ರಿಜ್ವಾನಾ ಹಾಜಿಯವರನ್ನು ಕಂಡಾಗ ನೀವು ಮೊದಲು ಗಮನಿಸುವ ಅಂಶವೆಂದರೆ ಅವರ ಸುಂದರವಾದ, ತೇವಭರಿತ, ಬಾದಾಮಿ ಬಣ್ಣದ ಕಣ್ಣುಗಳು. ನನ್ನನ್ನು ಕಂಡ ಮೊದಲಿಗೆ ತಮ್ಮ ಕಣ್ಣುಗಳನ್ನು ಒರೆಸಿಕೊಂಡ ಅವರು ನಂತರ ದುಪಟ್ಟಾದ ಅಡಿಯಿದ್ದ ತಮ್ಮ ಕೂದಲನ್ನು ಅಚ್ಚುಕಟ್ಟಾಗಿ ಸರಿಪಡಿಸಿಕೊಂಡರು. ಇದಾದ ಮೇಲೆ ಮಾತು ಆರಂಭಿಸಿದ ಅವರು ಕಪ್ಪು ಕನ್ನಡಕಗಳೆಲ್ಲ ಗಂಡಸರಿಗೆ ಮಾತ್ರ ಸರಿ ಎನ್ನುವ ತನ್ನ ಅಭಿಪ್ರಾಯವನ್ನು ಗುಟ್ಟಾಗಿ ಹಂಚಿಕೊಂಡರು.
“ನನ್ನ ಗಂಡ ಹಾಕ್ಕೋತಾರೆ” ಎನ್ನುತ್ತಾ ಅವರು ತನ್ನ ಗಂಡನತ್ತ ತಿರುಗಿದರು. ಅವರ ಪತಿ ಶಾರಿ್ಕ್
ಅಗಾರದಲ್ಲಿನ ಉಪ್ಪು ಎಳೆಯುತ್ತಿದ್ದರು. ಅವರ ಕಣ್ಣು ಕಪ್ಪು ಕನ್ನಡಕದ ಹಿಂದಿದ್ದವು.
"ನೀವು ಯಾಕೆ ಧರಿಸಬಾರದು?" ಎಂದು ಕೇಳಿದ್ದಕ್ಕೆ ಅವರು ಅದೊಂದು ಅಸಾಧ್ಯವಾದ ಹಾಗೂ ವಿಚಿತ್ರವಾದ ಆಲೋಚನೆ ಎಂಬಂತೆ ಮನಸಾರೆ ನಕ್ಕರು. "ಇಲ್ಲಿ ಹಿರಿಯರಿದ್ದಾರೆ. ಅವರು ಏನಂದುಕೊಂಡಾರು! ನಮ್ಮ ಸಮುದಾಯಗಳಲ್ಲಿ ಮಹಿಳೆಯರು ಕೂಲಿಂಗ್ ಗ್ಲಾಸ್ ಧರಿಸುವುದಿಲ್ಲ" ಎಂದು ಪ್ರಶ್ನೆಯನ್ನು ತಳ್ಳಿಹಾಕುವಂತೆ ಕೈಬೀಸುತ್ತಾ ಹೇಳಿದರು. ತಮ್ಮ ತೇವವಾದ ಕಣ್ಣುಗಳನ್ನು ಮತ್ತೊಮ್ಮೆ ಒರೆಸಿಕೊಳ್ಳುತ್ತಾ, "ನನಗೆ ನಾಚಿಕೆ" ಎಂದರು. ಆ ಮಾತುಗಳಷ್ಟೇ ಅವರ ಮುಜುಗರವೂ ಮುದ್ದಾಗಿತ್ತು.
ರಿಜ್ವಾನರ ಕಣ್ಣಿನಲ್ಲಿ ನೀರು ಸೋರುತ್ತಿರುತ್ತದೆ. ಜೊತೆಗೆ ಇದು ಅವರ ದೃಷ್ಟಿಗೂ ಅಡ್ಡಿಯಾಗುತ್ತದೆ. ಇದಕ್ಕೆ ಕಾರಣ ಅವರು ತಮ್ಮ ಕಣ್ಣುಗಳನ್ನು ಒಣ ಹಾಗೂ ಉಪ್ಪಿನಂಶವಿರುವ ಗಾಳಿಗೆ ದೀರ್ಘಕಾಲ ಒಡ್ಡಿಕೊಂಡಿರುವುದು. ಈ ಗಾಳಿಯಿಂದಾಗಿ ಕಣ್ಣಿನಲ್ಲಿ ಧೂಳು ಮತ್ತು ಉಪ್ಪಿನ ಕಣಗಳನ್ನು ಸಂಗ್ರಹಗೊಂಡು, ಕ್ರಮೇಣ ಕಣ್ಣು ನಿರ್ಜಲೀಕರಣಗೊಳ್ಳುತ್ತದೆ. ಮುಂದೆ ಇದು ದೃಷ್ಟಿ ದೋಷಕ್ಕೆ ಕಾರಣವಾಗುತ್ತದೆ. ಗುಜರಾತಿನ ಉಪ್ಪಿನ ಆಗರಗಳಲ್ಲಿ ದುಡಿಯುವ ಅಗರಿಯಾಗಳಲ್ಲಿ ಕಂಡುಬರುವ ಸಾಮಾನ್ಯ ಕಾಯಿಲೆಗಳಲ್ಲಿ ಇದೂ ಒಂದು. ಅಗರಿಯಾ ಎನ್ನುವ ಪದವು ಅಗರ್ ಎನ್ನುವ ಪದದಿಂದ ಬಂದಿದೆ. ಈ ಪದದ ಅರ್ಥ ಉಪ್ಪಿನ ಆಗರ. ಇವು ಕಛ್ ಪ್ರಾಂತ್ಯದ ಲಿಟಲ್ ರಣ್ ಪ್ರದೇಶದಲ್ಲಿ ಸುಮಾರು 5,000 ಚದರ ಕಿಲೋಮೀಟರ್ ಅಳತೆಯಲ್ಲಿ ವ್ಯಾಪಿಸಿವೆ. ರಣ್ ಪ್ರದೇಶವು ತಗ್ಗು ಪ್ರದೇಶದ ಬಟ್ಟಲಿನ ಆಕಾರದ ಭೂಭಾಗವಾಗಿದ್ದು, ಮುಂಗಾರು ಮಳೆಯ ಸಮಯದಲ್ಲಿ ಜೌಗು ಪ್ರದೇಶವಾಗಿ ಬದಲಾಗುತ್ತದೆ, ಆದರೆ ಬೇಸಿಗೆ ಮತ್ತು ಚಳಿಗಾಲದಲ್ಲಿ ಒಣಗಿದ ಮರಭೂಮಿಯಾಗಿರುತ್ತದೆ.
ರಣ್ ತನ್ನ ಮರುಭೂಮಿಯಿಂದ ಜೌಗು ಪ್ರದೇಶಕ್ಕೆ ಬದಲಾಗುವ ವಿಶಿಷ್ಟ ಲಕ್ಷಣದಿಂದಾಗಿ ಅಸಾಧಾರಣ ಜೈವಿಕ ವೈವಿಧ್ಯತೆಯನ್ನು ಹೊಂದಿದೆ. ಇದು ಮಳೆಗಾಲದಲ್ಲಿ ಫ್ಲೆಮಿಂಗೋ ಮತ್ತು ಪೆಲಿಕಾನ್ ರೀತಿಯ ವಲಸೆ ಹಕ್ಕಿಗಳಿಗೆ ಅಭಯಾರಣ್ಯವಾದರೆ, ವರ್ಷಪೂರ್ತಿ ಇಲ್ಲಿ ವಾಸಿಸುವ ಕೃಷ್ಣಮೃಗ, ಕಾಡುಹಂದಿ ಮತ್ತು ಜಿಂಕೆಗಳಿಗೆ ಆಶ್ರಯ ತಾಣವಾಗಿರುತ್ತದೆ. ವನ್ಯಜೀವಿಗಳ ಆಗಮನವು ಮುಂಬರುವ ವರ್ಷದ ಭವಿಷ್ಯವನ್ನು ಸೂಚಿಸುತ್ತದೆ ಎಂಬ ನಂಬಿಕೆಯಿದೆ, ಇದು ಸ್ಥಳೀಯವಾಗಿ ಜನಪ್ರಿಯವಾಗಿರುವ ಈ ಗಾದೆ ಮಾತಿಗೆ ಕಾರಣವಾಗಿದೆ: "ಕಚ್ಮಾ ಕಾಲೆ ಶು ಆವ್ಸೆ, ಎ ಆಜೆಜ್ ದೇಖಾಯ್" [ಕಚ್ನಲ್ಲಿ, ನಾಳೆ ಏನಾಗಲಿದೆ ಎಂಬುದನ್ನು ಇಂದೇ ನೋಡಬಹುದು].
ಒಮ್ಮೆ ನೀರು ಬರಿದಾದ ನಂತರ, ಅಗರಿಯಾಗಳು ಇಲ್ಲಿಗೆ ಬಂದು ಡೇರೆಗಳನ್ನು ಹೂಡಿ ಎಂಟು ತಿಂಗಳುಗಳ ಕಾಲ ನೆಲೆಸುತ್ತಾರೆ. ಭೂಮಿಯಡಿಯಲ್ಲಿನ ಉಪ್ಪುನೀರನ್ನು ಉಪ್ಪನ್ನಾಗಿ ಪರಿವರ್ತಿಸುವ ಕೆಲಸ ಅವರದು. ಇವರು ಭಾರತದ ಒಟ್ಟು ಉಪ್ಪಿನ ಉತ್ಪಾದನೆಯಲ್ಲಿ ಶೇಕಡಾ 75ಕ್ಕಿಂತ ಹೆಚ್ಚಿನ ಪಾಲನ್ನು ಇಲ್ಲಿ ಉತ್ಪಾದಿಸುತ್ತಾರೆ.
ಈ ರಣ್ ಎನ್ನುವುದು ಬಹಳ ಸರಳ ರೇಖೆಯ ಜಗತ್ತು. ಬಿಳಿ ಬಣ್ಣದ ಉಪ್ಪಿನ ಆಗರಗಳ ಚೌಕಟ್ಟುಗಳು, ಚೌಕಾಕಾರದ ಸೌರ ಫಲಕಗಳು ಇಲ್ಲಿನ ಏಕತಾನತೆಯನ್ನುಸಾರಿ ಹೇಳುತ್ತಿರುತ್ತವೆ. ಈ ಏಕತಾನತೆಯೇ ವಿಶಾಲ ಉಪ್ಪಿನ ಆಗರಗಳ ಕಠೋರ ಸ್ವಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಸೂರ್ಯನು ಕರಗಿದ ಬೆಂಕಿಯ ಉಂಡೆಯಂತೆ ಬಿಸಿಲು ಸುರಿಸುತ್ತಿರುತ್ತಾನೆ. ಎಲ್ಲವನ್ನೂ ಭರಿಸಲಾಗದ ಬಿಳಿ ಬೆಳಕಿನಿಂದ ಪ್ರತಿಫಲಿಸುವಂತೆ ಮಾಡುತ್ತಾನೆ. ದಪ್ಪವಾದ ಉಪ್ಪಿನ ಪದರವು ದಿಗಂತದವರೆಗೆ ಹರಡಿರುವುದರಿಂದ ಇದು ಈ ಲೋಕದ್ದಲ್ಲದ ಯಾವುದೋ ವಿಲಕ್ಷಣ ಭೂಪ್ರದೇಶದಂತೆ ಕಾಣುತ್ತದೆ. ಕೆಳಗಿನ ಬಿಳುಪು ಮತ್ತು ಮೇಲಿನ ಬೆಳಕು ಒಂದಕ್ಕೊಂದು ಬೆರೆತು ಕಣ್ಣು ಕುಕ್ಕುವ ತೀಕ್ಷ್ಣತೆ ಹಿಂಸೆಯ ಮಟ್ಟಕ್ಕೆ ತಲುಪುತ್ತದೆ. ಅಲ್ಲಿನ ವಾತಾವರಣದಲ್ಲಿನ ಬಿಸಿ ಪ್ರತಿಯೊಂದರಿಂದಲೂ ನೀರನ್ನು ಹೀರಿಕೊಳ್ಳುತ್ತದೆ: ತುಟಿಗಳು ಒಡೆಯುತ್ತವೆ, ಬಾಯಾರಿಕೆಯಿಂದ ಗಂಟಲು ಉರಿಯುತ್ತದೆ, ಕಣ್ಣುಗಳಲ್ಲಿ ಸದಾ ನೀರು ತುಂಬಿಕೊಳ್ಳುತ್ತದೆ ಮತ್ತು ಪಾದದ ಹಿಮ್ಮಡಿಗಳು ಕೆಳಗಿನ ಒಣಗಿದ ಭೂಮಿಯಂತೆಯೇ ಬಿರುಕು ಬಿಟ್ಟು ನೋವು ನೀಡುತ್ತವೆ.














