕೊಂಡು ತುರ್ತಾಗಿ ಅವರ ವೇಷಭೂಷಣವನ್ನು ಸಿದ್ದಪಡಿಸಿಕೊಳ್ಳುತ್ತಿದ್ದರು. ಅವರು 10 ರೂಪಾಯಿಯ ಪ್ಲಾಸ್ಟಿಕ್ ಬಾಕ್ಸ್ನಿಂದ ಪಾಂಡ್ಸ್ ಪೌಡರ್ ತೆಗೆದುಕೊಂಡು ತಮ್ಮನ್ನು ಮಹಾತ್ಮ'ರ ಹಾಗೆ ಹೊಳೆಯುವಂತೆ ಅಲಂಕಾರ ಮಾಡಿಕೊಂಡಿದ್ದರು. ರಸ್ತೆ ಬದಿಯ ಅಂಗಡಿಯಿಂದ ಖರೀದಿಸಿದ ಅಗ್ಗದ ಚಸ್ಮಾಗಳೇ ಅವರ ಗಾಂಧಿ ಕನ್ನಡಕಗಳಾಗಿದ್ದವು. ಸ್ಥಳೀಯ ಮಾರುಕಟ್ಟೆಯ 10 ರೂಪಾಯಿಯ ಬೆತ್ತವೇ ಅವರ ವಾಕಿಂಗ್ ಸ್ಟಿಕ್ ಆಗಿತ್ತು. ಅವರು ತಮ್ಮ ಮೇಕಪ್ ಮತ್ತು ವೇಷಭೂಷಣವನ್ನು ಪರೀಕ್ಷಿಸಲು ಎಲ್ಲೋ ಸಿಕ್ಕಿದ ಮೋಟಾರು ಬೈಕಿನ ಕನ್ನಡಿಯನ್ನು ಬಳಸುತ್ತಿದ್ದರು.



