ದೇಶದ ವಾಯುವ್ಯ ಭಾಗದ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿರುವ ಅರಾವಳಿ ಬೆಟ್ಟಗಳು, ಪ್ರಸ್ತುತ ದೇಶದಲ್ಲಿ ಪರಿಸರಕ್ಕೆ ಸಂಬಂಧಿಸಿದ ಒಂದು ಪ್ರಮುಖ ಚರ್ಚಾ ವಿಷಯವಾಗಿವೆ. 100 ಮೀಟರಿಗಿಂತ ಹೆಚ್ಚು ಎತ್ತರವಿರುವ ಪ್ರದೇಶಗಳಿಗೆ ಮಾತ್ರ ಕಾನೂನು ರಕ್ಷಣೆ ನೀಡಬೇಕು ಎಂದು ನವೆಂಬರ್ 2025ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದೇ ಇದಕ್ಕೆ ಕಾರಣ. ಈ ತೀರ್ಪಿನ ಬಗ್ಗೆ ಪರಿಸರ ತಜ್ಞರು ಮತ್ತು ನಾಗರಿಕ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆಯಾದರೂ, ರತನ್ ಸಿಂಗ್ ಅವರಂತಹ ಕುಟುಂಬಗಳು ಈ ಭೂಮಿಯ ಸಾಂಪ್ರದಾಯಿಕ ಪಾಲನೆ-ಪೋಷಣೆಯನ್ನು ಮುಂದುವರಿಸಿಕೊಂಡು ಹೋಗುತ್ತಿವೆ. ಪರಿಸರವಿಜ್ಞಾನಿಗಳು ಮತ್ತು ನಾಗರಿಕ ಸಮಾಜದ ಗುಂಪುಗಳು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೂ, ರತನ್ ಸಿಂಗ್ ಅವರಂತಹ ಕುಟುಂಬಗಳು ಈ ಭೂಮಿಯ ಸಾಂಪ್ರದಾಯಿಕ ಉಸ್ತುವಾರಿಯನ್ನು ಮುಂದುವರಿಸಿವೆ. ನಂತರ, ಸಾರ್ವಜನಿಕ ಆಕ್ರೋಶವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡ ಸುಪ್ರೀಂ ಕೋರ್ಟ್, 2025ರ ಡಿಸೆಂಬರ್ 31 ರಂದು ಅರಾವಳಿ ಬೆಟ್ಟಗಳ ಕುರಿತಾದ ತನ್ನ ಹಿಂದಿನ ಆದೇಶವನ್ನು ತಡೆಹಿಡಿಯಿತು. ಹೊಸ ವ್ಯಾಖ್ಯಾನದ ವ್ಯಾಪ್ತಿಗೆ ಬಾರದ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸುವುದರಿಂದ ಅರಾವಳಿ ಶ್ರೇಣಿಗೆ ಪರಿಸರ ಹಾನಿಯಾಗಲಿದೆಯೇ ಎನ್ನುವುದನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುವಂತೆ ಅದು ಸೂಚಿಸಿದೆ.
ಮಾಂಗರ್ನ ಒಟ್ಟು 4,262 ಎಕರೆ ವಿಸ್ತೀರ್ಣದಲ್ಲಿ ಸುಮಾರು ಶೇಕಡಾ 90 ರಷ್ಟು ಭಾಗವು ಅರಣ್ಯದಿಂದ ಕೂಡಿದ್ದು, ಇಲ್ಲಿ ಉಷ್ಣವಲಯದ ಒಣ ಎಲೆ ಉದುರುವ ಮರಗಳು ಮತ್ತು ಮುಳ್ಳಿನ ಗಿಡಮರಗಳು ಕಂಡುಬರುತ್ತವೆ. ಇಲ್ಲಿ ಕನಿಷ್ಠ 40 ಜಾತಿಯ ಮರಗಳು ಮತ್ತು 30 ಜಾತಿಯ ಪೊದೆಗಳಿವೆ, ಮತ್ತು ರತನ್ ಸಿಂಗ್ ಅವುಗಳಲ್ಲಿ ಪ್ರತಿಯೊಂದನ್ನೂ ಗುರುತಿಸಬಲ್ಲರು. ಇಲ್ಲಿನ ಪ್ರಮುಖ ಮರದ ಜಾತಿಯಾದ 'ದೌ' (ಟರ್ಮಿನಾಲಿಯಾ ಪೆಂಡುಲಾ) ಸಸ್ಯದ ಎಲೆಗಳನ್ನು ಪ್ರಾಣಿಗಳು ಅತಿಯಾಗಿ ತಿನ್ನುವುದರಿಂದಾಗಿ ಈಗ ಅದು ಬಹುತೇಕ ಪೊದೆಯಂತೆ ಕಾಣುತ್ತದೆ. ಇದಲ್ಲದೆ, ಇಲ್ಲಿ ಗಂಗೇರ್ (ಗ್ರೆವಿಯಾ ಟೆನಾಕ್ಸ್), ಆಟನ್ (ಗ್ರೆವಿಯಾ ಫ್ಲಾವೆಸೆನ್ಸ್), ರೊಂಜ್ (ವ್ಯಾಚೆಲಿಯಾ ಲ್ಯುಕೋಫ್ಲೋಯಾ) ಮತ್ತು ಜಾರ್ಬೇರ್ (ಜಿಜಿಫಸ್ ನಮ್ಮುಲೇರಿಯಾ) ರೀತಿಯ ಸಸ್ಯಗಳಿದ್ದು, ಇವೆಲ್ಲವನ್ನೂ ಸಾಮಾನ್ಯವಾಗಿ ಜಾನುವಾರುಗಳಿಗೆ ಮೇವಾಗಿ ಬಳಸಲಾಗುತ್ತದೆ.
"ಇಲ್ಲಿನ ಜನರು ಹಿಂದೆ ಬಹಳಷ್ಟು ಜಾನುವಾರುಗಳನ್ನು ಸಾಕುತ್ತಿದ್ದರು; ಪ್ರತಿಯೊಂದು ಮನೆಯಲ್ಲೂ ಕನಿಷ್ಠ 100 ಮೇಕೆಗಳಿರುತ್ತಿದ್ದವು" ಎಂದು ಸಿಂಗ್ ಹೇಳುತ್ತಾರೆ. ಇವರು ಸ್ವತಃ ಎರಡು ದೊಡ್ಡ ಹಸುಗಳು, ಎರಡು ಸಣ್ಣ ಕಡಸುಗಳು ಮತ್ತು ಎರಡು ಕರುಗಳಿರುವ ಒಂದು ಎಮ್ಮೆಯನ್ನು ಹೊಂದಿದ್ದಾರೆ. "ಆದರೆ ಈಗ, ಸಾಂಪ್ರದಾಯಿಕವಾಗಿ ಮೇವು ಒದಗಿಸುತ್ತಿದ್ದ ಸ್ಥಳೀಯ ಮರ ಮತ್ತು ಪೊದೆಗಳ ಜಾಗವನ್ನು ಆಕ್ರಮಣಕಾರಿ ಸಸ್ಯಗಳು ಆವರಿಸಿಕೊಂಡಿವೆ."
ಅವುಗಳಲ್ಲಿ ಪ್ರೊಸೊಪಿಸ್ ಜೂಲಿಫ್ಲೋರಾ ಅಥವಾ ಜಾಲಿ ಕೂಡ ಒಂದು. ಇದೊಂದು ಅಪಾಯಕಾರಿ ವಿದೇಶಿ ಮರದ ಪ್ರಭೇದವಾಗಿದ್ದು, ಹಲವಾರು ಖಂಡಗಳಲ್ಲಿ ಹರಡಿಕೊಂಡು ಗಂಭೀರ ಪರಿಣಾಮಗಳನ್ನು ಬೀರಿದೆ. ಮಣ್ಣಿನ ಸವೆತವನ್ನು ತಡೆಗಟ್ಟಲು 1900ರಲ್ಲಿ ಬ್ರಿಟಿಷರು ಜಾರಿಗೆ ತಂದಿದ್ದ 'ಪಂಜಾಬ್ ಭೂ ಸಂರಕ್ಷಣಾ ಕಾಯ್ದೆ'ಯ (ಪಿಎಲ್ಪಿಎ) ಅಡಿಯಲ್ಲಿರುವ 'ಸಂರಕ್ಷಿತ ಮರಗಳ ಪಟ್ಟಿ'ಯಿಂದ ಈ ಪ್ರಭೇದವನ್ನು ತೆಗೆದುಹಾಕಲು ಹರಿಯಾಣ ಸರ್ಕಾರವು 2017ರಲ್ಲಿ ಪ್ರಯತ್ನಿಸಿತ್ತು. ಆಗ ಸರ್ಕಾರವು ಇದನ್ನು 'ಆಕ್ರಮಣಕಾರಿ ವಿದೇಶಿ ಪ್ರಭೇದ'ಎಂದು ಕರೆದಿತ್ತು. ಆದರೆ ದುರಂತವೆಂದರೆ, ಸ್ವತಃ ರಾಜ್ಯ ಸರ್ಕಾರವೇ ಎರಡು ದಶಕಗಳ ಹಿಂದೆ ಅರಾವಳಿ ಬೆಟ್ಟಗಳಲ್ಲಿ ಈ ಮರಗಳನ್ನು ನೆಟ್ಟಿತ್ತು.
ಅರಾವಳಿ ಬೆಟ್ಟಗಳನ್ನು ತೆರೆದ ಕುರುಚಲು ಅರಣ್ಯ ಎಂದು ವರ್ಗೀಕರಿಸಲಾಗಿದೆ. ಅಂದರೆ ಇಲ್ಲಿ ಮರಗಳ ಹೊದಿಕೆ ತುಂಬಾ ಕಡಿಮೆ (ಶೇ. 10 ರಿಂದ 40 ರಷ್ಟು) ಇರುತ್ತದೆ. ಸರ್ಕಾರಿ ದಾಖಲೆಗಳಲ್ಲಿ ಇಂತಹ ಭೂಪ್ರದೇಶಗಳನ್ನು ಹೆಚ್ಚಾಗಿ ʼಬಂಜರು ಭೂಮಿʼ ಎಂದು ಕರೆಯಲಾಗುತ್ತದೆ ಮತ್ತು ಅರಣ್ಯೀಕರಣ ಯೋಜನೆಗಳ ಮೂಲಕ ಇವುಗಳನ್ನು 'ಸುಧಾರಿಸಲು' ಅಥವಾ ಆರ್ಥಿಕವಾಗಿ ಲಾಭದಾಯಕವಾಗಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೂ, ರತನ್ ಸಿಂಗ್ ಅವರಂತಹ ಸ್ಥಳೀಯ ಪಶುಪಾಲಕರಿಗೆ, ಸ್ಥಳೀಯವಾಗಿ 'ವಿಲಾಯತಿ ಕಿಕರ್' ಎಂದು ಕರೆಯಲ್ಪಡುವ 'ಪ್ರೊಸೊಪಿಸ್ ಜೂಲಿಫ್ಲೋರಾ' ಮರವು ಮೇವಾಗಿ ಅಷ್ಟೇನೂ ಉಪಯುಕ್ತವಲ್ಲವೆನ್ನುವುದು ಮೊದಲಿನಿಂದಲೂ ತಿಳಿದಿದೆ. ಈಗ ಜಾನುವಾರುಗಳು ಅದರ ಕಾಯಿಗಳನ್ನು ತಿನ್ನುತ್ತಿದ್ದರೂ, ಈ ಪ್ರದೇಶದಲ್ಲಿ ಈ ಮರವು ಪ್ರಮುಖವಾಗಿ ಉರುವಲು ಮೂಲವಾಗಿ ಬಳಕೆಯಾಗುತ್ತಿದೆ.