ಹಬೀಬುನ್ನೀಸಾ ಅವರು ತಾನು ಕಂಡ ಹಿಂಸಾಚಾರದಿಂದ ಆಘಾತಗೊಂಡರೂ, ಪ್ರತಿಭಟನಾಕಾರರಿಂದ ಪ್ರೇರಿತರಾಗಿದ್ದರು. "ನಾನು ಒಬ್ಬಳು ಸಾಮಾನ್ಯ ತಾಯಿ, ನನ್ನ ಮಕ್ಕಳೇ ನನ್ನ ಪ್ರಪಂಚ," ಎಂದು ತೀರಿಹೋದ ಸನಾ ಶೇಕ್ ತಾಯಿ 'ಪಾರಿ'ಗೆ ತಿಳಿಸಿದರು. "ನಾನು ಮನೆ ನೋಡಿಕೊಳ್ಳುತ್ತಾ ಜೀವನ ನಡೆಸುತ್ತಿದ್ದೆ, ಆದರೆ ಅಧಿಕಾರದಲ್ಲಿರುವವರು ನನ್ನ ಬದುಕನ್ನು ಅಸ್ತವ್ಯಸ್ತಗೊಳಿಸಿದರು. ಅವರ ನಿರ್ಧಾರಗಳಿಂದಾಗಿ ನನ್ನ ಮಗಳು ತೀರಿಕೊಂಡಳು. ನೀವು ನಮ್ಮನ್ನು ರಕ್ಷಿಸಬೇಕೇ ಹೊರತು ನಮ್ಮ ಜೀವನವನ್ನು ಹಾಳುಮಾಡಬಾರದು" ಎಂದರು.
ಮೇ 3, 2026 ರಂದು ಸನಾ ತನ್ನ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳೊಂದಿಗೆ ಪಾಸ್ ಆದ ನಂತರ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಮತ್ತು ವಿದ್ಯಾರ್ಥಿಗಳು ಮರುಪರೀಕ್ಷೆಗೆ ಹಾಜರಾಗಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿತು. ಇದರಿಂದ ಆಕೆ ಸಂಪೂರ್ಣವಾಗಿ ಕುಗ್ಗಿಹೋದಳು. ಈಗಾಗಲೇ ಪರೀಕ್ಷೆಗಾಗಿ ಪಟ್ಟ ಕಠಿಣ ಪರಿಶ್ರಮ ಆಕೆಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ನೀಟ್ ತುಂಬಾ ಕಾಂಪಿಟೀಷನ್ ಇರುವ ಪರೀಕ್ಷೆಯಾಗಿದ್ದು, ವೈದ್ಯಕೀಯ ಕಾಲೇಜುಗಳಲ್ಲಿ ಇರುವ 1,30,000 ಕ್ಕಿಂತ ಕಡಿಮೆ ಸೀಟುಗಳಿಗಾಗಿ 20 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಪರೀಕ್ಷೆ ಬರೆಯುತ್ತಾರೆ. ವರ್ಷಗಳ ಸಿದ್ಧತೆಯ ನಂತರ, ಅನುಭವಿಸಿದ ಒತ್ತಡವೆಲ್ಲಾ ಕೊನೆಗೂ ಮುಗಿಯಿತುಅಂತ ಸನಾ ಅಂದುಕೊಂಡಿದ್ದಳು. ಆದರೆ ಈಗ ಆಕೆ ಅದೇ ಒತ್ತಡಗಳ ಮೂಲಕ ಮತ್ತೆ ಹಾದು ಹೋಗಬೇಕಾಗಿತ್ತು.
ದುಃಖದ ಸಂಗತಿಯೆಂದರೆ, ಮರುಪರೀಕ್ಷೆ ಬರೆಯುವ ಭಾರವು ಆತ್ಮಹತ್ಯೆಯ ಪತ್ರ ಬರೆಯುವುದಕ್ಕಿಂತಲೂ ಹೆಚ್ಚಾಗಿ ಕಂಡಿತು ಹುಡುಗಿಗೆ. ಜೂನ್ 21 ರಂದು ಮರುಪರೀಕ್ಷೆಯ ಒಂದು ದಿನದ ಮೊದಲು ತನ್ನ ಕೋಣೆಯಲ್ಲಿ "ನನ್ನನ್ನು ಕ್ಷಮಿಸಿ" ಎಂದು ಗೀಚಿಟ್ಟು, ನೇಣಿಗೆ ಶರಣಾಗಿದ್ದಳು.
ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸನಾ ಕೂಡಾ ಒಬ್ಬಳು.
"ಅವತ್ತು ಬೆಳಿಗ್ಗೆ ಅವಳು ನನ್ನ ಫೋನ್ ರಿಸೀವ್ ಮಾಡಿಲ್ಲ," ಎಂದು ಜಾಫರ್ ಹೇಳುತ್ತಾರೆ. ನೋವಿನಿಂದ ಕಂಗಾಲಾಗಿದ್ದ ಆ ತಂದೆ "ಒಂದು ವೇಳೆ ನಾನು ಆಕೆಯೊಂದಿಗೆ ಮಾತನಾಡಲು ಸಾಧ್ಯವಾಗಿದ್ದರೆ, ಆಕೆ ಇಂದಿಗೂ ನಮ್ಮೊಂದಿಗಿರುತ್ತಿದ್ದಳೇನೋ," ಎಂದು ಪ್ರತಿಭಟನಾ ಸ್ಥಳದಲ್ಲಿ ಮಾತನಾಡುತ್ತಾ ಹೇಳಿದರು.
"ನಾನು ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ಇಷ್ಟೊಂದು ದೂರ ಬಂದಿದ್ದೇನೆ," ಎಂದು ದುಃಖದಿಂದ ನರಳುತ್ತಿರುವ ತಾಯಿ ಹಬೀಬುನ್ನೀಸಾ ಹೇಳುತ್ತಾರೆ. ತಮ್ಮ ಹಿರಿಯ ಮಗಳು ಇನ್ನು ಮುಂದೆ ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅವರು ಇನ್ನೂ ಹೆಣಗಾಡುತ್ತಿದ್ದಾರೆ. "ನಾವು ಐದು ವರ್ಷಗಳಲ್ಲಿ ಸಾಯಬಹುದು, ಅಥವಾ ವಯಸ್ಸಾಗುವವರೆಗೆ ಬದುಕಿರಬಹುದು, ಆದರೆ ನಮ್ಮ ಉಳಿದ ಜೀವನ ಪೂರ್ತಿ ಈ ನೋವನ್ನು ಹೊರಬೇಕಾಗುತ್ತದೆ," ಎಂದು ಹೇಳುವ ಅವರು, "ರಾತ್ರಿ ವೇಳೆ ನನಗೆ ಸರಿಯಾಗಿ ನಿದ್ರೆ ಬರುವುದಿಲ್ಲ, ಮಧ್ಯರಾತ್ರಿಯಲ್ಲಿ ನನ್ನ ಕೈ-ಕಾಲುಗಳು ನಡುಗಲು ಪ್ರಾರಂಭಿಸುತ್ತವೆ." ಅಂತ ಹೇಳುತ್ತಾರೆ.
ಆದರೂ, ಆ ಪೋಷಕರು ತಮ್ಮ 15 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಮನೆಯಲ್ಲಿ ಬಿಟ್ಟು ದೆಹಲಿಗೆ ಬಂದಿದ್ದಾರೆ. "ನಾನು ಅವರ ಬಗ್ಗೆಯೇ ಯೋಚಿಸುತ್ತಾ ಆತಂಕಕ್ಕೊಳಗಾಗುತ್ತೇನೆ. ಅಧಿಕಾರದಲ್ಲಿರುವವರು ಮಾಡುತ್ತಿರುವುದು ತಪ್ಪು ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಅಧಿಕಾರ ನಿಮ್ಮ ಕಣ್ಣನ್ನು ಕುರುಡುಗೊಳಿಸಿದೆಯೇ? ಆ ವಿದ್ಯಾರ್ಥಿಗಳು ನನ್ನಂತ ತಾಯಂದಿರಿಗಾಗಿ ಪ್ರತಿಭಟಿಸುತ್ತಿದ್ದಾರೆ. ಅವರು ಸೆನ್ಸಿಟಿವ್ ಆಗಿರುವ ವಿದ್ಯಾರ್ಥಿಗಳು. ನನ್ನ ದುಃಖವನ್ನು ಹಂಚಿಕೊಂಡವರ ಮೇಲೆ ಪೊಲೀಸರು ಹಲ್ಲೆ ನಡೆಸುವುದನ್ನು ನೋಡಲು ತುಂಬಾ ನೋವಾಗುತ್ತದೆ. ನಮ್ಮ ನೋವು ನಿಮಗರ್ಥವಾಗದಿದ್ದರೆ, ನಿಮ್ಮ ಅಧಿಕಾರದಿಂದ ಏನು ಪ್ರಯೋಜನ? ದಯವಿಟ್ಟು ಮಕ್ಕಳ ಮೇಲೆ ಕ್ರೌರ್ಯ ಎಸಗಬೇಡಿ. ಬಚ್ಚೋಂ ಪೆ ಇತ್ನಾ ಜುಲ್ಮ್ ಮತ್ ಕರಿಯೇ [ದಯವಿಟ್ಟುಮಕ್ಕಳ ಮೇಲೆ ಇಷ್ಟೊಂದು ದೌರ್ಜನ್ಯ ಮಾಡಬೇಡಿ]."