ಮಳೆ ಸುರಿಯುವುದರಲ್ಲೂ ಬದಲಾವಣೆಗಳಾಗಿವೆ. "ನಾನು 30 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದೇನೆ, ಆದರೆ ಈ ರೀತಿ ಮಳೆ ಸುರಿಯುವುದನ್ನು ಹಿಂದೆಂದೂ ನೋಡಿಲ್ಲ. ವಿಪರೀತ ಜಡಿಮಳೆ ಪಟ್ಟುಹಿಡಿದು ಒಮ್ಮೆಗೇ ಸುರಿಯುತ್ತದೆ. ಪ್ರತಿ ವರ್ಷ ಅದು ಮಾಲಿನ್ನನ್ನು ನೆನಪಿಸುತ್ತದೆ,” ಎನ್ನುತ್ತಾರೆ ಅವರು.
ಅಪಾಯವನ್ನು ಊಹಿಸಲೂ ಸಾಧ್ಯವಿಲ್ಲ. ಹವಾಮಾನ ಬಿಸಿಯಾದಂತೆ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗುತ್ತದೆ. “ಮಳೆಯ ಪ್ರಮಾಣ ಮತ್ತು ಅದು ಸುರಿಯುವ ಸಮಯ ಬದಲಾಗಿದೆ. ಒಂದು ಕಾಲದಲ್ಲಿ ಮೂರು ತಿಂಗಳಲ್ಲಿ ಸುರಿಯುತ್ತಿದ್ದಷ್ಟು ಮಳೆ ಈಗ ಕೇವಲ ಎರಡೇ ವಾರಗಳಲ್ಲಿ ಬೀಳುತ್ತಿದೆ,” ಎಂದು ಪುಣೆಯ ಗೋಖಲೆ ಇನ್ಸ್ಟಿಟ್ಯೂಟ್ನ ಸುಸ್ಥಿರ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ. ಗುರುದಾಸ್ ನುಲ್ಕರ್ ಹೇಳುತ್ತಾರೆ. ಮಳೆಯ ಮಾದರಿಗಳಲ್ಲಿ ಆಗಿರುವ ಬದಲಾವಣೆ ಮತ್ತು ನಿಯಂತ್ರಣವಿಲ್ಲದೆ ಬೆಳೆಯುತ್ತಿರುವ ಕಟ್ಟಡಗಳು ಹದಗೆಡುತ್ತಿರುವ ಭೂಕುಸಿತದ ಅಪಾಯದ ಪ್ರಮುಖ ಕಾರಣಗಳಾಗಿವೆ ಎಂದು ಅವರು ವಿವರಿಸುತ್ತಾರೆ. (ಓದಿ: ಥಾಣೆಯಲ್ಲಿ ದುಷ್ಟನಂತಾಗಿರುವ ಮಳೆ)
ಪಸಾರ್ವಾಡಿಯ ಇಳಿಜಾರಿನ ಕೆಳಗೆ ಇರುವ ಮನೆಗಳ ಹಿಂದೆ ಬಿದ್ದಿರುವ ದೊಡ್ಡ ದೊಡ್ಡ ಬಂಡೆಗಳನ್ನು ಪಸಬಾಯಿಯವರ ನೆರೆಮನೆವಾಸಿ ಜಾವ್ಜೀ ಬಾಲ್ಚಿಂ ತೋರಿಸುತ್ತಾರೆ. ಆ ಬಂಡೆಗಳು ಜಾವ್ಜಿಯವರ ಮೊಣಕಾಲುಗಳಷ್ಟು ಎತ್ತರ ಇವೆ, ಕೆಲವು ಬಂಡೆಗಳು ಅವರ ತೊಡೆಯ ವರೆಗೆ ಎತ್ತರವಾಗಿವೆ. “ಕಳೆದ ವರ್ಷವಷ್ಟೇ ಈ ಬಂಡೆಗಳು ಕೆಳಗೆ ಜಾರಿಬಂದವು. ಸಣ್ಣ ಸಣ್ಣ ಬಂಡೆಗಳು ಮರಗಳ ನಡುವೆ ಸಿಲುಕಿಕೊಂಡವು. ದೊಡ್ಡ ದೊಡ್ಡ ಬಂಡೆಗಳು ಕೆಳಗೆ ಜಾರಿ ಬಂದವು. ಇಲ್ಲಿಯ ವರೆಗೆ ಯಾರ ಮನೆಯ ಮೇಲೂ ಬಿದ್ದಿಲ್ಲ,” ಎಂದು 80 ವರ್ಷ ಪ್ರಾಯದ ಆ ರೈತ ಹೇಳುತ್ತಾರೆ.
ಪಸಾರ್ವಾಡಿಯಲ್ಲಿರುವ ಮನೆಗಳು ಒಂದು ಕಾಲದಲ್ಲಿ ಮಾಲಿನ್ನಲ್ಲಿ ಇದ್ದ ಸಣಕಲು ಮನೆಗಳಂತೆ ಹಗುರವಾದ ಮಣ್ಣಿನ ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿವೆ. ಒಂದು ದಶಕವಾದರೂ ಈ ಮನೆಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ. ಬಂಡೆಗಳು ಮನೆಯ ಮೇಲೆ ಬೀಳದಂತೆ ತಡೆಯಲು ಜನರು ಬೆಟ್ಟದ ತಪ್ಪಲಿನಲ್ಲಿ ಸಾಲು ಸಾಲು ಮರದ ಬೇಲಿಗಳನ್ನು ಹಾಕಿಕೊಂಡಿದ್ದಾರೆ.
“ಹಿಂದೆ ಹೀಗೆ ಇರಲಿಲ್ಲ. ರಸ್ತೆ ನಿರ್ಮಾಣದ ಕೆಲಸ ಆರಂಭ ಆದ ಮೇಲೆ ಇಡೀ ಇಳಿಜಾರು ಸಡಿಲವಾಗಿದೆ. ಅವರು ಮಣ್ಣನ್ನು ಅಗಾಗ ಅಗೆಯುತ್ತಲೇ ಇರುತ್ತಾರೆ. ಅದನ್ನು ಎಲ್ಲೆಲ್ಲೋ ಸುರಿಯುತ್ತಾರೆ. ನಾವು ನಮ್ಮ ಇಡೀ ಜೀವಮಾನವನ್ನು ಇಲ್ಲಿಯೇ ಕಳೆದಿದ್ದೇವೆ. ಈಗ ನಮ್ಮದೇ ಮನೆಯೊಳಗೆ ನಮಗೆ ರಕ್ಷಣೆ ಇಲ್ಲದಂತಾಗಿದೆ,” ಎಂದು ಜಾವ್ಜೀ ಹೇಳುತ್ತಾರೆ. ಇವರು ಮತ್ತು ಇವರ ಪತ್ನಿ ಯಮುನಾಬಾಯಿ ತಮ್ಮ ಒಂದು ಗುಂಟಾ (0.025 ಎಕರೆ) ಗಿಂತ ಕಡಿಮೆ ಇರುವ ಜಮೀನಿನಲ್ಲಿ 2-3 ಕ್ವಿಂಟಾಲ್ ಭತ್ತವನ್ನು ಬೆಳೆಯುತ್ತಾರೆ. ಇವರು ಕೃಷಿ ಕಾರ್ಮಿಕರಾಗಿಯೂ ಕೆಲಸ ಮಾಡುತ್ತಾರೆ. ಪುಣೆಯಿಂದ ತಮ್ಮ ಮಕ್ಕಳು ಕಳುಹಿಸಿದ ಅಲ್ಪಸ್ವಲ್ಪ ಹಣದಲ್ಲಿ ಇವರು ಊರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಯಮುನಾಬಾಯಿ ಬಾಲ್ಚಿಂ ಮೃದುಭಾಷಿ. "ನಮ್ಮ ಮಕ್ಕಳು ಈಗ ಪುಣೆಯಲ್ಲಿ ವಾಸಿಸುತ್ತಿದ್ದಾರೆ. ಭೂಮಿ ಬಿರುಕು ಬಿಡುವುದನ್ನು ನೋಡಿ ಭಯದಿಂದಾಗಿ ಅವರು ಊರಿಗೆ ಬರಲು ಹೆದರುತ್ತಿದ್ದಾರೆ. [ಮನೆಯ] ಈ ಎರಡು ಕೋಣೆಗಳನ್ನು ಅವರಿಗಾಗಿ ಕಟ್ಟಿದ್ದೇವೆ, ಆದರೆ ಈಗ ನಾವು ಮುದುಕರಷ್ಟೇ ಇಲ್ಲಿ ಉಳಿದಿದ್ದೇವೆ,” ಎಂದು ಅವರು ಹೇಳುತ್ತಾರೆ.