ಸಾರ್ವಜನಿಕ ಸ್ವಾಮ್ಯದ ಹರಿಯಾಣ ರೋಡ್ ವೇಸ್ ಸಂಸ್ಥೆಯಲ್ಲಿ ಗುಮಾಸ್ತರಾಗಿದ್ದ ಭಗತ್ ರಾಮ್ ಯಾದವ್ ನಿವೃತ್ತರಾದಾ ನಂತರ, ಆರಾಮದ ನಿವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. "ಆದರೆ ನನ್ನೊಳಗೆ ಒಂದು ಜುನೂನ್ [ಉತ್ಸಾಹ] ಉಳಿದಿತ್ತು" ಎಂದು ಪ್ರಶಸ್ತಿ ವಿಜೇತ ಮಾದರಿ ಉದ್ಯೋಗಿಯಾಗಿದ್ದ 73 ವರ್ಷದ ಅವರು ಹೇಳುತ್ತಾರೆ.
ಈ ಉತ್ಸಾಹವು ಅವರನ್ನು ತನ್ನ ತಂದೆಯಾದ ಗುಗನ್ ರಾಮ್ ಅವರು ಬಾಲ್ಯದಲ್ಲಿ ಕಲಿಸಿದ್ದ ಕರಕುಶಲ ಕಲೆಯಲ್ಲಿ ಒಂದು ಕೈ ನೋಡಲು ಪ್ರೇರೇಪಿಸಿತು. ಇದರೊಂದಿಗೆ ಅವರು ಚಾರ್ಪಾಯ್ (ಹಗ್ಗದ ಮಂಚ) ಮತ್ತು ಪಿಡ್ಡಾ (ಹಗ್ಗದ ಸ್ಟೂಲ್) ತಯಾರಿಸಲು ಆರಂಭಿಸಿದರು.
ಅರ್ಧ ಶತಮಾನದ ಹಿಂದೆ, ಕೇವಲ 15 ವರ್ಷದ ಯುವಕರಾಗಿದ್ದ ಭಗತ್ ತನ್ನ ಮೂವರು ಸಹೋದರರೊಂದಿಗೆ ಕುಳಿತು, ಅವರ ತಂದೆ ತಮ್ಮ ಮನೆಗೆ ಚಾರ್ಪಾಯಿಗಳನ್ನು ಕೌಶಲದಿಂದ ತಯಾರಿಸುವುದನ್ನು ನೋಡುವ ಮೂಲಕ ಅವರ ಕಲಿಕೆ ಪ್ರಾರಂಭವಾಯಿತು. ಅವರ ತಂದೆ 125 ಎಕರೆ ಭೂಮಿಯನ್ನು ಹೊಂದಿದ್ದರು ಮತ್ತು ಗೋಧಿ ಕೊಯ್ಲಿನ ನಂತರ ಬೇಸಿಗೆಯ ತಿಂಗಳುಗಳನ್ನು ಈ ಗಟ್ಟಿಮುಟ್ಟಾದ ಮಂಚಗಳನ್ನು ತಯಾರಿಸಲು ಮೀಸಲಿಟ್ಟಿದ್ದರು. ಅವರು ಕೈಯಿಂದ ತಯಾರಿಸಿದ ಸುನ್ ಸೆಣಬು (ಕ್ರೊಟಾಲೇರಿಯಾ ಜುನ್ಸಿಯಾ), ಸೂಟ್ (ಹತ್ತಿ ಹಗ್ಗ) ಮತ್ತು ಸಾಲ್ (ಶೋರಿಯಾ ರೊಬಸ್ಟಾ) ಮತ್ತು ಶೀಶಮ್ (ನಾರ್ತ್ ಇಂಡಿಯನ್ ರೋಸ್ ವುಡ್) ಮರಗಳನ್ನು ಈ ಕೆಲಸದಲ್ಲಿ ಬಳಸುತ್ತಿದ್ದರು. ಅವರ ಕೆಲಸದ ಸ್ಥಳವೆಂದರೆ ಅವರ ಬೈಠಕ್, ತೆರೆದ ಕೋಣೆ, ಅಲ್ಲಿ ಜನರು ಮತ್ತು ಜಾನುವಾರುಗಳು ದಿನದ ಹೆಚ್ಚಿನ ಭಾಗವನ್ನು ಕಳೆಯುತ್ತಿದ್ದರು.
ಭಗತ್ ರಾಮ್ ತನ್ನ ತಂದೆಯನ್ನು "ಏಕ್ ನಂಬರ್ ಕಾ ಆರಿ" ಎಂದು ನೆನಪಿಸಿಕೊಳ್ಳುತ್ತಾರೆ - ಒಬ್ಬ ಮಹಾನ್ ಕುಶಲಕರ್ಮಿ - ಅವರು ತಮ್ಮ ಉಪಕರಣಗಳ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. "ಚಾರ್ಪಾಯಿಗಳನ್ನು ತಯಾರಿಸುವ ಕೌಶಲವನ್ನು ಕಲಿಯುವ ವಿಷಯದಲ್ಲಿ ನನ್ನ ತಂದೆ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. "ಇದನ್ನು ಕಲಿಯಿರಿ; ಇದು ಮುಂದೆ ನಿಮಗೆ ಸಹಾಯಕ್ಕೆ ಬರುತ್ತದೆ" ಎಂದು ಅವರು ಹೇಳುತ್ತಿದ್ದ ದಿನಗಳನ್ನು ಭಗತ್ ರಾಮ್ ನೆನಪಿಸಿಕೊಳ್ಳುತ್ತಾರೆ.
ಆದರೆ ಚಿಕ್ಕ ಹುಡುಗರಾಗಿದ್ದ ಅವರು ಫುಟ್ಬಾಲ್, ಹಾಕಿ ಅಥವಾ ಕಬಡ್ಡಿ ಆಡಲು ಓಡಿಹೋಗುತ್ತಿದ್ದರು, ಮಂಚ ತಯಾರಿಸುವುದು ಬೇಸರದ ಕೆಲಸವೆನ್ನಿಸಿ ಅದರಿಂದ ತಪ್ಪಿಸಿಕೊಳ್ಳುತ್ತಿದ್ದರು. "ನಮ್ಮ ತಂದೆ ನಮ್ಮನ್ನು ಬೈಯುತ್ತಿದ್ದರು, ಹೊಡೆಯುತ್ತಿದ್ದರು, ಆದರೆ ನಾವು ತಲೆಕೆಡಿಸಿಕೊಳ್ಳಲಿಲ್ಲ" ಎಂದು ಅವರು ಹೇಳುತ್ತಾರೆ. "ನಾವು ಕೆಲಸ ಹುಡುಕಿಕೊಳ್ಳಲು ಹೆಚ್ಚು ಆಸಕ್ತಿ ಹೊಂದಿದ್ದೆವು. ನಮ್ಮ ತಂದೆಯ ಭಯದಿಂದಷ್ಟೇ ನಾವು ಈ ಕೌಶಲವನ್ನು ಕಲಿತೆವು, ನಮಗೆ ಗೊಂದಲವಾದಾಗ ಅವರ ಬಳಿ ವಿನ್ಯಾಸವನ್ನು ರಚಿಸಲು ಹಗ್ಗವನ್ನು ಹೇಗೆ ಸರಿಸುವುದು ಎಂದು ಕೇಳಿ ತಿಳಿದುಕೊಳ್ಳುತ್ತಿದ್ದೆವು."
























