“ನಾವು ದೆಹಲಿಯಿಂದ ವಾಪಾಸ್ ಬಂದು ಎರಡು ವರ್ಷಗಳಾಗಿವೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಮಾತು ಕೊಟ್ಟಿತ್ತು, ಆದರೆ ಆ ಬೇಡಿಕೆಗಳ ಬಗ್ಗೆ ಚರ್ಚಿಸಲು ಯಾರೂ ನಮ್ಮನ್ನು ರೈತರೆಂದು ಪರಿಗಣಿಸಲಿಲ್ಲ,” ಎಂದು ಪಂಜಾಬ್ನ ಸಂಗ್ರೂರ್ ಜಿಲ್ಲೆಯ ನಿವಾಸಿ 60 ವರ್ಷದ ಚರಣಜಿತ್ ಕೌರ್ ಹೇಳುತ್ತಾರೆ. ಅವರ ಕುಟುಂಬ ತಮ್ಮ ಎರಡು ಎಕರೆ ಜಮೀನಿನಲ್ಲಿ ಗೋಧಿ, ಭತ್ತ ಮತ್ತು ಮನೆಯ ಬಳಕೆಗಾಗಿ ಬೇಕಾದ ಕೆಲವು ತರಕಾರಿಗಳನ್ನು ಬೆಳೆಯುತ್ತದೆ. "ನಾವು ಎಲ್ಲಾ ರೈತರ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ," ಎಂದು ಚರಣಜಿತ್ ಕೌರ್ ಹೇಳುತ್ತಾರೆ.
ಪಟಿಯಾಲ ಜಿಲ್ಲೆಯ ಶಂಭು ಗಡಿಯಲ್ಲಿ ಜಮೆಯಾಗಿರುವ ಮಹಿಳೆಯರ ಗುಂಪಿನ ಮಧ್ಯೆ ತಮ್ಮ ಸ್ನೇಹಿತೆ ಗುರ್ಮೀತ್ ಕೌರ್ ಜೊತೆಗೆ ಚರಣಜಿತ್ ಕುಳಿತಿದ್ದಾರೆ. ಉರಿಉರಿಯಾದ ಮಧ್ಯಾಹ್ನದ ಬಿಸಿಲು ಈ ಗುಂಪಿನ ಮೇಲೆ ಬೀಳುತ್ತಿದೆ. "ಅವರು [ಸರ್ಕಾರ] ನಮ್ಮನ್ನು ದೆಹಲಿಯ ಕಡೆಗೆ ಹೋಗಲು ಬಿಡಲಿಲ್ಲ," ಎಂದು ಗುರ್ಮೀತ್ ಹೇಳುತ್ತಾರೆ. ಕಾಂಕ್ರೀಟ್ ಗೋಡೆಗಳು, ಕಬ್ಬಿಣದ ಮೊಳೆಗಳು ಮತ್ತು ಮುಳ್ಳಿನ ತಂತಿಗಳ ಬ್ಯಾರಿಕೇಡ್ಗಳನ್ನು ಹರಿಯಾಣ-ಪಂಜಾಬ್ ಗಡಿಗಳಲ್ಲಿ ಮತ್ತು ದೆಹಲಿ-ಹರಿಯಾಣ ಗಡಿಗಳಲ್ಲಿರುವ ರಸ್ತೆಗಳಲ್ಲಿ ಹಾಕಿದ್ದಾರೆ. ಹೀಗೆ ಪ್ರತಿಭಟನಾ ನಿರತ ರೈತರನ್ನು ದೆಹಲಿಯ ಕಡೆಗೆ ಪ್ರಯಾಣ ಬೆಳೆಸದಂತೆ ತಡೆದು ನಿಲ್ಲಿಸಿದ್ದಾರೆ. ಓದಿ: ‘ನಾನು ಶಂಭು ಗಡಿಯಲ್ಲಿ ಬಂಧಿಯಾಗಿದ್ದೇನೆʼ
ಸ್ವಾಮಿನಾಥನ್ ಆಯೋಗ ನೀಡಿದ ಶಿಫಾರಸ್ಸಿನಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿ, ರೈತರು ಮತ್ತು ರೈತ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ, ಸಂತ್ರಸ್ತ ರೈತರಿಗೆ ನ್ಯಾಯ ನೀಡುವುದು, ಲಖಿಂಪುರ-ಖೇರಿ ಹತ್ಯಾಕಾಂಡದ ಅಪರಾಧಿಗಳ ಬಂಧನ, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ನೀಡುವುದು ಮತ್ತು 2020-2021ರ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು: ಇಂತಹ ಕೆಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಇಲ್ಲಿ ನೆರೆದಿರುವ ರೈತರು ಹೇಳುತ್ತಾರೆ.
ಕಳೆದ ಕೆಲ ವಾರಗಳ ಹಿಂದೆ, ಫೆಬ್ರವರಿ 13 ರಂದು, ರೈತರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಷ್ಟ್ರ ರಾಜಧಾನಿಗೆ ಶಾಂತಿಯುತವಾಗಿ ಮೆರವಣಿಗೆ ಹೊರಟರು. ಅವರ ಮೇಲೆ ಅಶ್ರುವಾಯು, ಜಲಫಿರಂಗಿಗಳು, ಪೆಲೆಟ್ ಗನ್ಗಳು, ರಬ್ಬರ್ ಬುಲೆಟ್ಗಳಿಂದ ದಾಳಿ ಮಾಡಲಾಯಿತು. ಅವರನ್ನು ಮುಂದೆ ಸಾಗದಂತೆ ತಡೆಯಲು ಹರ್ಯಾಣ ಪೊಲೀಸರು ಗುಂಡು ಹಾರಿಸಿದ್ದರು.










