“ಜನರು ನಾವು ಒಂದು ಪರೀಕ್ಷೆ ಅಥವಾ ಒಂದು ಕೆಲಸದ ಕುರಿತಾಗಿ ಪ್ರತಿಭಟಿಸಲು ಬಂದಿದ್ದೇವೆ ಎಂದುಕೊಂಡಿದ್ದಾರೆ. ಆದರೆ ನಾವು ಬಂದಿರುವುದು ವರ್ಷದಿಂದ ವರ್ಷಕ್ಕೆ ನಮಗೆ ನಮ್ಮ ಭವಿಷ್ಯದ ಕುರಿತು ಭರವಸೆ ಕಡಿಮೆಯಾಗುತ್ತಿರುವ ಕಾರಣಕ್ಕೆ” ಎನ್ನುತ್ತಾರೆ ಛೋಟು ಯಾದವ್.
ಈ 27 ವರ್ಷದ ಯುವಕ ಬಿಹಾರದ ಸಿವಾನ್ ಎನ್ನುವಲ್ಲಿಂದ ಕಿಕ್ಕಿರಿದ ರೈಲಿನ ಜನರಲ್ ಬೋಗಿಯಲ್ಲಿ ದೆಹಲಿಗೆ ಬಂದು ತಲುಪಿದ್ದಾರೆ. “ನಮ್ಮ ಊರುಗಳಲ್ಲಿ ಯುವಕರು ಒಂದೋ ವಲಸೆ ಹೋಗುತ್ತಿದ್ದಾರೆ ಅಥವಾ ಎಂದಿಗೂ ಬಾರದ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ” ಎನ್ನುತ್ತಾರೆ ಛೋಟು.
“ಚಲೋ ಸಂಸದ್” ಪ್ರತಿಭಟನಾ ಮೆರವಣಿಗೆಗೆ ಕರೆ ಕೊಟ್ಟಿದ್ದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ). ಭಾರತದ ಯುವಜನರ ಕಾಳಜಿಗಳನ್ನು ಸಂಸತ್ತಿಗೆ ನೇರವಾಗಿ ತಲುಪಿಸುವ ಸಲುವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. 2025ರ ಜುಲೈ 20ರಿಂದ ಸಂಸತ್ತಿನಲ್ಲಿ ಈ ಬಾರಿಯ ಮುಂಗಾರು ಅಧಿವೇಶನ ಶುರುವಾಗಿತ್ತು.
ಇದೀಗ ಈ ಪ್ರತಿಭಟನೆಯು ಸಿಜೆಪಿ ವ್ಯಾಪ್ತಿಯನ್ನು ಮೀರಿ ದೇಶವ್ಯಾಪಿ ಹರಡಿದ್ದು, ಹಲವು ನಗರಗಳಲ್ಲಿ ಈ ಹೋರಾಟ ಪ್ರತಿಧ್ವನಿಸತೊಡಗಿದೆ.
ಮೊದಲಿಗೆ ಈ ಪ್ರತಿಭಟನೆ ಆರಂಭವಾಗಿದ್ದು ಪದೇ ಪದೇ ನಡೆದ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ. ನಂತರ ನಿರುದ್ಯೋಗ, ಸರ್ಕಾರಿ ನೇಮಕಾತಿಯಲ್ಲಿನ ವಿಳಂಬ, ಮತ್ತು ಸಾರ್ವಜನಿಕ ಸಂಸ್ಥೆಗಳು, ವಿಸ್ತೃತ ವ್ಯವಸ್ಥೆ ಮತ್ತು ಆಡಳಿತದ ಕುರಿತು ಜನರಿಗೆ ನಂಬಿಕೆ ಕುಸಿಯುತ್ತಿರುವುದು ಕೂಡಾ ಈ ಪ್ರತಿಭಟನೆಯ ಕಾರಣಗಳಲ್ಲಿ ಸೇರಿಕೊಂಡವು. ಈ ಹೋರಾಟವು ಕಡಿಮೆಯಾಗುತ್ತಿರುವ ಕೆಲಸದ ಅವಕಾಶಗಳು, ಹಳ್ಳಿಗಳ ಕಡೆ ಗುಳೇ ಹೋಗುವುದು ಹೆಚ್ಚುತ್ತಿರುವುದು ಮತ್ತು ಅದರಲ್ಲೂ ಗ್ರಾಮೀಣ ವಿಭಾಗದ ಯುವಜನರನ್ನು ಹೊರಗಿಟ್ಟು ಅವರ ಭವಿಷ್ಯವನ್ನು ರೂಪಿಸುವಂತಹ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎನ್ನುವ ಅಸಮಾಧಾನಕ್ಕೆ ಈ ವೇದಿಕೆಯನ್ನು ಒದಗಿಸಿದೆ.
“ನನ್ನಂತಹ ಯುವಕರು ಭವಿಷ್ಯದ ಕುರಿತು ನಂಬಿಕೆ ಕಳೆದುಕೊಳ್ಳಬಾರದು ಎನ್ನುವ ಉದ್ದೇಶದಿಂದ ನಾನು ದೆಹಲಿಗೆ ಬಂದಿದ್ದೇನೆ” ಧೀರಮ್. 25 ವರ್ಷ ವಯಸ್ಸಿನ ಇವರು ಪಾಲಿಯಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿದ್ಯಾರ್ಥಿ. ಇವರು ಮಾನವಿಕ ವಿಷಯವನ್ನು ಅಭ್ಯಾಸ ಮಾಡುತ್ತಿರುವ 24 ವರ್ಷದ ವಿದ್ಯಾರ್ಥಿಯೊಬ್ಬರೊಂದಿಗೆ ಇಲ್ಲಿಗೆ ಬಂದಿದ್ದಾರೆ. ಈ ಜೋಡಿ 15 ಗಂಟೆಗಳ ಪ್ರಯಾಣದ ನಂತರ ಜುಲೈ 19ರಂದು ದೆಹಲಿಗೆ ಬಂದು ತಲುಪಿದ್ದಾರೆ.


























