ಸೇವಂತಿ ರಾಯ್ ಭುಜಗಳು ಏರುಪೇರಾಗಿರುವುದನ್ನು ಮೊದಲು ಗಮನಿಸಿದ್ದು ಅವಳ ಡ್ಯಾನ್ಸ್ ಟೀಚರ್. ದಿನ ಕಳೆದಂತೆ ಈ ಮಹತ್ವಾಕಾಂಕ್ಷಿ ನರ್ತಕಿಯ ಚಲನೆಗಳು ನಿಂತು ಹೋದವು. ಸ್ವಲ್ಪ ಸಮಯದ ನಂತರ, ಆಗಿನ್ನೂ 13 ವರ್ಷದವಳಾಗಿದ್ದ ಈ ಬಾಲಕಿಗೆ ಸ್ಕೊಲಿಯೋಸಿಸ್ ಇರುವುದು ಪತ್ತೆಯಾಯಿತು. “ಮೊದಲಿಗೆ ನನಗಿದ್ದ ಕಾಯಿಲೆಯ ಕುರಿತು ವಿಚಿತ್ರ ಸಂಭ್ರಮವನ್ನು ಅನುಭವಿಸಿದ್ದೆ. ನನ್ನ ಆರಾಧ್ಯದೈವದಂತಿದ್ದ ಹೃತಿಕ್ ರೋಷನ್ [ನೃತ್ಯಕ್ಕೆ ಹೆಸರುವಾಸಿಯಾಗಿರುವ ಬಾಲಿವುಡ್ ತಾರೆ] ಕೂಡಾ ಈ ಸಮಸ್ಯೆ ಹೊಂದಿದ್ದರು ಎನ್ನುವುದು ಇದಕ್ಕೆ ಕಾರಣವಾಗಿತ್ತು” ಎಂದು ಸೇವಂತಿ ಆ ದಿನವನ್ನು ನೆನಪಿಸಿಕೊಂಡು ನಕ್ಕರು.
ಹೃತಿಕ್ಗೆ ಸ್ಕೊಲಿಯೋಸಿಸ್ ಇರುವುದು ಗೊತ್ತಾಗಿದ್ದು ಅವರಿಗೆ 21 ವರ್ಷವಿರುವಾಗ. ಅಂದು ಅವರಿಗೆ ನೀನು ಇನ್ನು ಮುಂದೆ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಸ್ಕೊಲಿಯೋಸಿಸ್ ಸಮಸ್ಯೆ ಬೆನ್ನನ್ನು ಒಂದು ಬದಿಗೆ ಬಾಗುವಂತೆ ಮಾಡುತ್ತದೆ. ಪ್ರತಿಯೊಬ್ಬರ ಬೆನ್ನೂ ಒಂದು ಕಡೆಗೆ ಬಾಗಿರುತ್ತದೆ, ಆದರೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ಈ ಸಮಸ್ಯೆ ಕಂಡುಬಂದಾಗ ಇಡೀ ಬೆನ್ನು ಅಥವಾ ಅದರ ಒಂದು ಭಾಗ ಅಸಹಜವಾಗಿ ಇಂಗ್ಲಿಷ್ ವರ್ಣಮಾಲೆಯ ʼCʼ ಅಥವಾ ʼSʼ ಆಕಾರದಲ್ಲಿ ಬಾಗಿರುತ್ತದೆ.
ಹದಿಹರೆಯದವಳಾಗಿದ್ದ ಸೇವಂತಿ ಅಡೊಲ್ಸೆಂಟ್ ಇಡಿಯೋಪತಿಕ್ ಸ್ಕೊಲಿಯೋಸಿಸ್ (ಎಐಎಸ್/ adolescent idiopathic scoliosis) ಶಸ್ತ್ರಚಿಕಿತ್ಸೆಗೆ ಒಳಗಾಗಲು ದಕ್ಷಿಣ 24 ಪರಗಣದಲ್ಲಿರುವ ತನ್ನ ಮನೆಯಿಂದ ಕೋಲ್ಕತ್ತಾಗೆ ಪ್ರಯಾಣಿಸಿದಳು. ಈ ಆಪರೇಷನ್ ಮೂಲಕ ಅವಳ ಬೆನ್ನನ್ನು ನೇರವಾಗಿಸಲು ವೈದ್ಯರು ಬೆನ್ನಿಗೆ ಎರಡು ಸರಳು ಹಾಗೂ 14 ಸ್ಕ್ರೂಗಳನ್ನು ಹಾಕುವವರಿದ್ದರು.
ಇದೆಲ್ಲ ಆಗಿ ಹನ್ನೆರಡು ವರ್ಷಗಳಾಗಿವೆ. “ಈಗ ನನಗೆ ಏನೂ ಅನ್ನಿಸುತ್ತಿಲ್ಲ” ಎಂದು ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾ ಸೇವಂತಿ ಹೇಳುತ್ತಾರೆ. “ಈಗ ಬದುಕು ಸಹಜವಾಗಿದೆ. ಸ್ಕೊಲಿಯೋಸಿಸ್ ಜೊತೆ ಬದುಕುವುದನ್ನು ರೂಢಿಸಿಕೊಂಡು ಸಹಜ ಬದುಕಿಗೆ ಮರಳಿದೆ” ಎಂದು ನಗುತ್ತಾರೆ. ನಾವು ಡೈಮಂಡ್ ಹಾರ್ಬರ್ ಎನ್ನುವಲ್ಲಿರುವ ಅವರ ತಾತನ ಮನೆಯ ಛಾವಣಿಯ ಮೇಲೆ ಕುಳಿತು ಮಾತನಾಡುತ್ತಿದ್ದೆವು. ಈ ಊರು ಪಶ್ಚಿಮಬಂಗಾಳದ ಒಂದು ಪಟ್ಟಣವಾಗಿದ್ದು, ಇಲ್ಲಿಂದ ಹೂಗ್ಲಿ ನದಿ ತನ್ನ ಮಿಕ್ಕುಳಿದ ನೀರನ್ನು ಬಂಗಾಳಕೊಲ್ಲಿಗೆ ಸೇರಿಸುತ್ತದೆ.
ಸೇವಂತಿಯವರಿಗೆ ತನಗೆ ಎದುರಾಗಿದ್ದ ಸಮಸ್ಯೆ ಅಷ್ಟು ದೊಡ್ಡದು ಎನ್ನಿಸಿಲ್ಲದೆ ಇರಬಹುದು. ಆದರೆ ಲಕ್ಷಾಂತರ ಜನರ ಪಾಲಿಗೆ ಈ ಕಾಯಿಲೆ ನೋವು ನೀಡುತ್ತದೆ, ಮತ್ತು ಇದು ಹೃದಯದ ಸಮಸ್ಯೆ ಮತ್ತು ಉಸಿರಾಟದ ಸಮಸ್ಯೆಗೂ ಕಾರಣವಾಗಬಹುದು. ಜೊತೆಗೆ ಗ್ರಾಮೀಣ ಪ್ರದೇಶದ ಜನರಿಗೆ ಈ ಕಾಯಿಲೆಯನ್ನು ಗುರುತಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಡುವುದು ಕೂಡಾ ಕಷ್ಟ.


















