“ಮನೆಯ ನಲ್ಲಿಯಲ್ಲಿ ಒಮ್ಮೊಮ್ಮೆ ಹಳದಿ, ಕೆಲವೊಮ್ಮೆ ನೀಲಿ, ಕಪ್ಪು ಮತ್ತು ನೊರೆ ನೊರೆ ನೀರು ಬರುತ್ತದೆ. ಚರಂಡಿ ನೀರಿನಂತೆ ಗಬ್ಬು ವಾಸನೆ ಬರುತ್ತದೆ. ಆರು ತಿಂಗಳಿಂದ ಇದೇ ನೀರನ್ನು ಬಳಸುತ್ತಿದ್ದೇವೆ,” ಎಂದು ಪಶ್ಚಿಮ ದೆಹಲಿಯ ಪೀರಗರಿ ಗ್ರಾಮದ ನಿವಾಸಿ, 22 ವರ್ಷ ಪ್ರಾಯದ ರೋಷನ್ ಹೇಳುತ್ತಾರೆ. ಮೂರು ದಿನ ಇವರು ಹೊಟ್ಟೆ ನೋವಿನಿಂದ ಮತ್ತು ಜ್ವರದಿಂದ ಬಳಲಿ ಕಂಗಾಲಾಗಿದ್ದರು. ಇವರ ಮನೆಯಲ್ಲಿರುವ ನಾಲ್ಕು ಜನರಲ್ಲಿ ಯಾರಾದರೊಬ್ಬರು ಕಾಯಿಲೆ ಬೀಳುತ್ತಲೇ ಇದ್ದಾರೆ.
ಒಂದು ಕಾಲದಲ್ಲಿ ರಾಷ್ಟ್ರ ರಾಜಧಾನಿ ನಗರದ ಹೊರವಲಯದ ಒಂದು ಊರಾಗಿದ್ದ ಪೀರಗರಿ ಈಗ ನಗರೀಕರಣಕ್ಕೆ ಒಳಗಾಗಿದೆ. ಇಲ್ಲಿನ ಡಜನ್ ಗಟ್ಟಲೆ ಜನರು ಕಲುಷಿತ ನಲ್ಲಿ ನೀರನ್ನು ಕುಡಿದು ಜಠರಗರುಳಿನ ಸಮಸ್ಯೆ, ಜ್ವರದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 2024 ರ ಜೂನ್ನಿಂದ ನಗರಸಭೆಯು ಈ ಪ್ರದೇಶದ ಸರಿಸುಮಾರು ಒಂದು ಸಾವಿರ ಮನೆಗಳಿಗೆ ದುರ್ನಾತ ಬೀರುವ ನೀರನ್ನು ಪೂರೈಸುತ್ತಿದೆ.
ಪೀರಗರಿಯ ಗಲ್ಲಿಗಲ್ಲಿಗಳಲ್ಲಿ ಹತ್ತಾರು ಸಣ್ಣ ಮತ್ತು ದೊಡ್ಡ ಕಾರ್ಖಾನೆಗಳಿವೆ. ಸುಮಾರು ಎರಡು ದಶಕಗಳ ಹಿಂದೆ ಪ್ಲಾಸ್ಟಿಕ್ ಉತ್ಪನ್ನಗಳ ಕೆಲವು ಫ್ಯಾಕ್ಟರಿಗಳು ಮಾತ್ರ ಇಲ್ಲಿದ್ದವು ಎಂದು ಸ್ಥಳೀಯರು ಹೇಳುತ್ತಾರೆ. ಆಮೇಲೆ ಬಣ್ಣಗಳು, ಶೂಗಳು, ಇಲೆಕ್ಟ್ರಾನಿಕ್ ಮತ್ತು ಮೋಟಾರು ಸಾಧನಗಳನ್ನು ತಯಾರಿಸುವ ಕಾರ್ಖಾನೆಗಳು ಇಲ್ಲಿಗೆ ಬಂದವು.
ರೋಷನ್ ಅವರ ತಂದೆ ಬಿಸ್ವನಾಥ್ ಇಂತಹ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕ. ಹದಿನೈದು ವರ್ಷಗಳ ಹಿಂದೆ ಬಿಹಾರದಿಂದ ಇಲ್ಲಿಗೆ ವಲಸೆ ಬಂದ ಇವರಿಗೆ ಪೀರಗರಿ ಅನ್ನ, ನೀರು ಮತ್ತು ಉದ್ಯೋಗ ಕೊಟ್ಟು ಬದುಕಲು ಒಂದು ನೆಲೆಯನ್ನು ನೀಡಿತು.
ಬಿಸ್ವನಾಥ್ರವರ ಮನೆಯವರಂತೆ ಪೀರಗರಿಯಲ್ಲಿರುವ ಎಲ್ಲಾ ಕುಟುಂಬಗಳು ತಮ್ಮ ತಿಂಗಳ ದುಡಿಮೆಯ ಶೇಕಡಾ 10 ನ್ನು, ಅಂದರೆ 100 ರುಪಾಯಿಗಳನ್ನು ಶುದ್ಧ ಕುಡಿಯುವ ನೀರಿಗಾಗಿ ಖರ್ಚು ಮಾಡುತ್ತಾರೆ.














