2025ರ ಸೆಪ್ಟೆಂಬರ್ ಸಮಯದಲ್ಲಿ 24 ವರ್ಷದ ವೀಣಾ ರಾಣಿ ಸರಿಯಾಗಿ ನಿದ್ದೆಯನ್ನೇ ಮಾಡಿರಲಿಲ್ಲ. ಗಂಟೆಗಟ್ಟಲೆ ನಾರುಮಂಚದ ಮೇಲೆ ಕಣ್ಣು ಮುಚ್ಚಿ ಮಲಗುತ್ತಿದ್ದ ಅವರಿಗೆ ಹಿಂದಿನ ತಿಂಗಳ ಪ್ರವಾಹದ ನೆನಪುಗಳೇ ಮರುಕಳಿಸುತ್ತಿದ್ದವು. ಆ ಭೀಕರ ಪ್ರವಾಹವು ಪಂಜಾಬ್ ರಾಜ್ಯದ ಫಾಜಿಲ್ಕಾ ಜಿಲ್ಲೆಯ ವಲ್ಲೆ ಶಾ ಉತ್ತರ್ ಗ್ರಾಮದಲ್ಲಿದ್ದ ಅವರ ಕುಟುಂಬದ ಕೃಷಿ ಭೂಮಿಯನ್ನು ಮುಳುಗಿಸಿತ್ತು. ಜೊತೆಗೆ ಅವರ ಮನೆಯೊಳಗೂ ನೀರು ನುಗ್ಗಿತ್ತು.
"ಮೊದಲಿಗೆ ಹೋಲಿಸಿದರೆ ಈಗ ಪರವಾಗಿಲ್ಲ" ಎನ್ನುತ್ತಾ ವೀಣಾ ರಾಣಿ ಮಲಗುವ ಮುನ್ನ ತೆಗೆದುಕೊಳ್ಳುವ ಔಷಧಿಯನ್ನು ತೆಗೆದುಕೊಂಡರು. ಊರಿನ ಮುಖ್ಯ ಭಾಗದಿಂದ ಹೊರಗಿರುವ ಹೊಲಗಳ ಮಧ್ಯೆ ಇರುವ ಅವರ ಮೂರು ಕೋಣೆಗಳ ಪಕ್ಕಾ ಮನೆ ಸಟ್ಲೆಜ್ ನದಿಯ ಉಪನಾಲೆಯ ಬಳಿಯಿದೆ. ಮನೆಯಿಂದ ನೋಡಿದರೆ ಆ ಕಾಲುವೆ ಬಹಳ ಶಾಂತವಾಗಿ ಹರಿಯುತ್ತಿರುವಂತೆ ಕಾಣುತ್ತದೆ, ಆದರೆ ಅದು ಎಂಟು ಅಡಿಗಳಷ್ಟು ಆಳವಿದೆ. ಈ ಕಾಲುವೆಯ ಆಚೆಗೆ ನಾಲ್ಕು ಎಕರೆ ಕೃಷಿ ಭೂಮಿ ಇದೆ.
"ಅವಳು ನಗುವುದನ್ನೇ ನಿಲ್ಲಿಸಿಬಿಟ್ಟಿದ್ದಳು" ಎನ್ನುತ್ತಾರೆ ವೀಣಾ ಅವರ ಸಹೋದರಿ 26 ವರ್ಷದ ಕೈಲಾಶ್ ರಾಣಿ. ಅವರ ತಂದೆ 52 ವರ್ಷದ ಜರ್ನೈಲ್ ಸಿಂಗ್, "ನಾವು ಬಲವಂತವಾಗಿ ಅವಳನ್ನು ಕುಳ್ಳಿರಿಸಲು ಪ್ರಯತ್ನಿಸಿದರೆ ಸಾಕು, ಜೋರಾಗಿ ಅಳಲು ಶುರು ಮಾಡುತ್ತಿದ್ದಳು" ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
"ನಮ್ಮ ಬೆಳೆ ಪೂರ್ತಿ ನಾಶವಾಗಿದೆ. ಹೀಗಿರುವಾಗ ನಮಗೆ ಹಣ ಎಲ್ಲಿಂದ ಬರುತ್ತದೆ? ಈ ನೀರು ಇನ್ನೂ ಎಷ್ಟು ದಿನ ಹೊಲಗಳಲ್ಲೇ ನಿಂತಿರುತ್ತದೋ ಗೊತ್ತಿಲ್ಲ. ಮುಂದಿನ ಹಂಗಾಮಿಗೆ ಗೋಧಿ ಹಾಕಲು ಸಾಧ್ಯವಾಗುತ್ತದೋ ಇಲ್ಲವೋ ಎನ್ನುವ ಚಿಂತೆಯೇ ನನ್ನನ್ನು ಕಾಡುತ್ತಿತ್ತು" ಎನ್ನುತ್ತಾರೆ ವೀಣಾ. ಅವರ ಬಳಿ ನೀನು ಹೀಗೇಕೆ ಇರುವೆ ಎಂದು ಪ್ರೀತಿಪಾತ್ರರು ವಿಚಾರಿಸಿದಾಗ ಅವರಿಗೆ ವಿವರಿಸಲು ಅವಳು ಪಡುತ್ತಿದ್ದ ಪಾಡು ಅಷ್ಟಿಷ್ಟಲ್ಲ. "ಯಾರೋ ನನ್ನ ತಲೆಯ ಮೇಲೆ ಯಾವುದೋ ಭಾರವಾದ ವಸ್ತುವನ್ನು ಇಟ್ಟು ಒತ್ತಿದಂತೆ ಭಾಸವಾಗುತ್ತಿತ್ತು."
ಊರಿನ ಪ್ರತಿಯೊಬ್ಬರೂ ಪ್ರವಾಹದಿಂದ ತತ್ತರಿಸಿದ್ದರು, ಹೀಗಾಗಿ ಕಾಲ ಕಳೆದಂತೆ ತನ್ನ ಈ ಆತಂಕವೂ ದೂರವಾಗಬಹುದು ಎಂದು ವೀಣಾ ಭಾವಿಸಿದ್ದರು.
ಆದರೆ ಅವರೆಂದುಕೊಂಡಂತೆ ಆಗಲಿಲ್ಲ. ದಿನ ಕಳೆದಂತೆ ಅವರಲ್ಲಿ ಹೆಚ್ಚು ಏಕಾಂಗಿತನ ಮತ್ತು ನಿರುತ್ಸಾಹ ಕಾಣತೊಡಗಿತು. ಕೊನೆಗೆ ಕುಟುಂಬದವರು ಅವರನ್ನು 50 ಕಿಲೋಮೀಟರ್ ದೂರದ ಅಬೋಹರ್ನಲ್ಲಿರುವ ಮನೋವೈದ್ಯರ ಬಳಿಗೆ ಕರೆದೊಯ್ದರು. ಅಲ್ಲಿ ಅವರಿಗೆ ಖಿನ್ನತೆಯಿರುವುದು ಪತ್ತೆಯಾಯಿತು ಮತ್ತು ಐದು ತಿಂಗಳ ಕಾಲ ಔಷಧಿಯನ್ನು ತೆಗೆದುಕೊಳ್ಳುವಂತೆ ಸೂಚಿಸಲಾಯಿತು.
ಆಸ್ಪತ್ರೆಯನ್ನೂ ಅವಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. "ದಿಮಾಗ್ ದಿ ನಸ್ಸಾ ಕಮ್ಜೋರ್ ಹೋ ಗಯಿ ನೇ [ನನ್ನ ಮೆದುಳಿನ ನರಗಳು ದೌರ್ಬಲ್ಯಗೊಂಡಿವೆ]" ಎಂದು ಅವಳು ಹೇಳುತ್ತಾಳೆ.
















