ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎನ್ನುವುದು ತಿಳಿಯುವ ಹೊತ್ತಿಗೆ ಅವರ ಹೆಸರಿನಲ್ಲಿ ಒಂದು ಬ್ಯಾಂಕ್ ಅಕೌಂಟ್ ಕೂಡ ಇದ್ದಿರಲಿಲ್ಲ. ಆದಿವಾಸಿ ವಸತಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಅವರ ಪತ್ನಿ 15,000 ರೂಪಾಯಿಗಳನ್ನು ಸಾಲವಾಗಿ ನೀಡಿದರು. ಪಕ್ಷದ ಕಾರ್ಯಕರ್ತರು ತಮ್ಮಿಂದಾದಷ್ಟು ಹಣವನ್ನು ಸಂಗ್ರಹಿಸಿ ಕೊಟ್ಟರು. ಹೀಗೆ, ಚುನಾವಣಾ ನಾಮಪತ್ರ ಸಲ್ಲಿಸುವ ಮುನ್ನ ಅವರು ಒಟ್ಟು 52,000 ರೂಪಾಯಿಗಳನ್ನು ಹೊಂದಿಸುವಲ್ಲಿ ಯಶಸ್ವಿಯಾದರು.
ಪರಿಸ್ಥಿತಿ ವಿನೋದ್ ನಿಕೋಲೆ ಅವರ ಪರವಾಗಿರಲಿಲ್ಲ. ಅವರ ಎದುರಾಳಿ, ದಹನು ಕ್ಷೇತ್ರದಿಂದ 2014ರಲ್ಲಿ 16,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದ ಹಾಲಿ ಶಾಸಕ ಧನಾರೆ ಪಸ್ಕಲ್ ಜನ್ಯಾ. ಅಷ್ಟೇ ಅಲ್ಲದೆ, ಅವರು ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. ಆ ವರ್ಷದ ವಿಧಾನಸಭಾ ಚುನಾವಣೆಯಲ್ಲಿ 82 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾಗಿ ಆ ಪಕ್ಷವೇ ಅಧಿಕೃತವಾಗಿ ಒಪ್ಪಿಕೊಂಡಿತ್ತು.
ಆದರೆ ಫಲಿತಾಂಶ ಬಂದಾಗ ಹಣವೆನ್ನುವುದು ಒಂದು ವಿಷಯವೇ ಆಗಿರಲಿಲ್ಲ. ನಿಕೋಲೆ ಸುಮಾರು 5,000ಕ್ಕಿಂತ ಒಂದಷ್ಟು ಕಡಿಮೆ ಮತಗಳ ಅಂತರದಿಂದ ಜಯಗಳಿಸಿದ್ದರು.
"ಸಹೋದರ ಸಂಬಂಧಿಯೊಬ್ಬರು ನನಗೆ ಸುಮಾರು 70,000 ರೂಪಾಯಿಗಳನ್ನು ಸಾಲವಾಗಿ ಕೊಟ್ಟಿದ್ದ. ಚುನಾವಣೆಗೂ ಮೊದಲು ನನ್ನ ಬಳಿಯಿದ್ದ ಹಣವೆಂದರೆ ಆ 70,000 ರೂಪಾಯಿ ಮಾತ್ರ" ಎಂದು ಅವರು ತುಸು ಕಹಿಯೆನ್ನಿಸುವ ನಗೆಯೊಂದಿಗೆ ಹೇಳಿದರು. ಅವರು ನಮ್ಮೊಂದಿಗೆ ದಹನು ಪಟ್ಟಣದಲ್ಲಿನ ತಮ್ಮ ಕಚೇರಿಯ ಹೊರಗೆ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದರು. ಬುಡಕಟ್ಟು ಜನರೇ ದೊಡ್ಡ ಸಂಖ್ಯೆಯಲ್ಲಿರುವ ಈ ದಹನು ಪಟ್ಟಣ ಪಾಲ್ಘರ್ ಜಿಲ್ಲೆಗೆ ಸೇರಿದೆ.
ಇದನ್ನೆಲ್ಲ ಕೇಳಿದರೆ ಯಾವುದೋ ಕಾಲದ ಭಾರತದ ಕತೆಯಂತೆ ಕೇಳಬಹುದು. ಆದರೆ ಇದು ಒಂದು ಬಾರಿಯಲ್ಲ ಎರಡು ಬಾರಿ ಇದೇ ಭಾರತದಲ್ಲಿ ನಡೆದಿದೆ. 2019ರಲ್ಲಿ ಮತ್ತೆ 2024ರಲ್ಲಿ ಈ ಘಟನೆ ನಡೆದಿದೆ. ಅದರಲ್ಲೂ ಬಿಜೆಪಿ ಒಂದೊಂದು ಚುನಾವಣೆಯಲ್ಲೂ ಅಬ್ಬರದ ಪ್ರಚಾರ ಹಾಗೂ ಹಣದ ಹೊಳೆ ಹರಿಸಿ ವಿರೋಧ ಪಕ್ಷಗಳನ್ನು ಮಣಿಸುತ್ತಿರುವ ಈ ಸಮಯದಲ್ಲಿ. ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) 48 ವರ್ಷದ ವಿನೋದ್ ನಿಕೋಲೆ ಅವರು ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಇದನ್ನು ಸಾಧ್ಯವಾಗಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ, ಮಹಾರಾಷ್ಟ್ರದ ಶಾಸಕರಲ್ಲಿ ಶೇಕಡಾ 93ರಷ್ಟು ಮಂದಿ ಕೋಟ್ಯಧಿಪತಿಗಳು. ಜೊತೆಗೆ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ (ಜಿಎಸ್ಡಿಪಿ) ದೃಷ್ಟಿಯಿಂದ ಮಹಾರಾಷ್ಟ್ರ ದೇಶದ ಅತ್ಯಂತ ಶ್ರೀಮಂತ ರಾಜ್ಯವಾಗಿ ಗುರುತಿಸಿಕೊಂಡಿದೆ.
ದಹನು ಪಟ್ಟಣದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ವಾಕಿ ಗ್ರಾಮದವರಾದ ನಿಕೋಲೆಯವರ ತಂದೆ ತಾಯಿ ಇಟ್ಟಿಗೆ ಭಟ್ಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಇವರು ಮಹಾರಾಷ್ಟ್ರದ ಅತ್ಯಂತ ಬಡ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ದೇಶದಲ್ಲೇ ಅತಿ ಹೆಚ್ಚು ಚುನಾವಣಾ ವೆಚ್ಚ ಮಾಡುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ನಿಕೋಲೆಯವರ ಬಳಿ ಮತದಾನಕ್ಕೆ ಮೊದಲು ಹಂಚು ಸಾಕಾಗುವಷ್ಟು ಹಣವಾಗಲಿ, ಅಜೆಂಡಾವನ್ನು ಪ್ರಚಾರ ಮಾಡಲು ದೊಡ್ಡ ಸಾಮಾಜಿಕ ಮಾಧ್ಯಮ ತಂಡವನ್ನು ನೇಮಿಸಿಕೊಳ್ಳುವುದಾಗಲಿ ಸಾಧ್ಯವಿರಲಿಲ್ಲ. ಅವರ ಬಂಡವಾಳವೆಂದರೆ ಜನರೊಂದಿಗೆ ಬೆರೆತಿರುವುದು, ತಳಮಟ್ಟದ ಚಳುವಳಿಗಳಲ್ಲಿ ಭಾಗವಹಿಸುವುದು ಮತ್ತು ಮುಖ್ಯವಾಗಿ ಬುಡಕಟ್ಟು ರೈತರು ಹಾಗೂ ಕಾರ್ಮಿಕರಂತಹ ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಿರುವುದು.









