ತಾರಿಖ್ ಅಹಮದ್ ಶಿಕ್ಷಕನಾಗಿ ಹತ್ತು ವರ್ಷಗಳನ್ನು ಕಳೆದಿದ್ದಾರೆ. ಪ್ರಾಥಮಿಕ ಶಿಕ್ಷಕರಾಗಿ ಅವರು ಮಕ್ಕಳಿಗೆ ಶಿಕ್ಷಣದ ಆರಂಭಿಕ ಹಂತದ ಜ್ಞಾನವನ್ನು ನೀಡುತ್ತಿದ್ದರು. 37 ವರ್ಷದ ಅವರು 2009-2019ರವರೆಗೆ ಕೇಂದ್ರ ಸಮಗ್ರ ಶಿಕ್ಷಾ ಯೋಜನೆಯಲ್ಲಿ ಶೈಕ್ಷಣಿಕ ಸ್ವಯಂಸೇವಕರಾಗಿದ್ದರು. ಲದಾಖ್ (ಲಡಾಖ್) ಪ್ರದೇಶಕ್ಕೆ ತಮ್ಮ ಕುರಿ-ಮೇಕೆಗಳೊಡನೆ ವಲಸೆ ಬರುವ ಪಶುಪಾಲಕ ಕುಟುಂಬಗಳ ಮಕ್ಕಳಿಗೆ ಕಲಿಸುವ ಸಲುವಾಗಿ ಅವರನ್ನು ದ್ರಾಸ್ ಪ್ರದೇಶದ ಬೆಟ್ಟಗಳ ಮೇಲೆ ನಿಯೋಜಿಸಲಾಗಿತ್ತು.
ಆದರೆ 2019 ರಲ್ಲಿ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲದಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯಾದ ಸಂದರ್ಭದಲ್ಲಿ ಅವರು ಕೆಲಸ ಕಳೆದುಕೊಂಡರು. ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾಗಿ - ಅವರ ಮನೆ ರಾಜೌರಿ ಜಿಲ್ಲೆಯ ಕಲಕೋಟೆಯಲ್ಲಿದೆ – ಈ ಕಾರಣದಿಂದ ಅವರು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಹೊರಗಿನ ಮಕ್ಕಳಿಗೆ ಕಲಿಸಲು ಅರ್ಹರಲ್ಲ.
“ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ದಿನದಿಂದ ನಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣ ಅಸ್ತವ್ಯಸ್ತವಾಗಿದೆ” ಎಂದು ತಾರಿಖ್ ಹೇಳುತ್ತಾರೆ. ಈ ಮಕ್ಕಳನ್ನು ಮರೆತ ಅಧಿಕಾರಿಗಳ ಕುರಿತು ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
“ಕಾರ್ಗಿಲ್ ಜಿಲ್ಲೆಯ ಝೀರೋ ಪಾಯಿಂಟಿನಿಂದ ದ್ರಾಸ್ ತನಕ ಒಂದೇ ಒಂದು ಸಂಚಾರಿ ಶಾಲೆ ಅಥವಾ ಹಂಗಾಮಿ ಶಿಕ್ಷಕರಿಲ್ಲ. ಈಗ ನಮ್ಮ ಮಕ್ಕಳು ಸುಮ್ಮನೆ ಅಲೆದಾಡುತ್ತಿರುತ್ತವೆ ಅಥವಾ ಆಹಾರಕ್ಕಾಗಿ ಸ್ಥಳೀಯರನ್ನು ಬೇಡುತ್ತಿರುತ್ತವೆ” ಎಂದು ಕಲಕೋಟೆಯ ಬತೇರಾ ಗ್ರಾಮದ ಸರಪಂಚ್ ಶಮೀಮ್ ಅಹ್ಮದ್ ಬಜ್ರಾನ್ ಹೇಳುತ್ತಾರೆ.
ಜಮ್ಮು ಮತ್ತು ಕಾಶ್ಮೀರದ ಒಳಗೆ ವಲಸಿಗ ಮಕ್ಕಳಿಗಾಗಿ ಸಾವಿರಾರು ತಾತ್ಕಾಲಿಕ ಶಾಲೆಗಳನ್ನು ನಿರ್ಮಿಸಲಾಗಿದೆ. ತಮ್ಮ ಮಕ್ಕಳು ಮೇ ಮತ್ತು ಅಕ್ಟೋಬರ್ ನಡುವೆ ವಲಸೆ ಹೋದ ಸಮಯದಲ್ಲಿ ಶಾಲೆ ತಪ್ಪಿಸಿಕೊಳ್ಳುತ್ತಾರೆ ಎನ್ನುತ್ತಾರೆ ಬಕರ್ವಾಲ್ ಸಮುದಾಯದ ಪೋಷಕರು. ಈ ಸಮಯದಲ್ಲಿ ಇಲ್ಲಿನ ಎಳೆಯ ಮಕ್ಕಳು ಶಿಕ್ಷಣದೊಂದಿಗೆ ಸಂಪರ್ಕ ಕಡಿದುಕೊಂಡು ಕಲಿಕೆಯಲ್ಲಿ ತಮ್ಮ ಸಹಪಾಠಿಗಳಿಗಿಂತ ಹಿಂದೆ ಬೀಳುತ್ತಾರೆ. ಬಕರ್ವಾಲ್ ಸಮುದಾಯದ ಒಟ್ಟು ಸಾಕ್ಷರತೆ ಪ್ರಮಾಣ ಶೇಕಡಾ 32ರಷ್ಟಿದ್ದು, ರಾಜ್ಯದ ಉಳಿದ ಬುಡಕಟ್ಟುಗಳ ಸಾಕ್ಷರತೆಯ ಮಟ್ಟಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯೆನ್ನುತ್ತದೆ 2013ರ ಪರಿಶಿಷ್ಟ ಪಂಗಡಗಳ ವರದಿ.









