ಪೇಟೆ, ನಗರಗಳ ಹೆಣ್ಣುಮಕ್ಕಳು ನಾವು
ಈ ಸೊಗಸಿನ ನಡಿಗೆಯೊಂದಿಗೆ ಎಲ್ಲಿಗೆ ಹೊರಟಿರುವೆ?
ನಾವು ಹಳ್ಳಿ ಹಳ್ಳಿಗೂ ಅಲೆಯುತ್ತೇವೆ
ಈ ಸೊಗಸಿನ ನಡಿಗೆಯೊಂದಿಗೆ ಎಲ್ಲಿಗೆ ಹೊರಟಿರುವೆ?
ನಾವು ಹಿಂಸಾಚಾರಕ್ಕೆ ಅಂತ್ಯ ಹಾಡುತ್ತೇವೆ, ಖಂಡಿತಾ ಹಾಡುತ್ತೇವೆ
ಈ ಸೊಗಸಿನ ನಡಿಗೆಯೊಂದಿಗೆ ಎಲ್ಲಿಗೆ ಹೊರಟಿರುವೆ?
ನಾವು ಪ್ರತಿ ಹೆಣ್ಣುಮಗುವನ್ನು, ಪ್ರತಿ ಮಹಿಳೆಯನ್ನು ರಕ್ಷಿಸುತ್ತೇವೆ
ಈ ಸೊಗಸಿನ ನಡಿಗೆಯೊಂದಿಗೆ ಎಲ್ಲಿಗೆ ಹೊರಟಿರುವೆ?
ಮದುವೆಗಳಲ್ಲಿ ಹಾಡಲಾಗುವ ಈ ಗುಜರಾತಿ ಜಾನಪದ ಗೀತೆ, ಸೋನ್ ಕಂಸಾರಿ ಮತ್ತು ರಾಖಾಯತ್ ಬಾಬರಿಯಾ ಅವರ ಜನಪ್ರಿಯ ದುರಂತ ಪ್ರೇಮಕಥೆಯನ್ನಾಧರಿಸಿದ 1970ರ ದಶಕದ 'ಸೋನ್ ಕಂಸಾರಿ' ಎಂಬ ಗುಜರಾತಿ ಚಲನಚಿತ್ರದ ಮೂಲಕ ಹೆಚ್ಚು ಪ್ರಸಿದ್ಧಿಯಾಯಿತು; ಮಹಿಳಾ ಮತ್ತು ಪುರುಷ ನೃತ್ಯಗಾರರ ತಂಡಗಳ ನಡುವೆ ಸರದಿಯ ಪ್ರಕಾರ ನಡೆಯುವ ಪ್ರಶ್ನೋತ್ತರ ರೂಪದ ಚುರುಕಾದ ಸಂಗೀತ ಸಂವಾದವಾಗಿ ಪ್ರಸ್ತುತಪಡಿಸಲಾದ ಈ ಹಾಡು ಸೌಂದರ್ಯ, ಆಕರ್ಷಣೆ ಮತ್ತು ವಿವಾಹದ ಕುರಿತಾದ ಆಳವಾಗಿ ಬೇರೂರಿರುವ ಸಾಂಪ್ರದಾಯಿಕ ಕಲ್ಪನೆಗಳನ್ನು ಪ್ರತಿಬಿಂಬಿಸುತ್ತದೆ. ಇಲ್ಲಿನ ಈ ಜಾನಪದ ಗೀತೆಯು ಅಂತಹ ಪ್ರಕಾರಗಳ ಸಹಜ ಸ್ವಭಾವಕ್ಕೆ ಅನುಗುಣವಾಗಿ, ಸಮಾಜವು ವಿಧಿಸಿದ ಲಿಂಗ ಪಾತ್ರಗಳನ್ನು ತಲೆಕೆಳಗು ಮಾಡುತ್ತಿದ್ದು, ಇಲ್ಲಿ ಜಾಗೃತಗೊಂಡ ಗ್ರಾಮೀಣ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಾ, ಘನತೆ ಮತ್ತು ಗೌರವದ ಬದುಕು ಸಾಗಿಸಲು, ಆಸ್ತಿ ಮತ್ತು ಭೂಮಿಯ ಮಾಲೀಕತ್ವ ಹೊಂದಲು ಹಾಗೂ ತಮ್ಮ ಸಾಂಸ್ಕೃತಿಕ ಪರಂಪರೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಲೇ ತಮ್ಮ ಭೌತಿಕ ಉತ್ತರಾಧಿಕಾರವನ್ನು ಪಡೆಯಲು ಹಕ್ಕು ಸಾಧಿಸುತ್ತಿದ್ದಾರೆ.
ಇತಿಹಾಸದುದ್ದಕ್ಕೂ ದಮನಿತರ ಸ್ವಾತಂತ್ರ್ಯದ ಹುಡಕಾಟದಲ್ಲಿ ಪ್ರತಿರೋಧದ ಹಾಡುಗಳು ಪ್ರಮುಖ ಪಾತ್ರವಹಿಸಿರುವುದನ್ನು ನಾವು ನೋಡಿದ್ದೇವೆ. ನಖತ್ರಾನ ಜಿಲ್ಲೆಯ ನಂದುಬಾ ಜಡೇಜಾ ಮತ್ತು ಇತರ ಮಹಿಳೆಯರು ಅತ್ಯಂತ ಬಲಶಾಲಿಯಾಗಿ ಪ್ರಸ್ತುತಪಡಿಸಿದ ಈ ಗೀತೆ, ಸುಮಾರು 2017ರ ಅವಧಿಯಲ್ಲಿ ಕಚ್ ಮಹಿಳಾ ವಿಕಾಸ ಸಂಘಟನೆಯು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಲ್ಲಿ ಹೊಸ ಜಾಗೃತಿಯನ್ನು ಮೂಡಿಸಿತು.


