ಮನೋರ್ ಫಾಟಾ (ಜಂಕ್ಷನ್) ನಲ್ಲಿ ಬೆಳ್ಳಂಬೆಳಗ್ಗೆ ರೈತರು ಬೆಂಕಿಹಾಕಿ ಚಳಿ ಕಾಯಿಸುತ್ತಿದ್ದರು. ಹಿಂದಿನ ರಾತ್ರಿ ಮೈಕೊರೆಯುವ ಚಳಿ ಇತ್ತು. ಲಕ್ಷ್ಮಿ ದತ್ತು ಬೋಬಾ ಅವರು ಹೇಳುವಂತೆ ಮುಂಜಾನೆ ಅಷ್ಟೊಂದು ಹಿತವಾಗಿರಲಿಲ್ಲ, “ಮಳೆ ನೀರಿನಂತೆ ಮಂಜಿನ ಹನಿಗಳು ಮೈಮೇಲೆ ಬೀಳುತ್ತಿದ್ದವು.”
ನೆಲ, ನೀರು ಮತ್ತು ಮುಖ್ಯವಾಗಿ ಕೂಲಿ ಕೆಲಸದ ಸಮಸ್ಯೆಗಳ ಬಗ್ಗೆ ಮಾತನಾಡುವಾಗ 46 ವರ್ಷ ಪ್ರಾಯದ ಆ ಆದಿವಾಸಿ ರೈತ ಮಹಿಳೆಯ ಮುಖ ಕೋಪದಿಂದ ಕೆಂಪಾಗಿತ್ತು. ಆ ಕೋಪ ಚಳಿಗಿಂತಲೂ ತೀಕ್ಷ್ಣವಾಗಿತ್ತು. ತಮ್ಮ ಜಮೀನನ್ನು ಸಕ್ರಮಗೊಳಿಸಲು, ಶುದ್ಧ ಕುಡಿಯುವ ನೀರು ನೀಡಲು ಮತ್ತು ಕೂಲಿ ಕೆಲಸ ನೀಡಲು ವಿಳಂಬವಾಗಿರುವುದನ್ನು ಪ್ರಶ್ನಿಸಿ ಸಾವಿರಾರು ಗಂಡಸರು ಮತ್ತು ಹೆಂಗಸರು ಪಾಲ್ಘರ್ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ಪಾದಯಾತ್ರೆ ನಡೆಸುತ್ತಿದ್ದರು. ಘನತೆಯ ಬಾಳ್ವೆಯನ್ನು ಬದುಕುವ ಇವರ ಎದೆಯ ತುಂಬಾ ಸಮಸ್ಯೆಗಳೇ ಹೊತ್ತಿ ಉರಿಯುತ್ತಿವೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (ಮನರೇಗಾ) ಬಗ್ಗೆ ಮಾತನಾಡುವಾಗ ಲಕ್ಷ್ಮಿಯವರು ಕೆಂಡಾಮಂಡಲವಾಗಿ, “ಇಡೀ ವರ್ಷಕ್ಕೆ ಮಣ್ಣು ಹಾಕಲಿ, ಒಂದೇ ಒಂದು ದಿನ ನಮಗೆ ಕೆಲಸ ಸಿಗುತ್ತಿಲ್ಲ,” ಎಂದು ಹೇಳಿದರು. ಕೇಂದ್ರ ಸರ್ಕಾರ ಇತ್ತೀಚೆಗೆ ಈ ಕಾಯ್ದೆಗೆ ರಚನಾತ್ಮಕ ಬದಲಾವಣೆಗಳನ್ನು ತಂದಿತು. ಇದಕ್ಕೆ ವಿಕಸಿತ್ ಭಾರತ್ - ಜಿ ರಾಮ್ ಜಿ ಕಾಯ್ದೆ (ವಿಬಿ-ಜಿ ರಾಮ್ ಜಿ) ಎಂದು ಮರುನಾಮಕರಣ ಮಾಡಿ, ಉದ್ಯೋಗಕ್ಕೆ ಕಾನೂನು ಖಾತರಿ ಇಲ್ಲದಂತೆ ಮಾಡಿದೆ, ಮತ್ತು ಯೋಜನೆಯ ಬಜೆಟ್ ಹಂಚಿಕೆಯಲ್ಲಿ ಬಹುಪಾಲು ಹೊರೆಯನ್ನು ರಾಜ್ಯಗಳ ಮೇಲೆ ಹಾಕಿದೆ.
ಸಿಪಿಐ (ಎಂ) ಮತ್ತು ಅಖಿಲ ಭಾರತ ಕಿಸಾನ್ ಸಭಾದ ಮಹಾರಾಷ್ಟ್ರ ಘಟಕದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಜನರು ಇಟ್ಟಿರುವ ಹತ್ತಾರು ಪ್ರಮುಖ ಬೇಡಿಕೆಗಳಲ್ಲಿ ಒಂದು - ವರ್ಷದಲ್ಲಿ ಕನಿಷ್ಠ 600 ರುಪಾಯಿಗಳ ಸಂಬಳದ ಜೊತೆಗೆ 200 ದಿನಗಳ ಉದ್ಯೋಗವನ್ನು ಖಾತರಿಪಡಿಸುವುದು. ಜನವರಿ 19, 2026 ರಂದು ಆರಂಭವಾದ ಈ ಪಾದಯಾತ್ರೆ, ಜಿಲ್ಲಾಧಿಕಾರಿಗಳು ಇವರ ಪ್ರತಿಯೊಂದು ಬೇಡಿಕೆಯನ್ನೂ ಈಡೇರಿಸುವುದಾಗಿ ಭರವಸೆಗಳನ್ನು ನೀಡಿದ ನಂತರ ಜನವರಿ 21 ರಂದು ಮುಕ್ತಾಯವಾಯಿತು.












