ಗಮನಿಸಿ: ಇದು ಭಾರತದ ಗ್ರಾಮೀಣ ಆರೋಗ್ಯ ಸ್ಥಿತಿಗತಿಯ ಕುರಿತಾದ ಲೇಖನ ಸರಣಿಯ ಮೊದಲ ಬರೆಹ
ಮಲಜ್ಪುರ ಹೆಸರಿನ ಸಣ್ಣ ಕೃಷಿ ಪ್ರಧಾನ ಗ್ರಾಮದಲ್ಲಿ, 17 ವರ್ಷದ ಸವಿ ಧುರ್ವೆ ಮತ್ತು 16 ವರ್ಷದ ಆಶಾ ಕುರ್ಕು (ಹೆಸರು ಬದಲಾಯಿಸಲಾಗಿದೆ) ಎನ್ನುವ ಇಬ್ಬರು ಕಿಶೋರಿಯರ ನಡುವೆ ಅನಿರೀಕ್ಷಿತ ಸ್ನೇಹವೊಂದು ಚಿಗುರಿದೆ. ಈ ವರ್ಷದ ಆರಂಭದಲ್ಲಿ ಇಲ್ಲಿನ ದೇವಸ್ಥಾನದ ಜಾತ್ರೆಯಲ್ಲಿ ಇವರಿಬ್ಬರ ಭೇಟಿಯಾಗಿತ್ತು. ಅವರಿಬ್ಬರನ್ನು ಸ್ಥಳೀಯವಾಗಿ ಚಾಲ್ತಿಯಲ್ಲಿರುವ 'ಭೂತ ಬಿಡಿಸುವ' ಆಚರಣೆಗಾಗಿ ಅವರ ಕುಟುಂಬಗಳು ಅಲ್ಲಿಗೆ ಕರೆತಂದಿದ್ದವು. ಈ ಇಬ್ಬರು ಕಿಶೋರಿಯರು ಮತ್ತು ಅವರ ಕುಟುಂಬದವರು, ತಮ್ಮ ಮೇಲೆ ಯಾವುದೋ ಕೆಟ್ಟ ಶಕ್ತಿ ಕಣ್ಣು ಹಾಕಿದೆ ಅಥವಾ ಭೂತ ಹಿಡಿದಿದೆ ಎಂದು ಗಾಢವಾಗಿ ನಂಬಿದ್ದಾರೆ.
"ನನ್ನನ್ನು ಯಾರೋ ಎಳೆದು ಕೋಣೆಯ ಗೋಡೆಗೆ ಬಡಿಯುತ್ತಿರುವ ಹಾಗೆ ಆಗುತ್ತಿತ್ತು. ಪದೇ ಪದೇ ಪ್ರಜ್ಞೆ ತಪ್ಪಿ ಬೀಳುತ್ತಿದ್ದೆ. ಇದೆಲ್ಲದರಿಂದ ಆಗುವ ದಣಿವಿನಿಂದಾಗಿ ಮೈಕೆಯೆಲ್ಲ ಎಳೆತ ಬಂದು ಯಮಯಾತನೆ ಅನುಭವಿಸುತ್ತಿದ್ದೆ. ಆದರೆ ಎಚ್ಚರವಾದ ನಂತರ ಇದ್ಯಾವುದೂ ನನಗೆ ನೆನಪಿರುತ್ತಿರಲಿಲ್ಲ" ಎಂದು ಸವಿ ತನ್ನ ಸ್ಥಿತಿಯನ್ನು ವಿವರಿಸಿದಳು. ಸವಿ ಮಾತು ಮುಗಿಸುವ ಮೊದಲೇ ನಡುವೆ ಧ್ವನಿಗೂಡಿಸಿದ ಆಶಾ, "ನನಗೂ ಅಷ್ಟೇ ಏನಾಗುತ್ತಿತ್ತು ಎನ್ನುವುದು ಒಂದಿಷ್ಟೂ ನೆನಪಿರುತ್ತಿರಲಿಲ್ಲ" ಎಂದು ಹೇಳಿದಳು.
ಅವರಿಬ್ಬರೂ ಸಹಜವೆನ್ನುವಂತೆ ಪರಸ್ಪರರತ್ತ ನೋಡಿ ಹದಿಹರೆಯದ ಸಹಜ ನಗುವೊಂದನ್ನು ಖಿಲ್ ಎಂದು ನಕ್ಕರು. ಕಿಶೋರಾವಸ್ಥೆಯ ಮಕ್ಕಳ ನಡುವೆ ಸಾಮಾನ್ಯವಾಗಿ ಕಾಣುವ ಗಲಗಲ ಎನ್ನುವ ಗದ್ದಲದಂತಹ ಲವಲವಿಕೆ ಅವರಿಬ್ಬರ ನಡುವೆ ಮನೆ ಮಾಡಿತ್ತು. ಈ ಇಬ್ಬರು ಹುಡುಗಿಯರು ಕಳೆದ ಒಂದು ತಿಂಗಳಿನಿಂದ ಈ ದೇವಸ್ಥಾನದ ಆವರಣದಲ್ಲೇ ಉಳಿದುಕೊಂಡಿದ್ದಾರೆ. ಈ ಒಂದು ತಿಂಗಳ ಒಳಗೆ ಅವರಿಬ್ಬರು ಎಷ್ಟು ಆಪ್ತರಾಗಿದ್ದರು. ಆರತಿಯ ಸಮಯದಲ್ಲಿ ಭುಜಕ್ಕೆ ಭುಜ ತಾಗಿಸಿ ಕುಳಿತುಕೊಳ್ಳುವುದು, ಗರ್ಭಗುಡಿಯ ಒಳಗಿರುವ ದೈವಕ್ಕೆ ಪ್ರದಕ್ಷಿಣೆ ಹಾಕುವಾಗ ಕಿವಿಯಲ್ಲಿ ಜೋಕುಗಳನ್ನು ಪಿಸುಗುಟ್ಟುವುದು ಮತ್ತು ಒಬ್ಬರ ಮಾತಿನ ನಡುವೆ ಇನ್ನೊಬ್ಬರು ಮಾತನಾಡುತ್ತಾ, ಒಬ್ಬರಿಗೊಬ್ಬರು ಆಸರೆಯಾಗುವುದು ಹೀಗೆ ಅವರ ಬಾಂಧವ್ಯ ಯಾರಿಗಾದರೂ ಕಾಣುವಂತಿತ್ತು.
ಸವಿ ಆಶಾಳ ಕಡೆ ಪ್ರೀತಿಯಿಂದ ನೋಡುತ್ತಾ "ಇವಳ ಮೇಲೆ ಬಹಳ ಬೇಗ.." ಎಂದಳು.
“-ಅದನ್ನು ಹೇಗೆ ಹೇಳೋದು ಗೊತ್ತಾಗ್ತಿಲ್ಲ –“
“-ಆರತಿಯ ಸಮಯದಲ್ಲಿ ನೀವೇ ನೋಡಿ –“
“-ಆದರೆ ಮೊದಲಿಗೆ ಹೋಲಿಸಿದರೆ ನಾನು ಈಗ ಬಹಳ ಆರಾಮಿದ್ದೇನೆ –“ ಎನ್ನುತ್ತಾ ಆಶಾ ಆ ಮಾತನ್ನು ಅಲ್ಲಿಗೆ ಮುಗಿಸಿದಳು. ಅವಳ ಪ್ರಕಾರ ಒಂದು ತಿಂಗಳು ಈ ದೇವಸ್ಥಾನದಲ್ಲಿ ತಂಗಿದ್ದು ಪ್ರಯೋಜನವಾಗಿದೆ.
ಮಲಜ್ಪುರದ ಈ 'ಭೂತಗಳ ಮೇಳ' (ಸ್ಥಳೀಯವಾಗಿ 'ಭೂತೋಂಕಾ ಮೇಲಾ' ಎಂದು ಪ್ರಸಿದ್ಧ) ಶತಮಾನಗಳ ಇತಿಹಾಸವಿರುವ ವಾರ್ಷಿಕ ಆಚರಣೆ. ಇದು ಮಾಘ ಪೂರ್ಣಿಮೆಯಂದು (ಜನವರಿ-ಫೆಬ್ರವರಿ ತಿಂಗಳ ನಡುವಿನ ಹುಣ್ಣಿಮೆ) ಆರಂಭವಾಗಿ ಬಸಂತ ಪಂಚಮಿಯಂದು (ವಸಂತ ಕಾಲದ ಆಗಮನ) ಮುಕ್ತಾಯಗೊಳ್ಳುತ್ತದೆ. ಬೆತುಲ್ ಜಿಲ್ಲೆಯ ಚಿಚೋಲಿ ಬ್ಲಾಕ್ ವ್ಯಾಪ್ತಿಯಲ್ಲಿ ನಡೆಯುವ ಈ ಮೇಳವು, 'ಗುರುಸಾಹಬ್ ಬಾಬಾ' ಅಥವಾ 'ದೇವ್ಜಿ ಮಹಾರಾಜ್' ಎಂಬ ಸಂತನ ಸಮಾಧಿಯ ಸುತ್ತ ಕೇಂದ್ರಿಕೃತವಾಗಿದೆ. ಇವರು ಭೂತದ ಬಾಧೆಗೊಳಗಾದ ಜನರನ್ನು ತಮ್ಮ ದಿವ್ಯ ಶಕ್ತಿಯಿಂದ ಗುಣಪಡಿಸುತ್ತಿದ್ದರು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ದೇವಸ್ಥಾನದ ಆವರಣದಲ್ಲಿರುವ ಆಲದ ಮರಗಳ ಎಲೆಗಳಲ್ಲಿ ದುಷ್ಟಶಕ್ತಿಗಳು ಬಂಧಿಯಾಗುತ್ತವೆ ಎಂದು ಗ್ರಾಮಸ್ಥರು ನಂಬುತ್ತಾರೆ. ಈ ಜಾತ್ರೆಯು ಮಧ್ಯಪ್ರದೇಶ ಮಾತ್ರವಲ್ಲದೆ, ನೆರೆಯ ಛತ್ತೀಸ್ಗಢ ಮತ್ತು ರಾಜಸ್ಥಾನಗಳಿಂದಲೂ ಸಾವಿರಾರು ಭಕ್ತರನ್ನು ಮತ್ತು ಯಾತ್ರಾರ್ಥಿಗಳನ್ನು ತನ್ನತ್ತ ಸೆಳೆಯುತ್ತದೆ.












