ಮೊದಲಿಗೆ ಅವರು ಈಗಾಗಲೇ ಹಳೆಯದಾಗಿ ತುಕ್ಕು ಹಿಡಿದಿದ್ದ ವೀಲ್ ಚೇರ್ ಒಂದನ್ನು ತಾನು ಮಲಗಿದ್ದ ಹಳೆಯ ಆಸ್ಪತ್ರೆಯ ಮಂಚದ ಹತ್ತಿರಕ್ಕೆ ಎಳೆದುಕೊಂಡರು. ತಮ್ಮ ಟಿನ್ ಶೆಡ್ಡಿನ ಮರದ ತೊಲೆಗೆ ಕಟ್ಟಿರುವ ಹಳೆಯ ಬಟ್ಟೆಯ ಹಗ್ಗವನ್ನು ಎಡಗೈ ಬಳಸಿ ಬಲವಾಗಿ ಹಿಡಿದು, ಬಲಗೈಯಿಂದ ಮಂಚವನ್ನು ನಿಧಾನವಾಗಿ ನೂಕುತ್ತಾ ವೀಲ್ ಚೇರ್ ಕಡೆಗೆ ಸರಿದರು. ನಂತರ ತಮ್ಮ ಎರಡು ಕೈಗಳಿಂದ ಒಂದೊಂದೇ ಕಾಲುಗಳನ್ನು ಎತ್ತಿ ವೀಲ್ ಚೇರಿನ ಫುಟ್ಪ್ಲೇಟ್ ಮೇಲೆ ಇರಿಸಿಕೊಂಡರು. ಅವರು ಹೀಗೆ ವೀಲ್ ಚೇರ್ ಮೇಲೆ ಕುಳಿತುಕೊಳ್ಳುವ ರೀತಿಯನ್ನು ನೋಡಿದರೆ ಅವರು ಇದನ್ನು ಈ ಮೊದಲು ಸಾವಿರಾರು ಬಾರಿ ಮಾಡಿದಂತೆ ಕಾಣುತ್ತಿತ್ತು. ಬಿಳಿಗಿರಿ ರಂಗನ ಬೆಟ್ಟ ಅಥವಾ ಬಿ.ಆರ್. ಹಿಲ್ಸ್ ಪ್ರದೇಶದ ಕಾಡುಗಳಲ್ಲಿ ಅವರು ಒಂದೊಮ್ಮೆ ಅಷ್ಟೇ ಸುಲಭವಾಗಿ ಎತ್ತರ ಎತ್ತರದ ಮರಗಳನ್ನು ಹತ್ತಿ ಇಳಿಯುತ್ತಿದ್ದರು. ಆದರೆ ಒಂದು ಅಪಘಾತ ಅವರ ಬದುಕನ್ನೇ ಬದಲಿಸಿಬಿಟ್ಟಿತ್ತು…


Chamarajanagar, Karnataka
|THU, MAR 19, 2026
ಬಿಳಿಗಿರಿ ರಂಗನ ಬೆಟ್ಟದ ರೆಕ್ಕೆ ಮುರಿದ ಹಕ್ಕಿ
ಬಿಳಿಗಿರಿ ರಂಗನ ಬೆಟ್ಟದ ಕಾಡುಗಳ ಎತ್ತರದ ಮರಗಳಿಂದ ಜೇನು ತೆಗೆಯುವ ಕಾಯಕದಲ್ಲಿ ನಿಪುಣನಾಗಿದ್ದ ಸೋಲಿಗ ಆದಿವಾಸಿ ಯುವಕ ಅರುಣ್ ಕುಮಾರ್ ಅವರ ಬದುಕು ಇಂದು ಒಂದು ಕರಾಳ ಅಪಘಾತದಿಂದಾಗಿ ಸಂಪೂರ್ಣವಾಗಿ ಬದಲಾಗಿದೆ. ಜೇನು ಕುಯ್ಯುವ ಸಾಹಸಮಯ ಹಾಡುಗಳ ಜೊತೆ ಕಾಡಿನಲ್ಲಿ ಅಲೆಯುತ್ತಿದ್ದ ಆ ಯುವಕ, ಈಗ ಬದಲಾದ ಬದುಕಿಗೆ ಹೊಂದುವ ತನ್ನದೇ ಆದ ಹಾಡೊಂದನ್ನು ಹುಡುಕಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ
Author
Editor
Photo Editor
Translator

M. Palani Kumar
“ಆವತ್ತು ಸಂಜೆ ಸುಮಾರು 6 ಗಂಟೆ ಆಗಿತ್ತು. ಜೋರಾಗಿ ಮಳೆ ಬರುತ್ತಿತ್ತು. ಮರ ಜಾರುತ್ತಿತ್ತು. ಅಲ್ಲೇ ಇದ್ದ ತಾರೆ ಮರದ ಮೇಲೆ ಒಂದು ದೊಡ್ಡ ಜೇನಿನ ಗೂಡಿತ್ತು. ಆ ಗೂಡನ್ನು ಕತ್ತರಿಸಲೆಂದು ನಾನು ಪಕ್ಕದಲ್ಲೇ ಇದ್ದ ಹೊನ್ನೆ ಮರವನ್ನು ಹತ್ತಿದ್ದೆ. ಈ ಮರಗಳು ತುಂಬಾ ದೊಡ್ಡಕ್ಕಿರುತ್ತವೆ. ಅತ್ಯಂತ ಎತ್ತರದ ಮರಗಳೇ ಎನ್ನಬಹುದು.” ಅವರು ಉಲ್ಲೇಖಿಸುತ್ತಿರುವ ಈ ಮರಗಳು ಕಾಡಿನಲ್ಲಿ ಸುಮಾರು 115ರಿಂದ 130 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲವು.
ಮರದ ಮೇಲಿದ್ದ ನನ್ನ ಕೈಯಲ್ಲಿ ಹೊಗೆಯುಗುಳುತ್ತಿದ್ದ ಬೆಂಕಿಯ ಪಂಜನ್ನು ಹಿಡಿದಿದ್ದೆ. ಆದರೆ ಜೇನುಗಳು ಕಚ್ಚುತ್ತಲೇ ಇದ್ದವು. ನಾನು ಕೂಡಲೇ ಕೆಳಗಿಳಿಯುವುದಕ್ಕೆ ನಿರ್ಧಾರ ಮಾಡಿದೆ. ಆ ಹೊತ್ತಲ್ಲಿ ಸಡನ್ ಆಗಿ ನನ್ನ ಕಾಲು ಜಾರಿತು. ಕಾಲು ಜಾರುತ್ತಿದ್ದಂತೆ ಹಿಡಿತ ತಪ್ಪಿ ನಾನು ಮರದಿಂದ ಕೆಳಗೆ ಬಿದ್ದೆ. ಅಂದು ಸುಮಾರು 20ರಿಂದ 25 ಅಡಿ ಎತ್ತರದಿಂದ ಕೆಳಗೆ ಅಂಗಾತವಾಗಿ ಬಿದ್ದಿದ್ದೆ.” ಅರುಣ್ ನಮ್ಮೊಂದಿಗೆ 2024ರ ಮೇ 12ನೇ ತಾರೀಕಿನ ಸಂಜೆ ನಡೆದ ಭೀಕರ ಘಟನೆಯ ಕುರಿತು ಮಾತನಾಡುತ್ತಿದ್ದರು. ಅದು ಅವರು ತಮ್ಮೆರಡು ಕಾಲುಗಳ ಮೇಲೆ ನಿಂತಿದ್ದ ಕೊನೆಯ ದಿನ.
ಅರುಣ್ ಇದೀಗ ತಮ್ಮ ಮನೆಯಿಂದ ಹೊಸ ಜಾಗಕ್ಕೆ ಶಿಫ್ಟ್ ಆಗಿದ್ದಾರೆ. ಅದೊಂದು ಸುಮಾರು 8 x 10 ಅಳತೆಯ ಕತ್ತಲೆಯಿಂದ ಕೂಡಿದ ತಗಡಿನ ಶೆಡ್. ಅಷ್ಟು ಸ್ಥಳದೊಳಗೆ ಅವರು ತಮ್ಮ ವೀಲ್ ಚೇರ್ ಅನ್ನು ಹಿಂದಕ್ಕೆ ಮುಂದಕ್ಕೆ ತಿರುಗಿಸುತ್ತಾ ಓಡಾಡುತ್ತಾರೆ. ಅದೇ ಅವರ ಸದ್ಯದ ಜಗತ್ತು. ಆ ಶೆಡ್ಡಿನ ಸಣ್ಣ ಬಾಗಿಲಿನಿಂದ ಒಳಗೆ ಬರುವ ಬೆಳಕನ್ನು ಬಿಟ್ಟರೆ ಅಲ್ಲಿ ಇನ್ಯಾವುದೇ ರೀತಿಯ ಬೆಳಕಿನ ವ್ಯವಸ್ಥೆ ಇಲ್ಲ. ಅವರ ಕುಟುಂಬದವರು ಅಲ್ಲೇ ಪಕ್ಕದಲ್ಲಿ ವಾಸಿಸುತ್ತಿದ್ದು, ಈ ಶೆಡ್ ಯಾರಿಗೂ ಕಾಣದಂತಹ ಜಾಗದಲ್ಲಿದೆ.

Pratishtha Pandya

M. Palani Kumar
“ಇಲ್ಲಿ ನನಗೆ ಸಹಾಯ ಮಾಡೋದಕ್ಕಂತ ಯಾರೂ ಇಲ್ಲ, ಇದೆಲ್ಲವನ್ನೂ ನಾನೇ ಮಾಡಿಕೊಳ್ತೀನಿ. ಹೊರಗೆ ಏನಾದರೂ ಬಿಸಿಲಿದ್ದರೆ ದಿನಕ್ಕೊಮ್ಮೆ ಈ ಕೋಣೆಯಿಂದ ಹೊರಗೆ ಬಂದು ಬಿಸಿಲಿನಲ್ಲಿ ಕುಳಿತುಕೊಳ್ಳುತ್ತೇನೆ” ಎಂದು 24 ವರ್ಷದ ಅರುಣ್ ಕುಮಾರ್ ಹೇಳುತ್ತಾರೆ. ಶೆಡ್ಡಿನಿಂದ ಹೊರಬಂದ ಅವರು ತಮ್ಮ ಮನೆಯ ವಿರುದ್ಧ ದಿಕ್ಕಿಗೆ ವೀಲ್ ಚೇರ್ ಅನ್ನು ತಿರುಗಿಸಿದರು.
ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಅರುಣ್ ತಮ್ಮ ತೋಟದ ಕಾಫಿ ಗಿಡಗಳಿಗೆ ಸೂರ್ಯನ ಬೆಳಕು ಸರಿಯಾಗಿ ಬೀಳುವಂತೆ ಮಾಡುವ ನಿಟ್ಟಿನಲ್ಲಿ ತೋಟದಲ್ಲಿನ ದೊಡ್ಡ ಮರಗಳ ರೆಂಬೆಗಳನ್ನು ಕಡಿಯಲು ಸಹಾಯ ಮಾಡುತ್ತಿದ್ದರು. ಈ ವರ್ಷ ಈ ಕೆಲಸಕ್ಕೆ ಕುಟುಂಬವು ಕೂಲಿ ಕೊಟ್ಟು ಹೊರಗಿನವರನ್ನು ಕರೆಸಿಕೊಂಡಿದೆ. ಆದರೆ ಇದು ದುಬಾರಿಯಾದ ಕಾರಣ ತೋಟದಲ್ಲಿನ ಮರಗಳು ಅಡ್ಡಾದಿಡ್ಡಿಯಾಗಿ ಬೆಳೆದುಕೊಂಡಿವೆ.
ಅರುಣ್ ಸೂರ್ಯನ ಬೆಳಕಿನಡಿ ಬಂದು ತನ್ನ ವೀಲ್ಚೇರ್ ನಿಲ್ಲಿಸಿದರು.
"ಒಂದಷ್ಟು ದುಡ್ಡು ಸಂಪಾದನೆ ಮಾಡೋಣ ಅಂತ ಸೀಸನ್ ಸಮಯದಲ್ಲಿ ಜೇನು ಕಿಳೋದಕ್ಕೆ ಮರಗಳನ್ನ ಹತ್ತುತ್ತಿದ್ದೆ. ವರ್ಷದಲ್ಲಿ ಏಪ್ರಿಲ್ ಮತ್ತೆ ಜೂನ್ ತಿಂಗಳ ನಡುವೆ ಒಂದು ಐದಾರು ವಾರಗಳು ಮಾತ್ರ ಈ ಸೀಸನ್ ಇರುತ್ತೆ. ಬೇಸಿಗೆಯಲ್ಲಿ ಹೊರಗಡೆ ಕೆಲಸಗಳು ಸಿಕ್ತಿರಲಿಲ್ಲ. ಹಣದ ಸಮಸ್ಯೆಯಿಂದಾಗಿ ಮನೇಲೂ ಕಷ್ಟಗಳಿದ್ವು. ಹಾಗಾಗಿ ನಾವು ನಾಲ್ಕೈದು ಜನ ಸ್ನೇಹಿತರು ಒಟ್ಟಾಗಿ ಗುಂಪು ಮಾಡಿಕೊಂಡಿದ್ದೆವು. ಈ ಮೂಲಕ ಒಟ್ಟಾಗಿ ಜೇನು ಕುಯ್ದು ತಂದು ಒಂದಷ್ಟು ಹಣ ಸಂಪಾದಿಸುತ್ತಿದ್ದೆವು. ಅದು ಅಷ್ಟೇನೂ ದೊಡ್ಡ ಮೊತ್ತ ಅಲ್ಲದೆ ಹೋಗಿದ್ದರೂ ಸಂಸಾರ ನಡೆಸೋದಕ್ಕೆ ಅದರಿಂದ ಸಹಾಯ ಆಗ್ತಿತ್ತು."

Courtesy: Arun
"ನಂಗೆ ಶಾಲೆಗೆ ಹೋಗುವಾಗ ಸ್ನೇಹಿತರೊಂದಿಗೆ ಇರೋದಂದ್ರೆ ತುಂಬಾ ಇಷ್ಟ. ಶಾಲೆಯಲ್ಲಿ ನಡೆಯುವ ಪಾಠ ಹೆಚ್ಚಾಗಿ ಅರ್ಥನೇ ಆಗ್ತಾ ಇರಲಿಲ್ಲ. ಹಾಗಾಗಿ ನಾನು ಏಳನೇ ಕ್ಲಾಸ್ನಲ್ಲಿ ಶಾಲೆ ಬಿಟ್ಟೆ. ಅದಾದ ಮೇಲೆ ಬೇರೆ ಹುಡುಗರ ಜೊತೆ ಓಡಾಡಲು ಹೋಗುತ್ತಿದ್ದೆ. ಅವರು ಎತ್ತರದ ಮರಗಳಿಂದ ಜೇನು ಕೀಳುವುದನ್ನು ನೋಡಿ ನಾನು ಕೂಡ ಆ ಕೆಲಸ ಕಲಿತೆ. ಮೊದಮೊದಲಿಗೆ ನನಗೆ ಸಾಕಷ್ಟು ಭಯ ಆಗ್ತಿತ್ತು. ಆದರೆ ದಿನ ಕಳೆದ ಹಾಗೆ ಅದನ್ನು ಕಲಿತುಕೊಂಡೆ. ಸಾಮಾನ್ಯವಾಗಿ ಜೇನು ಕುಯ್ಯುವ ಹಾಡನ್ನು ಹಾಡುತ್ತಾ ಮರಗಳ ಕಡೆ ಹೋಗುತ್ತೇವೆ. ಆದರೆ ನಂಗೆ ಆ ಹಾಡನ್ನ ಯಾಕೋ ಕಲಿಯೋದಕ್ಕೆ ಆಗ್ಲೇ ಇಲ್ಲ” ಎಂದು ಅವರು ಹೇಳುತ್ತಾರೆ. ಸೋಲಿಗರು ಸಾಂಪ್ರದಾಯಿಕವಾಗಿ ಸುಸ್ಥಿರ ಮತ್ತು ಸುಸ್ಥಿರ ಜೇನು ಸಂಗ್ರಹಣೆಗೆ ಹೆಸರಾಂತರಾಗಿದ್ದರೂ, ಅರುಣ್ ಅವರ ಅಪ್ಪ ಎಮ್ ಸಣ್ಣರಂಗೇ ಗೌಡ (53) ಈ ಕೆಲಸವನ್ನು ಮಾಡಿದವರಲ್ಲ.
ಅರುಣ್ ಕುಮಾರ್ ಅವರ ತಂದೆ ಚಾಮರಾಜನಗರ ಜಿಲ್ಲೆಯ ರೈತ. ಜೊತೆಗೆ ಸಾಮಾಜಿಕ ಕಾರ್ಯಕರ್ತರಾಗಿಯೂ ದುಡಿಯುತ್ತಾರೆ. ಸರ್ಕಾರ ಸೋಲಿಗ ಆದಿವಾಸಿಗಳನ್ನು ಕಾಡಿನ ಒಳಗಿನ 'ಪೋಡು'ಗಳಲ್ಲಿ (ಸಣ್ಣ ವಸತಿ ನೆಲೆಗಳು ಅಥವಾ ಕುಗ್ರಾಮಗಳು) ನೆಲೆಸದಂತೆ ಮತ್ತು ಸ್ಥಳಾಂತರ ಬೇಸಾಯವನ್ನು ಕೈಬಿಡುವಂತೆ ಒತ್ತಡ ಹೇರಿ ಅವರನ್ನು ಒಕ್ಕಲೆಬ್ಬಿಸಿತ್ತು. ಅದರಲ್ಲಿ ಬೇಸಾಯ ಮಾಡುತ್ತಿದ್ದಾರೆ. ಇವರ ಕುಟುಂಬಕ್ಕೆ ಯಳಂದೂರು ತಾಲೂಕಿನ ಮುತ್ತುಗದಗದ್ದು ಎನ್ನುವಲ್ಲಿ ಎರಡು ಎಕರೆ ಜಮೀನು ದೊರೆತಿತ್ತು.

Courtesy: Arun
"ಒಂದು ಕಾಲದಲ್ಲಿ ನಾನು ಅವರೆಕಾಯಿ, ಜೋಳ, ತೊಗರಿ ಮತ್ತೆ ರಾಗಿ ಎಲ್ಲ ಬೆಳೀತಿದ್ದೆ. ಆದರೆ ಪ್ರಾಣಿಗಳ ಕಾಟ ಜಾಸ್ತಿಯಾಗಿ ಅದನ್ನ ಬಿಟ್ಟೆ. ಆನೆಗಳು ಹೊಲಕ್ಕೆ ನುಗ್ಗಿ ಬೆಳೆಗಳನ್ನೆಲ್ಲ ತಿಂದು ಹಾಕ್ತಿದ್ವು. ಅವು ಬೆಳೆನೆಲ್ಲ ತುಳಿದು ನಾಶ ಮಾಡಿ ಬಿಡ್ತಿದ್ವು. ಆನೆ ಮತ್ತು ಹಂದಿಗಳು ನಮ್ಮ ಇಡೀ ವರ್ಷದ ಶ್ರಮವನ್ನೆಲ್ಲ ಮಣ್ಣುಪಾಲು ಮಾಡಿ ಬಿಡ್ತಿದ್ವು. ಇದೇ ಕಾರಣಕ್ಕಾಗಿ ನಾನು 1990ರ ದಶಕದ ಸುಮಾರಿಗೆ ಕಾಫಿ ಕೃಷಿ ಶುರು ಮಾಡಿದೆ" ಎನ್ನುತ್ತಾರೆ ಸಣ್ಣರಂಗೇ ಗೌಡ.
ಶಾಲೆ ಬಿಟ್ಟ ನಂತರ ಅರುಣ್ ತನ್ನ ತಂದೆಯ ತೋಟದಲ್ಲಿ ಕೆಲಸ ಮಾಡಲು ಶುರು ಮಾಡಿದರು. ಅಲ್ಲಿ ಗಿಡ ನೆಡುವುದು, ಕಟಾವು ಮಾಡುವುದು, ತೋಟದಲ್ಲಿನ ಕಳೆ ಗಿಡಗಳನ್ನು ಸವರಿ ಸ್ವಚ್ಛಗೊಳಿಸುವುದು ಮತ್ತು ಕಾಫಿ ಹಣ್ಣನ್ನು ಕೀಳುವ ಸಮಯದಲ್ಲಿ ಅಪ್ಪನಿಗೆ ಸಹಾಯ ಮಾಡುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಇದರ ಜೊತೆಗೆ ಅವರು ಹೊರಗೂ ದುಡಿಯುವ ಮೂಲಕ ಒಂದಷ್ಟು ಸಂಪಾದನೆಗೆ ಪ್ರಯತ್ನಿಸುತ್ತಿದ್ದರು. "ಸಿಗೋ ಕೆಲಸ ಎಲ್ಲಾ ಮಾಡ್ತಿದ್ದೆ. ಮರ ಕಡಿಯೋದು, ಸೌದೆ ಒಡೆಯೋದು, ಜೇನು ಕುಯ್ಯೋದು, ಪಲಾವ್ ಮತ್ತೆ ಬಿರಿಯಾನಿಗೆ ಬಳಸೋ ಕಲ್ಲು ಹೂ (lichen) ಹುಡುಕೋದು ಹೀಗೆ ಎಲ್ಲಾನೂ ಮಾಡ್ತಿದ್ದೆ. ಈ ಕೆಲಸಗಳಿಂದ ದಿನಕ್ಕೆ ಸಾವಿರ ರೂಪಾಯಿ ತನಕ ಸಿಗೋದು. ಆದ್ರೆ ದಿನಾ ಕೆಲಸ ಇರುತ್ತೆ ಅನ್ನೋ ಗ್ಯಾರಂಟಿ ಇರ್ತಿರ್ಲಿಲ್ಲ" ಎಂದು ಅರುಣ್ ತಮ್ಮ ಹಳೆಯ ದಿನಗಳ ಬಗ್ಗೆ ನೆನಪಿಸಿಕೊಳ್ಳುತ್ತಾರೆ.
ಸೋಲಿಗ ಆದಿವಾಸಿ ಸಮುದಾಯದ ಮೊದಲ ಪಿಎಚ್ಡಿ ಪದವೀಧರರಾದ ಮತ್ತು ಅದೇ ಸಮುದಾಯದ ಜನರೊಂದಿಗೆ ಕೆಲಸ ಮಾಡುತ್ತಿರುವ ಡಾ. ಸಿ. ಮಾದೇಗೌಡ ಅವರು ಯುವಕರ ಪರಿಸ್ಥಿತಿಯ ಬಗ್ಗೆ ಹೀಗೆ ಹೇಳುತ್ತಾರೆ: "ಸೋಲಿಗ ಆದಿವಾಸಿ ಯುವಕರಿಗೆ ಕೆಲಸ ಸಿಗುವುದು ಬಹಳ ಕಷ್ಟ. ಇಲ್ಲಿ ಹೆಚ್ಚು ಕೆಲಸದ ಆಯ್ಕೆಗಳು ಲಭ್ಯವಿಲ್ಲ. ಅವರಿಗೆ ಬೇರೆ ಕೌಶಲಗಳೂ ಗೊತ್ತಿಲ್ಲ. ಮತ್ತೆ ಓದಿದ್ರೂ ಹೊರಗೆ ಕೆಲಸ ಸಿಗತ್ತೆ ಅನ್ನೋ ಗ್ಯಾರಂಟಿ ಇಲ್ಲ."
ಅರುಣ್ 18 ವರ್ಷ ತುಂಬುತ್ತಿದ್ದ ಹಾಗೆ ಕೆಲಸ ಹುಡುಕಿಕೊಂಡು ವಲಸೆ ಹೋಗಲಾರಂಭಿಸಿದರು. ಈ ನಿಟ್ಟಿನಲ್ಲಿ ಅವರು ಮೊದಲು ದುಡಿದಿದ್ದು ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ. ಮುಂದೆ ಕೊಡಗು ಮತ್ತು ಕೇರಳದ ಕಾಫಿ ಹಾಗೂ ಮೆಣಸಿನ ತೋಟಗಳಲ್ಲಿ ಸತತವಾಗಿ ದುಡಿಯಲಾರಂಭಿಸಿದರು. ಸಾಮಾನ್ಯವಾಗಿ ಅವರು ಬೆಳೆ ಕೊಯ್ಲು ಮುಗಿದ ನಂತರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಊರಿಗೆ ಮರಳುತ್ತಿದ್ದರು.
ಇದೇ ತಿಂಗಳು ಅವರ ಊರಿನಲ್ಲಿ ಜೇನು ಕೊಯ್ಯುವ ಕೆಲಸದ ಹಂಗಾಮು ಆರಂಭಗೊಳ್ಳುತ್ತದೆ.

M. Palani Kumar

M. Palani Kumar
"ನಮಗೆ ಎಷ್ಟು ದುಡ್ಡು ಸಿಗುತ್ತೆ ಅನ್ನೋದು ಜೇನುಗೂ ಎಷ್ಟು ದೊಡ್ಡದಿದೆ ಮತ್ತು ಅವುಗಳಲ್ಲಿ ಎಷ್ಟು ಜೇನುನೊಣಗಳಿವೆ ಅನ್ನೋದನ್ನು ಅವಲಂಬಿಸಿರುತ್ತೆ. ಕೆಲವೊಮ್ಮೆ ಒಂದೇ ಮರದಲ್ಲಿ ಒಂದಕ್ಕಿಂತ ಹೆಚ್ಚು, ಅಂದ್ರೆ ಎರಡು, ಮೂರು ಹೀಗೆ ಗೂಡುಗಳು ಇರುವುದೂ ಇರುತ್ತೆ. ಆದರೆ ಪ್ರತಿಸಲ ಕಾಡಿಗೆ ಹೋದಾಗಲೆಲ್ಲ ಜೇನು ಸಿಗುತ್ತೆ ಅನ್ನೋದಕ್ಕೆ ಯಾಬ ಗ್ಯಾರಂಟಿಯೂ ಇಲ್ಲ. ಸೀಜನ್ ಟೈಮಲ್ಲೂ ನಾವು ದಿನಾ ಕಾಡಿಗೆ ಹೋಗ್ತಿರ್ಲಿಲ್ಲ. ತಿಂಗಳಿಗೆ ಹೆಚ್ಚೆಂದರೆ ನಾಲ್ಕೈದು ಸಲ ಹೋಗುತ್ತಿದ್ದೆವು. ಒಂದು ವೇಳೆ ಮರ ಹದಿನೈದು ಕಿಲೋಮೀಟರ್ ಒಳಗೆ ಇತ್ತು ಅಂದ್ರೆ ಬೆಳಗ್ಗೆ ಹೋಗಿ ಮರವನ್ನು ನೋಡ್ಕೊಂಡು ಬಂದು, ಸಂಜೆ ಹೋಗಿ ಜೇನು ತೆಗೆಯುತ್ತಿದ್ದೆವು. ಆದರೆ ಹೆಚ್ಚಿನ ಸಲ ಆಹಾರ ಸಾಮಾಗ್ರಿಗಳನ್ನು ಜೊತೆಗೆ ತೆಗೆದುಕೊಂಡು ಹೋಗಿ ಕಾಡಿನಲ್ಲೇ ಎರಡು ಮೂರು ದಿನ ಉಳಿದುಬಿಡುತ್ತಿದ್ದೆವು" ಎನ್ನುತ್ತಾರೆ ಅರುಣ್.
ಹೀಗೆ ಕಾಡಿಗೆ ಹೋದಾಗ ಒಂದು ಬಾರಿಗೆ ಅವರಿಗೆ ಸುಮಾರು 60ರಿಂದ 70 ಕೇಜಿಗಳಷ್ಟು ಜೇನು ಸಿಗುತ್ತಿತ್ತು. ಕಿತ್ತ ಜೇನನ್ನು ಮನೆಗೆ ತಂದ ನಂತರ ಅದನ್ನು ಒಂದು ಸ್ವಚ್ಛವಾದ ಬಟ್ಟೆಯ ಬಲೆ ಬಳಸಿ ಸೋಸಿ, ಶುದ್ಧ ಜೇನುತುಪ್ಪವನ್ನು ಕ್ಯಾನುಗಳಿಗೆ ತುಂಬಿಸುತ್ತಾರೆ. ಹೀಗೆ ತುಂಬಿಸಿದ ಕ್ಯಾನನ್ನು ಏಜೆಂಟ್ ಒಬ್ಬನಿಗೆ ಕೊಡುತ್ತಾರೆ. ಅರುಣ್ ಹೇಳುವಂತೆ ಏಜೆಂಟ್ ಒಂದು ಕೇಜಿ ಜೇನಿಗೆ 200ರಿಂದ 300 ರೂಪಾಯಿಯ ತನಕ ಕೊಡುತ್ತಾನೆ. ಬಂದ ಹಣವನ್ನು ಅವರೆಲ್ಲ ಸೇರಿ ಹಂಚಿಕೊಳ್ಳುತ್ತಾರೆ.
"ಆ ದಿನ ಮೂರು ಜನ ಗೆಳೆಯರು ನನ್ನೊಂದಿಗಿದ್ದರು" ಎಂದ ಅರುಣ್ ತಾನು ಮರದಿಂದ ಬಿದ್ದ ದಿನದ ನೆನಪಿಗೆ ಮತ್ತೆ ಜಾರಿದರು. "ಬಿದ್ದವನು ಎದ್ದು ನಿಲ್ಲಲು ನೋಡಿದೆ, ಮೈ ಕೈ ವಿಪರೀತ ನೋಯುತ್ತಿತ್ತು. ಮೇಲಿನಿಂದ ಅಂಗಾತ ಬಿದ್ದ ಕಾರಣ ಬೆನ್ನಿನ ತಡೆಯೋಕೆ ಆಗ್ತಿರಲಿಲ್ಲ. ಮೂಳೆಗಳು ಮುರಿದಿದ್ದವು. ಆಗಲೇ ರಾತ್ರಿಯಾಗಿದ್ದು, ನನಗೆ ಒಂದು ಹೆಜ್ಜೆಯನ್ನೂ ಇಡಲು ಸಾಧ್ಯವಿಲ್ಲದ ಕಾರಣ ಗೆಳೆಯರು ನನ್ನೊಂದಿಗೆ ಗಂಟೆಗಟ್ಟಲೆ ಕಾದರು. ಕಾಡುಪ್ರಾಣಿಗಳು ಹತ್ತಿರ ಬರದಂತೆ ನೋಡಿಕೊಳ್ಳಲು ಬೆಂಕಿ ಹಚ್ಚಿದರು. ಈ ಕುರಿತು ಮನೆಗೆ ಹೇಳೋದಕ್ಕೆ ಅವರು ಬೆಳಗಿನ ತನಕ ಕಾದರು. ವಿಷಯ ತಿಳಿದ ಮೇಲೆ ಊರಿನ ಅನೇಕರು ಅಲ್ಲಿಗೆ ಬಂದರು. ನಂತರ ವಿಜಿಕೆಕೆ (ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ) ಸಂಸ್ಥೆಯಿಂದ ಆಂಬ್ಯುಲೆನ್ಸ್ ತರಿಸಿದರು. ಅವರು ನನ್ನನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಆಸ್ಪತ್ರೆಗೆ ಕರೆದೊಯ್ದರು.” ಅವರು ವಿಜಿಕೆಕೆ ಆವರಣದಲ್ಲಿರುವ ವಿವೇಕಾನಂದ ಬುಡಕಟ್ಟು ಆರೋಗ್ಯ ಕೇಂದ್ರದ (ವಿಟಿಎಚ್ಸಿ) ಬಗ್ಗೆ ಇಲ್ಲಿ ಉಲ್ಲೇಖಿಸುತ್ತಿದ್ದಾರೆ.

M. Palani Kumar
"ಅವತ್ತು ಶುರುವಾದ ಆಸ್ಪತ್ರೆ ಅಲೆದಾಟ ಇನ್ನೂ ಮುಗಿದಿಲ್ಲ" ಎನ್ನುತ್ತಾರೆ ಅರುಣ್ ಅಪ್ಪ. ಅರುಣ್ ಸೊಂಟದ ಕೆಳಭಾಗದ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡಿದ್ದಾನೆ ಎಂದು VTHC ವೈದ್ಯರು ಪತ್ತೆಹಚ್ಚಿದ್ದರು. ಅವನ ಬೆನ್ನುಹುರಿ (spinal cord) ತೀವ್ರವಾಗಿ ಹಾನಿಗೊಳಗಾಗಿತ್ತು. “ನಂತರ ಅವರು ನಮ್ಮನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (CIMS) ಕಳುಹಿಸಿದರು. ಅಲ್ಲಿನ ವೈದ್ಯರು ಅವನ ಮೂಳೆ ಜಖಂಗೊಂಡಿದೆ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದರು. ಅಲ್ಲದೆ ನರವೊಂದು ಕೂಡ ಕತ್ತರಿಸಲ್ಪಟ್ಟಿತ್ತು. ಆಸ್ಪತ್ರೆಯವರೇ ವರದಿಗಳನ್ನು ಇಟ್ಟುಕೊಂಡರು. ನಮಗೆ ಕೇವಲ ಮಾತ್ರೆ ಮತ್ತು ಇಂಜೆಕ್ಷನ್ಗಳನ್ನು ನೀಡಲಾಯಿತು,” ಎಂದು ಎಂ. ಸಣ್ಣರಂಗೇಗೌಡ ವಿವರಿಸುತ್ತಾರೆ.
ಸ್ಪೈನಲ್ ಕೆನಲ್ ಸರಿಪಡಿಸಲು ಹಾಗೂ ನರಗಳಿಗೆ ಹೆಚ್ಚಿನ ಹಾನಿಯಾಗದಂತೆ ತಡೆಯಲು ಸಿಐಎಮ್ಎಸ್ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಂಡ ನಂತರ ಅರುಣ್ ಮತ್ತೆ ವಿಟಿಎಚ್ಸಿ ಕೇಂದ್ರಕ್ಕೆ ಮರಳಿದರು. ಅಲ್ಲಿನ ಸಿಬ್ಬಂದಿ ಅರುಣ ಅರುಣ ಅವರ ಪತ್ನಿ ಸೇರಿದಂತೆ, ಕುಟುಂಬದ ಪ್ರಾಥಮಿಕ ಆರೈಕೆದಾರರಿಗೆ ಅಗತ್ಯ ತರಬೇತಿಯನ್ನು ನೀಡಿದರು.

M. Palani Kumar

M. Palani Kumar
ಈ ಘಟನೆ ನಡೆಯುವ ಸಂದರ್ಭದಲ್ಲಿ ಅವರಿಗೆ ಮದುವೆಯಾಗಿ ಕೇವಲ ಆರು ತಿಂಗಳಷ್ಟೇ ಕಳೆದಿತ್ತು. "ಇದಕ್ಕೂ ಮುಂಚೆ ಅವನ ಹಂಡತಿನೇ ಅವನನ್ನು ಪೂರ್ತಿಯಾಗಿ ನೋಡಿಕೊಳ್ತಿದ್ಲು..." ಎಂದು ಅರುಣ್ ಅವರ ತಾಯಿ ಮಾದಮ್ಮ (ಮಸಣಮ್ಮ), ಯಾವುದೋ ವಿಷಯವನ್ನು ನಮ್ಮ ಬಳಿ ತಿಳಿಸಲು ಹಿಂಜರಿಯುತ್ತಿದ್ದರು. "ನಾವು ಇಡೀ ದಿನ ಕಾಡಿನಲ್ಲಿರ್ತೀವಿ. ಅವನು ಮನೇಲೇ ಇರ್ತಾನೆ. ಅವನಿಗೆ ಹೊತ್ತು ಕಳೆಯೋದಕ್ಕೆ ಇರೋದು ಮೊಬೈಲ್ ಮಾತ್ರ. ಇಡೀ ದಿನ ಅದನ್ನೇ ನೋಡ್ತಿರ್ತಾನೆ. ಅವನ ಫ್ರೆಂಡ್ಸ್ ಯಾರೂ ನೋಡೋದಕ್ಕೆ ಬರೋದಿಲ್ಲ. ಮೊದಲೆಲ್ಲ ಎಲ್ರೂ ಮನೆಗೆ ಬರೋರು. ಈ ಬರೋದಿಲ್ಲ. ಅವನಿಗೆ ಬೇಜಾರಾಗುತ್ತೆ. ತನ್ನಿಂದ ಏನೂ ಮಾಡೋದಕ್ಕೆ ಸಾಧ್ಯ ಇಲ್ಲ ಎನ್ನುವ ನೋವು ಅವನನ್ನು ಕಾಡ್ತಿರುತ್ತೆ. ನನಗೆ ಏನು ಮಾಡುವುದೆಂದು ನನಗೂ ಗೊತ್ತಾಗುವುದಿಲ್ಲ. ನನಗೆ ಅವನ ಬಗ್ಗೆ ಚಿಂತೆ ಕಾಡುತ್ತದೆ ಅಷ್ಟೇ..." ಎಂದು ಒಂದಷ್ಟು ಹೊತ್ತು ತಡೆದು ಹೇಳಿದರು.
"ಡಾಕ್ಟರ್ ಅಪ್ಪ, ಅಮ್ಮನ ಹತ್ರ ಏನು ಹೇಳಿದ್ದಾರೆ ಗೊತ್ತಿಲ್ಲ. ಆಪರೇಷನ್ ಸಕ್ಸಸ್ ಆಗಿದೆ ಅಂತ ನನ್ನ ಹತ್ರ ಹೇಳಿದ್ರು. ನಾನು ಮುಂದೆ ಯಾವ ಆಸರೆ ಇಲ್ಲದೆ ನಿಲ್ಲೋದಕ್ಕೆ ಸಾಧ್ಯ ಆಗುತ್ತೆ ಅಂತ ಹೇಳಿದ್ರು. ಆದರೆ ಆ ಬಗ್ಗೆ ಅವರಿಗೂ ಗ್ಯಾರಂಟಿ ಇದ್ದಿರ್ಲಿಲ್ಲ. ಅವರು ನನ್ನ ಹತ್ರ ನಿಲ್ಲೋದಕ್ಕೆ ಪ್ರಯತ್ನ ಮಾಡೋದಕ್ಕೆ ಕೇಳಿಕೊಂಡ್ರು. ಆದರೆ ಯಾವ್ದೇ ಸಪೋರ್ಟ್ ಇಲ್ದೆ ನಿಲ್ಲೋದಕ್ಕೆ ನನಗೆ ಕಷ್ಟ ಆಗ್ತಿತ್ತು" ಎಂದು ಅರುಣ್ ಹೇಳುತ್ತಾರೆ. ಅವರು ನಮ್ಮೊಂದಿಗೆ ಮಾತನಾಡುತ್ತಾಲೇ ತಮ್ಮ ವೀಲ್ ಚೇರ್ನ ಎಡಭಾಗದ ಹ್ಯಾಂಡಲ್ ಮೇಲೆ ಇರಿಸಲಾಗಿದ್ದ ಕ್ಯಾಥೆಟರ್ ಬ್ಯಾಗಿನ ಪೈಪನನ್ನು ಸರಿಪಡಿಸಿಕೊಂಡರು.
ಶಸ್ತ್ರಚಿಕಿತ್ಸೆಯಾದ ಕೆಲವೇ ದಿನಗಳಲ್ಲಿ ಅರುಣ್ ಅವರಿಗೆ ಮೂತ್ರ ಕಟ್ಟಿಕೊಳ್ಳುವ ಸಮಸ್ಯೆ ಸಮಸ್ಯೆ ಪದೇ ಪದೇ ಕಾಣಿಸಿಕೊಳ್ಳಲಾರಂಭಿಸಿತು. ವಿಜಿಕೆಕೆ ಆಸ್ಪತ್ರೆಯ ವೈದ್ಯರು ರೈಲ್ಸ್ ಟ್ಯೂಬ್ (Ryles tube) ಅನ್ನು ಕ್ಯಾಥೆಟರ್ ಆಗಿ ಬಳಸಲು ಪ್ರಯತ್ನಿಸಿದರಾದರೂ ಅದು ವಿಫಲವಾಯಿತು. ಅರುಣ್ ಅವರ ಹೊಟ್ಟೆಯ ಕೆಳಭಾಗದಲ್ಲಿ ಮುಟ್ಟಿದರೆ ಕೈಗೆ ಸಿಗುವಂತಹ ಊತವೊಂದು ಕಾಣಿಸಿಕೊಂಡು ಅದು ನೋವು ಕೊಡಲಾರಂಭಿಸಿತು.

M. Palani Kumar

Pratishtha Pandya
ಜುಲೈ ಮತ್ತು ಆಗಸ್ಟ್ ತಿಂಗಳು ಪೂರ್ತಿ ಈ ಸಮಸ್ಯೆ ಪದೇ ಪದೇ ಮರುಕಳಿಸುತ್ತಲೇ ಇತ್ತು. ಮೈಸೂರಿನ ಮೂತ್ರಪಿಂಡ ತಜ್ಞರ ಮಾರ್ಗದರ್ಶನದಲ್ಲೇ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಅವರಿಗೆ ಪದೇ ಪದೇ ಸೋಂಕುಗಳು ತಗುಲುತ್ತಿದ್ದವು ಮತ್ತು ಆಂಟಿ-ಬಯೋಟಿಕ್ ಔಷಧಿಗಳನ್ನು ನೀಡಬೇಕಾಗುತ್ತಿತ್ತು. ಕೆಲವೊಮ್ಮೆ ಅವರ ರಕ್ತದೊತ್ತಡ ಹೆಚ್ಚಾಗುತ್ತಿತ್ತು, ಇದನ್ನು ನಿಯಂತ್ರಿಸಲು ಆತಂಕ ನಿವಾರಕ ಔಷಧಿಗಳ ಅಗತ್ಯವಿತ್ತು. ತಿಂಗಳುಗಟ್ಟಲೆ ಅವರ ಮೂತ್ರ ವಿಸರ್ಜನೆಯ ಪ್ರಮಾಣವನ್ನು ಅತ್ಯಂತ ಹತ್ತಿರದಿಂದ ಗಮನಿಸಬೇಕಾದ ಅನಿವಾರ್ಯತೆ ಎದುರಾದಾಗ, ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ದಿನದಿಂದ ದಿನಕ್ಕೆ ಮತ್ತಷ್ಟು ಕಠಿಣವಾಯಿತು.
"ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸೋಕೆ ಶುರುವಾದ ಮೇಲೆ ನಾವು ಅವನನ್ನು ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಕರೆದೊಯ್ಯಲು ಶುರು ಮಾಡಿದೆವು. ಅಲ್ಲಿಗೆ ಬಹಳಷ್ಟು ಸಲ ಹೋಗಬೇಕಾಗಿ ಬಂತು. ಒಂದೊಂದು ಸಲ ಹೋದಾಗಲೂ ದೊಡ್ಡ ಬಾಬತ್ತಿನ ಹಣ ಖರ್ಚಾಗುತ್ತಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ್ರೀ ಆದ್ರೂ, ಚಾಮರಾಜನಗರ ಹೋಗೋದಕ್ಕೆ ಗಾಡಿಗೆ 3,000 ರೂಪಾಯಿ ಮತ್ತೆ ಮೈಸೂರಿಗೆ ಹೋಗೋದಕ್ಕೆ 5,000 ರೂಪಾಯಿ ಖರ್ಚಾಗ್ತಿತ್ತು. ಇದರ ಜೊತೆಗೆ ಡಾಕ್ಟರ್ ಅಲ್ಲಿ ಎಷ್ಟು ದಿನ ಇರೋದಕ್ಕೆ ಹೇಳ್ತಾರೋ ಅಷ್ಟು ದಿನಗಳ ಊಟದ ಖರ್ಚು ಈ ಖರ್ಚುಗಳ ಜೊತೆ ಸೇರಿಕೊಳ್ತಿತ್ತು. ಒಟ್ಟಾರೆ ಹೇಳೋದಾದ್ರೆ ಒಂದ್ಸಲ ಹೋಗಿ ಬರೋದಕ್ಕೆ ಕಡಿಮೆ ಅಂದ್ರೂ 10,000 ರೂಪಾಯಿ ಖರ್ಚಾಗುತ್ತಿತ್ತು.”
ಅರುಣ್ ತರಹದ ಜನರಿಗೆ ಸರ್ಕಾರ ಮಾಡುತ್ತಿರುವ ಸಹಾಯ ತೀರಾ ಕಡಿಮೆ ಎನ್ನುತ್ತಾರೆ ಡಾ. ಮಾದೇಗೌಡ ಹೇಳುತ್ತಾರೆ. "ಹುಲಿ ದಾಳಿ ಅಥವಾ ಆನೆ ದಾಳಿಯಿಂದ ಸಾವು ಸಂಭವಿಸಿದರೆ ಸುಮಾರು 20 ಲಕ್ಷ ರೂಪಾಯಿಗಳವರೆಗೆ ಪರಿಹಾರ ಪಡೆಯಬಹುದು. ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘಗಳು (ಎಲ್ಎಎಮ್ಪಿಎಸ್) ಕೂಡ ಗಂಭೀರ ಅಪಘಾತಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ಒಳಗೊಂಡ ವಿಮಾ ಯೋಜನೆಗಳನ್ನು ನೀಡುತ್ತವೆ. ಆದರೆ ಜೇನು ಸಂಗ್ರಹಿಸುವಾಗ ಮರದಿಂದ ಬಿದ್ದರೆ ಯಾವುದೇ ವಿಮೆ ಸಿಗುವುದಿಲ್ಲ, ಯಾವುದೇ ಪರಿಹಾರವೂ ಇಲ್ಲ." ಬಿ.ಆರ್. ಹಿಲ್ಸ್ ಸೇರಿದಂತೆ ಭಾರತದಾದ್ಯಂತ ಇರುವ ಆದಿವಾಸಿ ಅರಣ್ಯ ಉತ್ಪನ್ನ ಸಂಗ್ರಹಕಾರರು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. "ಅರುಣ್ಗಿಂತ ಮೊದಲು, ಕೆರೆದಿಂಬ ಪೋಡಿನ ಮತ್ತೊಬ್ಬ ಹುಡುಗ ಮರದಿಂದ ಬಿದ್ದು ತನ್ನ ಕಾಲನ್ನು ಕಳೆದುಕೊಂಡಿದ್ದ." ಸಹಕಾರ ಸಂಘವು ಕೆಲವೊಮ್ಮೆ 2,000 – 3,000 ರೂಪಾಯಿಗಳನ್ನು ಪರಿಹಾರವಾಗಿ ನೀಡುತ್ತದೆ, ಆದರೆ ಜೀವನ ಸಾಗಿಸಲು ಅದು ಸಾಕಾಗುವುದಿಲ್ಲ.

Pratishtha Pandya
“ಕೊನೆಗೂ ವೈದ್ಯರಿಂದ ಈ ಸಮಸ್ಯೆಯನ್ನು ಪೂರ್ತಿಯಾಗಿ ಸರಿಪಡಿಸಲು ಸಾಧ್ಯವಾಗಲಿಲ್ಲ; ಅವರು ಒಂದು ಹಂತದ ಮಟ್ಟಿಗಷ್ಟೇ ವಾಸಿ ಮಾಡಿದರು. ಅವನಿಗೆ ಯಾವುದಾದರೂ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಕೆ. ಆರ್. ಆಸ್ಪತ್ರೆಯವರು ಹೇಳುತ್ತಿದ್ದಾರೆ. ಆದರೆ ನಮ್ಮ ಹತ್ತಿರ ಹಣವಿಲ್ಲ. ಈಗ ವಿಜಿಕೆಕೆ ಆಸ್ಪತ್ರೆಯ ವೈದ್ಯರೇ ಪ್ರತಿ 15 ದಿನಕ್ಕೊಮ್ಮೆ ಮನೆಗೆ ಬಂದು ಕ್ಯಾಥೆಟರ್ ಬದಲಾಯಿಸಿ ಹೋಗುತ್ತಾರೆ. ಅವರು ಯಾವುದಕ್ಕೂ ಕಾಸು ತೆಗೆದುಕೊಳ್ಳುವುದಿಲ್ಲ” ಎಂದು ಅರುಣ್ ಅವರ ತಂದೆ ಹೇಳುತ್ತಾರೆ.
ಆದರೆ, ಅರುಣ್ ಅವರ ದಿನಗಳು ಈಗ ಅವರ ಹಿಂದಿನ ಬದುಕಿನ ಲಯವನ್ನು ಸಂಪೂರ್ಣವಾಗಿ ಕಳೆದುಕೊಂಡಿವೆ.
"ಬೆಳಗ್ಗೆಯಿಂದ ಇಲ್ಲಿ ಸುಮ್ನೆ ಕೂತಿರ್ತೀನಿ. ಕೆಲವು ದಿನ ವೀಲ್ ಚೇರನ್ನ ನಾನೇ ದೂಡಿಕೊಂಡು ಮನೆಯ ಗೇಟ್ ತನಕ ಹೋಗ್ತೀನಿ. ಇಲ್ಲ ಅಂದ್ರೆ ಸ್ವಲ್ಪ ಹೊತ್ತು ಇಲ್ಲಿ ಬಿಸಿಲಿಗೆ ಕೂರುತ್ತೇನೆ. ಮತ್ತೆ ಕೋಣೆಗೆ ಹೋಗ್ತೀನಿ. ಮೊದಲು ಎಲ್ರೂ ಮನೆಯಲ್ಲೇ ಒಟ್ಟಿಗೆ ಇದ್ವಿ. ಹೀಗಾದ ಮೇಲೆ ಈಗ ನನ್ನ ಜೊತೆ ಯಾರೂ ಇಲ್ಲ. ಸರಿಯಿದ್ದಾಗ ಎಲ್ರೂ ಬಂದು ಮಾತಾಡಿಸಿ ಖುಷಿಯಾಗಿ ಹೋಗ್ತಿದ್ರು. ಈಗ ಬಹಳ ಕಷ್ಟ ಅನ್ಸತ್ತೆ. ಯಾರೂ ಬರೋದಿಲ್ಲ. ಈ ಕೋಣೆಯನ್ನು (ತಗಡಿನ ಶೆಡ್) ಮೊದಲೇ ಕಟ್ಟಿದ್ವಿ. ಇಲ್ಲಿಂದ ಓಡಾಡೋದಕ್ಕೆ ಸುಲಭ ಆಗುತ್ತೆ ಅಂತ ಇಲ್ಲಿ ಉಳಿದುಕೊಳ್ಳೋದಕ್ಕೆ ಶುರು ಮಾಡಿದೆ. ಆದ್ರೆ ಸಹಾಯ ಮಾಡೋದಕ್ಕೆ ಯಾರೂ ಇಲ್ಲ. ಮತ್ತೆ ನನಗೆ ಹೀಗೆ ಇರೋದು ಇಷ್ಟ ಆಗ್ತಿಲ್ಲ" ಎನ್ನುತ್ತಾರೆ ಅರುಣ್.
"ನಾನು ಹೀಗೆ ಅಸಹಾಯಕಮಾದ ಮೇಲೆ ಹೆಂಡತಿ ಕೂಡಾ ಬಿಟ್ಟು ಹೋದಳು. ಅವಳು ಇಲ್ಲಿದ್ದಾಗ ನನ್ನ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಳು. ಆದರೆ ಪರಿಸ್ಥಿಯಲ್ಲಿ ಏನೂ ಬದಲಾವಣೆ ಆಗದ ಕಾರಣ ಅವಳು ನನನ್ನ ಬಿಟ್ಟು ಹೋಗೋದಕ್ಕೆ ನಿರ್ಧಾರ ಮಾಡಿದಳು. ಅದಾದ ಮೇಲೆ ಒಂದು ದಿನ ಫೋನ್ ಮಾಡಿ ʼನಿನಗೆ ಇದೆಲ್ಲ ಸರಿಯಾದ ಮೇಲೆ ವಾಪಸ್ ಬರ್ತೀನಿʼ ಎಂದು ಹೇಳಿದಳು. ಅವಳು ನನ್ನಿಂದ ದೂರವಾಗಿ ಈಗ ಮೂರು ತಿಂಗಳು ಕಳೆದಿದೆ" ಎಂದು ವಿವರಿಸಿದ ಅರುಣ್ ಧ್ವನಿ ಅವರ ದೇಹದಷ್ಟೇ ಮೃದುವೂ, ದುರ್ಬಲವೂ ಆಗಿತ್ತು.

M. Palani Kumar

M. Palani Kumar
"ಅವನಿಗೆ, ಊಟ ತಿಂಡಿ ಕೊಡೋದು, ಸ್ನಾನ ಮಾಡಿಸೋದು ಎಲ್ಲಾ ನಾನೇ ಮಾಡ್ತೀನಿ. ಒಂದ್ವೇಳೆ ಅವನಿಗೆ ಟಾಯ್ಲೆಟ್ ಹೋಗ್ಬೇಕು ಅಂದ್ರೆ ಅವ್ರಪ್ಪ ಹೆಲ್ಪ್ ಮಾಡ್ತಾರೆ. ” ಎಂದು ಅರುಣ್ ಅವರ ತಾಯಿ ಹೇಳುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ಅರುಣ್ ಅವರಿಗೆ ಸ್ನಾನ ಮತ್ತು ದೈನಂದಿನ ಶೌಚ ಕಾರ್ಯಗಳಿಗೆ ಇತರರ ಸಹಾಯದ ಅಗತ್ಯವಿದೆ. ಅವರ ಕೋಣೆಯಲ್ಲಿ ವಯಸ್ಕರು ಬಳಸುವ ಡೈಪರ್ಗಳ ಬ್ಯಾಗ್ ನೇತಾಡುತ್ತಿರುವುದು ಕಂಡುಬರುತ್ತದೆ. "ಈ ಡೈಪರ್ ತಗೊಳ್ಳೋದಕ್ಕೆ ಅಂತ್ಲೇ ನಾವು ತಿಂಗಳಿಗೆ 1,500 ರೂಪಾಯಿ ಖರ್ಚು ಮಾಡ್ತೀವಿ" ಎನ್ನುತ್ತಾರೆ ಅರುಣ್ ತಂದೆ.
"ಅವನ ತಂಗೀರು ದಿನಕ್ಕೆ ಐದರಿಂದ ಹತ್ತು ನಿಮಿಷ ಅವನ ಜೊತೆ ಮಾತಾಡ್ತಾರೆ. ಅವರಿಗೂ ಕಾಲೇಜು ಕೆಲಸಗಳಿರುತ್ತೆ" ಎಂದ ಅರುಣ್ ತಾಯಿ ಸ್ವಲ್ಪ ಹೊತ್ತು ಸುಮ್ಮನಿದ್ದ ನಂತರ, "ಅವನು ಒಂದಷ್ಟು ಓಡಾಡೋ ಹಾಗೆ ಆಗಿ, ಅವನ ಕೆಲಸಗಳನ್ನ ಅವನೇ ಮಾಡಿಕೊಳ್ಳೋ ಹಾಗೆ ಆದ್ರೆ ನಮಗೆ ಅಷ್ಟೇ ಸಾಕು. ಸದ್ಯಕ್ಕೆ ನಮಗೆ ಇರೋ ಆಸೆ ಅದೊಂದೇ" ಎಂದರು.
“ಅದು ಆಗಬೇಕು ಅಂದ್ರೆ ನಾವು ದೊಡ್ಡಾಸ್ಪತ್ರೆಗೆ ಹೋಗಬೇಕು” ಎಂದು ಕೂಡಲೇ ಅರುಣ್ ತಂದೆ ಹೇಳಿದರು.
“ನಾನು ಎಲ್ಲೀಗೂ ಸೇರ್ಸಲ್ಲ ಅವ್ನನ್ನ” ಎಂದು ಕೋಪದಿಂದ ನುಡಿದ ಅರುಣ್ ತಾಯಿ, “ಕಳೆದ ಸಲ ಸೇರ್ಸಿ ಅದರಿಂದ ಆಗಿದ್ದು ಏನೂ ಇಲ್ಲ. ಇನ್ನೊಂದ್ಸಲ ಅದನ್ನೆಲ್ಲ ಮತ್ತೆ ಮಾಡೋದಕ್ಕೆ ನಾನಂತೂ ರೆಡಿ ಇಲ್ಲ.”
“ನನ್ನ ಹೆಂಡತಿಗೆ ಆಸ್ಪತ್ರೆ ಅಂದ್ರೆ ಆಗಲ್ಲ, ಅದಕ್ಕೆ ಹಾಗೆ ಹೇಳ್ತಾಳೆ…” ಎಂದು ಗೌಡರು ವಿವರಿಸಿದರು.

M. Palani Kumar

M. Palani Kumar
"ಅಲ್ಲಿ ಅವನನ್ನು ನೋಡಿಕೊಳ್ಳೋರು ಯಾರು?" ಎನ್ನುತ್ತಾ ಮಸಣಮ್ಮ ತನ್ನ ಗಂಡನ ಮಾತಿನ ನಡುವೆ ಬಾಯಿ ಹಾಕಿದರು. "ಅಲ್ಲಿ ಅವನನ್ನ ನೋಡಿಕೊಳ್ಳೋದಕ್ಕೆ ಯಾರೂ ಇರಲ್ಲ. ಒಂದು ವೇಳೆ ನಾವು ಹೋದ್ರೆ ಇಲ್ಲಿನ ಕೆಲಸಗಳನ್ನ ನೋಡಿಕೊಳ್ಳೋರು ಯಾರೂ ಇಲ್ಲ. ನಮಗೆ ಹೋಗೋದಕ್ಕೆ ಆಗಲ್ಲ. ಅಲ್ಲಿ ಅವನ ಜೊತೆ ಕೂತ್ಕೊಳ್ಳೋದಕ್ಕೆ ಯಾರೂ ಇರಲ್ಲ. ಇದು ನಮಗೆ ಬಹಳ ಕಷ್ಟದ ಕೆಲಸ." ಇಷ್ಟು ಮಾತನಾಡಿದ ಮಸಣಮ್ಮ ತಾನು ಕುಳಿತಲ್ಲಿಂದ ಎದ್ದು ಬಿರಬಿರನೆ ತೋಟದ ಕೆಲಸದತ್ತ ನಡೆದರು. ಬಹುಶಃ ಅವರು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ನೋವನ್ನು ತಾತ್ಕಾಲಿಕವಾಗಿ ಮರೆಯಲು ಪ್ರಯತ್ನಿಸುತ್ತಿದ್ದಿರಬಹುದು.
ಅರುಣ್ ಮತ್ತೆ ಕೆಲಸಕ್ಕೆ ಮರಳಲು ಸಾಧ್ಯವಿಲ್ಲ. ಅವರು ಕಾಯಲೇಬೇಕು. ಯಾರಾದರೂ ಬಂದು ತನ್ನನ್ನು ಉಪಚರಿಸಲಿ ಎಂದು ಕಾಯಬೇಕು. ಸಮಯ ಕಳೆಯಲಿ ಎಂದು ಕಾಯಬೇಕು.

M. Palani Kumar

M. Palani Kumar

M. Palani Kumar
ಮಾರ್ಚ್ ತಿಂಗಳು ಬಂತೆಂದರೆ, ನೇರಳೆ ಮರಗಳು ಮತ್ತೆ ಹೂ ಬಿಡುತ್ತವೆ. ವಲಸೆ ಬರುವ ಇಂಡಿಯನ್ ರಾಕ್ ಜೇನುನೊಣಗಳು, ಈ ಮರಗಳ ಪರಿಮಳಯುಕ್ತ ಮತ್ತು ತಿಳಿ ಹಳದಿ ಬಣ್ಣದ ಹೂವುಗಳ ಮಕರಂದವನ್ನು ಅರಸುತ್ತಾ ಬೆಟ್ಟಗಳಿಗೆ ಮುತ್ತಿಗೆ ಹಾಕುತ್ತವೆ. ಇದರೊಂದಿಗೆ ಬಿ.ಆರ್. ಹಿಲ್ಸ್ ಅರಣ್ಯದಲ್ಲಿ ಜೇನು ಸಂಗ್ರಹಣೆಯ ಮತ್ತೊಂದು ಹಂಗಾಮು ಶುರುವಾದಂತೆ, ಅರುಣ್ ಅವರ ಯುವ ಗೆಳೆಯರು ಎತ್ತರದ ಮರಗಳತ್ತ ಹೆಜ್ಜೆ ಹಾಕುತ್ತಾರೆ. ಆಗ ಕಾಡಿನ ತುಂಬೆಲ್ಲಾ ಜೇನು ಕುಯ್ಯೋ ಹಾಡು ಮತ್ತೆ ಪ್ರತಿಧ್ವನಿಸುತ್ತದೆ:
ಕಾರನ ಕರೆಯೋ ಕಾರೆಯ…
ಸೊಪ್ಪಿ ನರಕೆ ಕಾರನ…
ಕೆಂಬರೆ ಬರೆಯಲಿ ಜೇನಾದೆ…
ಕೆಂಬರೆ ಬರೆಯಲಿ ಜೇನಾದೆ…
ಕೆಂಬರೆ ಜೇನು ಕೆಂಚು ಜೇನು…
ಕೆಂಬರೆ ಜೇನು ಕೆಂಚು ಜೇನು…
ಕಾರನ ಕರೆಯೋ ಕಾರೆಯ…
ಅರುಣ್ಗೂ ಈ ಹಾಡೋದಕ್ಕೆ ಬರುತ್ತಿತ್ತು; ಆದ್ರೆ ಈ ಸಲ ಅವರು ಹಾಡುವುದಿಲ್ಲ…

M. Palani Kumar

M. Palani Kumar

M. Palani Kumar

M. Palani Kumar
ಈ ಕಥೆಯನ್ನು ಬರೆಯಲು ಅಮೂಲ್ಯ ಬೆಂಬಲ ನೀಡಿದ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ನ ಡಾ. ತಾನ್ಯಾ ಶೇಷಾದ್ರಿ, ಡಾ. ಸಂಗೀತ ವಿ. ಮತ್ತು ಮಹದೇವಮ್ಮ ಕುಂಬೇಗೌಡ, ಡಾ. ಪ್ರಥಮೇಶ್, ಅರುಣ್ ಮತ್ತು ಅವರ ಕುಟುಂಬ, ಸೋಲಿಗ ಸಮುದಾಯದ ಕಾರ್ಯಕರ್ತ ಕೀರ್ತಿಕರಣ್ ಗೌಡ ಮತ್ತು ಡಾ. ಸಿ. ಮಾದೇಗೌಡ ಅವರಿಗೆ ಲೇಖಕರು ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಹಾಗೆಯೇ, ಈ ಕಥೆಯನ್ನು ಬರೆಯುವ ವಿವಿಧ ಹಂತಗಳಲ್ಲಿ ಅನುವಾದಕ್ಕೆ ಸಹಾಯ ಮಾಡಿದ ಡಾ. ಶೋಭನಾ ಕಿರಣ್, ಶಂಕರ್ ಕೆಂಚನೂರು ಮತ್ತು ದೀಪಾ ಅವರಿಗೂ ಲೇಖಕರು ಧನ್ಯವಾದಗಳನ್ನು ಅರ್ಪಿಸುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/the-broken-winged-bird-of-br-hills-kn

