ಚಾದರಿಯಾ ಝೀನಿ ರೇ ಝೀನಿ, ಚಾದರಿಯಾ ಝೀನಿ ರೇ ಝೀನಿ
ರಾಮ ನಾಮ ರಸ ಭೀನಿ ಚಾದರಿಯಾ ಝೀನಿ ರೇ ಝೀನಿ
ಅಷ್ಟ ಕಮ್ ಕಾ ಚರ್ಖಾ ಬನಾಯಾ, ಪಂಚ ತತ್ವ ಕೀ ಪೂನಿ
ನೌ ದಸ್ ಮಾಸ್ ಬಿನನ ಕೋ ಲಾಗೇ, ಮೂರಖ್ ಮೈಲಿ ಕಿನಿ
ಚಾದರಿಯಾ ಝೀನಿ ರೇ ಝೀನಿ
[ಎಷ್ಟು ಸೂಕ್ಷ್ಮ ಈ ವಸ್ತ್ರ, ಎಷ್ಟು ಸೂಕ್ಷ್ಮ.
ರಾಮನಾಮ ರಸದಲ್ಲಿ ತೋಯ್ದ ವಸ್ತ್ರ, ಎಷ್ಟು ಸೂಕ್ಷ್ಣ.
ಅಷ್ಟದಳ ಕಮಲದ ಚರಕದಿಂದ ನೂಲಿದ,
ಪಂಚಭೂತಗಳ ಎಳೆಯಿಂದ ನೇಯ್ದ;
ಒಂಬತ್ತು ಹತ್ತು ತಿಂಗಳು ನೇಯ್ದ ವಸ್ತ್ರ, ಮೂರ್ಖನೇ ಹೊಲಸು ಮಾಡಿದೆ.
ಎಷ್ಟು ಸೂಕ್ಷ್ಮ ಈ ವಸ್ತ್ರ, ಎಷ್ಟು ಸೂಕ್ಷ್ಮ…]
ನೆಹರು ದಾಸ್ ಜೀಯವರ ಬೆರಳುಗಳು ಹಾರ್ಮೋನಿಯಂ ಕೀಲಿಗಳ ಮೇಲೆ ಓಡಾಡುವ ರೀತಿಯಲ್ಲಿ ಒಂದು ನಿಪುಣತೆಯಿದೆ, ಒಂದು ನಿರ್ದೋಷ ಸಮನ್ವಯವಿದೆ — ಕಬೀರರ ಪದ ಹಾಡುತ್ತಾ ಅವರು ಸಂಗೀತದ ಸ್ವರಗಳ ಮತ್ತು ಭಾವನೆಗಳ ನಡುವೆ ಒಂದು ಚಿತ್ತಾರ ಹೆಣೆಯುತ್ತಾರೆ. ಇದನ್ನು ನೋಡುತ್ತಿದ್ದರೆ ಒಂದು ಕಾಲದಲ್ಲಿ ಈ ಬೆರಳುಗಳು ಮಗ್ಗದ ಮೇಲೆ ಹೇಗೆ ನರ್ತಿಸಿರಬಹುದು ಎನ್ನುವುದನ್ನು ಊಹಿಸುವುದು ಕಷ್ಟವಲ್ಲ. ಆದರೆ ಅವರೀಗ ನೇಯ್ಗೆಗಿಂತ ಹಾಡುವುದಕ್ಕೇ ಹೆಚ್ಚು ಅಂಟಿಕೊಂಡಿದ್ದಾರೆ. ಆ ಪರಂಪರೆಯನ್ನು ಅವರು ತಮ್ಮ ಇಬ್ಬರು ಮಕ್ಕಳಿಗೆ ದಾಟಿಸಿದ್ದಾರೆ. ಆದರೆ ಕಬೀರ ಪಂಥಿಯಾಗಿ (15ನೇ ಶತಮಾನದ ಅನುಭಾವಿ ಕವಿ ಕಬೀರರ ಅನುಯಾಯಿ) ಅವರಿಗೆ ಹಾಡು ಮತ್ತು ಕಸುಬಿನ ನಡುವಿನ ನಂಟನ್ನು ತೋರಿಸಿಕೊಡುವ ಆಸಕ್ತಿ ತೀವ್ರವಾಗಿದೆ.
"ದೇವರು ಈ ದೇಹವನ್ನು ನೇಯಲು ಸಮಯ ತೆಗೆದುಕೊಳ್ಳುವ ರೀತಿ, ತಾಯಿಯ ಗರ್ಭದಲ್ಲಿ ಮಗು ಹುಟ್ಟಲು ಒಂಬತ್ತು ತಿಂಗಳು ಬೇಕಾಗುತ್ತದೆ. ಹಮಾರ ಕಬೀರ್ ಸಾಹಬ್ ಏ ಬಾತ್ ಕೋ ಔರ್ ಕಪಡೇ ಬಿನ್ನೇ ವಾಲಿ ಬಾತ್ ಕೋ ಏಕ್ ದೂಸರೇ ಸೇ ಜೋಡ್ ಸಂಸಾರ್ ಕೋ ಸಮಝಾ ರಹೇ ಹೈ [ನಮ್ಮ ಕಬೀರ್ ಸಾಹಿಬ್ ನೇಯ್ಗೆಯ ವಿಷಯವನ್ನು ಈ ಜಗತ್ತಿನ ಸತ್ಯಕ್ಕೆ ಜೋಡಿಸಿ ವಿವರಿಸುತ್ತಿದ್ದಾರೆ]." 78 ವರ್ಷ ವಯಸ್ಸಿನ ನೆಹರು ದಾಸ್ ತಮ್ಮನ್ನು ಬೈಗಾಚಕ್ನ ಅತ್ಯಂತ ಹಿರಿಯ ನೇಕಾರ ಎಂದು ಕರೆದುಕೊಳ್ಳುತ್ತಾರೆ.






















