“ಇಚ್ಛೇ ಕುಸುಮ್ ನಾಟಕದಲ್ಲಿ ನಾನು ನೇಕಾರನ ಪಾತ್ರವನ್ನು ಮಾಡಿದ್ದೆ… ಅದು ನನ್ನ ನಿಜ ಬದುಕಿನ ವೃತ್ತಿಯೂ ಹೌದು” ಎನ್ನುತ್ತಾರೆ” ಅಸಿತ್ ಪ್ರಾಮಾಣಿಕ್. ನಮ್ಮೊಂದಿಗೆ ಮಾತನಾಡುತ್ತಿದ್ದ ಅವರ ಕೈಯಲ್ಲಿ ಹಳೆಯ ನಾಟಕವೊಂದರ ಪ್ರತಿಯಿತ್ತು. ಇದನ್ನು ಅವರು ತನ್ನ ಮನೆಯಲ್ಲಿದ್ದ ಹಳೆ ಬಣ್ಣ ಮಾಸಿದ ಅಲ್ಮೆರಾದಿಂದ ತೆಗೆದಿದ್ದರು. ಅದರಲ್ಲಿ ಇನ್ನೂ ಹಲವು ನಾಟಕಗಳ ಸ್ಕ್ರಿಪ್ಟ್ಗಳನ್ನು ರಕ್ಷಿಸಿಡಲಾಗಿದೆ.
ವಿಶಿಷ್ಟವಾದ ಶಾಂತಿಪುರಿ ತಂಗೈಲ್ ಮತ್ತು ಜಮ್ದಾನಿ ಕೈಮಗ್ಗ ಸೀರೆಗಳಿಗೆ ಹೆಸರುವಾಸಿಯಾದ ನಾಡಿಯಾ ಜಿಲ್ಲೆಯ ಶಾಂತಿಪುರ ಕೈಮಗ್ಗ ಸಮೂಹಗಳ ಹಲವಾರು ನೇಕಾರರಲ್ಲಿ ಅಸಿತ್ ದಾ ಒಬ್ಬರು. ಈ ಅನುಭವಿ ನೇಕಾರನ ಮಗ್ಗದ ದುಡಿಮೆಯು ರಂಗಭೂಮಿಯ ಮೇಲಿನ ಅವರ ಪ್ರೀತಿಯ ಶ್ರಮಕ್ಕೆ ಸಮಾನಾಂತರವಾಗಿ ಸಾಗುತ್ತದೆ. ತಾಂಟ್-ಘರ್ (ಮಗ್ಗವಿರುವ ಕೋಣೆ) ಮತ್ತು ರಂಗ-ಮಂಚದ ನಡುವಿನ ನಿರಂತರ ಸಮತೋಲನದ ಕಸರತ್ತು ಅವರ ದಶಕಗಳ ಕಾಲದ ಬದುಕಿನ ಬಟ್ಟೆಯನ್ನು ನೇಯ್ದಿದೆ.
ತಮ್ಮ ಮೊದಲ ಪ್ರದರ್ಶನದ ಕುರಿತು ವಿವರಿಸುವಾಗ ಅಸಿತ್ ದಾ ಅವರ ಮುಖ ಸಂಭ್ರಮದಿಂದ ಅರಳುತ್ತದೆ. “ಆ ದಿನ ನಾಟಕವನ್ನು ಸೀಲ್ಡಾ ನಿಲ್ದಾಣದ ಬಳಿ ಎಲ್ಲೋ ಆಯೋಜಿಸಲಾಗಿತ್ತು. ಅಂದು ನನಗೆ ನ್ಯಾಯಾಧೀಶನ ಪಾತ್ರವನ್ನು ಕೊಟ್ಟಿದ್ದರು. ಆದರೆ ನಾನು ಭಯದಿಂದ ನಡುಗಿ ಹೋಗಿದ್ದೆ” ಎಂದು ಅವರು ಹೃತ್ಪೂರ್ವಕವಾಗಿ ನಗುತ್ತಾ ಹೇಳಿದರು. ಅವರು ಮೊದಲ ಬಾರಿ ಪ್ರೇಕ್ಷಕರನ್ನು ಎದುರಿಸಿದ ಅನುಭವ ಹೀಗೆ ಪಡೆದರು. ಆ ದಿನ ನಾಟಕ ಆಡಿದ್ದು ಅಲ್ಲಿ ಜನಪ್ರಿಯವಾಗಿರುವ ರಂಗಸಂಸ್ಥೆಯೊಂದಕ್ಕಾಗಿ.
ನಾಟಕದ ಕುರಿತು ವಿವರಿಸುವಾಗ ಇದ್ದ ಉತ್ಸಾಹದ ದನಿಯಲ್ಲೇ ಅವರು ತಾನು ಮೊದಲ ಬಾರಿ ಮಗ್ಗದ ಕೆಲಸ ಆರಂಭಿಸಿದ ಕುರಿತೂ ವಿವರಿಸಿದರು ಅಸಿತ್ ದಾ. “ನಾನು ಐದನೇ ತರಗತಿಯ ತನಕ ಓದಿದ್ದೇನೆ. ನಮ್ಮದು ಮಕ್ಕಳಿಂದ ಹಿಡಿದು ಗಂಡಸರು, ಹೆಂಗಸರು ಎಲ್ಲರೂ ನೇಯ್ಗೆಯ ಕೆಲಸದಲ್ಲಿ ತೊಡಗಿಕೊಂಡಿದ್ದ ಕುಟುಂಬ.” ದಾರದ ಎಳೆಗಳನ್ನು ನೂಲುವುದು, ಅದಕ್ಕೆ ಬಣ್ಣ ಹಚ್ಚುವುದು, ನೂಲುವ ಚಕ್ರವನ್ನು ಬಳಸಿ ನೂಲನ್ನು ಟ್ಯೂಬಿಗೆ ಸುತ್ತುವುದು, ನಂತರ ಅದನ್ನು ಡ್ರಮ್ಗೆ ರೋಲ್ ಮಾಡುವುದು ಮತ್ತು ಕೊನೆಗೆ ಅದನ್ನು ಮಗ್ಗದ ಮೇಲೆ ಇಡುವುದು. ಮನೆಯಲ್ಲಿ ಇಷ್ಟು ಕೆಲಸಗಳಿರುತ್ತಿದ್ದವು. “ಮತ್ತು ಇಲ್ಲಿನ ಇತರ ತಂತ್ರಿ [ನೇಕಾರ] ಕುಟುಂಬದಂತೆ, ನಮ್ಮ ಮನೆಯಲ್ಲಿಯೂ ಸಹ, ನಾವು ಚಿಕ್ಕ ವಯಸ್ಸಿನಿಂದಲೇ ಈ ಕೆಲಸದಲ್ಲಿ ತೊಡಗಬೇಕಾಗಿತ್ತು" ಎಂದು ಅವರು ಹೇಳುತ್ತಾರೆ.








