ಮಧ್ಯಾಹ್ನದ ಹೊತ್ತು, ಸೀತಾ ಸಸಣೆಯವರು ತಮ್ಮ ಕೆಲಸಕ್ಕೆ ವಿರಾಮ ನೀಡಿ ಕಬ್ಬಿನ ಗದ್ದೆಯಲ್ಲಿ ಮನೆಯವರಿಗೆ ಊಟ ಬಡಿಸುತ್ತಿದ್ದರು. ಅಲ್ಲೇ ಕುಳಿತಿದ್ದ ತಮ್ಮ ಗಂಡನ ಕಡೆಗೆ ಅವರು ನೋಡಿದರು. ಆ ದೃಶ್ಯವನ್ನು ಕಂಡು ಹೆದರಿ ಕಂಗೆಟ್ಟು ಹೋದರು.
ತಲೆಯನ್ನು ಒಂದು ಕಡೆಗೆ ವಾಲಿಸಿ, ಕಲ್ಲಿನಂತೆ ಅವರ ಗಂಡ ಕೇಶವ್ ಕುಳಿತಿದ್ದರು. ಇದನ್ನು ನೋಡುತ್ತಲೇ ಸೀತಾ ಧಾವಿಸಿ ಬಂದರು. ನೋಡಿದರೆ, ಅಲ್ಲಿ ನೋಡಿದರೆ ಕೇಶವ್ ಕುಳಿತಲ್ಲೇ ಮೂತ್ರ ಮಾಡಿಕೊಂಡಿದ್ದರು.
“ಅವರ ಹೆಸರು ಎತ್ತಿ ಬೊಬ್ಬೆ ಹೊಡೆದು ಕರೆದೆ. ಉತ್ತರ ಬರಲಿಲ್ಲ,” ಎಂದು ಕೆಲವು ವರ್ಷಗಳ ಹಿಂದೆ ನಡೆದ ಘಟನೆಯನ್ನು ಸೀತಾ ನೆನಪಿಸಿಕೊಂಡರು. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಹೇರ್ವಾಹೆಗಾಂವ್ ಎಂಬ ಊರಿನಲ್ಲಿರುವ ಅವರ ಒಂದು ಕೋಣೆಯ ಮನೆಯಲ್ಲಿ ನಾವು ಅವರೊಂದಿಗೆ ಕುಳಿತುಕೊಂಡಿದ್ದೆವು.
ಆ ಘಟನೆ ನಡೆದ ದಿನ ಗಂಡ-ಹೆಂಡತಿ ಇಬ್ಬರೂ ಕೊಲ್ಲಾಪುರದ ಕಬ್ಬಿನ ಗದ್ದೆಯೊಂದರಲ್ಲಿ ಬೆಳಗ್ಗಿನಿಂದ ಎಡೆ ಬಿಡದೆ ಕಬ್ಬು ಕಟಾವು ಮಾಡಿದ್ದರು. ಅವುಗಳನ್ನು ಸಕ್ಕರೆ ಕಾರ್ಖಾನೆಯೊಂದರ ಟ್ರಾಕ್ಟರ್ಗೆ ಲೋಡ್ ಮಾಡಿದ್ದರು. ಅವರ ಇಬ್ಬರು ಗಂಡುಮಕ್ಕಳೂ ಅಪ್ಪ-ಅಮ್ಮನೊಂದಿಗೆ ಪಶ್ಚಿಮ ಮಹಾರಾಷ್ಟ್ರದಲ್ಲಿರುವ ಅದೇ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು.
ಬೆಳ್ಳಂಬೆಳಗ್ಗೆ ಕೆಲಸ ಆರಂಭಿಸಿದರೆ, ಬೆನ್ನುಮೂಳೆ ಮುರಿಯುವಂತೆ ಸೂರ್ಯ ಮುಳುಗುವ ವರೆಗೆ ದುಡಿಯುತ್ತಿದ್ದರು. ಮಧ್ಯಾಹ್ನ ಊಟದ ಹೊತ್ತಿನಲ್ಲಿ ಅರ್ಧ ಗಂಟೆಯಷ್ಟೇ ವಿರಾಮ. ಆ ದಿನ 45 ವರ್ಷ ಪ್ರಾಯದ ಸೀತಾ ಹೊಲದಲ್ಲೇ ಒಂದು ಹಾಸನ್ನು ಹಾಸಿ ಬೆಳಗ್ಗೆ ತಮ್ಮ ಗುಡಿಸಲಿನಲ್ಲಿ ಅವಸರ ಅವಸರದಿಂದ ತಯಾರಿಸಿದ ಊಟದ ಬುತ್ತಿಯನ್ನು ಬಿಚ್ಚಿದರು. ನಾಲ್ಕು ತಟ್ಟೆಗಳಲ್ಲಿ ಊಟ ಬಡಿಸಿ, ಮೊದಲ ತಟ್ಟೆಯನ್ನು ಅಲ್ಲೇ ಕುಳಿತಿದ್ದ ತಮ್ಮ ಗಂಡ 55 ವರ್ಷ ಪ್ರಾಯದ ಕೇಶವ್ ಅವರಿಗೆ ಕೊಟ್ಟರು. ಕೇಶವ್ ತಮ್ಮದೇ ಲೋಕದಲ್ಲಿ ಮುಳುಗಿದ್ದಂತೆ ಕುಳಿತಿದ್ದರು. ಇದ್ದಕ್ಕಿದ್ದಂತೆ ಅವರ ಮುಖ ವಿಕಾರವಾಗಿ ಒಂದು ಬದಿಗೆ ವಾಲಿತು.
“ಅವರನ್ನು ನೋಡಿ ಹೆದರಿ ಹೋದೆ. ಪಕ್ಕದ ಕ್ಲೀನಿಕ್ಗೆ ಕರೆದುಕೊಂಡು ಹೋದೆವು,” ಎಂದು 2023ರ ಅಕ್ಟೋಬರ್ ತಿಂಗಳ ಮಧ್ಯಾಹ್ನ ನಡೆದ ಆ ಭಯಾನಕ ಘಟನೆಯನ್ನು ನೆನಪಿಸಿಕೊಂಡರು.
ವೈದ್ಯರು ಕೇಶವ್ ಅವರಿಗೆ ಲಕ್ವಾ ಬಡಿದಿದೆ ಎಂದರು. ಅವರನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿತ್ತು.
ಆದರೆ, ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಹೋಗುವುದು ಅಷ್ಟು ಸುಲಭವಿರಲಿಲ್ಲ. ಉಳಿದ ವಲಸೆ ಕಾರ್ಮಿಕರಂತೆ ಇವರ ಕುಟುಂಬವೂ ಗುತ್ತಿಗೆದಾರನಿಂದ 1.5 ಲಕ್ಷ ರುಪಾಯಿಗಳನ್ನು ಮುಂಗಡವಾಗಿ ತೆಗೆದುಕೊಂಡಿತ್ತು. ಆರು ತಿಂಗಳ ಕಬ್ಬು ಕಟಾವು ಅವಧಿಯಲ್ಲಿ ತಾವು ಕತ್ತರಿಸುವ ಕಬ್ಬಿನ ಪ್ರಮಾಣಕ್ಕೆ ಅನುಗುಣವಾಗಿ ತಮಗೆ ಸಿಗುವ ಹಣವನ್ನು ಲೆಕ್ಕಹಾಕಿ, ಅದರಿಂದ ಕಡಿತ ಮಾಡುವಂತೆ ತಿಳಿಸಿ ಈ ಹಣವನ್ನು ತೆಗೆದುಕೊಂಡಿದ್ದರು.
“ನಮ್ಮನ್ನು ಕೆಲಸಕ್ಕೆ ತೆಗೆದುಕೊಂಡಿದ್ದ ಗುತ್ತಿಗೆದಾರ ಆಸ್ಪತ್ರೆಗೆ ಹೋಗಲು ಬಿಡಲಿಲ್ಲ,” ಎಂದು ದಲಿತ ಸಮುದಾಯಕ್ಕೆ ಸೇರಿದ ಸೀತಾ ಹೇಳಿದರು. ತಮ್ಮ ಮೇಲೆ ಕರುಣೆ ತೋರುವಂತೆ ಗುತ್ತಿಗೆದಾರನನ್ನು ಬೇಡಿಕೊಂಡರು. ಆದರೆ ಆತನ ಹೃದಯ ಕಿಂಚಿತ್ತೂ ಕರಗಲಿಲ್ಲ. 23 ವರ್ಷ ಪ್ರಾಯದ ಸೌರಭ್ ಮತ್ತು 21 ವರ್ಷ ಪ್ರಾಯದ ಸೂರಜ್ರೊಂದಿಗೆ ಗದ್ದೆಗೆ ಹೋಗಿ ಕೆಲಸ ಮಾಡುಂತೆ ಸೀತಾ ಅವರನ್ನು ಆತ ಒತ್ತಾಯಿಸಿದ. ಈ ಕಡೆ ಕೇಶವ್ ಅವರು ಹೊಲದಲ್ಲಿದ್ದ ತಮ್ಮ ಗುಡಿಸಲಿನಲ್ಲಿ ಅಸ್ವಸ್ಥರಾಗಿ ಮಲಗಿದ್ದರು.












