“ನಮ್ಮ ತಲೆಮಾರಿನ ಮಹಿಳೆಯರು ಕಲಿತವರಾಗಿದ್ದಿದ್ದರೆ ಇಂದು ಪರಿಸ್ಥಿತಿ ಬೇರೆಯೇ ರೀತಿ ಇರುತ್ತಿತ್ತು” ಎಂದು ಸುರ್ಜೀತ್ ಕೌರ್ ಹೇಳಿದರು. ಅವರು ಕಿಶನ್ ಗಢ್ ಸೇಧಾ ಸಿಂಗ್ ವಾಲಾದ ಜಗಲಿ ಮೇಲೆ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು. ಸುರ್ಜಿತ್ ಕೌರ್ 5ನೇ ತರಗತಿಯಲ್ಲಿರುವಾಗ ಅನಿವಾರ್ಯವಾಗಿ ಶಾಲೆ ಬಿಡಬೇಕಾಗಿ ಬಂತು. ಆಗ ಅವರಿಗೆ ಅವರ ಮೊಮಕ್ಕಳ ವಯಸ್ಸು.
“ಓದು ಮನುಷ್ಯನ ಮೂರನೇ ಕಣ್ಣನ್ನು ತೆರೆಸುತ್ತದೆ” ಎಂದು 63 ವರ್ಷದ ಅವರು ಒತ್ತಿಹೇಳುತ್ತಾರೆ.
ಅವರ ನೆರೆಯವರಾದ 75 ವರ್ಷದ ಜಸ್ವಿಂದರ್ ಕೌರ್ ತಮ್ಮ ಗೆಳತಿಯ ಮಾತಿಗೆ ತಲೆದೂಗುತ್ತಾ ಹೌದೆಂದರು. “ಹೆಂಗಸರು ಮನೆಯಿಂದ ಹೊರಬಿದ್ದಾಗ ಅವರಿಗೆ ಜಗತ್ತಿನ ಬಗ್ಗೆ ತಿಳಿಯುತ್ತದೆ” ಎಂದು ಅವರು ಹೇಳಿದರು.
ಆದರೆ ಅವರಿಗೆ ಶಾಲೆಯಲ್ಲಿ ಕಲಿಯಲು ಸಾಧ್ಯವಾಗದೆ ಹೋಗಿದ್ದನ್ನು ಘಟನೆಯೊಂದು ಕಲಿಸಿತು. 2020-2021ರಲ್ಲಿ ಐತಿಹಾಸಿಕ ರೈತರ ಪ್ರತಿಭಟನೆಯ ಸಮಯದಲ್ಲಿ ದೆಹಲಿ ಗಡಿಯಲ್ಲಿ 13 ತಿಂಗಳ ಕಾಲ ಕ್ಯಾಂಪ್ ಮಾಡಿದ ಊರಿನ 16 ಮಹಿಳೆಯರಲ್ಲಿ ಸುರ್ಜೀತ್ ಮತ್ತು ಜಸ್ವಿಂದರ್ ಸೇರಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಖಾಸಗಿ ವ್ಯಾಪಾರಿಗಳು ಮತ್ತು ಕಾರ್ಪೊರೇಟ್ಗಳಿಗೆ ಲಾಭ ಮಾಡಿಕೊಡುತ್ತದೆ ಎಂಬ ಭಯದಿಂದ ಅವರಂತಹ ಲಕ್ಷಾಂತರ ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಗಳಲ್ಲಿ ಸೇರಿದ್ದರು. ಈ ಭಯಕ್ಕೆ ಕಾರಣವಾಗಿದ್ದ ಕೇಂದ್ರ ಸರ್ಕಾರ ಪರಿಚಯಿಸಿದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಅವರು ಅಲ್ಲಿ ನೆಲೆಯೂರಿದ್ದರು. ಈ ಪ್ರತಿಭಟನೆಗಳಿಗೆ ಸಂಬಂಧಿಸಿದ ಪರಿಯ ವರದಿಗಳನ್ನು ನೀವು ಇಲ್ಲಿ ಓದಬಹುದು.
ಈ ವರದಿಗಾರರು ಕಿಶನ್ ಗಢ್ ಸೇಧಾ ಸಿಂಗ್ ವಾಲಾಗೆ ಭೇಟಿ ನೀಡಿದ ಸಂದರ್ಬದಲ್ಲಿ ಪಂಜಾಬಿನ ಇತರೆಡೆಗಳಂತೆ ಈ ಊರು ಕೊಯ್ಲಿನ ಗಡಿಬಿಡಿಯಲ್ಲಿತ್ತು. ಜೊತಗೆ ಇಲ್ಲಿನ ನಿವಾಸಿಗಳು ಆಡಳಿತ ಪಕ್ಷದ ರೈತ ವಿರೋಧಿ ಕ್ರಮಗಳ ವಿರುದ್ಧ ಪ್ರತಿತಿಭಟನೆಯಲ್ಲೂ ತೊಡಗಿದ್ದ ಕಾರಣ ರಾಜಕೀಯ ವಾತವಾರಣವೂ ಬಿಸಿಯಾಗಿತ್ತು. ಜೂನ್ 1ಕ್ಕೆ ಇಲ್ಲಿ ಮತದಾನ ನಿಗದಿಯಾಗಿತ್ತು.
"ಬಿಜೆಪಿ ಮತ್ತೆ ಗೆದ್ದರೆ, ಅವರು ಮತ್ತೆ ಈ [ಕೃಷಿ] ಕಾನೂನುಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತರುತ್ತಾರೆ" ಎನ್ನುತ್ತಾರೆ ಕಿಶನ್ ಗಢ್ ಸೇಧಾ ಸಿಂಗ್ ವಾಲಾದಲ್ಲಿ 10 ಎಕರೆ ಭೂಮಿಯನ್ನು ಹೊಂದಿರುವ 60 ವರ್ಷದ ಜರ್ನೈಲ್ ಕೌರ್. “ನಾವು ಬುದ್ಧವಂತಿಕೆಯಿಂದ ಮತ ಚಲಾಯಿಸಬೇಕಿದೆ.”
(ಶಿರೋಮಣಿ ಅಕಾಲಿದಳದ ಹರ್ಸಿಮ್ರತ್ ಕೌರ್ ಬಾದಲ್ 2024ರ ಚುನಾವಣೆಯಲ್ಲಿ ಭಟಿಂಡಾ ಲೋಕಸಭಾ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಜೂನ್ 4, 2024ರಂದು ಫಲಿತಾಂಶಗಳು ಹೊರಬಿದ್ದವು.)
















