"ರೇ ರೇಲಾ ರೇ ರೇಲಾ ರೇ ರೇಲಾ" ಎಂದು ಹಾಡುತ್ತಾ ನರ್ತಿಸುತ್ತಿದ್ದ ಅವರ ಹೆಜ್ಜೆಗಳಲ್ಲಿ ಒಂದು ಅದ್ಭುತ ಲಯ ಮತ್ತು ಚುರುಕುತನವಿತ್ತು. ಮೊಣಕಾಲುದ್ದದ ಸೀರೆಯುಟ್ಟು ಬಿಳಿ ಸೀರೆಯುಟ್ಟು ತಲೆಗೆ ಮುಂಡಾಸು ಕಟ್ಟಿಕೊಂಡಿದ್ದ ಮೂವರು ಯುವತಿಯರ ಗುಂಪು ಒಟ್ಟಿಗೆ ಹೆಗಲ ಮೇಲೆ ಕೈ ಹಾಕಿಕೊಂಡು ವರ್ತುಲಾಕಾರದಲ್ಲಿ ನರ್ತಿಸುತ್ತಾ, ಗೊಂಡ್ ಸಮುದಾಯಗಳಲ್ಲಿ ಜನಪ್ರಿಯವಾಗಿರುವ ರೇಲಾ ಹಾಡುಗಳನ್ನು ಹಾಡುತ್ತಿದ್ದರು.
ಕೆಲವೇ ಕ್ಷಣಗಳಲ್ಲಿ ಯುವತಿಯರಂತೆಯೇ ಬಿಳಿ ಬಣ್ಣದ ಉಡುಗೆ ತೊಟ್ಟಿದ್ದ ಯುವಕರ ಗುಂಪೊಂದು ತಲೆಗೆ ಕಟ್ಟಿದ್ದ ಮುಂಡಾಸಿನಲ್ಲಿ ಬಣ್ಣ ಬಣ್ಣದ ಆಕರ್ಷಕ ಹಕ್ಕಿ ಗರಿಗಳನ್ನು ಕಟ್ಟಿಕೊಂಡು ಅವರನ್ನು ಕೂಡಿಕೊಂಡರು. ಆ ಯುವಕರು ತಮ್ಮ ಕೈಯಲ್ಲಿದ್ದ ಡೋಲನ್ನು (ಮಂಡ್ರಿ) ಬಾರಿಸುತ್ತಾ ರೇಲಾ ಹಾಡು ಹಾಡುತ್ತಾ ಕುಣಿಯುತ್ತಿದ್ದರೆ ಅವರ ಕಾಲಿಗೆ ಕಟ್ಟಿದ್ದ ಗೆಜ್ಜೆಯು ಅವರ ಸಂಕೀರ್ಣ ಹೆಜ್ಜೆಗಳಿಗೆ ತಕ್ಕಂತೆ ಸದ್ದು ಹೊರಡಿಸುತ್ತಿತ್ತು. ತಮ್ಮ ತೋಳನ್ನು ಪರಸ್ಪರ ಬಳಸುತ್ತಾ ಆ ಯುವಕರ ಸುತ್ತ ವೃತ್ತಾಕಾರದಲ್ಲಿ ಕುಣಿಯತೊಡಗಿದರು. ನಂತರ ಅವರೆಲ್ಲ ಸೇರಿ ಹಾಡಿ ಕುಣಿಯತೊಡಗಿದರು.
ಈ 16ರಿಂದ 30 ವರ್ಷದೊಳಗಿನ ಗೊಂಡ್ ಸಮುದಾಯದ 43 ಪುರುಷರು ಮತ್ತು ಮಹಿಳೆಯರ ಗುಂಪಿನಲ್ಲಿದ್ದ ಎಲ್ಲರೂ ಛತ್ತೀಸ್ಗಢದ ಕೊಂಡಗಾಂವ್ ಜಿಲ್ಲೆಯ ಕೆಸ್ಕಲ್ ಬ್ಲಾಕ್ನಲ್ಲಿರುವ ಬೆಡ್ಮರಿ ಗ್ರಾಮದಿಂದ ಬಂದವರು.
ರಾಜ್ಯದ ರಾಜಧಾನಿಯಾದ ರಾಯ್ಪುರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ರಾಯ್ಪುರ-ಜಗದಾಲ್ಪುರ ಹೆದ್ದಾರಿಗೆ (ಬಸ್ತಾರ್ ಪ್ರದೇಶದಲ್ಲಿ) ಹತ್ತಿರವಿರುವ ಈ ಸ್ಥಳವನ್ನು ತಲುಪಲು ಅವರು ವ್ಯಾನ್ನಲ್ಲಿ 300 ಕಿಲೋಮೀಟರ್ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ್ದರು. ಮಧ್ಯ ಭಾರತದ ಆದಿವಾಸಿ ಸಮುದಾಯಗಳಿಂದ ಬಂದ ಮತ್ತು ವಿಶೇಷವಾಗಿ ಛತ್ತೀಸ್ಗಢದ ಇತರ ನರ್ತಕರು ಬಂದು ಸೇರಿದ್ದರು. ಇಲ್ಲಿ 2015ರ ಡಿಸೆಂಬರ್ 10ರಿಂದ 12ರವರೆಗೆಮೂರು ದಿನಗಳ ವೀರ್ ಮೇಳ ಆಚರಿಸಲಾಯಿತು, ಛತ್ತೀಸ್ಗಢದ ಬಲೋದಬಜಾರ್-ಭಟಾಪರಾ ಜಿಲ್ಲೆಯ ಸೋನಾಖಾನ್ನ ಬುಡಕಟ್ಟು ರಾಜ ವೀರ್ ನಾರಾಯಣ್ ಸಿಂಗ್ ಅವರ ತ್ಯಾಗದ ನೆನಪಿಗಾಗಿ ಈ ಆಚರಣೆಯನ್ನು ನಡೆಸಲಾಗುತ್ತದೆ. ಬ್ರಿಟಿಷ್ ಆಡಳಿತದ ವಿರುದ್ಧ ದಂಗೆ ಎದ್ದಿದ್ದ ರಾಜನನ್ನು 1857ರ ಡಿಸೆಂಬರ್ನಲ್ಲಿ ವಸಾಹತುಶಾಹಿ ಆಡಳಿತಗಾರರು ರಾಯ್ಪುರ ಜಿಲ್ಲೆಯ ಜೈಸ್ತಂಬ್ ಚೌಕ್ನಲ್ಲಿ ಸೆರೆಹಿಡಿದು ಗಲ್ಲಿಗೇರಿಸಲಾಗಿತ್ತು. ಸ್ಥಳೀಯರು ಹೇಳುವ ಪ್ರಕಾರ ನೇಣು ಹಾಕಿದ ನಂತರ ರಾಜನ ದೇಹವನ್ನು ಸ್ಫೋಟಿಸಲಾಗಿತ್ತು.






