"ದಾಖಲೆಗಳ ಪ್ರಕಾರ ಇಲ್ಲಿ ನೇಕಾರರಿಗೇನು ಕೊರತೆಯಿಲ್ಲ, ಆದರೆ ನಾನು ಸತ್ತರೆ ಆ ವೃತ್ತಿಯೇ [ಪ್ರಾಯೋಗಿಕವಾಗಿ] ಸತ್ತಂತೆ," ಎಂದು ಹೇಳುತ್ತಾ ತಮ್ಮ ಬಿದಿರಿನ ಗುಡಿಸಲಿನಲ್ಲಿ ಕೈಮಗ್ಗದಲ್ಲಿ ನೇಯ್ಗೆ ಮಾಡುತ್ತಿದ್ದ ರೂಪ್ಚಂದ್ ದೇಬನಾಥ್ ಅವರು ವಿರಾಮ ತೆಗೆದುಕೊಳ್ಳುತ್ತಾರೆ. ಗುಡಿಸಲಿನ ಹೆಚ್ಚಿನ ಜಾಗದಲ್ಲಿ ಮಗ್ಗವಿದ್ದರೂ, ಕಸದ ರಾಶಿ, ಮುರಿದು ಹೋಗಿರುವ ಪೀಠೋಪಕರಣಗಳು, ಲೋಹದ ಬಿಡಿಭಾಗಗಳು ಮತ್ತು ಬಿದಿರಿನ ತುಂಡುಗಳು ಸೇರಿದಂತೆ ಬೇರೆ ಬೇರೆ ವಸ್ತುಗಳು ರಾಶಿಬಿದ್ದಿವೆ. ಒಬ್ಬರಿಗಿಂತ ಹೆಚ್ಚು ಮಂದಿಗೆ ಕೂರಲು ಇಲ್ಲಿ ಸ್ಥಳವಿಲ್ಲ.
73 ವರ್ಷ ಪ್ರಾಯದ ರೂಪ್ಚಂದ್ ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿರುವ ತ್ರಿಪುರಾ ರಾಜ್ಯದ ಧರ್ಮನಗರ ನಗರದ ಹೊರವಲಯದಲ್ಲಿರುವ ಗೋಬಿಂದಪುರದ ನಿವಾಸಿ. ಸ್ಥಳೀಯರು ಹೇಳುವಂತೆ ಈ ಕಿರಿದಾದ ರಸ್ತೆ ಒಂದು ಕಾಲದಲ್ಲಿ 200 ನೇಕಾರ ಕುಟುಂಬಗಳು ಮತ್ತು 600 ಕ್ಕೂ ಹೆಚ್ಚು ಕುಶಲಕರ್ಮಿಗಳು ವಾಸಿಸುತ್ತಿದ್ದ ಆ ಗ್ರಾಮಕ್ಕೆ ಹೋಗುತ್ತದೆ. ಗೋಬಿಂದಪುರದ ಕೈಮಗ್ಗ ನೇಕಾರರ ಸಂಘದ ಕಛೇರಿಯು ಕಿರಿದಾದ ದಾರಿಗಳಲ್ಲಿರುವ ಕೆಲವು ಮನೆಗಳ ನಡುವೆ ಇದ್ದು, ತುಕ್ಕು ಹಿಡಿದ ಗೋಡೆಗಳು ಎಲ್ಲರೂ ಮರೆತಿರುವ ಆ ಗತವೈಭವವನ್ನು ನೆನಪಿಸುತ್ತವೆ.
ನಾಥ ಸಮುದಾಯಕ್ಕೆ ಸೇರಿರುವ (ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳೆಂದು ಪರಿಗಣಿಸಲಾಗಿದೆ) ರೂಪ್ಚಂದ್ ಅವರು, "ಮಗ್ಗವಿರುವ ಒಂದೇ ಒಂದು ಮನೆಯೂ ಇಲ್ಲಿರಲಿಲ್ಲ," ಎಂದು ವಿವರಿಸುತ್ತಾರೆ. ಬಿಸಿಲಿನ ಉರಿಗೆ ತಮ್ಮ ಮುಖದಲ್ಲಿರುವ ಬೆವರನ್ನು ಒರೆಸಿಕೊಳ್ಳುತ್ತಾ ಮಾತನ್ನು ಮುಂದುವರಿಸುತ್ತಾರೆ. “ಸಮಾಜದಲ್ಲಿ ನಮಗೆ ಗೌರವವಿತ್ತು. ಈಗ ಯಾರಿಗೂ ಬೇಡವಾಗಿದ್ದೇವೆ. ಹಣ ಬಾರದ ವೃತ್ತಿಯನ್ನು ಯಾರು ಗೌರವಿಸುತ್ತಾರೆ ಹೇಳಿ?” ಎಂದು ಕೇಳುವಾಗ ಅವರ ದನಿಯಲ್ಲಿ ನಡುಕವಿತ್ತು.
1980 ರ ದಶಕದಲ್ಲಿ ತಮ್ಮ ಕೈಯಿಂದಲೇ ನೇಯ್ಗೆ ಮಾಡಿ ವಿಸ್ತಾರವಾದ ಹೂವಿನ ವಿನ್ಯಾಸಗಳನ್ನು ಹೊಂದಿರುವ ನಾಕ್ಷಿ ಸೀರೆಗಳನ್ನು ತಯಾರಿಸಿದ್ದನ್ನು ಇವರು ನೆನಪಿಸಿಕೊಳ್ಳುತ್ತಾರೆ. "ಪುರ್ಭಾಷಾ [ತ್ರಿಪುರಾ ಸರ್ಕಾರದ ಕರಕುಶಲ ಮಾರಾಟ ಕೇಂದ್ರ] ಧರ್ಮನಗರದಲ್ಲಿ ಒಂದು ಕೇಂದ್ರವನ್ನು ತೆರೆದಾಗ ಅವರು ನಾಕ್ಷಿ ಸೀರೆಗಳನ್ನು ತಯಾರಿಸುವುದನ್ನು ನಿಲ್ಲಿಸಿ, ಸಾದಾ ಸೀರೆಗಳನ್ನು ತಯಾರಿಸಲು ಹೇಳಿದರು," ಎಂದು ರೂಪ್ಚಂದ್ ಹೇಳುತ್ತಾರೆ. ಇವುಗಳು ಗುಣಮಟ್ಟವೂ ಕಡಿಮೆ, ಆದ್ದರಿಂದ ಅಗ್ಗವೂ ಕೂಡ.
ಈ ಪ್ರದೇಶದಲ್ಲಿ ನಾಕ್ಷಿ ಸೀರೆಗಳೇ ಮರೆಯಾದವು ಎಂದು ಮೆಲ್ಲಗೆ ಹೇಳುತ್ತಾರೆ. "ಇಂದು ಯಾರೊಬ್ಬ ಕುಶಲಕರ್ಮಿಯೂ ಇಲ್ಲಿ ಉಳಿದಿಲ್ಲ, ಮಗ್ಗಗಳ ಬಿಡಿಭಾಗಗಳೂ ಇಲ್ಲಿ ಸಿಗುತ್ತಿಲ್ಲ," ಎಂದು ಅವರು ಹೇಳುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ನೇಕಾರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರ ದೇಬನಾಥ್ ಅವರು "ನಾವು ತಯಾರಿಸುತ್ತಿದ್ದ ಬಟ್ಟೆಗಳಿಗೆ ಮಾರುಕಟ್ಟೆಯೇ ಇರಲಿಲ್ಲ," ಎಂದು ರೂಪ್ಚಂದ್ ಅವರ ಮಾತಿಗೆ ದನಿಗೂಡಿಸುತ್ತಾರೆ. 63 ವರ್ಷ ವಯಸ್ಸಿನ ಇವರಿಗೆ ಇನ್ನು ಮುಂದೆ ನೇಯ್ಗೆ ಮಾಡಲು ಬೇಕಾದ ದೈಹಿಕ ಶ್ರಮ ಹಾಕಲು ಸಾಧ್ಯವಿಲ್ಲ.














