ಏಳು ಹೆಣ್ಣುಮಕ್ಕಳು, ಆರು ಗ್ರಾಮಗಳು, ಐದು ಮನೆ ಮಾತುಗಳು, ಎರಡು ಆಟ ಮತ್ತು ಒಂದು ಆಟದ ಭಾಷೆ!
ರಂಜನ್ ರಾಠವಾ, 12, ಜ್ಯೋತಿ ಭಿಲ್, 11, ಶರ್ಮಿಳಾ ಧಾಯೇಕಿ, 9, ಕಿಜಲ್ ನಾಯಕ, 10, ಮತ್ತು ನಿರಾಲ್ ರಾಠವಾ, 10, ಗುಜರಾತ್ ರಾಜ್ಯದ ಚೋಟಾಉದಯಪುರ ಜಿಲ್ಲೆಯ ತೇಜಗಢದ ಆದಿವಾಸಿ ಗ್ರಾಮದ ಕೊರಾಜ್ ಗಿರಿಯ ತಪ್ಪಲಿನಲ್ಲಿರುವ ತಮ್ಮ ವಸತಿ ಸಹಿತ ಪ್ರಾಥಮಿಕ ಶಾಲೆಯಾದ ವಸಂತ ಶಾಲೆಯ ಆಟದ ಮೈದಾನದಲ್ಲಿ ಆಟದಲ್ಲಿ ಮುಳುಗಿದ್ದಾರೆ.
ಅಡಕೋ ದಡುಕೋ ದಹಿ ದಡುಕೋ
ಶ್ರವಣ ಗಜೆ, ಪಿಲ್ಲು ಪಾಕೆ…
ಇದು ಬಡ್-ಬಡ್ ಗೀತೆ. ರಾಜ್ಯದಾದ್ಯಂತ ಮಕ್ಕಳು ಆಟವಾಡುವಾಗ ಹಾಡುವ ಅಸಂಖ್ಯಾತ ಅರ್ಥವಿಲ್ಲದ ಪದ್ಯಗಳ ಸಂಗ್ರಹದಲ್ಲಿ ಒಂದು. ಇಲ್ಲಿ ಆಸಕ್ತಿ ಹುಟ್ಟಿಸುವ ಸಂಗತಿಯೆಂದರೆ ಈ ಪದ್ಯದ ಭಾಷೆ ಈ ಗುಂಪಿನ ಮಕ್ಕಳಲ್ಲಿ ಒಬ್ಬರದೂ ಮನೆ ಮಾತಲ್ಲ. ಈ ಐದು ಬಾಲಕಿಯರ ಮನೆಯಿರುವುದು ಇವರ ವಸತಿ ಶಾಲೆಯ 30ರಿಂದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ. ಮತ್ತು ಇವರು ತಮ್ಮ ಕುಟುಂಬದ ಜೊತೆ ರಾಠವಿ, ಧಾನಕಿ, ದುಂಗರ ಭೀಲಿ, ಮತ್ತು ನಾಯಕಿ ಎಂಬ ತಮ್ಮ ಸ್ವಂತ ಆದಿವಾಸಿ ಭಾಷೆಗಳಲ್ಲಿ ಮಾತನಾಡುತ್ತಾರೆ. ಆದರೆ ಈ ಆದಿವಾಸಿ ಮಕ್ಕಳ ವಸತಿಯ ಶಾಲೆಯಲ್ಲಿ ಅವರೆಲ್ಲರನ್ನು ಬೆಸೆಯವುದು, ಸಂಪರ್ಕ ಭಾಷೆಯಾಗಿ ಕೆಲಸ ಮಾಡುವುದು ಗುಜರಾತಿ.





