ಅದೊಂದು ಮರುಭೂಮಿಯ ಅಂಚಿನಲ್ಲಿರುವ ಹಳ್ಳಿ ಅಥವಾ ನಾವು ಗುಜರಾತಿಯಲ್ಲಿ ಕರೆಯುವಂತೆ ರಣ್. ನನ್ನ ಪಕ್ಕದಲ್ಲಿ ವ್ಯಕ್ತಿಯೊಬ್ಬರು ನಿಂತಿದ್ದಾರೆ: ಮೆಳ್ಳೆಗಣ್ಣು, ಬಿಳಿ ಕೂದಲು, ಒಡೆದ ಪಾದಗಳು, ಬಿಸಿಲಿನ ಭೀಕರತೆಯ ಕುರಿತು ತಿಳಿಸುವ ಚರ್ಮ, ಕೆನ್ನೆ ಮತ್ತುಅದೇ ಬಣ್ಣದ ತುಟಿಗಳು, ಉಪ್ಪಿನಿಂದ ಆವರಿಸಿದ ಬಲವಾದ ದೇಹ. ಒಟ್ಟಿನಲ್ಲಿ ಒಂದು ಕ್ಷಣ ಯಾರದ್ದಾದರೂ ಗಮನ ಸೆಳೆಯುವ ವ್ಯಕ್ತಿ ಅವರು. ಇವರನ್ನು ಅಗರಿಯಾ ಎಂದು ಗುರುತಿಸಲಾಗುತ್ತದೆ. ಅಂದರೆ ಉಪ್ಪಿನ ಆಗರದ ಕೆಲಸಗಾರ.
ಖರಗೋಢಾದ ಈ ಮರುಭೂಮಿಯಲ್ಲಿ ನಿಮಗೆ ಮರಳು ಕಾಣುವುದಿಲ್ಲ. ಇಲ್ಲಿರುವುದು ಉಪ್ಪು ಮಿಶ್ರಿತ ಜೇಡಿಮಣ್ಣು ಮಾತ್ರ. ಮಳೆಗಾಲದಲ್ಲಿ ಇದು ನೀರಿನಡಿ ಮುಳುಗಿರುತ್ತದೆ. ಅದರ ನಂತರ ಬರೀ ಜೇಡಿಮಣ್ಣಿರುತ್ತದೆ. ಇಲ್ಲಿ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಲೇ ಹೋಗುತ್ತದೆ, ನಿಮಗೆ ಅಲ್ಲಿ ಸುತ್ತಲೂ ಕಾಣುವುದು ಜೇಡಿಮಣ್ಣು ಮಾತ್ರ. ಎಷ್ಟು ದೂರ ಕಣ್ಣು ಹಾಯಿಸಿದರೂ ಒಂದೇ ಒಂದು ಮರ ಕಾಣುವುದಿಲ್ಲ. ಅಲ್ಲೊಂದು ಇಲ್ಲೊಂದು ಮುಳ್ಳಿನ ಪೊದೆಗಳಷ್ಟೇ ಕಾಣುತ್ತವೆ. ಈ ಜಾಗದ ವಿವರಣೆಯೇ ಉಸಿರುಗಟ್ಟಿಸುವಂತಿದೆ, ಹಾಗಿದ್ದರೆ ಅಲ್ಲಿ ಕೆಲಸ ಮಾಡುವವರ ಸ್ಥಿತಿ ಹೇಗಿರಬಹುದು ಯೋಚಿಸಿ! ಇಲ್ಲಿ ಎಷ್ಟು ದೂರ ನಡೆದರೂ ನೀವು ಎಲ್ಲಿಗೂ ತಲುಪುವುದಿಲ್ಲ. ನಡೆದಷ್ಟೂ ಮಣ್ಣು. ಆದರೆ ಬೇರೆ ದಾರಿಯಿಲ್ಲ ಈ ದಾರಿಯಲ್ಲಿ ಸಾಗಲೇಬೇಕು.
“ಈ ರಸ್ತೆ ಅಪರಿಚಿತವಲ್ಲ,
ಆದರೂ ಈ ಮರುಭೂಮಿಯಲ್ಲಿ ದಾರಿತಪ್ಪಿದ್ದೇನೆ.
ನಾನು ನನ್ನ ಹಿರಿಯರ ದಾರಿಯಲ್ಲಿ ನಡೆದೆ,
ಆದರೂ ಈ ಮರುಭೂಮಿಯಲ್ಲಿ ದಾರಿತಪ್ಪಿದ್ದೇನೆ.”
ರಣ್ನ 65 ವರ್ಷದ ಕವಿ ಡಿ.ಕೆ. ವಾಣಿಯಾ, ಉಪ್ಪಿನ ಆಗರದ ಕಾರ್ಮಿಕರ ಸಾಂಪ್ರದಾಯಿಕ ಬದುಕಿನ ನೋವನ್ನು ತಮ್ಮ ಕವಿತೆಗಳಲ್ಲಿ ತಂದಿದ್ದಾರೆ. "ಈ ಪ್ರದೇಶದಲ್ಲಿ ಸುಮಾರು 99% ಅಗರಿಯಾಗಳು ಚುಮ್ವಾಲಿಯಾ ಕೋಳಿ ಎಂಬ ಅಧಿಸೂಚಿತ ಬುಡಕಟ್ಟು ಸಮುದಾಯಕ್ಕೆ ಸೇರಿದವರು" ಎಂದು ಅವರು ಹೇಳುತ್ತಾರೆ. ಚುಮ್ವಾಲಿಯಾ ಎಂಬ ಹೆಸರು ಬಂದಿದ್ದು, ಅವರು ಅಹಮದಾಬಾದ್ ಜಿಲ್ಲೆಯ ವಿರಮಗಾಂ ಉಪವಿಭಾಗದ ಈಶಾನ್ಯ ಭಾಗದ ಚುಮ್ವಾಲ್ ಪ್ರದೇಶದಿಂದ ಬಂದವರು ಎನ್ನುವ ಕಾರಣಕ್ಕೆ. ಗುಜರಾತಿಯಲ್ಲಿ ಚುಮ್ವಾಲಿಸ್ ಎಂದರೆ 44. ಇದು ಈ ಪ್ರದೇಶದ 44 ಗ್ರಾಮಗಳನ್ನು ಸೂಚಿಸುತ್ತದೆ. ಈ ಬುಡಕಟ್ಟು ಸಮುದಾಯದ ಸದಸ್ಯರು ಸದಾ ದುಃಖ ಮತ್ತು ನಿರಾಶೆಯಲ್ಲಿ ಬದುಕು ದೂಡುತ್ತಾರೆ; ಇಲ್ಲಿನ ಪ್ರತಿ ಮನೆಯೂ ಒಂದೊಂದು ಹೋರಾಟದ ಕತೆಯನ್ನು ಹೊಂದಿದೆ. ಕೆಲವು ಕತೆಗಳು ಹೃದಯ ವಿದ್ರಾವಕವಾಗಿವೆ. ಇಂತಹ ಸಂಘರ್ಷಮಯ ಜೀವನವನ್ನು ಇಲ್ಲಿ ಬದುಕುವವರು ಅದನ್ನು ಸಹಜವೆಂದು ಒಪ್ಪಿಕೊಂಡಿದ್ದಾರೆ, ಆದರೆ ಬೇರೆಯವರ ಗಮನಕ್ಕೆ ಅದು ಬರುವುದೇ ಅಪರೂಪ.































