ಫಗುಣಿ ದೇವಿ ತಾನು ಉಟ್ಟಿದ್ದ ಗಾಢ ಹಳದಿ ಬಣ್ಣದ ಸೀರೆಯನ್ನು ತನ್ನ ಸವೆದ ಚಪ್ಪಲಿಗೆ ಸಿಕ್ಕಿಕೊಳ್ಳದಂತೆ ಎತ್ತಿ ಕಟ್ಟಿದ್ದರು. ಜನವರಿ ತಿಂಗಳ ಕಡು ಚಳಿಯ ಬೆಳಗಿನಲ್ಲಿ ಅವರು ಪಟಪಟನೇ ಹೆಜ್ಜೆಯಿಡುತ್ತಿದ್ದರು. ಕಿವಿಗೆ ಗಾಳಿ ಹೋಗದಂತೆ ಕಟ್ಟಿಕೊಂಡಿದ್ದ ಗುಲಾಬಿ ಬಣ್ಣದ ಸ್ಕಾರ್ಫ್ ಆಗಾಗ ಗಾಳಿಗೆ ಹಾರುತ್ತಿತ್ತು. ಅವರ ಹೆಗಲಿನಲ್ಲಿದ್ದ ತಿಳಿಗಂದು ಬಣ್ಣದ ಸೆಣಬಿನ (Crotalaria juncea) ನಾರಿನ ಸುರುಳಿ ಯಾವುದೋ ಫ್ಯಾಷನ್ ಬ್ಯಾಗಿನಂತೆ ನೇತಾಡುತ್ತಿತ್ತು.
ಅವರ ಎಡಗೈಯಲ್ಲಿ, ಒಂದು ದಾರಕ್ಕೆ ಕಟ್ಟಲಾದ 'ಧೇರಾ' – ಅಂದರೆ, ಕೊಕ್ಕೆ ಹೊಂದಿರುವ ನಾಲ್ಕು ಮೊಳೆಗಳ ಸರಳ ಮರದ ನೂಲುವ ಸಾಧನ ತೂಗಾಡುತ್ತಿದೆ. ಆಗಾಗ ಅವರು ತನ್ನ ಬಲಗೈಯಿಂದ ನಾರಿನ ಕಂತೆಯಿಂದ ಒಂದು ಅಥವಾ ಎರಡು ನಾರುಗಳನ್ನು ಎಳೆದುಕೊಳ್ಳುತ್ತಾರೆ, ಧೇರಾಕ್ಕೆ ಬೇಗನೆ ಸುತ್ತಿ, ನಂತರ ಎರಡೂ ಕೈಗಳನ್ನು ವೇಗವಾಗಿ ಬಳಸಿ ಆ ನಾರನ್ನು ತೆಳುವಾದ ಹಗ್ಗವನ್ನಾಗಿ ತಿರುಗಿಸುತ್ತಾರೆ. ಮಾಂತ್ರಿಕವಾಗಿ, ಅವರ ಬೆರಳುಗಳು ಒರಟಾದ ಸೆಣಬಿನ ನಾರುಗಳನ್ನು ಹೊಳೆಯುವ, ನಯವಾದ ಎಳೆಯಾಗಿ ಪರಿವರ್ತಿಸುತ್ತವೆ. ಧೇರಾ ನೆಲಕ್ಕೆ ತಾಗುವವರೆಗೆ ಆ ಎಳೆ ಉದ್ದವಾಗುತ್ತಲೇ ಹೋಗುತ್ತದೆ. "ಹೀ... ಹೀ... ಚಲ್ ಚಲ್, [ಏ... ಏ... ಬಾ, ಬಾ]" ಎಂದು ಫಗುಣಿ ತನ್ನ ಮೂರು ಹಸುಗಳು ಮತ್ತು ಎರಡು ಆಡುಗಳಿಗೆ ಸೌಮ್ಯವಾಗಿ ಆಜ್ಞಾಪಿಸುತ್ತಾರೆ. ಅದೇ ಸಮಯಕ್ಕೆ, ನೆಲದಿಂದ ನೂಲುವ ಸಾಧನವನ್ನು ಎತ್ತಿ, ಆ ತೆಳುವಾದ ಹಗ್ಗವನ್ನು ಅದರ ಸುತ್ತ ಸುತ್ತಿಕೊಂಡು, ಮತ್ತೆ ನೂಲುವ ಪ್ರಕ್ರಿಯೆಯನ್ನು ಹೊಸದಾಗಿ ಪ್ರಾರಂಭಿಸುತ್ತಾರೆ.
"ಒಂದು ಕ್ಷಣ ಅವುಗಳತ್ತ ನೋಡದಿದ್ದರೆ ಸಾಕು ನೇರ ಸಾಸಿವೆ ಅಥವಾ ಗೋಧಿಯ ಹೊಲಕ್ಕೆ ನುಗ್ಗಿಬಿಡುತ್ತವೆ" ಎಂದು ಅವರು ತನಗೇ ತಾನೇ ಹೇಳಿಕೊಳ್ಳುವಂತೆ ಹೇಳಿದರು. 56 ವರ್ಷದ ಫಗುಣಿ ದೇವಿ ತನ್ನ ಕೆಲಸಗಳನ್ನು ಸೊಗಸಾಗಿ ಹಾಗೂ ಸಲೀಸಾಗಿ ಮಾಡುತ್ತಾ, ತನ್ನ ಆಡುಗಳ ಮೇಲೆ ನಿಗಾ ಇಡುತ್ತಾ, ಜೊತೆಗೆ ತನ್ನ ಸ್ನೇಹಿತೆಯರೊಂದಿಗೆ ಹರಟುವುದನ್ನೂ ನೋಡಿ ನಾನು ಆಶ್ಚರ್ಯದಿಂದ ನೋಡಿದೆ. "ನಾವು ಚೌಧುರಿಗಳು ಈ ಕೌಶಲವನ್ನು ಹುಟ್ಟಿನಿಂದಲೇ ಪಡೆದಿರುತ್ತೇವೆ. ಗರ್ಭದಲ್ಲಿರುವಾಗಲೇ ಕಲಿತಿರುತ್ತೇವೆ. ಹಳ್ಳಿಯ ಪ್ರತಿ ಮಗುವಿಗೂ ಇದು ಗೊತ್ತು" ಎಂದ ಅವರ ದನಿಯಲ್ಲಿ ಹೆಮ್ಮೆಯಿತ್ತು.


















