ಸರಾಯ್ ತಾರೀನ್ ಎನ್ನುವುದು ಸಂಭಲ್ ಪಟ್ಟಣದ ಪಕ್ಕದಲ್ಲಿನ ಊರು. ಈ ಊರು ಅಂಗಿ ಮೂಳೆಗಳಿಂದ ತಯಾರಿಸಲ್ಪಟ್ಟ ಗುಂಡಿಗಳು, ಗೃಹಲಂಕಾರ ವಸ್ತುಗಳು, ಅಡುಗೆ ಸಾಮಾಗ್ರಿಗಳು ಬಿಯರ್ ಗ್ಲಾಸುಗಳು ಮತ್ತು ಅಡುಗೆ ಸಾಮಾಗ್ರಿಗಳಿಗೆ ಪ್ರಸಿದ್ಧ. ಇಲ್ಲಿಯೇ ಮೊಹಮ್ಮದ್ ಇಸ್ಲಾಂ ಅವರ ಸಣ್ಣ ಬಾಡಿಗೆ ಅಂಗಡಿಯಿದೆ. ಅವರಿಗೆ ಗ್ರಾಹಕರ ಕೊರತೆಯೇನೂ ಇಲ್ಲ. ಮಕ್ಕಳು ತಿಂಡಿ, ಚಾಕಲೇಟುಗಳಿಗಾಗಿ ಬಂದರೆ, ದೊಡ್ಡವರು ದಿನಸಿ ಸಾಮಾಗ್ರಿಗಳಿಗಾಗಿ ಬರುತ್ತಾರೆ. ಜೊತೆಗೆ ಕೆಲವು ಹಿರಿಯರು ಹಲ್ಲಿರುವ ಬಾಚಣಿಗೆಗಳ (ಸೀಂಗ್ ಕೀ ಕಂಗಿ-ಎಮ್ಮೆ ಕೊಂಬಿನ ಬಾಚಣಿಗೆ) ಖರೀದಿಗೆ ಬಂದಿದ್ದಾರೆ ಇದರಲ್ಲಿ ಮುಸ್ಲಿಮರ ಧಾರ್ಮಿಕ ಗುರುತಾದ ಹಸ್ತದ ಚಿಹ್ನೆಯಿದೆ.
60 ವರ್ಷದ ಇಸ್ಲಾಂ ಸರಾಯ್ ತಾರಿನ್ ಊರಿನ ಕೊನೆಯ ಕೆಲವು ಕೊಂಬಿನ ಬಾಚಣಿಗೆ ತಯಾರಕರಲ್ಲಿ ಒಬ್ಬರು. ಅವರ ದೀರ್ಘಕಾಲದ ಸಹವರ್ತಿ, 70 ರದಶಕದ ಕೊನೆಯಲ್ಲಿ ಮಕ್ಸೂದ್ ಖಾನ್, ವಸ್ತುವಿನ ಉಳಿದ ಕೆಲವೇ ಪೂರೈಕೆದಾರರಲ್ಲಿ ಒಬ್ಬರು.
“ತೀರಿ ಹೋದ ಹಿಂದಿನ ಕುಶಲಕರ್ಮಿಗಳು ತಮ್ಮೊಂದಿಗೆ ಈ ಕಲೆಯನ್ನೂ ಕೊಂಡೊಯ್ದಿದ್ದಾರೆ. ಇದನ್ನು ಮತ್ತೆ ಜೀವಂತಗೊಳಿಸುವುದು ಕಷ್ಟ. ನೀವು ಕುಶಲಕರ್ಮಿಗಳನ್ನು ಹುಡುಕಿಕೊಂಡು ಈ ಸರಾಯ್ ತಾರಿನ್ ಪೂರ್ತಿ ಸುತ್ತಿದರೂ ಅವರು ನಿಮ್ಮನ್ನು ಕಳುಹಿಸುವುದು ನಿಮ್ಮನ್ನೇ” ಎನ್ನುತ್ತಾರೆ ಇಸ್ಲಾಂ ಖಾನ್. ಅವರು ನಮ್ಮೊಂದಿಗೆ ಮಾತನಾಡುತ್ತಲೇ ಆಗಾಗ ಹುಕ್ಕಾ ಎಳೆಯುತ್ತಿದ್ದರು.
2022ರಲ್ಲಿ ಈ ಕೌಶಲಕ್ಕೆ ಜಿಯೋಗ್ರಾಫಿಕ್ ಐಡೆಂಟಿಫಿಕೇಷನ್ (GI) ಟ್ಯಾಗ್ ದೊರೆಯಿತು, ಇದು ಉತ್ಪನ್ನಗಳನ್ನು ಅವುಗಳ ಉತ್ಪತ್ತಿ ಸ್ಥಳವನ್ನು ಆಧರಿಸಿ ಅವುಗಳನ್ನು ಗುರುತಿಸಲು ಮತ್ತು ರಕ್ಷಿಸಲು ಸಹಾಯ ಮಾಡುವ ಬೌದ್ಧಿಕ ಆಸ್ತಿ ಸಂರಕ್ಷಣೆಯ ಒಂದು ರೂಪ. ಜೊತೆಗೆ ಈ ಮೂಳೆ ಮತ್ತು ಕೊಂಬು ಬಳಸಿ ಮಾಡಲಾಗುವ ಈ ವಸ್ತುಗಳಿಗೆ ಉತ್ತರ ಪ್ರದೇಶ ಸರ್ಕಾರದ ಒಂದು ಜಿಲ್ಲೆ, ಒಂದು ಉತ್ಪನ್ನ (One District, One Product) ಕರಕುಶಲ ವಸ್ತುಗಳ ಯೋಜನೆಯಡಿ ಈ ಕಸುಬನ್ನು ಸಂಭಲ್ ಜಿಲ್ಲೆಯ ಸ್ಥಳೀಯ ಗುರುತಾಗಿ ಗುರುತಿಸಲಾಗಿದೆ.
"ಜಿಸ್ಕೆ ಸರ್ ಪರ್ಬಾಲ್, ಉಸ್ಕಿ ಕಂಗಿ [ಯಾರ ತಲೆಯ ಮೇಲೆ ಕೂದು ಇದೆಯೋ ಬಾಚಣಿಗೆ ಅವರದ್ದು]” ಎಂದು ನಗುತ್ತಾ ಇಸ್ಲಾಂ ಅವರು ಉರ್ದುವಿನ ಗಾದೆಯೊಂದನ್ನು ಹೇಳಿದರು. “ಒಂದು ಕಾಲದಲ್ಲಿ ಎಲ್ಲೆಲ್ಲೂ ಈ ಬಾಚಣಿಗೆಗಳು ಕಾಣುತ್ತಿದ್ದವು – ಬೀದಿಯ ಮೂಲೆಗಳಲ್ಲಿ, ಜಂಕ್ಷನ್ನುಗಳಲ್ಲಿ.”
ಅವರ ಕೆಲಸದ ಸ್ಥಳವೂ ಆಗಿರುವ ಅಂಗಡಿಗೆ ತಿಂಗಳಿಗೆ 2,000 ರೂಪಾಯಿ ಬಾಡಿಗೆ. ಇಲ್ಲಿ ಇಸ್ಲಾಂ ಅವರದು ಕುಶಲಕರ್ಮಿ ಮತ್ತು ವ್ಯಾಪಾರಿಯ ದ್ವಿಪಾತ್ರ. ನಮ್ಮೊಂದಿಗೆ ಮಾತನಾಡುವ ಸಮಯದಲ್ಲಿ ಅವರೆದುರು ಹಲವು ಬಗೆಯ ಉಪಕರಣಗಳು ಬಿದ್ದಿದ್ದವು: ಹಲವು ಬಗೆಯ ಆರಿ (ಗರಗಸಗಳು), ರೇತ್ (ಉಳಿ), ಚಿಲ್ಲಿ (ಸ್ಕ್ರ್ಯಾಪರ್), ರೆಗ್ಮಾಲ್ (ಸ್ಯಾಂಡ್ ಪೇಪರ್) ಹಾಳೆಗಳು ಮತ್ತು ಬಾಚಣಿಗೆಗಳನ್ನು ಬೇಕಾದ ರೀತಿ ಇರಿಸಲು ಬಳಸುವ ಅಡ್ಡಾ (ಮರದ ಹಲಗೆ).




























