“ರಾಯಲ್ ಬೆಂಗಾಲ್ ಹುಲಿ ಊರೊಳಗೆ ಬಂದರೆ ಇಡೀ ಊರಿಗೆ ಊರೇ ಅಸ್ತವ್ಯಸ್ತವಾಗುತ್ತದೆ,” ಎಂದು ಲುತ್ಫೋರ್ ಮೊಲ್ಲಾ ಹೇಳುತ್ತಾರೆ.
ಹುಲಿ ಊರೊಳಗೆ ಬಂದ ಸುದ್ದಿ ಹರಡುತ್ತಿದ್ದಂತೆ, ಅದನ್ನು ಓಡಿಸಲು ಲುತ್ಫೋರ್ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸುತ್ತಾರೆ. ಕಳೆದ ನಾಲ್ಕೈದು ವರ್ಷಗಳಿಂದ ಸುಂದರ್ಬನ್ನ ಕುಲ್ತೊಲಿ ಬ್ಲಾಕ್ನ ಗ್ರಾಮಗಳನ್ನು ಒಳಗೊಂಡಿರುವ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ರಾಜ್ಯ ಅರಣ್ಯ ಇಲಾಖೆ ರಚಿಸಿದ ಎರಡು ‘ತ್ವರಿತ ಪ್ರತಿಕ್ರಿಯಾ ತಂಡಗಳಲ್ಲಿʼ ಒಂದರ ಜವಾಬ್ದಾರಿಯನ್ನು ಲುತ್ಫೋರ್ ವಹಿಸಿಕೊಂಡಿದ್ದಾರೆ.
ಹುಲಿ ಓಡಿಸುವ ತಂಡದ ಈ ನಾಯಕನ ಬಗ್ಗೆ ನಮಗೆ ತಿಳಿದ ನಂತರ, ನಾವು ಮೈಪಿಟ್ ಕರಾವಳಿ ಪೊಲೀಸ್ ಠಾಣೆಯ ಅಡಿಯಲ್ಲಿ ಬರುವ ಅವರ ಗ್ರಾಮವಾದ ಪುರ್ಬಾ ಗುರ್ಗುರಿಯಾಗೆ ಹೋದೆವು.
ಡಾಂಬಾರು ಕಾಣದ ಆ ಮಣ್ಣಿನ ರಸ್ತೆಯ ತುಂಬಾ ಕೆಸರಿನಿಂದ ಉಂಟಾದ ಉಬ್ಬುತಗ್ಗುಗಳಿದ್ದವು. ರಸ್ತೆಯ ಒಂದು ಬದಿಯಲ್ಲಿ ಆಳವಾದ ಮಾಟ್ಲಾ ನದಿಯ ಕಪ್ಪು ನೀರು ಹರಿಯುತ್ತಿತ್ತು. ಅರ್ಧ ಗಂಟೆ ನಡೆದರೂ ಮಾಟ್ಲಾ ನದಿಯಲ್ಲಿ ಒಂದೇ ಒಂದು ದೋಣಿ ನಮ್ಮ ಕಣ್ಣಿಗೆ ಬೀಳಲಿಲ್ಲ. ನದಿಯ ಇನ್ನೊಂದು ಬದಿಯಲ್ಲಿ ವಿಶಾಲವಾಗಿ ಹರಡಿರುವ ದಟ್ಟ ಕಾಡಿದೆ.
ಸುಮಾರು 5,600 ಜನಸಂಖ್ಯೆ (ಜನಗಣತಿ 2011) ಇರುವ ಪುರ್ಬಾ ಗುರ್ಗುರಿಯಾದ ಹೆಚ್ಚಿನ ನಿವಾಸಿಗಳು ಹಿಂದೂಗಳು, ಆದರೆ ಮುಸ್ಲೀಮರೂ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. ಭುವನೇಶ್ವರಿ ಪಂಚಾಯತ್ ವ್ಯಾಪ್ತಿಗೆ ಬರುವ ಈ ಗ್ರಾಮದ ಎರಡು ಪ್ರಮುಖ ಜೀವನೋಪಾಯಗಳೆಂದರೆ ಮೀನುಗಾರಿಕೆ ಮತ್ತು ಕೃಷಿ.
ಲುತ್ಫೋರ್ ಅವರು ವಾಸಿಸುವ ಬಾಟ್ ತೋಲಾ ಪ್ರದೇಶಕ್ಕೆ ಬಂದು ಅವರ ಮನೆ ಎಲ್ಲಿದೆ ಎಂದು ಸುತ್ತಮುತ್ತಲಿನ ಜನರಲ್ಲಿ ವಿಚಾರಿಸಿದೆವು. ಕೊನೆಗೆ ಹದಿಹರೆಯದ ಯುವಕನೊಬ್ಬ ಏಡಿಗಳಿರುವ ಚೀಲವೊಂದನ್ನು ಹಿಡಿದುಕೊಂಡು ಬಾಟ್ ತೋಲಾ ಸಮೀಪದ ಕಾಳಿ ಮಂದಿರದ ಅಂಗಳದಲ್ಲಿ ನಿಂತಿರುವುದನ್ನು ನೋಡಿದೆವು. ಅವನು ನಮ್ಮನ್ನು ನೋಡಿದವನೇ: “ನೀವು ಕೊಲ್ಕತ್ತಾದಿಂದ ಬಂದಿದ್ದೀರಾ? ನಾನು ಲುತ್ಫೋರ್ ಅವರ ದೊಡ್ಡ ಮಗ. ನಿಮಗಾಗಿಯೇ ಕಾಯುತ್ತಿದ್ದೆ,” ಎಂದು ಪರಿಚಯಿಸಿಕೊಂಡ.
ಲುತ್ಫೋರ್ ಅವರ ಮನೆ ಅಲ್ಲೇ ಸಮೀಪದಲ್ಲಿತ್ತು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸುಮಾರು 1,000 ಚದರ ಅಡಿ ಭೂಮಿಯಲ್ಲಿ ಸಾಧಾರಣ ಇಟ್ಟಿಗೆಗಳಿಂದ ನಿರ್ಮಿಸಿದ ಒಂದು ಅಂತಸ್ತಿನ ಮನೆ ಅದು. ಆ ಮೂರು ಕೋಣೆಗಳ ಮನೆಗೆ ವರಾಂಡವೂ ಇದ್ದು, ಕಾಂಕ್ರೀಟ್ ಛಾವಣಿ ಹಾಕಲಾಗಿತ್ತು. ಮನೆಯ ದೊಡ್ಡ ಕೋಣೆಗೆ ಕಾಲಿಟ್ಟಂತೆ ಹಾಸಿಗೆಯ ಮೇಲೆ ಮಲಗಿರುವ ಮಾನವಾಕೃತಿಯಿಂದ “ಏನು ಹೇಳಲಿ? ಕೆಲವು ದಿನಗಳಿಂದ ಈ ಜ್ವರ ವಕ್ಕರಿಸಿಕೊಂಡಿದೆ,” ಎಂಬ ನರಳುವಿಕೆಯ ದನಿಯೊಂದು ಕೇಳಿಬಂತು, ಇವರಾ ಲುತ್ಫೋರ್ ಮೊಲ್ಲಾ? ಈ ಸಣಕಲು ಮನುಷ್ಯ!








