ರುಖ್ಸಾನಾ ಖಾತೂನ್ ತನ್ನ ಕುಟುಂಬಕ್ಕೆ ಆಹಾರ ಹೊಂದಿಸುವ ಬಗ್ಗೆ ಇನ್ನು ಮುಂದೆ ಚಿಂತಿಸಬೇಕಾಗಿಲ್ಲ ಎಂದು ಭಾವಿಸಿದ್ದರು. ಅದು 2020ರ ನವೆಂಬರ್ ಮತ್ತು, ಎರಡು ವರ್ಷಗಳ ಕಾಲ ಎಳೆಯಲ್ಪಟ್ಟು ಮೂರನೇ ಪ್ರಯತ್ನದ ನಂತರ, ಆಗತಾನೆ ಪಡಿತರ ಚೀಟಿಯನ್ನು ಪಡೆದಿದ್ದರು. ಇದ್ದಕ್ಕಿದ್ದಂತೆ, ಸಾಂಕ್ರಾಮಿಕ ಪಿಡುಗಿನ ವರ್ಷದ ಕೆಟ್ಟ ತಿಂಗಳುಗಳು ಅವರ ಹಿಂದೆ ಇದ್ದಂತೆ ತೋರಿತು.
ಇದು 'ಆದ್ಯತಾ ಕುಟುಂಬ' ಕಾರ್ಡ್ ಆಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA), 2013ರ ಅಡಿಯಲ್ಲಿನ ಒಂದು ವರ್ಗವಾಗಿದೆ, ಇದಕ್ಕಾಗಿ ಅರ್ಹ ಫಲಾನುಭವಿಗಳನ್ನು ರಾಜ್ಯ ಸರ್ಕಾರಗಳು ಗುರುತಿಸುತ್ತವೆ.
ಅದರಲ್ಲಿ ಅವರು ಆ ಸಮಯದಲ್ಲಿ ವಾಸಿಸುತ್ತಿದ್ದ ಅವರ ಪೂರ್ವಜರ ಮನೆಯ ವಿಳಾಸವನ್ನು ಒಳಗೊಂಡಿತ್ತು - ಬಿಹಾರದ ದರ್ಭಾಂಗಾ ಜಿಲ್ಲೆಯ ಧೂಳಿನಿಂದ ಕೂಡಿದ ಮುನ್ಸಿಪಲ್ ಕೌನ್ಸಿಲ್ ಪ್ರದೇಶದೊಂದಿಗೆ ಇತ್ತೀಚೆಗೆ ವಿಲೀನಗೊಂಡ ಗ್ರಾಮ. ರುಖ್ಸಾನಾ ತನ್ನ ಏಳು ಜನರ ಕುಟುಂಬಕ್ಕೆ ಕೊನೆಗೂ ಸಬ್ಸಿಡಿ ಪಡಿತರವನ್ನು ಪಡೆದರು.
ನಂತರ ಅವರೆಲ್ಲರೂ ಆಗಸ್ಟ್ 2021 ರಲ್ಲಿ ದೆಹಲಿಗೆ ಮರಳಿದರು ಮತ್ತು ಅವರ ಕುಟುಂಬವು ಮತ್ತೊಮ್ಮೆ ಕಾನೂನುಬದ್ಧವಾಗಿ ಅರ್ಹವಾದ ಆಹಾರ ಧಾನ್ಯ ಪಡೆಯಲು ಸಾಧ್ಯವಾಗಲಿಲ್ಲ.
ಕೇಂದ್ರ ಸರ್ಕಾರದ ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್ (ONORC) ಯೋಜನೆಯಡಿ, NFSAಯ ಫಲಾನುಭವಿಗಳನ್ನು - 'ಆದ್ಯತಾ ಕುಟುಂಬಗಳು' ಮತ್ತು 'ಬಡವರಲ್ಲಿ ಬಡವರು' ಅಡಿಯಲ್ಲಿ ವರ್ಗೀಕರಿಸಲಾಗಿದೆ - ಇವರು ಯಾವುದೇ ನ್ಯಾಯಬೆಲೆ ಅಂಗಡಿಯಿಂದ ತಮ್ಮ ಆಹಾರ ಧಾನ್ಯಗಳ ಕೋಟಾವನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆಧಾರ್ ಲಿಂಕ್ ಮಾಡಲಾಗಿರುವ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ವಸ್ತುಗಳನ್ನು ವಿತರಿಸಲು ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ ಪ್ರತಿ ಬಾರಿಯೂ ರುಖ್ಸಾನಾ ತನ್ನ ಮಾಸಿಕ ಪಾಲಿಗಾಗಿ ಪಶ್ಚಿಮ ದೆಹಲಿಯ ಶಾದಿಪುರ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿನ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋದಾಗ, ಎಲೆಕ್ಟ್ರಾನಿಕ್ ಪಾಯಿಂಟ್-ಆಫ್-ಸೇಲ್ (ePOS) ಯಂತ್ರವು ಹೀಗೆ ತೋರಿಸುತ್ತದೆ: 'IMPDS ದಾಖಲೆಯಲ್ಲಿ ಈ ಪಡಿತರ ಚೀಟಿ ಕಂಡುಬಂದಿಲ್ಲ'.
PDS ಅಡಿಯಲ್ಲಿ ವಿತರಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿದರೆ, ಅರ್ಹ ವಲಸಿಗರು ONORC ಯೋಜನೆಯಡಿ ದೇಶದ ಯಾವುದೇ ಭಾಗದಿಂದ ತಮ್ಮ ಹಕ್ಕಿನ ಆಹಾರ ಧಾನ್ಯ ಪಡೆಯಲು ಅನುವು ಮಾಡಿಕೊಡಲು 2018ರಲ್ಲಿ ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (IMPDS) ಸ್ಥಾಪಿಸಲಾಯಿತು.













