ಮಹಾರಾಷ್ಟ್ರ ಲೋಕಸೇವಾ ಆಯೋಗದ (ಎಂಪಿಎಸ್ಸಿ) ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದೇನೆ ಎಂದು ತಿಳಿದ ಕೆಲವೇ ಗಂಟೆಗಳಲ್ಲಿ ಸಂತೋಷ ಖಾಡೆ ತನ್ನ ಸ್ನೇಹಿತನೊಡನೆ ಬೀಡ್ನಿಂದ 180 ಕಿಲೋಮೀಟರ್ ದೂರದಲ್ಲಿರುವ ಸೋಲಾಪುರಕ್ಕೆ ಬೈಕಿನಲ್ಲಿ ಸಾಗಿದರು. ಅಲ್ಲಿ ಹೋದವರೇ ತನ್ನ ತಂದೆ ತಾಯಿ ವಾಸಿಸುತ್ತಿದ್ದ ಬಿದಿರು, ಹುಲ್ಲು ಮತ್ತು ಟಾರ್ಪಾಲಿನ್ ಶೀಟ್ ಬಳ ಕಟ್ಟಲಾಗಿದ್ದ ಕೋಪ್ ಎಂದು ಕರೆಯಲ್ಪಡುವ ಅವರ ತಾತ್ಕಾಲಿಕ ಮನೆಯನ್ನು ಕಿತ್ತೆಸೆದರು. ಇದು ಕಬ್ಬಿನ ಹಂಗಾಮಿನಲ್ಲಿ ಅವರ ಪೋಷಕರು ಆರು ತಿಂಗಳ ಕಾಲ ವಾಸಿಸುತ್ತಿದ್ದ ಮನೆಯಾಗಿತ್ತು.
"ನಾನು ನಾನು NT-D (ಅಲೆಮಾರಿ ಬುಡಕಟ್ಟುಗಳ ಉಪ-ವರ್ಗ) ನಲ್ಲಿ ಅಗ್ರಸ್ಥಾನ ಪಡೆದಿರುವ ಸಂತೋಷಕ್ಕಿಂತಲೂ ಹೆಚ್ಚು ಸಂತೋಷ ಕೊಟ್ಟ ವಿಷಯವೆಂದರೆ ಇನ್ನು ಮುಂದೆ ಅಪ್ಪ ಅಮ್ಮ ಕಬ್ಬಿನ ಗದ್ದೆಗಳಲ್ಲಿ ದುಡಿಯಬೇಕಿಲ್ಲ ಎನ್ನುವುದು" ಎಂದು ಖಾಡೆ ಹೇಳಿದರು. ಕುಟುಂಬದ 3 ಎಕರೆ ಮಳೆಯಾಶ್ರಿತ ಜಮೀನಿನ ಪಕ್ಕದಲ್ಲಿರುವ ತನ್ನ ಮನೆಯ ವಿಶಾಲವಾದ ವರಾಂಡಾದಲ್ಲಿ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತು ಅವರು ನಮ್ಮೊಡನೆ ಮಾತನಾಡುತ್ತಿದ್ದರು.
ಸುದ್ದಿಯನ್ನು ಕೇಳಿದಾಗ ಕಣ್ಣೀರು ಮತ್ತು ನಗು ಎರಡೂ ಒಟ್ಟಿಗೆ ಅವರನ್ನು ಸ್ವಾಗತಿಸಿದ್ದವು. ಖಾಡೆಯವರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬರಪೀಡಿತ ಪಟೋಡಾದಿಂದ ಸೋಲಾಪುರ ಜಿಲ್ಲೆಗೆ ವಾರ್ಷಿಕವಾಗಿ ಗುಳೇ ಹೋಗುವ ಪೋಷಕರ ಮಗ. ಸಾವರಗಾಂವ್ ಘಾಟಿನ ಇವರ ಕುಟುಂಬದಂತೆ ಅಲ್ಲಿನ ಶೇಕಡಾ 90 ರಷ್ಟು ಕುಟುಂಬಗಳು ವಾರ್ಷಿಕ ಸುಗ್ಗಿಗಾಗಿ ಪಶ್ಚಿಮ ಮಹಾರಾಷ್ಟ್ರ ಮತ್ತು ಕರ್ನಾಟಕದ ಕಬ್ಬು ಬೆಳೆಯುವ ಪ್ರದೇಶಗಳಿಗೆ ವಲಸೆ ಹೋಗುತ್ತವೆ ಎಂದು ಅವರು ಹೇಳಿದರು.
ವಂಜಾರಿ ಸಮುದಾಯದ ಸದಸ್ಯರಾಗಿರುವ ಖಾಡೆ ಅವರು 2021ರ ಎಂಪಿಎಸ್ಸಿ ಪರೀಕ್ಷೆಗಳಲ್ಲಿ ಪ್ರಭಾವಶಾಲಿ ಸಾಧನೆಯೊಂದಿಗೆ ಉತ್ತೀರ್ಣರಾಗಿದ್ದಾರೆ - ಅವರು ಸಾಮಾನ್ಯ ಪಟ್ಟಿಯಲ್ಲಿ ರಾಜ್ಯವ್ಯಾಪಿ 16ನೇ ಶ್ರೇಯಾಂಕ ಪಡೆದರು ಮತ್ತು ಎನ್ಟಿ-ಡಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದರು.
"ಇದು ನನ್ನ ಹೆತ್ತವರ ಹಲವು ವರ್ಷಗಳ ಶ್ರಮ ಮತ್ತು ನನ್ನ ವರ್ಷಗಳ ಹೋರಾಟದ ಫಲಿತಾಂಶವಾಗಿದೆ. ಜೋ ಜಾನ್ವಾರ್ ಕಾ ಜೀನಾ ಹೋತಾ ಹೈ, ವಹೀ ಇನ್ಕಾ ಜೀನಾ ಹೋತಾ ಹೈ [ಅವರ ಬದುಕು ಪ್ರಾಣಿಗಳಂತೆಯೇ ಇರುತ್ತದೆ],” ಎಂದು ಅವರು ಕಬ್ಬಿನ ಕೊಯ್ಲು ಮಾಡುವ ಕಾರ್ಮಿಕರ ಬದುಕಿನ ಸ್ಥಿತಿಯನ್ನು ವಿವರಿಸಿದರು. "ನನ್ನ ಮೊದಲ ಗುರಿ ಅದನ್ನು ನಿಲ್ಲಿಸುವುದು, ಅವರು ಇನ್ನು ಮುಂದೆ ಕಬ್ಬಿನ ಕೊಯ್ಲಿಗೆ ವಲಸೆ ಹೋಗುವುದನ್ನು ತಡೆಯಬಲ್ಲಷ್ಟು ಸಂಪಾದೆಯಿರುವ ಉತ್ತಮ ಕೆಲಸವನ್ನು ಹುಡುಕುವುದಾಗಿತ್ತು."







