“ಪಾಂತೋ ಬಾತ್ [ಹಿಂದಿನ ರಾತ್ರಿಯ ಅನ್ನದ ಗಂಜಿ] ಬಿಟ್ಟರೆ ತಿನ್ನೋದಕ್ಕೆ ನಮ್ಮ ಬಳಿ ಇನ್ನೇನಿದೆ?” ಎಂದರು ಬಾತೋ ಮಲ್ಲಿಕ್. ಅವರು ಗಂಜಿಗೆ ರುಚಿ ನೀಡುವ ಸಲುವಾಗಿ ಕೆಂಪು ಮೆಣಸಿನಕಾಯಿ ಮತ್ತು ಉಪ್ಪನ್ನು ನುರಿಯುತ್ತಿದ್ದರು.
ಅದು ಸಂಜೆಯ ಹೊತ್ತು, ಬಾತೋ ಮತ್ತು ಅವರ ಗಂಡ ಯೋಗೇನ್ ಮಲ್ಲಿಕ್ ಆಗಷ್ಟೇ ಅವರು ಹತ್ತಿರದ ಕಾಡಿನಿಂದ ಮರಳಿದ್ದರು. ದಂಪತಿಗಳು ಈ ಕುಗ್ರಾಮದ ಇತರ ಜನರಂತೆ ಹಗಲಿಡೀ ಕಾಡಿನಲ್ಲಿದ್ದು ಸಾಲ್ (ಶೋರಿಯಾ ರೋಬಸ್ಟಾ) ಮರದ ಎಲೆಯನ್ನು ಸಂಗ್ರಹಿಸುತ್ತಾರೆ. ನಂತರ ಈ ಎಲೆಗಳನ್ನು ವಾರದ ಸಂತೆಯಲ್ಲಿ ಮಾರಲಾಗುತ್ತದೆ.
ಅವರ ಮನೆ ಪಶ್ಚಿಮ ಬಂಗಾಳದ ಝಾರ್ಗ್ರಾಮ್ ಜಿಲ್ಲೆಯ ಬೆನಾಶುಲಿ ಎನ್ನುವ ಗ್ರಾಮದಲ್ಲಿದೆ. ಇಲ್ಲಿರುವುದು ಬಹುತೇಕ ಸಬರ್ ಸಮುದಾಯಕ್ಕೆ ಸೇರಿರುವವರು (ಪಶ್ಚಿಮ ಬಂಗಾಳದ ಸರ್ಕಾರಿ ದಾಖಲೆಗಳಲ್ಲಿ ಸವರ್ ಎಂದು ದಾಖಲಿಸಲಾಗಿದೆ). ಈ ಬುಡಕಟ್ಟು ಸಮುದಾಯವು ದೇಶದ ಅತ್ಯಂತ ಬಡ ಮತ್ತು ವಂಚಿತ ನಾಗರಿಕರಲ್ಲಿ ಒಂದಾಗಿದ್ದು, ಹಸಿವು ಮತ್ತು ಅಪೌಷ್ಟಿಕತೆಯೊಂದಿಗೆ ಅಂಚಿನಲ್ಲಿ ವಾಸಿಸುತ್ತಿದೆ.
ಸಬರ್ ಜನರ ಬದುಕನ್ನು ದಾಖಲಿಸುವ ಸಲುವಾಗಿ ನಾನು ಈ ಪ್ರದೇಶಕ್ಕೆ ಹಲವು ವರ್ಷಗಳಿಂದ ಬರುತ್ತಿದ್ದೇನೆ. ಬ್ರಿಟಿಷರು ಈ ಜನರಿಗೆ ʼಕ್ರಿಮಿನಲ್ ಬುಡಕಟ್ಟುʼಎನ್ನುವ ಹಣೆಪಟ್ಟಿಯನ್ನು ಹಚ್ಚಿದ್ದರು. 1952ರಲ್ಲಿ ಇದನ್ನು ಅಧಿಸೂಚನೆ ಮೂಲಕ ತೆಗೆದುಹಾಕಲಾಯಿತು. ಈ ಸಮುದಾಯದ ಕೆಲವೇ ಜನರ ಬಳಿ ಭೂಮಿಯಿದ್ದು, ಬಹುತೇಕ ಕಾಡನ್ನೇ ನಂಬಿ ಇವರು ಬದುಕುತ್ತಿದ್ದಾರೆ. ಓದಿ: ಹಸಿವಿನ ಬಲೆಯಲ್ಲಿ ಸಬರ್ ಸಮುದಾಯ
ಪ್ರತಿ ಬಾರಿ ಇಲ್ಲಿಗೆ ಬಂದಾಗಲೂ, ಅವರ ಪರಿಸ್ಥಿತಿ ಬದಲಾಗದೆ ಉಳಿದಿರುವುದನ್ನು ಗಮನಿಸಿದ್ದೇನೆ. ಇಲ್ಲಿಗೆ ನಾನು ವರ್ಷಗಳಿಂದಲ್ಲ, ದಶಕಗಳಿಂದ ಬೇಟಿ ನೀಡುತ್ತಿದ್ದೇನೆ. ತಮ್ಮ ಹಸಿವನ್ನು ನೀಗಿಸಿಕೊಳ್ಳುವ ಸಲುವಾಗಿ ಮಹುವಾದಿಂದ ತಯಾರಿಸಿದ ಸ್ಥಳೀಯ ಮದ್ಯವನ್ನು ಸೇವಿಸುತ್ತಾರೆ. ಈ ಮದ್ಯವು ಅವರಲ್ಲಿ ಹೊಟ್ಟೆ ತುಂಬಿದ ಭಾವವನ್ನು ಮೂಡಿಸುತ್ತದೆ. ವಾಸ್ತವವೆಂದರೆ ಪ್ರತಿಯೊಂದು ಮನೆಯಲ್ಲೂ ಮಿತಿಮೀರಿದ ಮಟ್ಟದಲ್ಲಿ ಮದ್ಯಸೇವನೆ ನಡೆಯುತ್ತಿದ್ದು (ಸ್ಥಳೀಯ ಮದ್ಯವನ್ನು ಎಲ್ಲೆಡೆ ತಯಾರಿಸಲಾಗುತ್ತದೆ), ಇದು ಅಪೌಷ್ಟಿಕತೆ ಮತ್ತು ರಕ್ತಹೀನತೆಗೆ ಕಾರಣವಾಗಿದೆ.























