ಅಮರಜೀತ್ ಕೌರ್ ಒಂದಷ್ಟು ದೂರ ನಡೆದು ನಿಂತುಬಿಡುತ್ತಾರೆ, ಅವರ ತಲೆಯ ಮೇಲಿದ್ದ ತಸ್ಲಾ - ಲೋಹದ ಪಾತ್ರೆ - ಕೆಲವು ಕ್ಷಣಗಳ ಕಾಲ ಬೀಳುವ ರೀತಿ ಅತ್ತಿತ್ತ ಅಲುಗಾಡುತ್ತದೆ. ಮತ್ತೆ ಸುಧಾರಿಸಿಕೊಂಡ ಅವರು ಎಮ್ಮೆ ಗೊಬ್ಬರವನ್ನು ಸುರಿಯುವ ಸ್ಥಳವಾದ ರೂಡಿ (ಗೊಬ್ಬರದ ಗುಂಡಿ) ಕಡೆ ನಡೆಯತೊಡಗಿದರು. ಮೊದಲೆಲ್ಲ ಅವರು ತನ್ನ ತಲೆಯ ಮೇಲೆ 10-12 ಕೇಜಿಗಳಷ್ಟು ಭಾರವನ್ನು ಹೊತ್ತು ನಡೆಯುತ್ತಿದ್ದರು. ಆದರೆ ಈಗ ಅವರಿಗೆ 72 ವರ್ಷ. ಈ ವಯಸ್ಸಿನಲ್ಲಿ ಅವರಿಗೆ ಅಷ್ಟು ಭಾರ ಹೊರುವುದು ಕಷ್ಟ. ಇಂದು ಅವರಿಗೆ ತನ್ನ ತಲೆ ಮೇಲಿರುವ ಗೊಬ್ಬರಕ್ಕಿಂತ ಎದೆಯಲ್ಲಿನ ನೋವೇ ಹೆಚ್ಚು ಭಾರವೆನ್ನಿಸುತ್ತಿತ್ತು.
ಅವರ ಕುಟುಂಬದ ಕುರಿತು ನಾನು ಕೇಳಿದ ಮುಗ್ಧ ಪ್ರಶ್ನೆಯೊಂದು ಅಮರಜೀತ್ ಅವರನ್ನು 24 ವರ್ಷದ ಹಿಂದಿನ ನೆನಪುಗಳ ಸುಳಿಯೊಳಗೆ ಸೆಳೆದೊಯ್ಯಿತು. “ಉನ್ಹಾನ್ ದಸ್ಯ ಪಟ್ಟಿ ಮೋಡ್ ತೇ ತೇರಾ ಮುಂಡಾ ಮರ್ ಗಯಾ ಆಕ್ಸಿಡೆಂಟ್ ನಾಲ್ [ʼನಿನ್ನ ಮಗ ಪಟ್ಟಿ ಬಳಿಯ ತಿರುವಿನ ತೀರಿಕೊಂಡʼ ಎಂದು ಹೇಳಿದರು]” ಎನ್ನುತ್ತಾ ಅವರು ನೆಲದ ಮೇಲಿದ್ದ ಇನ್ನಷ್ಟು ಸೆಗಣಿಯನ್ನು ಬಾಚುವ ಸಲುವಾಗಿ ಕುಳಿತುಕೊಂಡರು. ಅವರ ಕೈಗಳು ಯಾಂತ್ರಿಕವಾಗಿ ಚಲಿಸಿದವು. ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕುಳಿತಾಗ ಅವರ ಮೊಣಕಾಲುಗಳು ಸದ್ದು ಮಾಡತೊಡಗಿದವು. “ಅವನು ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ. ಅವನಿಗೆ ಆಗ 18 ವರ್ಷವಷ್ಟೇ ಆಗಿತ್ತು.” ಇದಾಗಿ ಐದು ವರ್ಷಗಳ ನಂತರ ಅವರು ತಮ್ಮ ಎರಡನೇ ಮಗನನ್ನು ಕಳೆದುಕೊಂಡರು. ಆ ಮಗನಿಗೆ ಸಾಯುವಾಗ ಪ್ರಾಯ 18 ವರ್ಷ.
ಈ ಹುಡುಗರ ತಂದೆ 36 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಮದ್ಯವ್ಯಸನಿಯಾಗಿದ್ದ ಅವರು ತೀರಿಕೊಳ್ಳುವಾಗ ದೊಡ್ಡವನಿಗೆ ಆರು ವರ್ಷವಾದರೆ ಚಿಕ್ಕವನಿಗೆ ನಾಲ್ಕು. ಮದುವೆಯಾದಾಗಿನಿಂದಲೂ ಅಮರಜೀತ್ ಈ ಸಗಣಿ ಸಂಗ್ರಹದ (ಗೋಹಾ ಕುರಾ) ಕೆಲಸವನ್ನೇ ಮಾಡಿಕೊಂಡು ಬಂದಿದ್ದಾರೆ. ಇದೇ ಕೆಲಸದ ಮೂಲಕ ಅವರು ತನ್ನ ಇಬ್ಬರು ಗಂಡುಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳನ್ನು (ಈಗ ಮದುವೆಯಾಗಿದೆ) ಸಾಕಿ ಸಲಹಿದ್ದಾರೆ. ಅವರು ಬರಿಗೈಯಲ್ಲಿ ಮರುಕಳಿಸಿದ ದುಃಖದೊಂದಿಗೆ ಸಗಣಿಯನ್ನು ಬಾಚಿ ಬಾಚಿ ಹಾಕತೊಡಗಿದರು. ನಿಟ್ಟುಸಿರು ಬಿಡುತ್ತಾ ಸಗಣಿ ತುಂಬಿದ ಪಾತ್ರೆಯನ್ನು ಎತ್ತಿಕೊಂಡ ಅವರು ಸುಮಾರು 100 ಮೀಟರ್ ದೂರದಲ್ಲಿರುವ ಗೊಬ್ಬರದ ಗುಂಡಿಯ ಕಡೆಯ ಕಡೆಗೆ ವಾಲಾಡುತ್ತಾ ಹೊರಟರು. ಈ ದಿನ ಬೆಳಗ್ಗೆ ಅವರು ಈ ಕೆಲಸ ಶುರು ಮಾಡಿದ್ದು, ಇದುವರೆಗೆ 20 ಬಾರಿ ಸಗಣಿ ಎತ್ತಿ ಹಾಕಿ ಬಂದಿದ್ದಾರೆ. ಇವರು ಪಂಜಾಬಿನಲ್ಲಿ ಪರಿಶಿಷ್ಟ ಜಾತಿಗಳಡಿ ಪಟ್ಟಿ ಮಾಡಲಾಗಿರುವ ಮೆಹ್ರೆ ಸಿಖ್ ಸಮುದಾಯಕ್ಕೆ ಸೇರಿದವರು. ಸಣ್ಣ ಭೂಮಿಯ ತುಂಡನ್ನೂ ಹೊಂದಿರದ ಈ ಹಿರಿಯ ಮಹಿಳೆ ಹೊಟ್ಟೆಪಾಡಿಗಾಗಿ ಪಟ್ಟಿ ಪಟ್ಟಣದ ಏಳು ಮನೆಗಳಲ್ಲಿ ಸಗಣಿ ಬಾಚುವ ಕೆಲಸವನ್ನು ಮಾಡುತ್ತಾರೆ.
“ಜಡೋಂ ಮೇ ಡಂಗರಾಂ ದ ಗೋಹಾ ಚುಕ್ಕಣ ಥಲ್ಲೇ ಬೆಹ್ಂದಿ ಆಂ ತಾಂ ಓಹ್ ಅಕ್ಸರ್ ಮೇರೇ ಸಿರ್ ತೇ ಹೀ ಮೂತ್ ದಿಂದಿಯಾಂ ನೇ. ಮೈಂ ರೋಜ್ ರೋಜ್ ಸಿರ್ ನ್ಹೀ ಧೋ ಸ್ಕ್ದಿ ತೇ ಶ್ಯಾಂಪೂ ಸಾಬಣ್ ದಾ ಖರ್ಚಾ ವೀ ನ್ಹೀ ಚುಕ್ಕ ಸ್ಕ್ದಿ. ಇಸ್ ಲಯಿ ಆಹ್ ಲಿಫಾಫಾ ಪಾ ಲೇನಿ ಆಂ [ಸಗಣಿ ಎತ್ತಲೆಂದು ಕುಳಿತರೆ ಎಮ್ಮೆಗಳು ತಲೆಯ ಮೇಲೆಯೇ ಗಂಜಲ ಹುಯ್ದುಬಿಡುತ್ತವೆ. ಶಾಂಪೂ ಅಥವಾ ಸೋಪಿನ ಖರ್ಚು ಭರಿಸಲು ಸಾಧ್ಯವಿಲ್ಲದ ಕಾರಣ ದಿನಾ ತಲೆ ಸ್ನಾನ ಮಾಡುವುದೂ ಕಷ್ಟ. ಹೀಗಾಗಿ ತಲೆಗೆ ಈ ಪ್ಲಾಸ್ಟಿಕ್ ಕವರ್ ಹಾಕಿಕೊಳ್ಳುತ್ತೇನೆ]” ಎನ್ನುತ್ತಾ ಅಮರಜೀತ್ ತನ್ನ ಕೈಯಲ್ಲಿದ್ದ ಕಪ್ಪು ಪ್ಲಾಸ್ಟಿಕ್ ಚೀಲವನ್ನು ತೋರಿಸಿದರು. ಅವರು ಆಗಷ್ಟೇ ಆ ದಿನದ ಮೊದಲ ಮನೆಯ ಕೆಲಸವನ್ನು ಮುಗಿಸಿದ್ದರು. ಅದು 10 ಎಮ್ಮೆಗಳನ್ನು ಹೊಂದಿರುವ ರೈತನೊಬ್ಬನ ಮನೆ. ಅಮರಜೀತ್ ಅಲ್ಲಿಂದ ಇನ್ನೊಂದು ಮನೆಯತ್ತ ನಡೆಯತೊಗಿದರು.





