"ನಾವು ನಮ್ಮ ಇಡೀ ಜೀವನವನ್ನು ದಾಖಲೆಗಳನ್ನು ನೀಡುತ್ತಾ, ಸರ್ಕಾರ ಮತ್ತು ಇತರ ನಾಗರಿಕರ ಮುಂದೆ ನಾವೂ ಎಲ್ಲರಂತೆ ಈ ದೇಶಕ್ಕೆ ಸೇರಿದವರು ಎಂಬುದನ್ನು ಸಾಬೀತುಪಡಿಸುವುದರಲ್ಲೇ ಕಳೆದಿದ್ದೇವೆ."
ಬಹರುಲ್ ಇಸ್ಲಾಂ ಕಸವನ್ನು ಬೇರ್ಪಡಿಸುವುದರಲ್ಲಿ ತೊಡಗಿದ್ದರು. ಅವರು ಪ್ಲಾಸ್ಟಿಕ್ ಬಾಟಲಿಗಳು, ಒದ್ದೆಯಾದ ಕಸ, ರಟ್ಟಿನ ಮತ್ತು ಥರ್ಮಾಕೋಲ್, ಹೀಗೆ ತ್ಯಾಜ್ಯಗಳ ಪ್ರತ್ಯೇಕ ರಾಶಿಗಳನ್ನು ಮಾಡಿ, ಪ್ರತಿಯೊಂದನ್ನು ಬೇರೆ ಬೇರೆ ಪ್ಲಾಸ್ಟಿಕ್ ಚೀಲಗಳಿಗೆ ತುಂಬುತ್ತಾರೆ. 35 ವರ್ಷ ವಯಸ್ಸಿನ ಇವರ ಕುಟುಂಬ ಅಸ್ಸಾಂನ ಬಾರ್ಪೇಟಾ, ಬೊಂಗೈಗಾಂವ್ ಮತ್ತು ಗೋಲ್ಪಾರಾ ಜಿಲ್ಲೆಗಳಿಂದ ವಲಸೆ ಬಂದಿರುವ 13 ಕುಟುಂಬಗಳಲ್ಲಿ ಒಂದು. ಹರಿಯಾಣದ ಅಸಾವರ್ಪುರ ಪಟ್ಟಣದಲ್ಲಿ ಒಟ್ಟಿಗೆ ವಾಸಿಸುತ್ತಿರುವ ಇವರು, ತಮ್ಮ ಜೀವನೋಪಾಯಕ್ಕಾಗಿ ತ್ಯಾಜ್ಯ ಸಂಗ್ರಹಿಸಿ, ಬೇರ್ಪಡಿಸುವ ಕೆಲಸ ಮಾಡುತ್ತಾರೆ.
"ಇಲ್ಲಿ ಮತ್ತು ಅಸ್ಸಾಂನಲ್ಲಿ ಜನರು ಯಾವಾಗಲೂ ನಮ್ಮ ಅಸ್ಮಿತೆಯನ್ನು ಪ್ರಶ್ನಿಸುತ್ತಾರೆ. ಅಧಿಕಾರಿಗಳು ಸ್ಲಂಗೆ ಸಂಬಂಧಿಸಿದ ಬೇಕಾದ ದಾಖಲೆಗಳನ್ನು ಎಲ್ಲರಿಂದ ಕೇಳುತ್ತಲೇ ಇರುತ್ತಾರೆ,” ಎಂದು ಬಹರುಲ್ ಹೇಳುತ್ತಾರೆ. “ನಾವು ಕಸ ಎತ್ತಲು ಹೋದಾಗ, ಜನ ನಮ್ಮನ್ನು ಎಲ್ಲಿಂದ ಬಂದವರು ಎಂದು ಕೇಳುತ್ತಾರೆ. ಅಸ್ಸಾಂನ ಮಾತು ಕೇಳಿ ನಮ್ಮನ್ನು ಬಾಂಗ್ಲಾದೇಶದವರು ಎಂದು ಭಾವಿಸುತ್ತಾರೆ. ನಮ್ಮ ಮೇಲೆ ಯಾವುದೇ ಕ್ರಿಮಿನಲ್ ದಾಖಲೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಆಗಾಗ ಅಸ್ಸಾಂ ಪೊಲೀಸರ ಪರಿಶೀಲನೆಯನ್ನು ಕೇಳುತ್ತಾರೆ,” ಎಂದು ಅವರು ಹೇಳುತ್ತಾರೆ. "ನಾವು ಏನು ಹೇಳುತ್ತೇವೆ ಎಂಬುದು ಇವರಿಗೆ ಮುಖ್ಯವಲ್ಲ," ಎಂದು ಬಹರುಲ್ ಹೇಳುತ್ತಾರೆ. ಇವರಿಗೆ ಅಸ್ಸಾಂನಲ್ಲಿ ನಡೆಸಲಾಗುತ್ತಿರುವ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಬಗ್ಗೆ ತಿಳಿದಿದೆ, ಆದರೆ ಅವರಲ್ಲಿ ಭೂ ಮಾಲೀಕತ್ವದ ದಾಖಲೆಗಳು ಇರುವುದರಿಂದ ಅವರಿಗೆ ಯಾವುದೇ ಚಿಂತೆಯಿಲ್ಲ.
ಅದೇ ಕಾಂಪೌಂಡ್ನಲ್ಲಿ ವಾಸಿಸುತ್ತಿರುವ ಅವರ ಸಹೋದರರಾದ ರಿಯಾಜ್ ಮತ್ತು ನೂರ್ ಇಸ್ಲಾಂ ಅವರು ಕೂಡ ಅಸ್ಸಾಂ ಬಿಟ್ಟು ಬಂದವರು. ಇವರಿಗೆ ಬ್ರಹ್ಮಪುತ್ರ ಬಳಿಯ ತಮ್ಮ ಜಮೀನಿನಲ್ಲಿ ನಿರಂತರ ಪ್ರವಾಹ ಉಂಟಾಗುವುದರಿಂದ ಕೃಷಿಯನ್ನು ಅವಲಂಬಿಸಲು ಬದುಕಲು ಸಾಧ್ಯವಾಗಲಿಲ್ಲ. ಬಾರ್ಪೇಟಾದಲ್ಲಿ ಅವರ ಹೆತ್ತವರು 800 ಚದರ ಅಡಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾರೆ. ಅಲ್ಲಿ ಅವರು ಹಸಿರು ಮೆಣಸಿನಕಾಯಿಗಳು, ಟೊಮೆಟೊಗಳು ಮತ್ತು ಇತರ ತರಕಾರಿಗಳನ್ನು ಬೆಳೆಯುತ್ತಾರೆ. “ಭಾರೀ ಮಳೆ ಬಂದ ಸಂದರ್ಭದಲ್ಲಿ, ನದಿ ನೀರು ನಮ್ಮ ಮನೆಗಳಿಗೆ ಬರುತ್ತದೆ, ಆಗ ನಾವು ಅಲ್ಲಿಂದ ಜಾಗ ಖಾಲಿ ಮಾಡಬೇಕು. ನಾವು ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸಲು ಬಾಳೆ ಮರದ ದಿಮ್ಮಿಗಳನ್ನು ಬಳಸುತ್ತೇವೆ,” ಎಂದು ಬಹರುಲ್ ಅವರ ಸಹೋದರರು ಹೇಳುತ್ತಾರೆ. ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್ಆರ್ಎಸ್ಸಿ) ಪ್ರಕಾರ, ಅಸ್ಸಾಂನಲ್ಲಿ ಸುಮಾರು ಶೇಕಡಾ 28.75 ರಷ್ಟು ಭೂಮಿ 1998 ಮತ್ತು 2015 ರ ನಡುವೆ ನಡೆದ ಪ್ರವಾಹದಿಂದ ಹಾನಿಗೀಡಾಗಿದೆ.














