ಗಜಾನಂದ ಸಹಾರಿಯ ಅವರ ಬಳಿ ಒಂದಷ್ಟ ಜನರು ಬಂದು ನಿಮ್ಮ ಭೂಮಿಯನ್ನು ನಮಗೆ ಮಾರಿ ಎಂದು ಕೇಳಿಕೊಳ್ಳುವ ತನಕವೂ ಅವರಿಗೆ ತಾನು ಜಮೀನಿನ ಮಾಲಿಕ ಎನ್ನುವುದು ಗೊತ್ತೇ ಇರಲಿಲ್ಲ. ತನ್ನ ಮುರುಕಲು ಮನೆಯಲ್ಲಿ ಕುಳಿತಿದ್ದ ಅವರು “10 ಬಿಘಾ (ಸರಿಸುಮಾರು ಆರು ಎಕರೆ) ಭೂಮಿ ನನ್ನ ಹೆಸರಿನಲ್ಲಿದೆ ಎಂದು ಅವರು ಹೇಳಿದ್ರು. ನಾನು ಆ ಜಮೀನನ್ನ ನೋಡಲೆಂದು ಹೊರಟೆ [ಅದು ಸುಮಾರು ಎರಡು ಕಿಲೋಮೀಟರ್ ದೂರದಲ್ಲಿತ್ತು]. ಆ ಜಾಗ ನೋಡಿದ್ರೆ ಅಲ್ಲಿ ಪೂರ್ತಿ ಕಾಡು ಗಿಡಗಂಟಿ ಬೆಳೆದಿತ್ತು. ಅಲ್ಲಿ ನಾನಾಗಲೀ ನಮ್ಮ ಮನೆಯ ಇನ್ಯಾರಾಗಾಲೀ ಎಂದೂ ಬೇಸಾಯ ಮಾಡಿರಲಿಲ್ಲ” ಎಂದರು. ಅಂದಹಾಗೆ ಗಜಾನಂದ್ ಕಲೋನಿ ಗ್ರಾಮದಲ್ಲಿ ಆದಿವಾಸಿ ಕುಗ್ರಾಮವಾದ ಮುಂಡೆಯಾರ್ ಎನ್ನವು ಊರಿನವರು.
35 ವರ್ಷದ ಗಜಾನಂದ್ ಅವರಿಗೆ ಈ ಸಂಗತಿಯನ್ನು ಒಂದು ಕ್ಷಣ ನಂಬಲು ಸಾಧ್ಯವಾಗಲಿಲ್ಲ. ಆದರೆ ಅವರು ಈ ಆಕಸ್ಮಾತ್ ಒಲಿದ ಅದೃಷ್ಟದಿಂದ ಸಂತಸಗೊಂಡಿದ್ದರು. ದಿನಕ್ಕೆ 200 ರೂಪಾಯಿ ಕೂಲಿಯಂತೆ ತಿಂಗಳಿಗೆ ನಾಲ್ಕೈದು ದಿನಗಳ ಕೆಲಸ ಪಡೆಯುವ ಅವರು ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದರು. 15 ಜನರ ಅವರ ಅವಿಭಕ್ತ ಕುಟುಂಬವು ಬಹುತೇಕ ಶಹಾಬಾದ್ ಅರಣ್ಯ ಕಾಡುತ್ಪತ್ತಿಗಳ (ಎನ್ಟಿಎಫ್ಟಿ) ಸಂಗ್ರಹವನ್ನು ಬದುಕಿಗೆ ದಾರಿಯನ್ನಾಗಿ ಮಾಡಿಕೊಂಡಿದೆ. “ನಾವು ಮಹುವಾ, ತೆಂದು, ಉರುವಲು, ಆಚಾರ್, ಮತ್ತು ನೆಲ್ಲಿಕಾಯಿಯನ್ನು ಕಾಡಿನಿಂದ ಹೆಕ್ಕುತ್ತೇವೆ. ಇದರ ಮೂಲಕವೇ ನಮ್ಮ ಬದುಕು ನಡೆಯುತ್ತದೆ.” ಎಂದು ಅವರು ಹೇಳುತ್ತಾರೆ. ಈ ಮೂಲಕ ಅವರಿಗೆ ತಿಂಗಳಿಗೆ ಒಂದಷ್ಟು ಹಣ ಸಿಗುತ್ತದೆ.
ಗಜಾನಂದ್ ಅವಲಂಬಿಸಿರುವ ಅರಣ್ಯವು ಪೂರ್ವ ರಾಜಸ್ಥಾನದಲ್ಲಿ 179 ಚದರ ಕಿಲೋಮೀಟರ್ಗಳಷ್ಟು ವಿಸ್ತರಿಸಿರುವ ಶಹಾಬಾದ್ ತಲೇಟಿ ಅರಣ್ಯ. ಇದರ ದಟ್ಟವಾದ ಕಾಡು ಅಪರೂಪದ ಸಸ್ಯಗಳು, ಮರಗಳು ಮತ್ತು ವನ್ಯಜೀವಿಗಳಿಂದ ತುಂಬಿದೆ. ಇತ್ತೀಚೆಗೆ 2022ರಲ್ಲಿ, ಅರಣ್ಯ ಇಲಾಖೆಯು ಇದರ ಪರಿಸರ ಮಹತ್ವವನ್ನು ಗುರುತಿಸಿ, ಇದನ್ನು ಸಂರಕ್ಷಣಾ ಮೀಸಲು ಎಂದು ಘೋಷಿಸಿದೆ. ಕರಾಯ ಮರಗಳು (Sterculia urens) ಶಹಾಬಾದ್ ರೀತಿಯ ಕೆಲವೇ ಕೆಲವು ಅರಣ್ಯಗಳಲ್ಲಿ ಮಾತ್ರ ಕಂಡುಬರುತ್ತವೆ, ಮತ್ತು ಇಲ್ಲಿ ನೂರಾರು ಔಷಧೀಯ ಸಸ್ಯಗಳೂ ಇವೆ.
ಈ ಅರಣ್ಯವು ಶೆಡ್ಯೂಲ್ I ಅಡಿ ಪಟ್ಟಿ ಮಾಡಲಾಗಿರುವ ಪ್ರಾಣಿಗಳು ಮತ್ತು ಪಕ್ಷಿಗಳ ನೆಲೆ. ಇವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ1972ರ ಅಡಿಯಲ್ಲಿ ಬೇಟೆಯಿಂದ ಸಂರಕ್ಷಿಸಲಾಗಿದೆ. ಈ ಪಟ್ಟಿಯಲ್ಲಿ ಬಂಗಾಳ ಮತ್ತು ಗೋಲ್ಡನ್ ನರಿ, ತೋಳ, ಚಿರತೆ, ಭಾರತದ ಬೂದು ಮುಂಗುಸಿ, ಪಟ್ಟೆ ಕತ್ತೆಕಿರುಬ, ಬ್ಯಾಡ್ಜರ್ಗಳು, ಸಿವೆಟ್ ಬೆಕ್ಕುಗಳು, ಸ್ಲೋಥ್ ಕರಡಿ, ಕೆಂಪು ತಲೆಯ ರಣಹದ್ದು, ನವಿಲು ಮತ್ತು ಇನ್ನೂ ಅನೇಕ ಪ್ರಭೇದಗಳು ಸೇರಿವೆ.
ಈ ಅರಣ್ಯವು ಕುನೋ ರಾಷ್ಟ್ರೀಯ ಉದ್ಯಾನವನದಿಂದ ಕೇವಲ ಒಂದು ಗಂಟೆಗಿಂತ ಕಡಿಮೆ ಪ್ರಯಾಣದ ದೂರದಲ್ಲಿದೆ. ಅಲ್ಲದೆ, ಇದು ಕುನೋ ರಾಷ್ಟ್ರೀಯ ಉದ್ಯಾನವನವನ್ನು ಮಧ್ಯಪ್ರದೇಶದಲ್ಲಿರುವ ಚೀತಾಗಳ ಎರಡನೇ ನೆಲೆಯಾದ ಗಾಂಧಿ ಸಾಗರ್ ಎನ್ನುವಲ್ಲಿಗೆ ಸಂಪರ್ಕಿಸುವ ಪ್ರಸ್ತಾವಿತ ವನ್ಯಜೀವಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತದೆ. ಚೀತಾಗಳು ವೇಗವಾಗಿ ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕ್ರಮವು ಸಹಾಯ ಮಾಡುತ್ತದೆ ಎನ್ನುವುದು ಅಧಿಕಾರಿಗಳ ಆಶಯ.
ಇಲ್ಲಿ ಜೂನ್ ತಿಂಗಳಿನ ಇಡೀ ವಾರ ಮಳೆ ಸುರಿಯುತ್ತಿತ್ತು. ಕಾಡಿನ ನೆಲದಲ್ಲಿ ಸೃಷ್ಟಿಯಾದ ಸಣ್ಣ ತೊರೆಗಳು ದೊಡ್ಡ ಹೊಳೆಗಳಾಗಿ ಹರಿಯುತ್ತಿದ್ದವು. ಈ ನೀರೆಲ್ಲವೂ ಕುಂದಾ ಖೋ ಜಲಪಾತದ ಕಡೆಗೆ ಹರಿಯುತ್ತಿದ್ದು, ಜಲಪಾತವು 100 ಅಡಿಗಳಷ್ಟು ಕೆಳಗಿರುವ ಕಂದಕಕ್ಕೆ ಕೆಸರು ನೀರನ್ನು ನದಿಯಂತೆ ಸುರಿಯುತ್ತಿದೆ. ಈ ಜಲಪಾತದ ಕೆಳಗೆ ಕುನೋ ನದಿ ಹಾವಿನಂತೆ ಹರಿಯುತ್ತದೆ. ಇಷ್ಟೊಂದು ಮಳೆ ಸುರಿಯುತ್ತಿದ್ದರೂ ಸಹ, ಇಲ್ಲಿ ಗ್ರಾಮಸ್ಥರು ಕಾಡುತ್ಪತ್ತಿ ಸಂಗ್ರಹಿಸುವುದನ್ನು ಕಾಣಬಹುದಿತ್ತು.



















