“ತಮ್ಮ ಮಗುವನ್ನು ಕಳೆದುಕೊಂಡು ದುಃಖಿಸುವ ಸ್ಥಿತಿ ಯಾವ ಪೋಷಕರಿಗೂ ಬರಬಾರದು,” ಎನ್ನುತ್ತಾರೆ ಸರ್ವಿಕ್ರಮ್ಜೀತ್ ಸಿಂಗ್ ಹುಂಡಾಲ್. ಅವರ ಮಗ ನವರೀತ್ ಸಿಂಗ್ ಜನವರಿ 26ರ ರೈತರ ಟ್ರ್ಯಾಕ್ಟರ್ ಮೆರವಣಿಗೆಯ ಸಂದರ್ಭದಲ್ಲಿ ಮೃತಪಟ್ಟಿದ್ದರು.
ಉತ್ತರಪ್ರದೇಶದ ಡಿಬ್ಡಿಬಾ ಗ್ರಾಮದ ಅವರ ಮನೆಯ ಗೋಡೆ ಮೇಲೆ ನವರೀತ್ ಸಿಂಗ್ ಅವರ ಚಿತ್ರ ವಿರಮಿಸುತ್ತಿತ್ತು. ಅದೇ ಕೋಣೆಯಲ್ಲಿ ಕುಳಿತು ನವರೀತ್ ತಂದೆ – ತಾಯಿ ಸರ್ವಿಕ್ರಮ್ಜೀತ್ (45) ಮತ್ತು ಪರಮಜೀತ್ ಕೌರ್ (42) ಸಂತಾಪ ಸೂಚಿಸಲು ಮನೆಗೆ ಬರುತ್ತಿದ್ದ ಜನರನ್ನು ಎದುರುಗೊಳ್ಳುತ್ತಿದ್ದರು. ಮಗನ ಅಗಲುವಿಕೆ ಅವರ ಬದುಕಿನಲ್ಲಿ ಎಂದೂ ಭರಿಸಲಾಗದಂತಹ ಶೂನ್ಯವೊಂದನ್ನು ಸೃಷ್ಟಿಸಿದೆ. “ಅವನು ಹೊಲದ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದ. ಅವನು ನಮ್ಮ ಕುರಿತು ಬಹಳ ಕಾಳಜಿ ವಹಿಸುತ್ತಿದ್ದ, ಅವನೊಬ್ಬ ಜವಬ್ದಾರಿ ಹೊಂದಿದ್ದ ಮಗನಾಗಿದ್ದ,” ಎನ್ನುತ್ತಾರೆ ಸರ್ವಿಕ್ರಮ್ಜೀತ್.
ನವರೀತ್ ಸಿಂಗ್ (25) ಜನವರಿ 26ರಂದು ದೆಹಲಿಯ ದೆಹಲಿ – ಉತ್ತರಪ್ರದೇಶದ ಗಡಿಯಲ್ಲಿ ನಡೆಯಲಿದ್ದ ಟ್ರಾಕ್ಟರ್ ಮೆರವಣಿಗೆಯಲ್ಲಿ ಭಾಗವಹಿಸುವ ಸಲುವಾಗಿ ಗಾಝಿಪುರಕ್ಕೆ ತರಳಿದ್ದರು. ಅವರ 65 ವರ್ಷದ ತಾತ ಹರದೀಪ್ ಸಿಂಗ್ ಡಿಬ್ಡಿಬಾ, ಅಲ್ಲಿ ಕ್ಯಾಂಪ್ ಮಾಡಿದ್ದರು. ಅವರು ರೈತ ಪ್ರತಿಭಟನೆ ಆರಂಭಗೊಂಡ ನವೆಂಬರ್ 26, 2020ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ನವರೀತ್ ಸಿಂಗ್ ಟ್ರ್ಯಾಕ್ಟರ್ ಓಡಿಸುತ್ತಿದ್ದಾಗ ದೆಹಲಿ ಪೋಲಿಸರು ದೀನ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಹಾಕಿದ್ದ ಬ್ಯಾರಿಕೇಡ್ನಿಂದಾಗಿ ಅವರ ಟ್ರ್ಯಾಕ್ಟರ್ ಮಗುಚಿಬಿದ್ದಿತ್ತು.
ಟ್ರಾಕ್ಟರ್ ಉರುಳಿದ ಸಂದರ್ಭದಲ್ಲಿ ಗಾಯಗೊಂಡ ಕಾರಣ ನವರೀತ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದರೆ, ಅಪಘಾತ ಸಂಭವಿಸುವ ಮೊದಲು ಆತನಿಗೆ ಗುಂಡು ಹಾರಿಸಲಾಗಿದೆ ಎನ್ನುವುದು ಅವರ ಕುಟುಂಬದ ನಂಬಿಕೆ. ನವರೀತ್ ಸಾವಿಗೆ ಕಾರಣ ತಿಳಿಯಲು ಅಧಿಕೃತ ವಿಚಾರಣೆ ನಡೆಸಬೇಕೆಂದು ಕೋರಿ ದೆಹಲಿ ಹೈಕೋರ್ಟ್ನಲ್ಲಿ ಹರ್ದೀಪ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಉಲ್ಲೇಖಿಸಿ “ಅದನ್ನು ನಾವು ನ್ಯಾಯಾಲಯದಲ್ಲಿ ಸಾಬೀತುಪಡಿಸುತ್ತೇವೆ” ಎಂದು ಶ್ರೀವಿಕ್ರಮ್ಜೀತ್ ಹೇಳುತ್ತಾರೆ.
ಈ ದುರಂತ ಘಟನೆಯ ನಂತರ, ವಾಯುವ್ಯ ಉತ್ತರಪ್ರದೇಶದ ಗಡಿಯಲ್ಲಿನ ರಾಮಪುರ ಜಿಲ್ಲೆಯ ಡಿಬ್ಡಿಬಾದ ಆಸುಪಾಸಿನ ರೈತರು 2020ರ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಹೆಚ್ಚು ಬಲವಾಗಿ ಒತ್ತಾಯಿಸಲು ಪ್ರಾರಂಭಿಸಿದರು. ರಾಮಪುರದ ಗಡಿಯುದ್ದಕ್ಕೂ, ಕುಮವೂನ್ ಪ್ರದೇಶದ ಉತ್ತರಾಖಂಡದ ಉಧಮ್ ಸಿಂಗ್ ನಗರ ಮತ್ತು ಕಾಶಿಪುರ ಜಿಲ್ಲೆಗಳಲ್ಲಿಯೂ ರೈತರ ಹೋರಾಟದ ಸಂಕಲ್ಪ ಅಷ್ಟೇ ಪ್ರಬಲವಾಗಿದೆ.







