“ನಾನು ಇಲ್ಲಿಯೇ ಹುಟ್ಟಿದ್ದು. ಮುಂದೆ ಈ ಕಾಡುಗಳಲ್ಲಿ, ಈ ಡೋಂಗರ್ [ಗುಡ್ಡ]ದಲ್ಲಿ ಅಲೆದಾಡುತ್ತಾ ಬೆಳೆದೆ” ಎಂದು ಯೆಮಾ ಸೊಂಗಾಲ್ ತನ್ನ ಹಳ್ಳಿಯನ್ನು ಈ ವರದಿಗಾರರಿಗೆ ನಗು ಮುಖದೊಂದಿಗೆ ಪರಿಚಯಿಸಿಕೊಂಡರು. ದಟ್ಟ ಹಸಿರಿನ ಸಹ್ಯಾದ್ರಿ ಪರ್ವತಗಳಿಂದ ಸುತ್ತುವರಿದ ಕೆಂಪು ಮಣ್ಣಿನ ಹೆಂಚಿನ ಮನೆಗಳ ಈ ಊರು ಪ್ರಕೃತಿ ಮತ್ತು ಮಾನವ ವಸತಿಯ ಶಾಂತಿಯುತ ಸಮ್ಮಿಳನ. ಅವರಿಗೆ ಈ ಕುರಿತು ತಿಳಿದಿಲ್ಲದಿರಬಹುದು, ಇದು ವಿಶ್ವದ ಎಂಟು "ಹಾಟೆಸ್ಟ್ ಹಾಟ್ಸ್ಪಾಟ್ಗಳಲ್ಲಿ" ಒಂದಾದ ಜೀವವೈವಿಧ್ಯವನ್ನು ಹೊಂದಿರುವ ಸ್ಥಳವೂ ಹೌದು.
ದುರದೃಷ್ಟವಶಾತ್, ಇದರ ಸುಮಾರು 280 ಹೆಕ್ಟೇರ್ ಶೀಘ್ರದಲ್ಲೇ ನೀರಿನಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದೆ.
"ನಮ್ಮ ಜಮೀನು ಆ ಡೋಂಗರ್ ಹಿಂದೆ ಇದೆ" ಎನ್ನುತ್ತಾ ಮಹಾರಾಷ್ಟ್ರದ ಲಾಡೇವಾಡಿ ಗ್ರಾಮದಲ್ಲಿರುವ (ಕಾಳಭೋಂಡೆ ಗ್ರಾಮ ಪಂಚಾಯತಿ ವ್ಯಾಪ್ತಿ) ತಮ್ಮ ಮನೆಯ ಮುಂಭಾಗದಲ್ಲಿ ನಿಂತು ಯೆಮಾ ಒಂದು ಸಣ್ಣ ಬೆಟ್ಟವನ್ನು ತೋರಿಸಿದರು. ಯೆಮಾ ಮತ್ತು ಸೂಲಿ ಇಬ್ಬರೂ 70ರ ಆಸುಪಾಸಿನ ವಯಸ್ಸಿನವರು. ಅವರು ತಮ್ಮ ಸಣ್ಣ ಜಮೀನಿನಲ್ಲಿ ವಾರೈ (ಬೆಳೆ) ಬೆಳಯುತ್ತಾರೆ. ಇವರು ತಮ್ಮ ಹೊಲವನ್ನು ತಲುಪಲು ಒಂದು ಗಂಟೆ ನಡೆಯಬೇಕು. “ಅಲ್ಲಿ ಮಳೆಗಾಲದಲ್ಲಿ ಬೆಳೆ ಬೆಳೆಯುತ್ತೇವೆ. ಸುಮಾರು 5-6 ಮೂಟೆ [ಕ್ವಿಂಟಾಲು] ಗಳಷ್ಟು ಇಳುವರಿ ಸಿಗುತ್ತದೆ.” ಈ ಜಮೀನು ಒಂದು ಎಕರೆಗಿಂತಲೂ ಕಡಿಮೆ ಅಳತೆಯನ್ನು ಹೊಂದಿದ್ದು, ಇದರಿಂದ ಸಿಗುವ ಧಾನ್ಯದಿಂದ ಯೆಮಾ, ಸೂಲಿ ಮತ್ತು ಅವರ ನಾಲ್ಕು ಗಂಡುಮಕ್ಕಳು, ಮೂವರು ಸೊಸೆಯರು ಮತ್ತು ಆರು ಮೊಮ್ಮಕ್ಕಳು ಸೇರಿದಂತೆ 15 ಕುಟುಂಬ ಸದಸ್ಯರನ್ನು ಮುಂದಿನ ಬೆಳೆಯ ತನಕ, ಎಂದರೆ ಒಂದು ವರ್ಷದ ಕಾಲ ಪೋಷಿಸುತ್ತದೆ. ಕುಟುಂಬವು ತಮ್ಮ ಜೀವನೋಪಾಯಕ್ಕಾಗಿ ಅರಣ್ಯ ಮತ್ತು ಜಮೀನು ಎರಡನ್ನೂ ಅವಲಂಬಿಸಿದೆ.
ಮಾತು ಮುಂದುವರೆಸಿದ ಅವರು, "ಕಾಡು ಕೂಡ ನಮ್ಮನ್ನು ಸಾಕುತ್ತದೆ. ಹಣ್ಣುಗಳು, ರಾಣ್ಕಂದ್ [ಕಾಡು ಗೆಡ್ಡೆಗಳು], ತರಕಾರಿಗಳು, ನೆಗಡಿ, ಜ್ವರ, ಮೊಣಕಾಲು ನೋವು ಗುಣಪಡಿಸಲು ಗಿಡಮೂಲಿಕೆಗಳು ಸಹ ಇಲ್ಲಿ ಸಿಗುತ್ತವೆ." ಯೆಮಾ ಮತ್ತು ಅವರ 97 ಕುಟುಂಬಗಳ ಸಮುದಾಯಕ್ಕೆ, ಥಾಣೆ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿರುವ ಮಾ ಠಾಕೂರ್ ಪರಿಶಿಷ್ಟ ಪಂಗಡದವರಿಗೆ, ಬದುಕಲು ಕಾಡು ಅತ್ಯಗತ್ಯ. "ನಾವು ಮರಗಳನ್ನು ಕಡಿಯುವುದಿಲ್ಲ. ಉರುವಲಿಗಾಗಿ ಬಿದ್ದ ರೆಂಬೆಗಳನ್ನು ಮಾತ್ರ ಸಂಗ್ರಹಿಸುತ್ತೇವೆ. ಮಣ್ಣು, ಇಟ್ಟಿಗೆ ಮತ್ತು ಅರಣ್ಯದ ಮರಗಳಿಂದ ಗಟ್ಟಿಮುಟ್ಟಾದ ಮನೆಗಳನ್ನು ಕಟ್ಟುತ್ತೇವೆ; ಅವು ದಶಕಗಳ ಕಾಲ ಬಾಳಿಕೆ ಬರುತ್ತವೆ."




















